ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಕುಂಚಿಟಿಗರ ನೌಕರರ ಸಂಘ ಹಾಗೂ ತಾಲೂಕು ಕುಂಚಿಟಿಗರ ಯುವ ಘಟಕ ಸಹಯೋಗದಲ್ಲಿ ಪ್ರತಿಭಾ ಪುರಸ್ಕಾರ ಹಾಗೂ ಸರ್ಕಾರಿ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.
ಸಮಾರಂಭದಲ್ಲಿ ದಿವ್ಯ ಸಾನಿಧ್ಯ ವಹಿಸಿದ್ದ ಎಲೆ ರಾಂಪುರದ ಕುಂಚಿಟಿಗರ ಮಹಾಸಂಸ್ಥಾನದ ಪೀಠಾಧ್ಯಕ್ಷ ಪೀಠಾಧ್ಯಕ್ಷ ಡಾ.ಹನುಮಂತನಾಥ ಸ್ವಾಮೀಜಿ ಮಾತನಾಡಿ, ಕುಂಚಿಟಿಗ ಸಮುದಾಯ ಎಲ್ಲಾ ಕ್ಷೇತ್ರಗಳಲ್ಲಿ ಮುನ್ನಡೆಯ ಬೇಕಿದೆ. ಸಮುದಾಯ ಸಂಘಟಿತ ವಾದಾಗ ಮಾತ್ರ ನಾವು ಎಲ್ಲಾ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗುತ್ತದೆ.
ಕುಂಚಿಟಿಗರು ಎಂದು ಹೇಳಿಕೊಳ್ಳಲು ಯಾವುದೇ ಹಿಂಜರಿಕೆ ಬೇಡ. ಜಾತಿ ಗಣತಿಯಲ್ಲೂ ಕುಂಚಿಟಿಗ ಎಂದೇ ನಮೂದಿಸಿ ರಾಜ್ಯದಲ್ಲಿ 27 ಲಕ್ಷ ಕುಂಚಿಟಿಗರಿದ್ದರೂ ಸೂಕ್ತ ಪ್ರಾತಿನಿಧ್ಯ ಸಿಗುತ್ತಿಲ್ಲ. ಸಮುದಾಯ ಈಗ ಶಿಕ್ಷಣದಲ್ಲಿ ಪ್ರಗತಿ ಹೊಂದುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಬೇರೆರಾಜ್ಯಗಳಲ್ಲಿ ವಿದ್ಯಾರ್ಥಿ ನಿಲಯಗಳಲ್ಲಿ ಪ್ರವೇಶಕ್ಕೆ ನಮ್ಮನ್ನು ಸಂಪರ್ಕಿಸಬಹುದು ಎಂದರು.
ರಾಜ್ಯ ಕೌಶಲ್ಯಾಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಮುರುಳೀಧರ ಹಾಲಪ್ಪ ಮಾತನಾಡಿ, ಯಾವುದೇ ಸಮುದಾಯ ಮುನ್ನಡೆಯಬೇಕಾದರೆ ಶಿಕ್ಷಣಕ್ಕೆ ಒತ್ತು ನೀಡುವುದು ಅಗತ್ಯ. ಕುಂಚಿಟಿಗರ ಸಮುದಾಯ ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಮುನ್ನಡೆಯಬೇಕಿದ್ದರೆ ಸಮುದಾಯದ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಬೇಕಿದೆ ಎಂದರು.

ಡಿಸಿಎಂ ವೈದ್ಯಕೀಯ ಸಲಹೆಗಾರ ಡಾ.ನರಸಿಂಹ ಜ್ಞಾನಿ, ನಿವೃತ್ತ ಡಿವೈಎಸ್ಪಿ ಬಿ.ರಾಮಚಂದ್ರಪ್ಪ, ಪ್ರತಿಭಾ ಪುರಸ್ಕಾರದ ಪ್ರಾಯೋಜಕ ಎಸ್.ನಾಗರಾಜು, ತಾಲೂಕು ಕುಂಚಿಟಿಗರ ಸಂಘದ ಅಧ್ಯಕ್ಷ ಸಿ. ವಿ.ಲಕ್ಷ್ಮೀಪತಯ್ಯ, ಗೌ.ಅಧ್ಯಕ್ಷ ವಿ.ಆಂಜಿನಪ್ಪ, ಕಾರ್ಯಾಧ್ಯಕ್ಷ ಆರ್.ಕೆಂಪರಾಜು, ಪ್ರಧಾನ ಕಾರ್ಯ ದರ್ಶಿ ಎಚ್.ಮುತ್ತುರಾಜ್, ಟಿಎಪಿಎಂಸಿಎಸ್ ಮಾಜಿ ಅಧ್ಯಕ್ಷ ಡಿ.ಸಿದ್ದರಾಮಯ್ಯ ಇತರರು ಹಾಜರಿದ್ದರು.

