ಚಂದ್ರವಳ್ಳಿ ನ್ಯೂಸ್, ಹಾವೇರಿ:
ಚಿತ್ರದುರ್ಗದ ಡ್ಯಾನ್ಸ್ ಮಾಸ್ಟರ್ ಲಿಂಗೇಶ್(25) ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ರೀತಿಯಲ್ಲಿ ಯುವಕನ ಮೃತದೇಹ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನಮೋಟೆಬೆನ್ನೂರು ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಸೋಮವಾರ ಪತ್ತೆಯಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಚಿತ್ರದುರ್ಗದ ಡ್ಯಾನ್ಸ್ ಮಾಸ್ಟರ್ ಲಿಂಗೇಶ್ ಮೃತದೇಹದ ಬಳಿ ಆತ ತಂದಿದ್ದ ಕೆಟಿಎಂ ಡ್ಯೂಕ್ ಬೈಕ್, ವಾಟರ್ ಬಾಟಲ್, ಸಿಗರೇಟ್ ಪ್ಯಾಕ್ ಸಹಿತ ಚಾಕು ದೊರೆತಿದ್ದು ಲಿಂಗೇಶನನ್ನು ಕೊಲೆ ಮಾಡಲಾಗಿದೆ ಎಂದು ಆತನ ಸಂಬಂಧಿಕರು ಆರೋಪಿಸಿರುವ ಘಟನೆ ನಡೆದಿದೆ.
ಲಾಂಗ್ ಡ್ರೈವ್ ಹೋಗಿ ಬರುವುದಾಗಿ ಮೃತ ಲಿಂಗೇಶ್ ಭಾನುವಾರ ತಮ್ಮ ಕುಟುಂಬಸ್ಥರಿಗೆ ಹೇಳಿ ತೆರಳಿದ್ದ. ಆ. 24 ರಂದು ಹುಬ್ಬಳ್ಳಿಗೂ ಸಹ ತೆರಳಿದ್ದ. ಮೋಟೆಬೆನ್ನೂರು ಬಳಿಯ ಹೈವೇ ಫ್ಲೈ ಓವರ್ ಮೇಲೆ ಲಿಂಗೇಶ್ ಶವ ಪತ್ತೆಯಾಗಿದೆ.
ಸ್ಥಳಕ್ಕೆ ಹಾವೇರಿ ಎಸ್ಪಿ ಯಶೋಧಾ ವಂಟಗೋಡಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬ್ಯಾಡಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಮೃತ ಲಿಂಗೇಶ್ ಮಹಿಳೆಯರಿಗೆ ಹಾಗೂ ಮಕ್ಕಳಿಗೆ ಡ್ಯಾನ್ಸ್ ಹೇಳಿಕೊಡುತ್ತಿದ್ದರು. ಲಿಂಗೇಶ್ ಸ್ನೇಹಿತ ವಿಕ್ಕಿ ಎಂಬುವರ ಬರ್ತ್ಡೇಗೆ ಹೋಗಿ ಗಿಫ್ಟ್ ಕೊಟ್ಟು ವಾಪಸ್ ಬರುವುದಾಗಿ ಹೇಳಿದ್ದ ಎಂದು ಕುಟುಂಬಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮೊನ್ನೆ ರಾತ್ರಿ ಊಟಕ್ಕೆ ಮನೆಗೆ ಬಾ ಅಂತ ತಾಯಿ ಫೋನ್ ಮಾಡಿದಾಗ ಬರ್ತೀನಮ್ಮ ಅಂತ ಹೇಳಿದ್ದನು. ಆದರೆ ರಾತ್ರಿ ಮತ್ತೆ ಕಾಲ್ ಮಾಡಿದರೆ ಫೋನ್ ಸ್ವಿಚ್ ಆಫ್ ಬರ್ತಿತ್ತು. ಬೆಳಗ್ಗೆ ಲಿಂಗೇಶ್ ಶವವಾಗಿ ಪತ್ತೆಯಾಗಿರುವ ವಿಷಯ ತಿಳಿದು ಕುಟುಂಬಸ್ಥರು ರೋಧಿಸಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ ಘಟನೆ ಕುರಿತು ಪ್ರತಿಕ್ರಿಯೆ ನೀಡಿ, ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಓವರ್ ಬ್ರಿಡ್ಜ್ ಮೇಲೆ ಎಡಬದಿಯಲ್ಲಿ ಒಂದು ಕೆಟಿಎಂ ಡ್ಯೂಕ್ ಬೈಕ್ ನಿಂತಿದ್ದು, ಪಕ್ಕದಲ್ಲೇ ಒಬ್ಬ ವ್ಯಕ್ತಿ ಬೋರಲಾಗಿ ಬಿದ್ದಿರುವ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಅಲ್ಲಿಗೆ ಹೋಗಿ ನೋಡಿದಾಗ ಆ ವ್ಯಕ್ತಿಯ ಕುತ್ತಿಗೆ ಕುಯ್ಯಲಾಗಿದೆ. ಪಕ್ಕದಲ್ಲೇ ಒಂದು ಶಾರ್ಪ್ ಪೇಪರ್ ಕಟ್ಟರ್ ಚೂರಿ ಇತ್ತು. ಮೇಲ್ನೋಟಕ್ಕೆ ಅದೇ ಚೂರಿಯಿಂದ ಕುತ್ತಿಗೆ ಕುಯ್ದಂತೆ ಇದೆ. ಕುತ್ತಿಗೆಯ ಗಾಯ ತುಂಬಾ ಆಳವಾಗಿದೆ. ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ ಎಂದು ಅವರ ಕುಟುಂಬಸ್ಥರು ಆರೋಪಿತ್ತಿದ್ದಾರೆ.
ಆ ನಿಟ್ಟಿನಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಆತ ಯಾರ ಜೊತೆ ಬಂದಿದ್ದ, ಏನಾಗಿದೆ ಎನ್ನುವ ಬಗ್ಗೆ ಮುಂದಿನ ತನಿಖೆ ಕೈಗೊಳ್ಳುತ್ತೇವೆ. 302 ಅಡಿಯಲ್ಲಿ ಕೊಲೆ ಪ್ರಕರಣ ದಾಖಲಿಸಿಕೊಂಡು, ತನಿಖೆ ಕೈಗೊಳ್ಳುತ್ತೇವೆ. ಹಿನ್ನೆಲೆ ಯಾವುದೂ ಗೊತ್ತಿಲ್ಲ. ಸದ್ಯಕ್ಕೆ ಎಫ್ಐಆರ್ ಆಗಿದೆ. ತಂಡ ರಚನೆ ಮಾಡಿದ್ದೇವೆ. ಎಲ್ಲಾ ಆಯಾಮಗಳಲ್ಲೂ ತನಿಖೆ ಕೈಗೊಳ್ಳುತ್ತೇವೆ ಎಂದು ಎಸ್ಪಿ ಅವರು ತಿಳಿಸಿದರು.

