ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ತಾಲೂಕಿನ ತೂಬಗೆರೆ ಹೋಬಳಿಯ ಕಾರನಾಳ ಗ್ರಾಮದಲ್ಲಿ ಸಂಭವಿಸಿದ ವಿದ್ಯುತ್ ಅವಘಡದಲ್ಲಿ ಇಬ್ಬರು ಸಾವನಪ್ಪಿದ್ದು , ಓರ್ವ ಮಹಿಳೆ ಗಾಯಗೊಂಡಿದ್ದಾರೆ.
ವಿದ್ಯುತ್ ಕಂಬದಿಂದ ಮನೆಗೆ ಎಳೆದಿದ್ದ ವಿದ್ಯುತ್ ತಂತಿ ಕೆಳಗೆ ಒಣಗಾಕಿದ್ದ ಬಟ್ಟೆಯನ್ನು ತೆಗೆದುಕೊಳ್ಳಲು ಲಲಿತಮ್ಮ ಹೋದಾಗ ವಿದ್ಯುತ್ ತಂತಿ ಸ್ಪರ್ಶಿಸಿದೆ.ಇದನ್ನು ಕಂಡ ಸಂಜಯ್ ಕಾಪಾಡಲು ಹೋದಾಗ ಅವರಿಗೂ ವಿದ್ಯುತ್ ಸ್ಪರ್ಶಿಸಿದೆ. ಇಬ್ಬರು ಮೃತಪಟ್ಟಿದ್ದಾರೆ.
ಮೃತ ಸಂಜಯ್ (43), ಲಲಿತಮ್ಮ(50) ಎಂದು ಗುರುತಿಸಲಾಗಿದೆ. 45 ವರ್ಷದ ಲಕ್ಷ್ಮಮ್ಮ ಎಂಬುವರು ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
ವಿಪರ್ಯಾಸವೆಂದರೆ ಈ ಇಬ್ಬರನ್ನು ಕಾಪಾಡಲು ಲಕ್ಷ್ಮಮ್ಮ ಮುಂದಾಗಿದ್ದು, ಮೂವರಿಗೂ ವಿದ್ಯುತ್ ಪ್ರವಹಿಸಿದೆ. ಘಟನೆಯಲ್ಲಿ ಲಲಿತಮ್ಮ, ಸಂಜಯ್ ಸಾವನಪ್ಪಿದ್ದರೆ, ಲಕ್ಷ್ಮಮ್ಮ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಥಳಕ್ಕೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.
ಘಟನೆ ಕುರಿತಂತೆ ಬೆಸ್ಕಾಂ ವಿರುದ್ಧ ಸಾರ್ವಜನಿಕ ವಲಯದಲ್ಲಿ ಹಲವು ಆರೋಪ ಕೇಳಿ ಬಂದಿದ್ದು, ವಸತಿ ನಿಲಯಗಳ ಬಳಿ, ಕಟ್ಟಡಗಳ ಮೇಲೆ ಹಾದು ಹೋಗಿರುವ ವಿದ್ಯುತ್ ತಂತಿಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡದೆ ನಿರ್ಲಕ್ಷ್ಯ ವಹಿಸಿಸಿರುವುದರಿಂದ ಘಟನೆಗಳು ಜರುಗುತ್ತಿವೆ ಸ್ಥಳೀಯರು ದೂರಿದ್ದಾರೆ.

