ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬದಲಾದ ಮಾಧ್ಯಮ ಜಗತ್ತಿಗೆ ಅನುಗುಣವಾಗಿ ವಾರ್ತಾ ಮತ್ತು ಸಾರ್ವಜನಿಕ ಇಲಾಖೆವತಿಯಿಂದ ಪ್ರಸ್ತುತ ರಾಜ್ಯದಲ್ಲಿ ಚಾಲ್ತಿಯಲ್ಲಿರುವ ಜಾಹೀರಾತು ನೀತಿ-2013 ಅನುಷ್ಠಾನ ನಿಯಮಗಳು-2014 ಕ್ಕೆ ಪೂರಕ ತಿದ್ದುಪಡಿಗಳೊಂದಿಗೆ ಶೀಘ್ರದಲ್ಲಿ ಹೊಸ ಜಾಹೀರಾತು ನೀತಿ ಜಾರಿಗೆ ತರಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.
ವಿಧಾನಪರಿಷತ್ನಕಲಾಪದ ವೇಳೆ ಪರಿಷತ್ ಸದಸ್ಯ ಡಿ.ಎಸ್ ಅರುಣ್ ಅವರು ಕೇಳಿದ ರಾಜ್ಯ ಸರ್ಕಾರ ನೀಡುತ್ತಿರುವ ಜಾಹೀರಾತುಗಳಿಗೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿಗಳು ರಾಜ್ಯ ಸರ್ಕಾರ ಜಾರಿಗೆ ತರುವ ಯೋಜನೆಗಳನ್ನು ಹಾಗೂ ಅಭಿವೃದ್ಧಿ ಕೆಲಸಗಳನ್ನು ಸಾರ್ವಜನಿಕರಿಗೆ ತಿಳಿಸುವುದು ಸರ್ಕಾರದ ಜವಬ್ದಾರಿಯಾಗಿದ್ದು, ಅದರಂತೆ ಕಾಲ-ಕಾಲಕ್ಕೆ ವಿವಿಧ ಮಾಧ್ಯಮಗಳಿಗೆ ಬಿಡುಗಡೆ ಮಾಡಿರುವ ಜಾಹೀರಾತುಗಳ ಕುರಿತಂತೆ ಸದನಕ್ಕೆ ಮಾಹಿತಿ ನೀಡಿದರು.
ವಿರೋಧ ಪಕ್ಷಗಳು ಆರೋಪಿಸುವಂತೆ ಯಾವುದೇ ಅಭಿವೃದ್ಧಿ ಕಾರ್ಯಗಳು ಕುಂಟಿತಗೊಂಡಿಲ್ಲ ಹಾಗೂ ಗ್ಯಾರಂಟಿ ಯೋಜನೆಗಳಿಂದ ಸರ್ಕಾರಕ್ಕೆ ಹಣದ ಕೊರತೆಯಾಗಿಲ್ಲ. ವಿರೋಧ ಪಕ್ಷಗಳು ಹೇಳುವಂತೆ ನಾವು ಜಾಹೀರಾತು ನೀಡಿರುವುದು ಜನ ಸಾಮಾನ್ಯರ ಕಲ್ಯಾಣಕ್ಕಾಗಿ ಜಾರಿಗೆ ತಂದಿರುವ ವಿವಿಧ ಯೋಜನೆಗಳು ಮತ್ತು ಕಾರ್ಯಕ್ರಮಗಳು ಅವರಿಗೆ ಉತ್ತರವಾಗಿವೆ ಎಂದರು.
ಪರಿಶಿಷ್ಟ ಜಾತಿ ಮತ್ತು ಪಂಗಡದ ಕಲ್ಯಾಣಕ್ಕಾಗಿ ಪ್ರತಿವರ್ಷದ ಆಯವ್ಯಯದಲ್ಲಿ ಅಭಿವೃದ್ಧಿ ಕೆಲಸಗಳಿಗಾಗಿ ವ್ಯಯಿಸುವ ಹಣ ಜಾಸ್ತಿಯಾದಂತೆ ಅವರಿಗೆ ಸಹ ಹೆಚ್ಚಾಗಿರುವುದನ್ನು ಆಯವ್ಯಯದಲ್ಲಿ ಗಮನಿಸಬಹುದಾಗಿದೆ. ಕಳೆದ ಸಾಲಿನ ಆಯವ್ಯಯದಲ್ಲಿ ಅವರಿಗಾಗಿ 39,000 ಸಾವಿರ ಕೋಟಿ ಮೀಸಲಿಡಲಾಗಿತ್ತು, ಪ್ರಸ್ತುತ ಸಾಲಿನದಲ್ಲಿ ರಾಜ್ಯದ ಆಯವ್ಯಯ ಗಾತ್ರದಂತೆ ಶೇ 24.01 ರಂತೆ ಒಟ್ಟು 42,017 ಕೋಟಿ ರೂ ಮೀಸಲಿಡಲಾಗಿದೆ. ವಿರೋಧ ಪಕ್ಷಗಳ ಆರೋಪದಲ್ಲಿ ಯಾವುದೇ ಹುರಳಿಲ್ಲ ಎಂದು ಹೇಳಿದರು.
ಜಾಹೀರಾತು ನೀಡುವುದಕ್ಕೆ ಸಂಬಂಧಿಸಿದಂತೆ 2020-21 ಆರ್ಥಿಕ ವರ್ಷದಲ್ಲಿ 111.15 ಕೋಟಿ ರೂ, 2021-22 ರಲ್ಲಿ 86.08 ಕೋಟಿ ರೂ, 2022-23 ರಲ್ಲಿ 113.20 ಕೋಟಿ ರೂ, 2023-24 ರಲ್ಲಿ 101.38 ಕೋಟಿ ರೂ ಹಾಗೂ ಅದರಲ್ಲಿ 29.46 ಕೋಟಿ ರೂ ಹಿಂದಿನ ವರ್ಷದ ಬಾಕಿ ಪಾವತಿಸಲಾಗಿದೆ, 2024-25 ರಲ್ಲಿ 95.45 ಕೋಟಿ ರೂ ವ್ಯಯಿಸಿಲಾಗಿದ್ದು, ಇದರಲ್ಲಿ ಹಿಂದಿನ ಸರ್ಕಾರದ ಬಾಕಿಗಳನ್ನು ಸಹ ಪಾವತಿಸಲಾಗಿದೆ.
ಪ್ರಸ್ತುತ ಜಾರಿಯಲ್ಲಿರುವ ಜಾಹೀರಾತು ಅನುಷ್ಠಾನ ನಿಯಮಗಳನ್ವಯ ಮಾಧ್ಯಮ ಪಟ್ಟಿಯಲ್ಲಿರುವ ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳಿಗೆ ಸಂದರ್ಭಾನುಸಾರ ರಾಜ್ಯ ರಾಷ್ಟ್ರೀಯ ಹಬ್ಬ ಮಹನೀಯರ ಜಯಂತಿ ಮತ್ತು ಸರ್ಕಾರದ ಸಾಧನೆ ಹಾಗೂ ಯೋಜನೆ/ಕಾರ್ಯಕ್ರಮಗಳ ಕುರಿತು ಆಕರ್ಷಕ ಮತ್ತು ಪ್ರೋತ್ಸಾಹ ರೂಪದ ಜಾಹೀರಾತುಗಳನ್ನು ಸಮುಚಿತವಾಗಿ ಬಿಡುಗಡೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

