ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
79ನೇ ಸ್ವಾತಂತ್ರ್ಯ ದಿನಾಚರಣೆಯ ಪವಿತ್ರವಾದ ಈ ದಿನದಂದು ಮಾತೃಭೂಮಿ ವಿಮೋಚನೆಗಾಗಿ ಸೆರೆವಾಸ, ಗಲ್ಲು ಸೇರಿ ಅನೇಕ ಘೋರ ಶಿಕ್ಷೆಗಳನ್ನು ಎದುರಿಸಿ ಸ್ವತಂತ್ರ ಭಾರತಕ್ಕಾಗಿ ಹೋರಾಟ, ತ್ಯಾಗ, ಬಲಿದಾನಗೈದ ಅಸಂಖ್ಯಾತ ಮಹಾ ಮಹಿಮರನ್ನು ಸ್ಮರಿಸಿದಾಗ ನನ್ನ ಹೃದಯವು ಹೆಮ್ಮೆ ಮತ್ತು ಕೃತಜ್ಞತೆಯಿಂದ ತುಂಬಿ ಬರುತ್ತಿದೆ ಎಂದು ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವ ಹೆಚ್.ಡಿ ಕುಮಾರಸ್ವಾಮಿ ಅವರು ಸ್ಮರಿಸಿದರು.
ಸರ್ವಸ್ವವನ್ನೂ ತ್ಯಜಿಸಿ ಅತೀವ ಧೈರ್ಯ, ದೃಢ ಸಂಕಲ್ಪದಿಂದ ಹೋರಾಡಿದ ಇವರೆಲ್ಲರ ತ್ಯಾಗದ ಫಲವಾಗಿ ಜಗತ್ತಿನಲ್ಲಿಯೇ ಅತ್ಯಂತ ಶ್ರೇಷ್ಠ ಜನತಂತ್ರ ಪರಂಪರೆಯ ಭಾಗವಾಗಿ ನಾವು ಜೀವಿಸುತ್ತಿದ್ದೇವೆ. ನಾವೆಲ್ಲರೂ ಇಂದು ನಮ್ಮದೇ ಆಗಿರುವ ಸಾರ್ವಭೌಮ, ಪ್ರಜಾಪ್ರಭುತ್ವ ಮತ್ತು ಚೈತನ್ಯಶೀಲ ರಾಷ್ಟ್ರದಲ್ಲಿದ್ದೇವೆ.
ಇದು ಕೇವಲ ಆಚರಣೆಯ ದಿನವಲ್ಲ, ತಾಯ್ನಾಡು ಗಳಿಸಿದ ಮಹೋನ್ನತ ಸ್ವಾತಂತ್ರ್ಯವನ್ನು ರಕ್ಷಿಸುವ ಮತ್ತು ಸಂರಕ್ಷಿಸುವ ನಮ್ಮ ಬದ್ಧತೆ, ಪ್ರತಿಜ್ಞೆಯನ್ನು ಪುನರುಚ್ಚರಿಸುವ ದಿನವಾಗಿದೆ ಎಂದು ಕುಮಾರಸ್ವಾಮಿ ತಿಳಿಸಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ದೂರದೃಷ್ಟಿ ನಾಯಕತ್ವದಲ್ಲಿ ಭಾರತವು ಸ್ವಾವಲಂಬನೆ, ನಾವೀನ್ಯತೆಗಳ ಮೂಲಕ ಪರಿವರ್ತನಾತ್ಮಕ ಪ್ರಗತಿಯ ಯುಗಕ್ಕೆ ಸಾಕ್ಷಿಯಾಗುತ್ತಿದೆ. ಕೈಗಾರಿಕೆಗಳ ಪುನರುಜ್ಜೀವನದಿಂದ ತಾಂತ್ರಿಕ ಅಭಿವೃದ್ಧಿವರೆಗೆ ಉಕ್ಕು ಕ್ಷೇತ್ರವನ್ನು ಬಲಪಡಿಸಿ ಆತ್ಮ ನಿರ್ಭಾರ್ ಭಾರತ್ (#AatmanirbharBharat) ಮೂಲಕ ಉತ್ಪಾದನಾ ಶಕ್ತಿಯನ್ನು ವೃದ್ಧಿಸಿಕೊಂಡು ಜಾಗತಿಕ ಕ್ಷಿತಿಜದಲ್ಲಿ ಭಾರತವು ಬೃಹತ್ ಆರ್ಥಿಕ ಶಕ್ತಿಯಾಗಿ ಅವತರಿಸುತ್ತಿದೆ.
ಕೇಂದ್ರ ಸರಕಾರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವನಾಗಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಬಲಿಷ್ಠ, ಶ್ರೇಷ್ಠ ಹಾಗೂ #ViksitBharat2047 ನಿರ್ಮಾಣಕ್ಕಾಗಿ ನಾನು ಕಟಿ ಬದ್ಧನಾಗಿದ್ದೇನೆ ಎಂದು ಕುಮಾರಸ್ವಾಮಿ ಘೋಷಿಸಿದ್ದಾರೆ.
ನಾವೆಲ್ಲರೂ ಒಗ್ಗಟ್ಟಾಗಿ ನಮ್ಮ ಏಕತೆ, ಶಕ್ತಿ ಮತ್ತು ಅಚಲ ದೇಶಭಕ್ತಿಯ ಸಂಕೇತವಾಗಿ ಹೆಮ್ಮೆಯ ತ್ರಿವರ್ಣ ಧ್ವಜವನ್ನು ಎಂದೆಂದಿಗೂ ಎತ್ತರಕ್ಕೆ ಹಾರಿಸೋಣ. ಭಾರತಾಂಬೆಗೆ ಶ್ರದ್ಧೆ, ಭಕ್ತಿಯಿಂದ ನಮಿಸೋಣ ಎಂದು ಅವರು ಕರೆ ನೀಡಿದ್ದಾರೆ.

