ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಪತ್ರಕರ್ತರಾಗಿ ವರದಿಗಳಲ್ಲಿ ಸೃಜನಶೀಲ ಬರವಣಿಗೆ ರೂಢಿಸಿಕೊಳ್ಳಲು ಸಾಹಿತ್ಯದ ಓದು ಅಗತ್ಯವಾಗಿದೆ ಎಂದು ಹಿರಿಯ ಪತ್ರಕರ್ತ ಹಾಗೂ ಮುಖ್ಯಮಂತ್ರಿಗಳ ಮಾಜಿ ಮಾಧ್ಯಮ ಸಲಹೆಗಾರ ದಿನೇಶ್ ಅಮಿನ್ಮಟ್ಟು ಹೇಳಿದರು.
ಕರ್ನಾಟಕ ಸಾಹಿತ್ಯ ಅಕಾಡೆಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಶುಕ್ರವಾರ ನಗರದ ಪತ್ರಿಕಾ ಭವನದ ಡಾ. ಬಿ.ಆರ್. ಅಂಬೇಡ್ಕರ್ ಸಭಾಂಗಣದಲ್ಲಿ ಆಯೋಜಿಸಲಾದ “ಯುವ ಪತ್ರಕರ್ತರಿಗೆ ಕನ್ನಡ ಸಾಹಿತ್ಯಾಭಿರುಚಿ ಶಿಬಿರ” ಉದ್ಘಾಟಿಸಿ ಅವರು ಮಾತನಾಡಿದರು.
ಸಾಹಿತ್ಯ ಓದುವುದರಿಂದ ಪತ್ರಕರ್ತರ ಅನುಭವ ಹಾಗೂ ಶಬ್ದ ಸಂಪತ್ತು ವಿಸ್ತಾರಗೊಳ್ಳುತ್ತದೆ. ಈ ಅನುಭವ ಬರವಣಿಗೆಯಲ್ಲಿ ಅಭಿವ್ಯಕ್ತಿಗೊಳ್ಳುವ ಮೂಲಕ ಬರವಣಿಗೆ ತೂಕ ಹೆಚ್ಚುತ್ತದೆ. ಯುವ ಪತ್ರಕರ್ತರು ಸಾಹಿತ್ಯ ಓದುವ ಹವ್ಯಾಸ ಬೆಳಸಿಕೊಳ್ಳಬೇಕು ಎಂದು ದಿನೇಶ್ ಅಮಿನಮಟ್ಟು ತಿಳಿಸಿದರು.
ಕನ್ನಡ ಪತ್ರಿಕೋದ್ಯಮದಲ್ಲಿ ಡಿ.ವಿ. ಗುಂಡಪ್ಪ, ಕಡೆಗೊಡ್ಲು ಶಂಕರಭಟ್ಟ, ಬೆನಗಲ್ ರಾಮರಾಯರು, ಲಂಕೇಶ್ ಸೇರಿದಂತೆ ಸಾಹಿತ್ಯ ನಂಟು ಹೊಂದಿದ್ದ ದಿಗ್ಗಜರು ಪತ್ರಿಕೆಗಳನ್ನು ನಡೆಸಿದ್ದಾರೆ. ಇವರು ವಿಶ್ವ ವಿದ್ಯಾಲಯಗಳಲ್ಲಿ ಪತ್ರಿಕೋದ್ಯಮವನ್ನು ಶಾಸ್ತ್ರೀಯವಾಗಿ ಅಧ್ಯಯನ ಮಾಡಿರಲಿಲ್ಲ. ಇದೇ ರೀತಿ ರಾಷ್ಟ್ರ ಮಟ್ಟದಲ್ಲಿ ಪತ್ರಿಕಾರಂಗದಲ್ಲಿ ಪ್ರಸಿದ್ದರಾದ ಖುಷ್ವಂತ್ಸಿಂಗ್, ವಿನೋದ ಮೆಹ್ತಾ, ರಾಜೀವ್ ಸರ್ದೇಸಾಯಿ, ಅರುಣ್ ಶೌರಿಯಂತವರು ಸಹ ಬೇರೆ ವಿಷಯಗಳಲ್ಲಿ ಪದವಿ ಪಡೆದವರು. ಆದರೆ ಇವರೆಲ್ಲರೂ ಸಾಹಿತ್ಯ ಹಾಗೂ ಬರವಣಿಗೆಯ ಮೇಲಿನ ಪ್ರೀತಿಯಿಂದ ಪತ್ರಕರ್ತರಾಗಿ ಕೆಲಸ ಮಾಡಿದ್ದಾರೆ.

ಆಧುನಿಕ ತಂತ್ರಜ್ಞಾನ ಪ್ರಭಾವದಿಂದ ಮೂರ್ನಾಲ್ಕು ದಶಕದಲ್ಲಿ ಪತ್ರಕರ್ತರ ವೃತ್ತಿಯ ಸ್ವರೂಪ ತೀವ್ರಗತಿಯಲ್ಲಿ ಬದಲಾಗಿದೆ. ಇಂತಹ ಬದಲಾವಣೆಯನ್ನು ಸಾಹಿತ್ಯ ಕ್ಷೇತ್ರದಲ್ಲೂ ಕಾಣಬಹುದು. ಕೃತಕ ಬುದ್ದಿಮತ್ತೆ ತಂತ್ರಾಂಶಗಳು ಸೃಜನಶೀಲ ಕ್ಷೇತ್ರವನ್ನು ಪ್ರವೇಶಿಸಿವೆ. ಭಾಷಾಂತರ ತಂತ್ರಾಂಶ ಬಳಕೆಯಿಂದ ಮಾಧ್ಯಮ ಕ್ಷೇತ್ರಕ್ಕೆ ಸಹಕಾರಿಯಾಗಿದೆ. ಇದರ ನಡುವೆಯೂ ಪತ್ರಕರ್ತ ಸೃಜನಶೀಲ ಬರವಣಿಗೆ ಕಲೆಯನ್ನು ರೂಢಿಸಿಕೊಳ್ಳುವುದು ಅಗತ್ಯವಾಗಿದೆ. ಸರಳ ಭಾಷೆಯಲ್ಲಿ ವರದಿಯನ್ನು ಬರೆಯುವ ಮೂಲಕ ಓದುಗರನ್ನು ತಲುಪಬೇಕು. ಸರಳವಾಗಿ ಬರೆಯುವುದು ಸುಲಭದ ಕೆಲಸವಲ್ಲ. ಇದಕ್ಕೆ ಸಾಕಷ್ಟು ಅಧ್ಯಯನದ ಅಗತ್ಯವಿದೆ. ಯುವ ಪತ್ರಕರ್ತರು ರಾಜಕೀಯ, ಸಾಹಿತ್ಯ, ವಿಜ್ಞಾನ, ವೈದ್ಯಕೀಯ, ಸಾಮಾಜಿಕ ವಿಚಾರಗಳನ್ನು ಓದಿ ತಿಳಿದುಕೊಳ್ಳಬೇಕು ಎಂದು ದಿನೇಶ್ ಅಮಿನಮಟ್ಟು ಕಿವಿಮಾತು ಹೇಳಿದರು.
ಇಂದಿನ ಎಲೆಕ್ಟ್ರಾನಿಕ್ ಹಾಗೂ ಮುದ್ರಣ ಮಾಧ್ಯಮದಲ್ಲೂ ಬದಲಾವಣೆ ಬಂದಿದೆ. ಕೇವಲ 250 ಪದಗಳ ಮಿತಿಯಲ್ಲಿ ವರದಿಯನ್ನು ಕಟ್ಟಿಕೊಡುವ ಪರಿಸ್ಥಿತಿಯಿದೆ. ವಿಶ್ಲೇಷಣಾತ್ಮ ವರದಿಗಳು ಕಡಿಮೆಯಾಗಿವೆ. ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ವಿಶ್ವ ವಿದ್ಯಾಲಯಗಳಲ್ಲಿ ಪ್ರಸ್ತುತ ಮಾಧ್ಯಮ ಕ್ಷೇತ್ರದ ಅಗತ್ಯಕ್ಕೆ ತಕ್ಕಂತೆ ಪಠ್ಯಕ್ರಮ ರೂಪಿಸಬೇಕು. ಕನ್ನಡ ಸಾಹಿತ್ಯವನ್ನು ಒಂದು ವಿಷಯವಾಗಿ ಬೋಧಿಸಬೇಕು. ಎಲೆಕ್ಟ್ರಾನಿಕ್ ಹಾಗೂ ಸಾಮಾಜಿಕ ಮಾಧ್ಯಮ ಕ್ಷೇತ್ರಗಳಲ್ಲಿ ವಿಡಿಯೋ ಎಡಿಟರ್, ಪೋಸ್ಟರ್ ಡಿಜೈನರ್ಗಳಿಗೆ ಹೆಚ್ಚಿನ ಬೇಡಿಕೆ ಇದ್ದು ಇವುಗಳ ತರಬೇತಿಯನ್ನು ಸಹ ಪತ್ರಿಕೋದ್ಯಮದಲ್ಲಿ ನೀಡಬೇಕು ಎಂದು ದಿನೇಶ್ ಅಮಿನಮಟ್ಟು ಹೇಳಿದರು.
ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ ಮಾತನಾಡಿ, ಸಾಹಿತ್ಯ ಹಾಗೂ ಇತಿಹಾಸ ಪತ್ರಕರ್ತರಿಗೆ ಬಹಳ ಮುಖ್ಯವಾಗಿದೆ. ದೇಶ, ನಾಡು, ಸಂಸ್ಕೃತಿ ಹಾಗೂ ಭಾಷೆ ಅರಿಯದಿದ್ದಾಗ ಬರವಣಿಗೆ ಕಷ್ಟ ಸಾಧ್ಯ. ಪ್ರಸ್ತುತ ಮೊಬೈಲ್, ಇಂಟರ್ನೆಟ್, ಸಾಮಾಜಿಕ ಮಾಧ್ಯಮಗಳ ಜಾಲತಾಣಗಳಿಂದಾಗಿ ಪುಸ್ತಕ ಓದುವ ಹವ್ಯಾಸ ಕಡಿಮೆಯಾಗಿದೆ. ಪತ್ರಿಕೋದ್ಯಮಕ್ಕೂ ಸಾಹಿತ್ಯಕ್ಕೂ ಬಹಳ ನಂಟಿದೆ. ಸಾಹಿತ್ಯದ ಮೂಲಕ ಭಾಷೆಯ ವಿವಿಧ ಲಯ, ಲಹರಿ, ಬೇರೆ ಬೇರೆ ಸಂಸ್ಕೃತಿ, ವೈವಿಧ್ಯತೆ ಇರುವ ನಮ್ಮ ನಾಡಿನಲ್ಲಿ ಪತ್ರಕರ್ತರು ಓದುವ ಮೂಲಕ ಅರಿವು, ಜ್ಞಾನವನ್ನು ಪಡೆಯಬಹುದಾಗಿದೆ. ಪತ್ರಕರ್ತರು ಚಲನಶೀಲತೆ ಮೈಗೂಡಿಸಿಕೊಂಡಾಗ ಮಾತ್ರ ಉತ್ತಮ ಬರಹ ಮೂಡಿಬರಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಬರಹಗಳಲ್ಲಿ ಸತ್ವ ಪಡೆಯಬೇಕಾದರೆ ಲೋಕಾನುಭವ, ಓದು ಬಹಳ ಮುಖ್ಯವಾಗಲಿದೆ. ಅಕ್ಷರ ರೂಪಗಳಿಗೆ ಸ್ಪರ್ಶ ನೀಡಬೇಕಾದರೆ ಓದಿನ ಜತೆಗೆ ಸೃಜನಶೀಲತೆಯು ಮುಖ್ಯ. ಈ ಹಿನ್ನಲೆಯಲ್ಲಿ ಯುವ ಪತ್ರಕರ್ತರಿಗೆ ಸಾಹಿತ್ಯಾಭಿರುಚಿ ಶಿಬಿರ ಆಯೋಜಿಸುವುದು ಉತ್ತಮ ಬೆಳವಣಿಗೆ. ಓದುಗರನ್ನು ಸೆಳೆಯುವಂತಹ ಉತ್ತಮ ಬರಹವನ್ನು ರೂಢಿಸಿಕೊಳ್ಳಬೇಕು. ಅಂತಹ ಗಟ್ಟಿ ಬರಹವನ್ನು ರೂಢಿಸಿಕೊಳ್ಳಲು ಪತ್ರಕರ್ತರಿಗೆ ಇಂತಹ ಶಿಬಿರಗಳು ಬಹಳ ಪ್ರಯೋಜನವಾಗಲಿವೆ ಎಂದು ಹೇಳಿದರು.
ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್. ಮುಕುಂದರಾಜ್ ಮಾತನಾಡಿ, ಪತ್ರಕರ್ತರಲ್ಲಿ ಕನ್ನಡ ಸಾಹಿತ್ಯ ಅಭಿರುಚಿಯನ್ನು ಸೃಷ್ಟಿಸುವ ಸಣ್ಣ ಜವಾಬ್ದಾರಿ ಕೆಲಸವನ್ನು ಸಾಹಿತ್ಯ ಅಕಾಡೆಮಿ ಮಾಡುತ್ತಿದೆ. ಮನಃ ಪರಿವರ್ತನೆ ಮೌಲ್ಯಗಳಿರುವ ಕನ್ನಡ ಸಾಹಿತ್ಯವನ್ನು ಕಾರಾಗೃಹದಲ್ಲಿನ ಖೈದಿಗಳಿಗೆ ತಿಳಿಸಲು ಶಿಬಿರಗಳನ್ನು ಆಯೋಜಿಸಲಾಗಿದೆ. ಇದರೊಂದಿಗೆ ವಿವಿಧ ವಲಯಗಳಲ್ಲಿ ಜನರಿಗೂ ಕನ್ನಡ ಸಾಹಿತ್ಯ ಪರಿಚಯಿಸಲು ಯೋಜನೆ ರೂಪಿಸಲಾಗಿದೆ.
ಸಾರ್ವಜನಿಕರ ತಿಳುವಳಿಕೆಯನ್ನು ಹೆಚ್ಚಿಸಿ, ಪ್ರಜ್ಞಾವಂತರನ್ನಾಗಿಸುವ ಕೆಲಸವನ್ನು ಮಾಧ್ಯಮಗಳು ಮಾಡಬೇಕಿದೆ. ಯುವ ಪತ್ರಕರ್ತರಿಗೆ ಹಳೆಗನ್ನಡ, ವಚನ ಸಾಹಿತ್ಯ, ಕೀರ್ತನೆ, ತತ್ವಪದ, ಸಾಂಗತ್ಯ, ಸಾಹಿತ್ಯ ಚರಿತ್ರೆ, ನವೋದಯ, ನವ್ಯ, ಬಂಡಾಯ ಪ್ರಗತಿಶೀಲ, ಮಹಿಳಾ ವಿಮೋಚನೆ ಸೇರಿದಂತೆ ಕನ್ನಡ ಸಾಹಿತ್ಯದ ವಿವಿಧ ಮಜಲುಗಳನ್ನು ಪರಿಚಯಿಸುವ ಕಾರ್ಯ ಶಿಬಿರದಲ್ಲಿ ಮಾಡಲಾಗುವುದು ಎಂದು ಹೇಳಿದರು.
ಸಾಹಿತ್ಯ ಅಕಾಡೆಮಿ ರಿಜಿಸ್ಟಾರ್ ಕರಿಯಪ್ಪ.ಎನ್ ಸ್ವಾಗತ ಭಾಷಣದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿ, ಜನಸಾಮಾನ್ಯರಿಗೆ ಕನ್ನಡ ಸಾಹಿತ್ಯವನ್ನು ಪರಿಚಯಿಸುವ ಸಲುವಾಗಿ ಅಕಾಡೆಮಿಯಿಂದ ಸಂತೆಯಲ್ಲಿ ಸಾಹಿತ್ಯ ಎನ್ನುವ ವಿನೂತನ ಕಾರ್ಯಕ್ರಮ ರೂಪಿಸಲಾಗಿದೆ. ಬೇಸಾಯದ ಬದುಕು ಎನ್ನುವ ಸರಣಿಯಡಿ ನಾಡಿನ 50 ಕೃಷಿ ಸಾಧಕರು, ಮಹಿಳಾ ಮುನ್ನಡಿ ಸರಣಿಯಲ್ಲಿ 50 ಮಹಿಳಾ ಸಾಧಕಿಯರು, ಕನ್ನಡ ಭಾರತಿ ಯೋಜನೆಯಡಿ 150 ಲೇಖಕರ ಕೃತಿಗಳನ್ನು ಸಾಹಿತ್ಯ ಅಕಾಡೆಮಿಯಿಂದ ಹೊರತರಲಾಗುತ್ತಿದೆ. ಶಾಲಾ ಮಕ್ಕಳಲ್ಲಿ ಸೌಹಾರ್ದ ಭಾವನೆ ಬೆಳೆಸಲು ಕನ್ನಡ ಸಾಹಿತ್ಯವನ್ನು ಪರಿಚಯಿಸಲಾಗುವುದು ಎಂದರು.
ಉದ್ಘಾಟನೆ ಕಾರ್ಯಕ್ರಮದಲ್ಲಿ ಶಿಬಿರದ ನಿರ್ದೇಶಕ ಪ್ರೋ.ಎಂ.ಅಬ್ದುಲ್ ರೆಹಮಾನ್ ಪಾಷ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ದಿನೇಶ್ ಗೌಡಗೆರೆ, ಮಾಧ್ಯಮ ಅಕಾಡೆಮಿ ಸದಸ್ಯ ಎಂ.ಎನ್. ಅಹೋಬಳಪತಿ, ಸಾಹಿತ್ಯ ಅಕಾಡೆಮಿ ಸಂಚಾಲಕಿ ಡಾ.ಪಿ.ಚಂದ್ರಿಕಾ, ಶಿಬಿರದ ಸಹ ನಿರ್ದೇಶಕರುಗಳಾದ ನಾಕಿಕೆರೆ ತಿಪ್ಪೇಸ್ವಾಮಿ, ಮಮತಾ ಅರಸೀಕೆರೆ ಸೇರಿದಂತೆ ಮತ್ತಿತರರು ಇದ್ದರು.

