ಚಂದ್ರವಳ್ಳಿ ನ್ಯೂಸ್, ಚಿಕ್ಕಮಗಳೂರು :
ನಗರದ ಸಮೀಪದ ಕಾಫಿ ತೋಟಕ್ಕೆ ಕಾಡಾನೆಗಳು ಲಗ್ಗೆ ಇಟ್ಟಿರುವ ಘಟನೆ ಭಾನುವಾರ ಬೆಳ್ಳಂಬೆಳಗ್ಗೆ ಜಿಲ್ಲೆಯ ಎನ್. ಆರ್. ಪುರ ತಾಲೂಕಿನ ಬಾಳೆಹೊನ್ನೂರು ಪಟ್ಟಣದ ವಿವೇಕ ನಗರದಲ್ಲಿ ಜರುಗಿದೆ.
ಕಾಡಾನೆಗಳು ಕಾಫಿ ತೋಟದಲ್ಲೇ ಬೀಡು ಬಿಟ್ಟಿರುವುದರಿಂದ ಕಾಫಿ ತೋಟದ ಕಾರ್ಮಿಕರು, ಮಾಲೀಕರು ಹಾಗೂ ಸುತ್ತಮುತ್ತಲ ಗ್ರಾಮಸ್ಥರು ಸೇರಿದಂತೆ ಸ್ಥಳೀಯರಲ್ಲಿ ಆತಂಕ ಉಂಟು ಮಾಡಿದೆ.
ಜಿಲ್ಲೆಯ ಮಲೆನಾಡು ಭಾಗದಲ್ಲಿ ಪ್ರತಿನಿತ್ಯ ಕಾಡಾನೆಗಳ ಹಾವಳಿ ಮಿತಿ ಮೀರಿ ಹೋಗುತ್ತಿದೆ. ಪ್ರತಿನಿತ್ಯ ಒಂದಲ್ಲ ಒಂದು ಭಾಗದಿಂದ ಸಂಚರಿಸುತ್ತಾ ಹೋಗುತ್ತಿರುವ ಈ ಕಾಡಾನೆಗಳು ಸಂಪೂರ್ಣ ಬೆಳೆಗಳನ್ನು ನಾಶ ಮಾಡುತ್ತಿವೆ. ಈ ವರ್ಷ ಈಗಾಗಲೇ ಹಲವು ಕೂಲಿ ಕಾರ್ಮಿಕರನ್ನು ಬಲಿ ಪಡೆದಿರುವ ಕಾಡಾನೆಗಳು,ಈಗ ಮತ್ತೆ ತೋಟಗಳಿಗೆ ನುಗ್ಗಿ ದಾಂಧಲೆ ಎಬ್ಬಿಸುತ್ತಿವೆ.
ತತ್ತರಿಸಿದ ಜನರು: ಕಳೆದ ಕೆಲವು ದಿನಗಳ ಹಿಂದೆ ಎನ್. ಆರ್. ಪುರ ತಾಲೂಕಿನಲ್ಲಿ ಎರಡು ಕಾಡಾನೆಗಳನ್ನು ಸೆರೆಹಿಡಿದ ಬೆನ್ನಲ್ಲೇ ಈಗ ಮತ್ತೆ ಹಾವಳಿ ಮುಂದುವರೆಸಿ ಮಲೆನಾಡು ಭಾಗದ ಜನರ ನಿದ್ದೆಗೆಡಿಸಿದ್ದು, ತೋಟಗಳಿಗೆ ನುಗ್ಗಿ ಮಾಲೀಕರು ಹಾಗೂ ಕಾರ್ಮಿಕರಿಗೆ ತೊಂದರೆ ನೀಡುತ್ತಿವೆ. ಕಾಫಿನಾಡಲ್ಲಿ ನಿಲ್ಲದ ಕಾಡಾನೆ ಹಾವಳಿ ಭೀತಿಗೆ ಜನರು ತತ್ತರಿಸಿ ಹೋಗಿದ್ದಾರೆ.

