ಹಿರಿಯೂರು ಡಿಪೋ: ಬಹುದಿನಗಳ ಬೇಡಿಕೆ ಈಡೇರಿಕೆ, ಗ್ರಾಮೀಣ ಸೇವೆಗೆ ಆದ್ಯತೆ ನೀಡಲಿ

News Desk

ಹೆಚ್.ಸಿ ಗಿರೀಶ್, ಹರಿಯಬ್ಬೆ, ಎಂ.ಎಲ್.ಗಿರಿಧರ ಮಲ್ಲಪ್ಪನಹಳ್ಳಿ.
ಚಂದ್ರವಳ್ಳಿ ನ್ಯೂಸ್
, ಹಿರಿಯೂರು:
ಹಿರಿಯೂರು ಕೆಎಸ್ಆರ್ ಟಿಸಿ ಡಿಪೋ ಇದೇ ಆಗಸ್ಟ್-30ಕ್ಕೆ ಲೋಕಾರ್ಪಣೆಗೊಳ್ಳಲಿದೆ. ಈ ಮೂಲಕ ಹಿರಿಯೂರು ವಿಧಾನಸಭಾ ಕ್ಷೇತ್ರದ ಜನತೆಯ ಬಹು ದಿನಗಳ ಬೇಡಿಕೆ ಈಡೇರಲಿದೆ. ಇದು ಸಂತಸದ ವಿಚಾರ ಕೂಡಾ ಹೌದು.
ಸುಮಾರು 15 ವರ್ಷಗಳಿಂದೆ ವಿಪಕ್ಷ ನಾಯಕ ಆರ್.ಅಶೋಕ್ ಅವರು ಸಾರಿಗೆ ಸಚಿವರಾಗಿದ್ದಾಗ ಹಿರಿಯೂರು ಡಿಪೋ ಮಾಡಲು ಶಂಕು ಸ್ಥಾಪನೆ ಮಾಡಿದ್ದರು.

ಆದರೆ ಜನಪ್ರತಿನಿಧಿಗಳ ಇಚ್ಚಾಶಕ್ತಿ ಕೊರತೆಯಿಂದಾಗಿ ವಿಳಂಬ ಆಯಿತು.
ಈ ವಿಳಂಬದ ವಿರುದ್ಧ ದಶಕಗಳಿಂದ ಹೋರಾಟ ಮಾಡಲಾಯಿತು. ಈ ಹೋರಾಟದ ಹಿಂದೆ
ನೋವಿದೆ, ದುಃಖ ದುಮ್ಮಾನಗಳಿವೆ. ಅದೇನೇ ಇರಲಿ ಈಗ ನಾಳೆ ಹಿರಿಯೂರು ಡಿಪೋ ಉದ್ಘಾಟನೆ ಆಗುತ್ತಿದೆ ಎನ್ನುವುದೇ ಈಗಿನ ಸಂತೋಷದ ವಿಷಯ. ಈ ಡಿಪೋ ಉದ್ಘಾಟನೆ ಆಗುವುದರಿಂದ ಸ್ವಾತಂತ್ರ್ಯ ಬಂದು 79 ವರ್ಷ ಕಳೆದರೂ ಬಸ್ ಕಾಣದಂತಹ ಅನೇಕ ಕುಗ್ರಾಮಗಳಿಗೆ ಕೆಂಪು ಬಸ್ ನೋಡುವ ಭಾಗ್ಯ ದೊರೆಯಲಿದೆ.

- Advertisement - 

ಹಿರಿಯೂರು ವಿಧಾನಸಭಾ ಕ್ಷೇತ್ರದ ಹಲವು ಹಳ್ಳಿಗಳ ಸಾರ್ವಜನಿಕರಿಗೆ ಸಾರಿಗೆ ಸೇವೆ ಒದಗಿಸುವಲ್ಲಿ ಹಿಂದೆ ಬಿದ್ದಿತ್ತು. ಹಿರಿಯೂರು ನಗರವನ್ನು ಎರಡು ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳು ಹಾದು ಹೋಗಿವೆ. ಹಿರಿಯೂರು ಒಂದು ರೀತಿಯ ಕರ್ನಾಟಕದ ಹೆಬ್ಬಾಗಿಲು. ಹೈದರಾಬಾದ್-ಕರ್ನಾಟಕ, ಉತ್ತರ ಕರ್ನಾಟಕ, ಮಧ್ಯ ಕರ್ನಾಟಕ ಸೇರಿದಂತೆ ಮೈಸೂರು-ಚಾಮರಾಜನಗರದಂತಹ ಪ್ರಮುಖ ಕೇಂದ್ರಗಳಿಗೆ ತೆರಳು ಇದೊಂದು ಜಕ್ಷನ್ ಆಗಿದೆ.

ಹಿರಿಯೂರು ಮೂಲಕ ಮುಂಬೈ ಹಾಗೂ ಹೈದರಾಬಾದ್, ಮೈಸೂರು ಸೇರಿದಂತೆ ಮತ್ತಿತರ ಪ್ರಮುಖ ಕೇಂದ್ರಗಳನ್ನು ಸಂಪರ್ಕಿಸುತ್ತಿದ್ದರೂ, ಸ್ಥಳೀಯರು, ಗ್ರಾಮೀಣ ಸಾರಿಗೆಯಲ್ಲಿ ಅವಕಾಶ ವಂಚಿತರಾಗಿ ಅಲ್ಲದೆ ಖಾಸಗಿ ಬಸ್ ಗಳ ಮಾಲೀಕತ್ವದ ಹಿಡಿತದಲ್ಲಿ ದಶಕಗಳ ಕಾಲ ನೋವುಂಡಿದ್ದರು.

- Advertisement - 

ಡಿಪೋ ಕಾಮಗಾರಿ ಸಂಪೂರ್ಣ ಮುಗಿದು ವರ್ಷ ದಾಟಿತ್ತು. ಇದರ ವಿರುದ್ಧ ಎಷ್ಟೇ ಹೋರಾಟಗಳು ನಡೆದರು ಯಾರು ಸಹ ಕಿವಿಗೊಡಲಿಲ್ಲ. ಕೆಎಸ್ಆರ್ ಟಿಸಿ ವ್ಯವಸ್ಥಾಪಕ ನಿರ್ದೇಶಕರಿಗೆ ಜನಪರ ಹೋರಾಟಗಾರರು ಮನವಿ ಸಲ್ಲಿಸಿದರೂ ಡಿಪೋ ಆರಂಭಿಸಲು ಆಮೆಗತಿಯೇ ಮದ್ದಾಯಿತು ಎನ್ನುವುದು ವಿಪರ್ಯಾಸದ ಸಂಗತಿ.

ಖಾಸಗಿ ಬಸ್ ಗಳ ಕಪಿಮುಷ್ಠಿಯಿಂದ ತಾಲೂಕು ಹೊರಬಂದು ಇಂದೆಂದೂ ಬಸ್ ಸೌಕರ್ಯ ಕಾಣದಂತಹ ಕುಗ್ರಾಮಗಳು ಸೇರಿದಂತೆ ಎಲ್ಲ ಗ್ರಾಮೀಣ ಪ್ರದೇಶಗಳಿಗೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಸೌಲಭ್ಯ ಸಿಗಬೇಕಾಗಿದೆ. ಶಾಲಾ-ಕಾಲೇಜ್ ಗಳ ಮಕ್ಕಳ ಶೈಕ್ಷಣಿಕ ಪ್ರವಾಸ, ಮದುವೆ-ಮುಂಜಿ ಇತರೆ ಧಾರ್ಮಿಕ ಕಾರ್ಯಗಳು ಸೇರಿದಂತೆ ಇತ್ಯಾದಿ ಶುಭ ಕಾರ್ಯಗಳಿಗೆ ದಿನದ ಬಾಡಿಗೆ ಆಧಾರದಲ್ಲಿ ಬಸ್ಸುಗಳು ಸಿಗುವಂತಾಗಲಿ. ಹಾಗೂ ಅತಿಮುಖ್ಯವಾಗಿ ಹಿರಿಯೂರು ತಾಲೂಕಿನ ಎಲ್ಲ ಸ್ಥಳೀಯ ಚಾಲಕರಿಗೆ ನಿರ್ವಾಹಕರಿಗೆ ಕಡ್ಡಾಯವಾಗಿ ಹಿರಿಯೂರು ಡಿಪೋದಲ್ಲಿ ಸೇವೆ ಮಾಡುವಂತ ಸೌಭಾಗ್ಯ ದೊರೆತು ಅನುಕೂಲವಾಗಬೇಕಿದೆ.

ಡಿಪೋಗೆ ಸಿಬ್ಬಂದಿಗಳ ನೇಮಕ-
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಕಳೆದ ಆಗಸ್ಟ್-1 ರಂದೇ ಹಿರಿಯೂರು ಡಿಪೋಗೆ ಬೇಕಿರುವ ಎಲ್ಲ ಸಿಬ್ಬಂದಿಗಳನ್ನು ಮಂಜೂರು ಮಾಡಿ ಆದೇಶಿಸಿತ್ತು.

ಮಂಜೂರಾತಿ ಪ್ರಕಾರ ಘಟಕ(ಡಿಪೋ) ವ್ಯವಸ್ಥಾಪಕ, ಸಿಬ್ಬಂದಿ ಮೇಲ್ವಿಚಾರಕ, ಲೆಕ್ಕಪತ್ರ ಮೇಲ್ವಿಚಾರಕ, ಸಹಾಯಕ, ಸಹಾಯಕ ಲೆಕ್ಕಿಗ, ಗಣಕ ಸಹಾಯಕ, ಉಗ್ರಾಣ ರಕ್ಷಕ ಇವುಗಳಿಗೆ ತಲಾ ಒಂದು ಹುದ್ದೆಯಂತೆ ಮಂಜೂರಾತಿ ನೀಡಲಾಗಿದೆ.

ಡಾಟಾ ಎಂಟ್ರಿ ಆಪರೇಟರ್ ನಗದು ಮತ್ತು ಟಿಕೆಟ್ 3 ಹುದ್ದೆ, ರಜೆ, ವಾರದ ರಜೆ, ಕಚೇರಿ ಸಹಾಯಕ, ಸ್ವಚ್ಛತೆ, ಹವಾಲ್ದಾರ್, ಪೇದೆ, ಸಂಚಾರಿ ನಿಯಂತ್ರಕ ಮತ್ತು ನಿರೀಕ್ಷಕ, ಪಾರುಪತ್ತೆಗಾರ, ಕುಶಲಕರ್ಮಿಗಳಾದ ಆಟೋ ಮೆಕ್ಯಾನಿಕ್, ಆಟೋ ಎಲೆಕ್ಟ್ರಿಷಿಯನ್, ಆಟೋ ಬಾಡಿ ಬಿಲ್ಡರ್, ಆಟೋ ವೆಲ್ಡರ್, 8 ಮಂದಿ ಸಹಾಯಕ ಕುಶಲಕರ್ಮಿಗಳು, 22 ಹುದ್ದೆ ತಾಂತ್ರಿಕ ಸಹಾಯಕರು, 57 ಚಾಲಕ, 27 ನಿರ್ವಾಹಕ, ಚಾಲಕ ಕಂ ನಿರ್ವಾಹಕ 41 ಹುದ್ದೆ ಸೇರಿ ಒಟ್ಟು 189 ಅಗತ್ಯ ಹುದ್ದೆಗಳಿಗೆ ಮಂಜೂರಾತಿ ದೊರೆತಿದ್ದು ಈಗಾಗಲೇ ನೇಮಕ ಮಾಡಲಾಗಿದೆ. ಜೊತೆಗೆ ಹಿರಿಯೂರು ಡಿಪೋದಿಂದ ಸುಮಾರು 35 ಬಸ್ ಗಳು ನಿತ್ಯ ಕಾರ್ಯಾಚರಣೆ ಮಾಡಲಿವೆ.
ಬಸ್ ಮಾರ್ಗಗಳು-

ಹಿರಿಯೂರು-ಚಿತ್ರದುರ್ಗ, ಹಿರಿಯೂರು-ಹೊಸದುರ್ಗ, ಹಿರಿಯೂರು-ಚಳ್ಳಕೆರೆ-ಮೊಳಕಾಲ್ಮೂರು-ಬಳ್ಳಾರಿ, ಹಿರಿಯೂರು-ಚಳ್ಳಕೆರೆ-ನಾಯಕನಹಟ್ಟಿ, ಹಿರಿಯೂರು-ಹುಳಿಯಾರು-ಹಾಸನ್, ಹಿರಿಯೂರು-ಹುಳಿಯಾರ್-ಮೈಸೂರು, ಚಾಮಗಾರನಗರ, ಹಿರಿಯೂರು-ಗನ್ನಾಯಕನಹಳ್ಳಿ-ಸಲಬೊಮ್ಮನಹಳ್ಳಿ- ವದ್ದೀಕೆರೆ- ಎಂ.ಡಿ.ಕೋಟೆ- ಸೊಂಡೇಕರೆ- ಜೆ.ಎನ್.ಕೋಟೆ- ಡಿ.ಎಸ್.ಹಳ್ಳಿ-ಮದಕರಿಪುರ-ಚಿತ್ರದುರ್ಗ. ಅದೇ ರೀತಿ ಚಿತ್ರದುರ್ಗ ದಿಂದ ಹಿರಿಯೂರು, ವಯಾ ಮರಡಿಹಳ್ಳಿ, ಐಮಂಗಲ ತಾಳವಟ್ಟಿ, ವದ್ದಿಕೆರೆ ಯರಬಳ್ಳಿ, ಹರ್ತಿಕೋಟೆ, ಹಿರಿಯೂರು. (ಆರು ಏಕ ಸುತ್ತುವಳಿ), ಹಿರಿಯೂರು-ಹುಳಿಯಾರು-ಮತ್ತಿಗಟ್ಟ- ಹಾಲುಕುರ್ತಿ- ತಿಪಟೂರು,

ಹಿರಿಯೂರು-ಹರಿಯಬ್ಬೆ-ಧರ್ಮಪುರ-ಅಮರಾಪುರ-ಪಾವಗಡ, ಹಿರಿಯೂರು ದಿಂದ ಧರ್ಮಪುರ (೧೦ ಏಕಸುತ್ತುವಳಿ), ಹಿರಿಯೂರು ದಿಂದ ಹೊಸದುರ್ಗ ವಯಾ ವಿ.ವಿ.ಪುರ (೧೦ ಏಕಸುತ್ತುವಳಿ), ಹಿರಿಯೂರು ದಿಂದ ರಂಗೇನಹಳ್ಳಿ-ಗೂಳ್ಯ-ಸೂಗೂರು-ಹರಿಯಬ್ಬೆ ಧರ್ಮಪುರ (೬ ಏಕಸುತ್ತುವಳಿ), ಹಿರಿಯೂರು ದಿಂದ ವಿ.ವಿ.ಸಾಗರ ಡ್ಯಾಂ (೧೦ ಏಕಸುತ್ತುವಳಿ) ವಯಾ ದೊಡ್ಡಗಟ್ಟ-ಕುರುಬರಹಳ್ಳಿ, ಹಿರಿಯೂರು ದಿಂದ ದಸೂಡಿ ವಯಾ ಯಲ್ಲದಕೆರೆ (೧೦ ಏಕಸುತ್ತುವಳಿ), ಹಿರಿಯೂರು-ಹುಚ್ಚವ್ವನಹಳ್ಳಿ-ಯರದಕಟ್ಟೆ-ಮೇಟಿಕುರ್ಕೆ- ಸೂರಗೊಂಡನಹಳ್ಳಿ-ಐಮಂಗಲ ಸೇರಿದಂತೆ ಮತ್ತಿತರ ಕುಗ್ರಾಮಗಳಿಗೆ ಕಡ್ಡಾಯವಾಗಿ ಬಸ್ ಮಾರ್ಗಗಳನ್ನು ನಿಗದಿ ಮಾಡಿ ತುರ್ತಾಗಿ ಓಡಿಸಬೇಕಿದೆ.

ವೇಗದೂತ ಮಾರ್ಗಗಳು-
ಹಿರಿಯೂರು-ಚಿತ್ರದುರ್ಗ-ಶಿವಮೊಗ್ಗ
, ಸಾಗರ, ಹಿರಿಯೂರು-ಹೊರನಾಡು ವಯಾ ಶಿವಮೊಗ್ಗ ಶೃಂಗೇರಿ ಅಥವಾ ಚಿಕ್ಕಮಂಗಳೂರು,  ಅಂತರಾಜ್ಯ ಮಾರ್ಗಗಳಾದ ಹಿರಿಯೂರು ದಿಂದ ಶಿರಡಿ ರಾತ್ರಿ ಕಾರ್ಯಾಚರಣೆ, ಹಿರಿಯೂರು ದಿಂದ ಮಂತ್ರಾಲಯ ರಾತ್ರಿ ಮತ್ತು ಹಗಲು ಕಾರ್ಯಚರಣೆ, ಹಿರಿಯೂರು ದಿಂದ ಕೊಯಮತ್ತೂರು ವಯಾ ಹುಳಿಯೂರು, ತುರುವೇಕೆರೆ ರಾತ್ರಿಕಾರ್ಯಾಚರಣೆ,

ಹಿರಿಯೂರು ದಿಂದ ಮಧುರೈ ರಾತ್ರಿ ಕಾರ್ಯಾಚರಣೆ, ಹಿರಿಯೂರು ದಿಂದ ಶ್ರೀಶೈಲ ರಾತ್ರಿ ಕಾರ್ಯಾಚರಣೆ, ಹಿರಿಯೂರು ದಿಂದ ಊಟಿ ರಾತ್ರಿ ಕಾರ್ಯಾಚರಣೆ, ಹಿರಿಯೂರು ದಿಂದ ವಗೆನಕಲ್ ಹಗಲು ಕಾರ್ಯಾಚರಣೆ ಸೇರಿದಂತೆ ಹಿರಿಯೂರು-ಹೊಳಲ್ಕೆರೆ, ಹಿರಿಯೂರು-ಹೊಸದುರ್ಗ-ಅರಸೀಕೆರೆ- ಕೆ.ಆರ್.ನಗರ-ಮೈಸೂರು-ಚಾಮರಾಜನಗರ-ಸತ್ಯಮಂಗಲ, ಹಿರಿಯೂರು ದಿಂದ ಮೆಟ್ಟೂರು ಹಗಲು ಕಾರ್ಯಾಚರಣೆ, (ಹಿರಿಯೂರು, ಶಿರಾ, ಬೆಂಗಳೂರು ಕೃಷ್ಣಗಿರಿ, ಧರ್ಮಪುರಿ, ತೋಪುರ್, ಮೆಟ್ಟೂರು), ಹಿರಿಯೂರು ದಿಂದ ಪಣಜಿ,

ಹಿರಿಯೂರು ದಿಂದ ಗುಂಡ್ಲಪೇಟೆ-ಸುಲ್ತಾನ್‌ಬತ್ತೇರಿ-ಕ್ಯಾಲಿಕೇಟ್ ಗುರುವಾಯೂರು ರಾತ್ರಿ ಕಾರ್ಯಾಚರಣೆ, ಹಿರಿಯೂರು ದಿಂದ ತಿರುಪತಿ ವಯಾ ಶಿರಾ-ಗೌರಿಬಿದನೂರು-ಚಿಂತಾಮಣಿ-ಮದನಪಲ್ಲಿ, ಹಿರಿಯೂರು ದಿಂದ ಹೈದರಬಾದ್ ವಯಾ ಅನಂತಪುರ ರಾತ್ರಿ ಕಾರ್ಯಾಚರಣೆ, ಹಿರಿಯೂರು-ಕದಿರಿ ವಯಾ ಮಡಕಾಶಿರಾ ಹಿಂದೂಪುರ, ಹಿರಿಯೂರು ದಿಂದ ಮಹಾನಂದಿ ವಯಾ ಬಳ್ಳಾರಿ, ಮೊಕ, ಕರ್ನೂಲ್, ನಂದ್ಯಾಲ,

ಹಿರಿಯೂರು ದಿಂದ ಚಿತ್ರದುರ್ಗ- ತುಳಜಾಪುರ ಅಥವಾ ಔರಂಗಾಬಾದ್ ರಾತ್ರಿ ಕಾರ್ಯಾಚರಣೆ, ಹಿರಿಯೂರು ದಿಂದ ಚಿತ್ರದುರ್ಗ-ಪಂಡರಪುರ ರಾತ್ರಿ ಕಾರ್ಯಾಚರಣೆ ಸೇರಿದಂತೆ ಮತ್ತಿತರ ಮಹತ್ವದ ಮಾರ್ಗಗಳನ್ನು ಸಾರಿಗೆ ಬಸ್ ಗಳನ್ನು ಓಡಿಸುವ ಮೂಲಕ ಇಡೀ ಜಿಲ್ಲೆಯಲ್ಲಿ ಹಿರಿಯೂರು ಡಿಪೋ ಅಧಿಕ ಲಾಭಗಳಿಸುವ ಡಿಪೋ ಆಗಲಿ ಮತ್ತು ಸಾರ್ವಜನಿಕರಿಗೆ, ಪ್ರವಾಸಿಗರಿಗೆ ಅನುಕೂಲವಾಗಲಿ ಎನ್ನುವುದು ಚಂದ್ರವಳ್ಳಿ ಪತ್ರಿಕೆಯ ಆಶಯವಾಗಿದೆ.

ಅದೇ ರೀತಿ ಹೊಳಲ್ಕೆರೆ ಮತ್ತು ಮೊಳಕಾಲ್ಮೂರು ಸಾರಿಗೆ ಡಿಪೋಗಳ ಕಾಮಗಾರಿ ಸಂಪೂರ್ಣಗೊಂಡಿದ್ದು ಡಿಪೋ ಆರಂಭ ನೆನೆಗುದಿಗೆ ಬಿದ್ದಿದ್ದು ಇತ್ತ ಕಡೆಯೂ ಸಾರಿಗೆ ಸಚಿವರು ಗಮನ ಹರಿಸಿ ಡಿಪೋ ಆರಂಭಿಸಲಿ.

 

 

Share This Article
error: Content is protected !!
";