ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸಾಮಾಜಿಕ ಜಾಲತಾಣಗಳಲ್ಲಿ ಮಾಜಿ ಸಂಸದೆ, ನಟಿ ರಮ್ಯಾ ಅವರಿಗೆ ಅಶ್ಲೀಲ ಕಾಮೆಂಟ್, ಸಂದೇಶದ ಮೂಲಕ ಜೀವ ಬೆದರಿಕೆ ಹಾಕಿದ್ದ ಪ್ರಕರಣಕ್ಕೆ ಸಂಬಂಧಟ್ಟಂತೆ ಇನ್ನಿಬ್ಬರು ಆರೋಪಿಗಳನ್ನ ಸಿಸಿಬಿಯ ಸೈಬರ್ ಕ್ರೈಂ ವಿಭಾಗದ ಪೊಲೀಸರು ಬಂಧಿಸಿದ್ದಾರೆ.
ಉಡುಪಿ ಮೂಲದ ಆದರ್ಶ್ ಮತ್ತು ಸಂಜಯ್ ಎಂಬುವವರನ್ನು ಪೊಲೀಸರು ಬಂಧಿಸಿದ್ದು ಬಂಧಿತರ ಸಂಖ್ಯೆ ಒಟ್ಟು 9ಕ್ಕೆ ಏರಿಕೆಯಾಗಿದೆ.
ಕೊಲೆ ಆರೋಪಿ ನಟ ದರ್ಶನ್ ಅವರ ಅಭಿಮಾನಿಗಳೆಂದು ಹೇಳಿಕೊಂಡು ಅಶ್ಲೀಲ ಸಂದೇಶ ರವಾನೆ, ಕಾಮೆಂಟ್ ಮಾಡುತ್ತಿದ್ದವರ ವಿರುದ್ಧ ಜುಲೈ 28ರಂದು ಖುದ್ದು ರಮ್ಯಾ ಅವರು ಬೆಂಗಳೂರು ನಗರ ಪೊಲೀಸ್ ಆಯುಕ್ತರು ಹಾಗೂ ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದರು.
ಬೆಂಗಳೂರಿನ ಇನ್ಫೆಂಟ್ರಿ ರಸ್ತೆಯ ನಗರ ಪೊಲೀಸ್ ಆಯುಕ್ತರ ಕಚೇರಿಗೆ ನಟಿ ರಮ್ಯಾ ಅವರು ಆಗಮಿಸಿ ಕಮಿಷನರ್ ಸೀಮಂತ್ ಕುಮಾರ್ ಅವರನ್ನು ಭೇಟಿ ಮಾಡಿ ಅಶ್ಲೀಲ ಸಂದೇಶ ಕಳುಹಿಸಿದ 43 ಇನ್ಸ್ಟ್ರಾಗಾಂ ಪೇಜ್ಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ನೀಡಿ ಕೋರಿಕೊಂಡಿದ್ದರು.
ನಟಿ ರಮ್ಯಾ ನೀಡಿದ ದೂರಿನ ಅನ್ವಯ ಮಾಹಿತಿ ತಂತ್ರಜ್ಞಾನ ಕಾಯ್ದೆ ಹಾಗೂ ಭಾರತೀಯ ನ್ಯಾಯ ಸಂಹಿತೆ ಕಾಯ್ದೆ 2023ರ 351(2) (ಕ್ರಿಮಿನಲ್ ಬೆದರಿಕೆಯ ಉದ್ದೇಶದ ಅಪರಾಧ), 351(3) (ಸಾವು, ತೀವ್ರ ನೋವುಂಟು ಮಾಡುವ ಉದ್ದೇಶದ ಕ್ರಿಮಿನಲ್ ಬೆದರಿಕೆ), 352 (ಉದ್ದೇಶಪೂರ್ವಕ ಅವಮಾನದ ಮೂಲಕ ಶಾಂತಿಭಂಗದ ಯತ್ನ), 75(1) (ಲೈಂಗಿಕ ಕಿರುಕುಳ) 75(1)(IV) (ಲೈಂಗಿಕ ಟೀಕೆ) ಹಾಗೂ 79 (ಮಹಿಳೆಯ ಗೌರವಕ್ಕೆ ಧಕ್ಕೆ) ಆರೋಪದಡಿ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಬಳಿಕ ಓಬಣ್ಣ, ಗಂಗಾಧರ್, ರಾಜೇಶ್, ಭುವನ್‍ಗೌಡ, ಮಂಜುನಾಥ್, ಪ್ರಮೋದ್‌ಗೌಡ ಹಾಗೂ ಸಂತೋಷ್ ಎಂಬ ಏಳು ಆರೋಪಿಗಳನ್ನ ಈ ಹಿಂದೆ ಪೊಲೀಸರು ಬಂಧಿಸಿದ್ದರು. ಈಗ ಮತ್ತಿಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸುವ ಮೂಲಕ ಆರೋಪಿಗಳ ಸಂಖ್ಯೆ 9ಕ್ಕೆ ಏರಿಯಾಗಿದೆ.
ಪೊಲೀಸ್ ಆಯುಕ್ತರ ಎಚ್ಚರಿಕೆ:
ನಟಿ ರಮ್ಯಾ ಅವರ ವಿರುದ್ಧ ಜಾಲತಾಣಗಳಲ್ಲಿ ಬಂದ ಅಶ್ಲೀಲ ಕಾಮೆಂಟ್, ಮೆಸೇಜ್‌ಗಳನ್ನು ಪರಿಶೀಲಿಸಿ ಪ್ರಕರಣದಲ್ಲಿ ನೇರವಾಗಿ ಭಾಗಿಯಾಗಿದ್ದ 13 ಮಂದಿ ಆರೋಪಿಗಳನ್ನು ಪೊಲೀಸರು ಗುರುತಿಸಿದ್ದರು. ಈಗಾಗಲೇ 9 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಪ್ರಕರಣ ಸಂಬಂಧ ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ.
ಜಾಲತಾಣಗಳ ಮೂಲಕ ನಡೆಯುವ ಈ ರೀತಿಯ ಕೃತ್ಯಗಳನ್ನು ತಡೆಯಲು ಮಾನಿಟರಿಂಗ್ ಟೀಂಗಳಿಗೆ ಹೆಚ್ಚಿನ ತರಬೇತಿ ಕೊಡಿಸಿ ಚುರುಕುಗೊಳಿಸಲಾಗಿದೆ. ಸಿಸಿಬಿ ಹಾಗೂ ನಗರದ 8 ಸೈಬರ್ ಕ್ರೈಂ ಠಾಣೆಗಳ ಸಿಬ್ಬಂದಿ ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.
ಮುಂದೆ ಯಾರಾದರೂ ಈ ರೀತಿ ಇತರರ ಬಗ್ಗೆ ಅಶ್ಲೀಲ ಸಂದೇಶ, ಕಾಮೆಂಟ್ ರವಾನಿಸಿದರೆ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರು ಈ ಹಿಂದೆಯೇ ಎಚ್ಚರಿಕೆ ನೀಡಿದ್ದನ್ನ ಸ್ಮರಿಸಬಹುದಾಗಿದೆ.

