ಚಂದ್ರವಳ್ಳಿ ನ್ಯೂಸ್, ಮೈಸೂರು:
ಮೈಸೂರು ನಗರದ ಹೆಬ್ಬಾಳ ಕೈಗಾರಿಕಾ ಪ್ರದೇಶದಲ್ಲಿರುವ ಬೆಳ್ಳಿ ಆಭರಣ ತಯಾರಿಕಾ ಫ್ಯಾಕ್ಟರಿಯಲ್ಲಿ ದರೋಡೆ ಮಾಡಿದ್ದ 6 ಮಂದಿ ಅಂತಾರಾಜ್ಯ ಡಕಾಯಿತರನ್ನು ಮೈಸೂರಿನ ಹೆಬ್ಬಾಳ ಪೊಲೀಸರು ಬಂಧಿಸಿದ್ದಾರೆ.
ದರೋಡೆ ಪ್ರಕರಣದಲ್ಲಿ ಒಟ್ಟು 18,80,000 ಮೌಲ್ಯದ 16 ಕೆ.ಜಿ ಬೆಳ್ಳಿ, ಕೃತ್ಯಕ್ಕೆ ಬಳಸಿದ 2 ಕಾರು, ಒಂದು ಪಿಸ್ತೂಲು ಹಾಗೂ 9 ಜೀವಂತ ಗುಂಡು ಸಹಿತ 6 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ನಗರ ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್ ತಿಳಿಸಿದರು.
ಮೈಸೂರು ನಗರ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 2025ರ ಜುಲೈ-28 ರಂದು ನಗರದ ಹೆಬ್ಬಾಳ ಕೈಗಾರಿಕಾ ಪ್ರದೇಶದಲ್ಲಿರುವ ಆಭರಣ ತಯಾರಿಕಾ ಫ್ಯಾಕ್ಟರಿಯಲ್ಲಿ 3 ಜನ ವ್ಯಕ್ತಿಗಳು ಫ್ಯಾಕ್ಟರಿಯ ಕಾಂಪೌಂಡ್ ದಾಟಿ ಫ್ಯಾಕ್ಟರಿಯನ್ನು ಪ್ರವೇಶಿಸಿದ್ದರು. ನಂತರ ಅಲ್ಲಿದ್ದ ಇಬ್ಬರು ಸೆಕ್ಯೂರಿಟಿಗಳಿಗೆ ಚಾಕು ಮತ್ತು ಪಿಸ್ತೂಲ್ ತೋರಿಸಿ, ಸೆಕ್ಯೂರಿಟಿಗಳ ಕೈಯನ್ನು ಕಟ್ಟಿ ಹಾಕಿದ್ದರು.
ಅವರಲ್ಲಿದ್ದ ಮೊಬೈಲ್ ಕಿತ್ತುಕೊಂಡು ಸೆಕ್ಯೂರಿಟಿಗಳ ಮೇಲೆ ಹಲ್ಲೆ ಮಾಡಿ ಫ್ಯಾಕ್ಟರಿಯ ಮೇಲ್ಭಾಗದ ಸಿಮೆಂಟ್ ಶೀಟ್ ಒಡೆದು ಕಾರ್ಖಾನೆ ಒಳಗೆ ದರೋಡೆಕೋರರು ಪ್ರವೇಶ ಮಾಡಿ ಬೆಳ್ಳಿ ಪದಾರ್ಥಗಳನ್ನು ದರೋಡೆ ಮಾಡಿಕೊಂಡು ಪರಾರಿಯಾಗಿದ್ದರು. ಈ ಕುರಿತು ಹೆಬ್ಬಾಳ ಕೈಗಾರಿಕಾ ಪ್ರದೇಶದಲ್ಲಿ ದೂರು ದಾಖಲಾಗಿತ್ತು ಎಂದು ಆಯುಕ್ತರು ತಿಳಿಸಿದರು.
ಮೈಸೂರು ನಗರದ ವಿಶೇಷ ಪೊಲೀಸ್ ತಂಡ ವೈಜ್ಞಾನಿಕ ಸುಳಿವಿನ ಆಧಾರದ ಮೇಲೆ ಗುಜರಾತಿಗೆ ಹೋಗಿ ಅಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಿದಾಗ ಅವರು ನೀಡಿದ ಮಾಹಿತಿಯ ಮೇರೆಗೆ ಮೈಸೂರಿನಲ್ಲಿ ಫ್ಯಾಕ್ಟರಿ ಮಾಲೀಕನ ಕಾರು ಚಾಲಕನನ್ನು ಬಂಧಿಸಿದ್ದು, ಮತ್ತೆ ಮೂವರನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದೆ. ಬಂಧಿತರ ಸಂಖ್ಯೆ 6ಕ್ಕೆ ಏರಿಕೆಯಾಗಿದ್ದು, ಮತ್ತೊಬ್ಬ ಪರಾರಿಯಾಗಿದ್ದಾನೆ ಎಂದು ಅವರು ಹೇಳಿದ್ದಾರೆ.
ದರೋಡೆಗೆ ಮಾಸ್ಟರ್ ಪ್ಲಾನ್: ಮೈಸೂರಿನ ಫ್ಯಾಕ್ಟರಿ ಮಾಲೀಕನ ಕಾರು ಚಾಲಕ A1 ಆರೋಪಿಯಾಗಿದ್ದು, ಈತ ಗುಜರಾತಿನ ಪ್ರಮುಖ ನಟೋರಿಯಸ್ ದರೋಡೆಕೋರ A2 ವಿಗೆ ಇನ್ಸ್ಟಾಗ್ರಾಂನಲ್ಲಿ ಮೆಸೇಜ್ ಮಾಡಿದ್ದ. ಆ ಮೆಸೇಜ್ ನಲ್ಲಿ ನಾನು 50 ಲಕ್ಷ ಸಾಲ ಮಾಡಿದ್ದೇನೆ,
ನನಗೆ ಸಹಾಯ ಮಾಡು ಎಂದಿದ್ದ. ನಂತರ ಮೂರು ಪ್ಲಾನ್ ಹಾಕಿಕೊಂಡು ಆರೋಪಿ 3 ಮತ್ತು ಆರೋಪಿ 7ರೊಂದಿಗೆ ಸೇರಿಕೊಂಡು ಮೈಸೂರಿಗೆ ಬಂದು ಹೆಬ್ಬಾಳದ ಕೈಗಾರಿಕಾ ಪ್ರದೇಶದಲ್ಲಿರುವ ಬೆಳ್ಳಿ ಆಭರಣ ತಯಾರಿಕಾ ಘಟಕದ ಕಾರ್ಖಾನೆಯಲ್ಲಿ ದರೋಡೆ ಮಾಡಿಗ ಕೃತ್ಯ ತನಿಖೆಯಿಂದ ತಿಳಿದು ಬಂದಿದೆ ಎಂದು ಆಯುಕ್ತರು ತಿಳಿಸಿದರು.
ಬಂಧಿತ 2ನೇ ಆರೋಪಿ ಗುಜರಾತ್ ರಾಜ್ಯದಲ್ಲಿ 30ಕ್ಕೂ ಹೆಚ್ಚು ದರೋಡೆ, ಸುಲಿಗೆ ಹಾಗೂ ಅಕ್ರಮ ಆಯುಧಗಳನ್ನು ಸಂಗ್ರಹಿಸಿದ ಆರೋಪ ಹೊಂದಿರುವ ನಟೋರಿಯಸ್ ಆಗಿದ್ದಾನೆ ಎಂದು ನಗರ ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್ ತಿಳಿಸಿದರು.

