ಚಂದ್ರವಳ್ಳಿ ನ್ಯೂಸ್, ಮೈಸೂರು:
ಚಾಮುಂಡಿ ಬೆಟ್ಟ ಹಿಂದೂಗಳದ್ದೇ ಆಗಿತ್ತು, ಹಿಂದೂಗಳಲ್ಲೇ ಆಗಿದೆ ಮತ್ತು ಎಂದಿಗೂ ಹಿಂದೂಗಳದ್ದೇ ಆಗಿರುತ್ತದೆ ಎಂದು ಸಂಸದ ಯಧುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, ಹಬ್ಬದ ದಿನವೇ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಚಾಮುಂಡಿ ಬೆಟ್ಟ, ಚಾಮುಂಡಿ ದೇವರು ಹಿಂದೂಗಳ ಆಸ್ತಿ ಅಲ್ಲ ಎಂದಿರುವುದು ಅತ್ಯಂತ ದುಃಖಕರ ಮತ್ತು ನಿಂದನೀಯವಾಗಿದೆ ಎಂದು ಸಂಸದ ಯಧುವೀರ್ ಆಕ್ಷೇಪ ವ್ಯಕ್ತಪಡಿಸಿದರು.
ಚಾಮುಂಡಿ ಬೆಟ್ಟ ಶಕ್ತಿಪೀಠ-ಶಾಸ್ತ್ರ ಸಮ್ಮತವಾಗಿ ಪವಿತ್ರಗೊಂಡು ಕೋಟ್ಯಂತರ ಹಿಂದೂಗಳಿಂದ ಆರಾಧಿತವಾಗಿದೆ. ಈ ದೇವಾಲಯ ಹಿಂದೂಗಳದ್ದೇ ಆಗಿದೆ ಎಂದೆಂದಿಗೂ ಇರುತ್ತದೆ ಎಂದು ಅವರು ತಿಳಿಸಿದರು.
ಕಾಂಗ್ರೆಸ್ ಪಕ್ಷ ಯಾವಾಗಲೂ ಹಿಂದೂ ಭಾವನೆಗಳಿಗೆ ಧಕ್ಕೆ ತಂದು ತನ್ನ ನಕಲಿ ಸೆಕ್ಯುಲರಿಸಂ ಪ್ರದರ್ಶನ ಮಾಡುತ್ತಿದೆ. ಕರ್ನಾಟಕದ ಜನರು ಎಲ್ಲ ಧರ್ಮಗಳನ್ನೂ ಗೌರವಿಸುತ್ತಾರೆ. ಆದರೆ ಹಿಂದೂ ಹಬ್ಬಗಳು, ಸಂಪ್ರದಾಯಗಳು ಮತ್ತು ದೇವಾಲಯಗಳ ಮೇಲೆ ನಡೆಯುತ್ತಿರುವ ನಿರಂತರ ದಾಳಿಯನ್ನು ಯಾವತ್ತೂ ಸಹಿಸುವುದಿಲ್ಲ ಎಂದು ಸಂಸದ ಯಧುವೀರ್ ಎಚ್ಚರಿಸಿದರು.
ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಚಾಮುಂಡಿ ಬೆಟ್ಟಕ್ಕೆ ಧಾರ್ಮಿಕ ಪರಂಪರೆ ಇದೆ. ಆದರೆ ಚಾಮುಂಡಿ ಬೆಟ್ಟ ಹಿಂದೂಗಳ ಆಸ್ತಿಯಲ್ಲ ಎಂದು ಡಿ.ಕೆ. ಶಿವಕುಮಾರ್ ನೀಡಿರುವ ಹೇಳಿಕೆ ನಿಜಕ್ಕೂ ಹಾಸ್ಯಾಸ್ಪದ. ಇದು ವಿನಾಯಕ, ಗೌರಿ ಹಬ್ಬ ಆಚರಿಸುವ ಸಂದರ್ಭದಲ್ಲಿ ಹಿಂದೂಗಳ ಭಾವನೆಗೆ ಧಕ್ಕೆ ತರುವ ವಿಚಾರ ಹೇಳಿದ್ದಾರೆಂದು ಯದುವೀರ್ ಕಿಡಿಕಾರಿದರು.
ಸಾವಿರಾರು ವರ್ಷಗಳಿಂದ ಚಾಮುಂಡಿ ಇರುವುದು ಕೂಡ ಉಲ್ಲೇಖವಿದೆ. ಸಾವಿರಾರು ವರ್ಷಗಳ ಹಿಂದೆ ಮಾರ್ಕಂಡೇಯ ಈ ಸ್ಥಳದಲ್ಲಿ ತಪಸ್ಸು ಮಾಡಿದ್ದರು. ಚಾಮುಂಡಿ ಬೆಟ್ಟಕ್ಕೆ ಎಲ್ಲರಿಗೂ ಪ್ರವೇಶವಿದೆ. ಅದು ಧಾರ್ಮಿಕ ಸ್ಥಳವಾಗಿರುವ ಕಾರಣ ಎಲ್ಲರೂ ಹೋಗಬಹುದು. ಆಧುನಿಕಕಾಲಘಟ್ಟದಲ್ಲಿ ಜಾತ್ಯತೀತ ದೃಷ್ಟಿಕೋನದಿಂದ ನೋಡಬಹುದು. ಆದರೆ ಡಿಕೆಶಿ ಹೇಳಿಕೆಯಿಂದ ಲಕ್ಷಾಂತರ ಜನರ ಭಾವನೆಗೆ ಧಕ್ಕೆ ಉಂಟಾಗಿದೆ ಎಂದು ಯಧುವೀರ್ ಹೇಳಿದರು.
ಚಾಮುಂಡಿಬೆಟ್ಟ ಟಾರ್ಗೆಟ್ ಆಗಿದೆಯೇ? ಎಂದು ಮಾಧ್ಯಮದವರು ಪ್ರಶ್ನಿಸಿದಕ್ಕೆ, ಪ್ರಾಧಿಕಾರ ಸೃಷ್ಟಿಸುವುದು, ಬೆಟ್ಟವನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುವುದು ಕಾಂಗ್ರೆಸ್ ಪಕ್ಷದ ಹುನ್ನಾರ. ನಿಯಂತ್ರಣಕ್ಕೆ ಬರೀ ಹಿಂದೂ ದೇವಾಲಯಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಬೆಂಗಳೂರಿನ ಆಂಜನೇಯ ದೇವಸ್ಥಾನವನ್ನೂಹಾಗೇ ಮಾಡಿದರು. ಯಾವಾಗಲೂ ಹಿಂದೂಗಳಿಗೆ ವಿರುದ್ಧ ಹೇಳಿಕೆ ನೀಡುತ್ತಿದ್ದಾರೆ. ಕೋಟ್ಯಂತರ ಜನರ ಭಾವನೆಗೆ ಧಕ್ಕೆ ತರುತ್ತಿದ್ದಾರೆ. ಹಿಂದೂ ಸ್ಥಳಗಳನ್ನು ಕಾಂಗ್ರೆಸ್ ಟಾರ್ಗೆಟ್ ಮಾಡುತ್ತಿದೆ. ಡಿಕೆಶಿ ಅವರು ಆರ್ಎಸ್ಎಸ್ ಹಾಡು ಹಾಡಿ ಅವರ ಬೆಂಬಲಿಗರ ವಿರೋಧಕ್ಕೆ ಗುರಿಯಾಗಿದ್ದರು. ಅದನ್ನು ಸಮತೋಲನಕ್ಕೆ ತರಲು ಪಕ್ಷಕ್ಕಾಗಿ, ಕಾರ್ಯಕರ್ತರಿಗಾಗಿ ಹಿಂದೂಗಳ ವಿರುದ್ಧ ಇಂತಹ ಹೇಳಿಕೆ ನೀಡಿರಬಹುದು ಎಂದು ಸಂಸದರು ವ್ಯಂಗ್ಯವಾಡಿದರು.
ಈಹಿಂದೆ ಮೈಸೂರಿನ ಡ್ರಗ್ಸ್ ಪ್ರಕರಣಮುಚ್ಚಿ ಹಾಕಲು ಟಿಪ್ಪು ವಿಚಾರ ತಂದರು. ಹಾಗೆಯೇ ಯಾವುದಾದರೂ ವಿಷಯ ಇದ್ದಾಗ ಡೈವರ್ಟ್ ಮಾಡಲು ಹೇಳಿಕೆ ನೀಡುತ್ತಾರೆ. ದೇವಾಲಯಗಳನ್ನು ನಿಯಂತ್ರಣಕ್ಕೆ ತರುತ್ತಿದ್ದಾರೆ. ಪ್ರಥಮವಾಗಿ ಇದೊಂದು ಧಾರ್ಮಿಕ ಸ್ಥಳ, ಬೆಟ್ಟ ಹಿಂದೂಗಳ ಆಸ್ತಿ. ಅದು ಎಂದೆಂದಿಗೂ ಹಿಂದೂಗಳ ಆಸ್ತಿ ಆಗಿರುತ್ತದೆ. ಉಪಮುಖ್ಯಮಂತ್ರಿಗಳ ಹೇಳಿಕೆಯಿಂದ ಏನೂ ಆಗಲ್ಲ ಎಂದು ಸಂಸದ ಯಧುವೀರ್ ತಿರುಗೇಟು ನೀಡಿದರು.
ನಾವು ಧರ್ಮ ಉಳಿಸುವ ನಿಟ್ಟಿನಲ್ಲಿ ಕಾನೂನು ಚೌಕಟ್ಟಿನಲ್ಲೂ ಹೋರಾಡುತ್ತೇವೆ. ನಾವು ಎಲ್ಲ ಧರ್ಮಗಳನ್ನು ಒಪ್ಪಿಕೊಳ್ಳುತ್ತೇವೆ. ಹಾಗಂತ ಒಂದು ಧರ್ಮದ ಓಲೈಕೆಗೆ ಮುಂದಾಗಬಾರದು. ರಾಜ್ಯದಲ್ಲಿಹಲವು ಸಮಸ್ಯೆಗಳಿವೆ. ಅವುಗಳನ್ನು ಮುಚ್ಚಿಹಾಕಲು ಇಂತಹ ಹೇಳಿಕೆ ಬೇಡ, ಭವಿಷ್ಯದಲ್ಲಿ ನಿಮಗೆ ಒಳಿತಾಗಲ್ಲ ಎಂದು ಸಂಸದ ಯದುವೀರ್ ಎಚ್ಚರಿಸಿದರು.

