ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಪಾಂಡವಪುರ ತಾಲೂಕಿನ ಚಿಕ್ಕಮರಲಿ ಗ್ರಾಮದ ನಿವಾಸಿ ಕೃಪಾಕರ ಸಿ. ಎನ್ ಎಂಬ 32 ವರ್ಷ ವಯಸ್ಸಿನ ಯುವಕನಿಗೆ ತನ್ನ ತಂದೆಯವರಾದ ಸಿ.ಕೆ ನಿಂಗೇಗೌಡ (59) ಎಂಬುವವರು ಹಾಗೂ ನಾಗಮಂಗಲ ಪಟ್ಟಣದ ಕುಂಬಾರ ಬೀದಿ ನಿವಾಸಿ ಅನ್ಪಾಸ್ ರೆಹಮಾನ್ ಎಂಬ 24 ವರ್ಷ ವಯಸ್ಸಿನ ಯುವಕನಿಗೆ ತನ್ನ ತಂದೆ ಚೋಟೆಸಾಬ್ (59) ಎಂಬುವವರು ಕಿಡ್ನಿ ಅಂಗಾಂಗ ದಾನ ಮಾಡಿ ಮಾನವೀಯತೆ ಮೆರೆದಿರುತ್ತಾರೆ.
ಈ ಅಂಗಾಂಗ ಕಸಿಯನ್ನು ವಿಶ್ವ ಅಂಗಾಂಗ ದಿನಾಚರಣೆಯೊಂದು ಅಂದರೆ ಆಗಸ್ಟ್-13ರ ಬುಧವಾರದಂದು ಆದಿಚುಂಚನಗಿರಿ ಆಸ್ಪತ್ರೆ, ಬಿ ಜಿ ನಗರ, ನಾಗಮಂಗಲ ತಾಲ್ಲೂಕು, ಮಂಡ್ಯ ಜಿಲ್ಲೆ ಇಲ್ಲಿ ಪರಮಪೂಜ್ಯ ಜಗದ್ಗುರು ಶ್ರೀ ಡಾ.ನಿರ್ಮಲನಂದನಾಥ ಮಹಾಸ್ವಾಮೀಜಿಯವರ ದಿವ್ಯ ಸಮ್ಮುಖದಲ್ಲಿ ಖ್ಯಾತ ವೈದ್ಯರಾದ ಡಾ. ನರೇಂದ್ರ, ಡಾ. ಅನಿಲ್ ಹಾಗೂ ಡಾ. ನಂದೀಶ್ ರವರ ನೇತೃತ್ವದಲ್ಲಿ ಯಶಸ್ವಿಯಾಗಿ ಅಂಗಾಂಗ ಕಸಿ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಹೀಗೆ ಅಂಗಾಂಗ ದಾನ ಮಾಡಿದ ಗ್ರಾಮೀಣ ಭಾಗದ ನಿಂಗೇಗೌಡ ಹಾಗೂ ಚೋಟೆ ಸಾಬ್ ರವರು ಈ ಅಂಗಾಂಗ ದಾನದ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ.
ಈ ಎರಡು ಯಶಸ್ವಿ ಅಂಗಾಂಗ ಕಸಿ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಪೂಜ್ಯ ಶ್ರೀ ಶ್ರೀ ಸತ್ಕೀರ್ತಿನಾಥ ಸ್ವಾಮೀಜಿರವರು, ಆದಿಚುಂಚನಗಿರಿ ಮಹಾಸಂಸ್ಥಾನ ಮಠ, ಬಿ ಜಿ ನಗರ, ಡಾ. ಕೆ ಎಂ ಶಿವಕುಮಾರ್, ಮುಖ್ಯಸ್ಥರು, ಆದಿಚುಂಚನಗಿರಿ ಆಸ್ಪತ್ರೆ, ಡಾ. ರವಿ ಕೆ ಎಸ್ ಉಪ-ಮುಖ್ಯಸ್ಥರು ಆದಿಚುಂಚನಗಿರಿ ಆಸ್ಪತ್ರೆ, ಹಾಗೂ
ಶ್ರೀ ಧರ್ಮೇಂದ್ರ ರವರು ಸಾರ್ವಜನಿಕ ಸಂಪರ್ಕ ಅಧಿಕಾರಿ ಆದಿಚುಂಚನಗಿರಿ ಆಸ್ಪತ್ರೆ ಹಾಗೂ ಆದಿಚುಂಚನಗಿರಿ ಆಸ್ಪತ್ರೆಯ ಇನ್ನಿತರ ವೈದ್ಯಕೀಯ ಸಿಬ್ಬಂದಿಗಳು ಈ ವಿಶ್ವ ಅಂಗಾಂಗ ದಾನ ದಿನದಂದು ನಡೆದ ಯಶಸ್ವಿ ಶಸ್ತ್ರಚಿಕಿತ್ಸೆಯ ಸಂದರ್ಭದಲ್ಲಿ ಹಾಜರಿದ್ದರು.
ಈ ಅಪರೂಪದ ಎರಡು ಅಂಗಾಂಗ ಕಸಿ ಶಸ್ತ್ರ ಚಿಕಿತ್ಸೆಯನ್ನು ಪರಮಪೂಜ್ಯ ಜಗದ್ಗುರು ಶ್ರೀ ಡಾ. ನಿರ್ಮಲಾನಂದನಾಥ ಮಹಾ ಸ್ವಾಮೀಜಿಯವರು ಖುದ್ದು ಹಾಜರಿದ್ದು ಸಂಪೂರ್ಣ ಶಸ್ತ್ರಚಿಕಿತ್ಸೆ ವೀಕ್ಷಣೆ ಮಾಡಿ ಫಲಾನುಭವಿಗಳಿಗೆ ಶುಭ ಹಾರೈಸಿದರು ಹಾಗೂ ಆದಿಚುಂಚನಗಿರಿ ಆಸ್ಪತ್ರೆಯ ಈ ಮಹತ್ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

