ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ನೌಕರರ ಸಂಘ ಸದೃಢ, ಸಮರ್ಥವಾಗಿದ್ದಾಗ ಮಾತ್ರ ಸರ್ಕಾರ ಮಾತು ಕೇಳುತ್ತದೆಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಕರೆ ನೀಡಿದರು.
ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘ ಜಿಲ್ಲಾ ಶಾಖೆಯಿಂದ ವಿನಾಯಕ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ನಡೆದ ಬೆಂಗಳೂರು ವಿಭಾಗದ ಮಟ್ಟದ ಪದಾಧಿಕಾರಿಗಳ ಮತ್ತು ನಿವೃತ್ತ ನೌಕರರ ಹಾಗೂ ಕುಟುಂಬ ಪಿಂಚಣಿದಾರರ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಸಂಧ್ಯಾ ಸುರಕ್ಷಾ ಯೋಜನೆ ಜಾರಿಗೆ ತರಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. ಗ್ಯಾರೆಂಟಿ ಯೋಜನೆಗಳಿಗೆ ರಾಜ್ಯ ಸರ್ಕಾರ ಹಣ ಖರ್ಚು ಮಾಡುತ್ತಿದೆ. ನಾಮಿನಲ್ ಅಮೌಂಟ್ ಕೊಡುವಂತೆ ಸರ್ಕಾರದ ಗಮನ ಸೆಳೆದಿದ್ದೇವೆ. ಹಂತ ಹಂತವಾಗಿ ನಿವೃತ್ತ ನೌಕರರ ಸಮಸ್ಯೆಗಳ ನಿವಾರಣಗೆ ಭೈರಪ್ಪನವರು ಮತ್ತು ನಾನು ಸಾಕಷ್ಟು ಸಾರಿ ಸರ್ಕಾರದ ಜೊತೆ ಮಾತನಾಡಿದ್ದೇವೆ. ಬೇಡಿಕೆಗಳ ಈಡೇರಿಕೆಗಾಗಿ ಶಕ್ತಿ ಸಾಮರ್ಥ್ಯ ಪ್ರದರ್ಶಿಸಲು ಹಿಂದೆ ಮುಂದೆ ನೋಡಬಾರದೆಂದು ನಿವೃತ್ತ ನೌಕರರಲ್ಲಿ ಮನವಿ ಮಾಡಿದರು.
ಸಂಘಟನೆ ಕಟ್ಟುವುದು ಕಷ್ಟದ ಕೆಲಸ. ಟೀಕೆ, ಟಿಪ್ಪಣಿ, ಸಮಸ್ಯೆ, ಗೊಂದಲಗಳು ಎದುರಾಗುವುದು ಸಹಜ. ಇದರ ನಡುವೆ ನಿವೃತ್ತ ನೌಕರರು ಸಂಘಟನೆ ಕಟ್ಟಿದ್ದೀರಿ. ಐ.ಎ.ಎಸ್. ಅಧಿಕಾರಿಗಳು ಹಾಗೂ ಮುಖ್ಯ ಇಂಜಿನಿಯರ್‌ಗಳು ನಿವೃತ್ತರಾದ ಕೂಡಲೆ ಸಂಘದಲ್ಲಿ ಗುರುತಿಸಿಕೊಳ್ಳಲು ಹಿಂಜರಿಯುತ್ತಿದ್ದಾರೆ. ಸರ್ಕಾರದ ಸೌಲಭ್ಯಗಳೇನಾದರೂ ಸಿಕ್ಕಲ್ಲಿ ಮೊದಲು ಪಡೆದುಕೊಳ್ಳುವುದು ಅವರುಗಳೆ. ಹಾಗಾಗಿ ಎಚ್ಚರಿಸುವ ಕೆಲಸವಾಗಬೇಕು. ಪ್ರತಿ ಜಿಲ್ಲೆಯಲ್ಲಿಯೂ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಪ್ರತಿ ವರ್ಷವೂ ಸರ್ಕಾರ ಐವತ್ತು ಲಕ್ಷ ರೂ.ಗಳನ್ನು ಮೀಸಲಿಡುವಂತೆ ಮುಖ್ಯಮಂತ್ರಿಗಳನ್ನು ಕೇಳಿದ್ದೇವೆ. ಶಿವಮೊಗ್ಗದಲ್ಲಿ ದೊಡ್ಡ ಸಮ್ಮೇಳನ ನಡೆಸೋಣ. ಅವಕಾಶ ಸಿಕ್ಕಾಗ ಕೆಲಸ ಮಾಡಿ ನಿಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ಭೈರಪ್ಪನವರ ಜೊತೆ ಕೈಜೋಡಿಸುವುದಾಗಿ ಸಿ.ಎಸ್.ಷಡಾಕ್ಷರಿ ಭರವಸೆ ನೀಡಿದರು.
ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ರಾಜ್ಯಾಧ್ಯಕ್ಷ ಡಾ.ಎಲ್.ಭೈರಪ್ಪ ಮಾತನಾಡಿ ರಾಜ್ಯ ಸರ್ಕಾರಿ ನೌಕರರು ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘ ಒಂದೆ ನಾಣ್ಯದ ಎರಡು ಮುಖಗಳಿದ್ದಂತೆ. ರಾಜ್ಯದಲ್ಲಿ ನಾಲ್ಕು ಲಕ್ಷ ಇಪ್ಪತ್ತು ಸಾವಿರ ನಿವೃತ್ತ ನೌಕರರು ಹಾಗೂ ಒಂದು ಲಕ್ಷ ಕುಟುಂಬ ಪಿಂಚಣಿದಾರರಿದ್ದಾರೆ. ಸರ್ಕಾರಿ ನೌಕರರು ಹಾಗೂ ನಿವೃತ್ತ ನೌಕರರು ಸರ್ಕಾರದಿಂದ ಅನೇಕ ಸೌಲಭ್ಯಗಳನ್ನು ಪಡೆದು ಆರಾಮಾಗಿದ್ದಾರೆನ್ನುವ ಮನೋಭಾವನೆ ಜನಸಾಮಾನ್ಯರಲ್ಲಿದೆ. ಅದೇ ರಾಜಕಾರಣಿಗಳು ಯಾವ ರೀತಿ ಐಷಾರಾಮಿ ಜೀವನ ನಡೆಸುತ್ತಿದ್ದಾರೆನ್ನುವ ಬಗ್ಗೆ ಯಾರು ಚಿಂತಿಸುವುದಿಲ್ಲ. ಸರ್ಕಾರದಿಂದ ಆರ್ಥಿಕ, ಸಾಮಾಜಿಕ ಸೌಲಭ್ಯಗಳನ್ನು ಪಡೆದುಕೊಳ್ಳಲು ನಿವೃತ್ತ ನೌಕರರಿಗೆ ಸಂಘಟನೆ ಬಹಳ ಮುಖ್ಯ ಎಂದು ಹೇಳಿದರು.
ರಾಜ್ಯ ಸರ್ಕಾರ ಏನೆ ಯೋಜನೆಗಳನ್ನು ಜಾರಿಗೆ ತರಲಿ ಅದನ್ನು ಜನಸಾಮಾನ್ಯರಿಗೆ ತಲುಪಿಸುವವರು ಸರ್ಕಾರಿ ನೌಕರರು. ನಿವೃತ್ತ ನೌಕರರು ರಾಜ್ಯದ ಮೂಲೆ ಮೂಲೆಯಲ್ಲಿದ್ದಾರೆ. ಆಳುವ ಸರ್ಕಾರಗಳು ವಿರೋಧ ಮಾಡಿಕೊಂಡರೆ ಅಧಿಕಾರ ನಡೆಸಲು ಸಾಧ್ಯವಿಲ್ಲ. ಸೇವೆಯಲ್ಲಿದ್ದಾಗ ಅನೇಕ ಸಮಸ್ಯೆಗಳಿರುತ್ತವೆ. ನಿವೃತ್ತಿಯಾದ ಮೇಲೆ ಸಮಸ್ಯೆಗಳು ಗಂಭೀರವಾಗಿರುತ್ತವೆ. ನಿವೃತ್ತರು ಆತ್ಮಸ್ಥೈರ್ಯ ಕಳೆದುಕೊಳ್ಳಬಾರದು. ಸಂಧ್ಯಾ ಸುರಕ್ಷಾ ಯೋಜನೆ, ಎಂಟನೆ ವೇತನ ಆಯೋಗಕ್ಕೆ ಶಿಫಾರಸ್ಸು ಮಾಡಲಾಗಿದೆ.
ಎಪ್ಪತ್ತು ವರ್ಷದಿಂದ ಎಂಬತ್ತು ವರ್ಷ ವಯೋಮಾನದವರಿಗೆ ಶೇ.೧೦ ರಷ್ಟು ಮೂಲ ಪಿಂಚಣಿಯಲ್ಲಿ ಹೆಚ್ಚಿಸಬೇಕು. ನಿವೃತ್ತರು ಒಂದೆಡೆ ಕುಳಿತು ಚರ್ಚಿಸಲು ಕಟ್ಟಡ ನಿರ್ಮಿಸಿಕೊಳ್ಳಲು ನಿವೇಶನ ಕೊಡಬೇಕೆಂದು ಒತ್ತಾಯಿಸಿದರು. ೧-೭-೨೦೨೨ ರಿಂದ ನಿವೃತ್ತಿಯಾದವರ ಬಗ್ಗೆ ಸಿ.ಎಸ್.ಷಡಾಕ್ಷರಿರವರು ವಿವರವಾಗಿ ಮಾತನಾಡಿದ್ದಾರೆ. ಕೇಂದ್ರ ಸರ್ಕಾರ ಹತ್ತು ವರ್ಷಗಳಿಗೊಮ್ಮೆ ವೇತನ ಭತ್ಯೆ ಪರಿಷ್ಕರಿಸಲಿದೆ. ಅದೇ ರೀತಿ ರಾಜ್ಯ ಸರ್ಕಾರ ಐದು ವರ್ಷಗಳಿಗೊಮ್ಮೆ ವೇತನ ಭತ್ಯೆಯನ್ನು ಪರಿಷ್ಕರಿಸುತ್ತದೆ ಎಂದರು.
ಸರ್ಕಾರಿ ನೌಕರರಿಂದ ಏನು ಪ್ರಯೋಜನವಿಲ್ಲವೆಂದು ಕೇಂದ್ರ ಮತ್ತು ರಾಜ್ಯ ಸರ್ಕಾರ ಅಂದುಕೊಂಡಿದೆ. ಶಾಸಕಾಂಗ, ನ್ಯಾಯಾಂಗಕ್ಕಿಂತ ಕಾರ್ಯಾಂಗ ಪ್ರಮುಖವಾದ ಅಂಗ.
ಸರ್ಕಾರದ ಯೋಜನೆಗಳನ್ನು ಕಟ್ಟಕಡೆಯ ವ್ಯಕ್ತಿಗೆ ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಆರೋಗ್ಯ ಭಾಗ್ಯ, ನಿವೃತ್ತ ನೌಕರರ ಬೇಡಿಕೆಗಳ ಬಗ್ಗೆ ಸರ್ಕಾರ ಗಮನ ಹರಿಸಬೇಕು. ವೇತನ ಆಯೋಗ ಜಾರಿ, ನಿವೃತ್ತ ನೌಕರರಿಗೆ ಪಿಂಚಣಿ, ಪರಿಷ್ಕರಣೆಯಾಗಬೇಕು. ಮಧ್ಯಂತರ ಪರಿಹಾರ ನೀಡುವಂತೆ ಬಸವರಾಜ್‌ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾಗ ಬೇಡಿಕೆಯಿಟ್ಟಿದ್ದೆವು. ಆಗ ಸುದೀರ್ಘ ಸಭೆ ನಡೆಸಿ ಹದಿನೇಳು ಪರ್ಸೆಂಟ್ ಕೊಟ್ಟರು. ಆರ್ಥಿಕ ಸೌಲಭ್ಯ, ಎನ್.ಪಿ.ಎಸ್ ರದ್ದುಪಡಿಸಿ ಓ.ಪಿ.ಎಸ್. ಜಾರಿಗೆ ತರುವಂತೆ ಹೋರಾಟ ನಡೆಯುತ್ತಿದೆ. ಸಂಘಟನೆಗೆ ಮಾರಕವಾದ ತೀರ್ಮಾನಗಳನ್ನು ಸರ್ಕಾರ ತೆಗೆದುಕೊಂಡರೆ ಅದರ ವಿರುದ್ದ ಹೋರಾಡಲು ಸಂಘಟನೆ ಗಟ್ಟಿಯಾಗಿರಬೇಕು. ಸೆಪ್ಟಂಬರ್‌ನಲ್ಲಿ ಗುಲ್ಬರ್ಗಾ ವಿಭಾಗದ ಸಮಾವೇಶವನ್ನು ವಿಜಯಪುರದಲ್ಲಿ ನಡೆಸುವುದಾಗಿ ಡಾ.ಎಲ್.ಭೈರಪ್ಪ ತಿಳಿಸಿದರು.
ನಿವೃತ್ತ ನೌಕರರ ಸಂಘದ ಜಿಲ್ಲಾಧ್ಯಕ್ಷ ಪ್ರೇಮ್‌ನಾಥ್ ಮಾತನಾಡುತ್ತ ನಿವೃತ್ತ ನೌಕರರ ಕಷ್ಠ-ಸುಖ ಕೇಳಲು ಯಾರು ಇಲ್ಲದ ಕಾರಣ ಸಂಘಟನೆ ಅನಿವಾರ್ಯ. ಹಾಗಾಗಿ ನಿವೃತ್ತ ನೌಕರರು ಸಂಘವನ್ನು ಬಲಪಡಿಸುವಲ್ಲಿ ನಿಷ್ಠೆ ಮತ್ತು ಪ್ರಾಮಾಣಿಕವಾಗಿರಬೇಕೆಂದು ಕರೆ ನೀಡಿದರು.
ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಮಾಲತೇಶ ಮುದ್ದಜ್ಜಿ, ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ಹಿರಿಯ ಉಪಾಧ್ಯಕ್ಷರುಗಳಾದ ಜೆ.ಸಿ.ಮಂಜುನಾಥ್, ನಂಜಪ್ಪ, ಜಿಲ್ಲಾ ಶಾಖೆಯ ಗೌರವಾಧ್ಯಕ್ಷ ವೈ.ಚಂದ್ರಶೇಖರಯ್ಯ, ನಿಕಟಪೂರ್ವ ಅಧ್ಯಕ್ಷ ಆರ್.ರಂಗಪ್ಪರೆಡ್ಡಿ, ಖಜಾಂಚಿ ಎನ್.ಆರ್.ಭೈಯಣ್ಣ, ಉಪಾಧ್ಯಕ್ಷ ಬಿ.ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಟಿ.ತಿಮ್ಮಪ್ಪ ಹಾಗೂ ಪದಾಧಿಕಾರಿಗಳು ವೇದಿಕೆಯಲ್ಲಿದ್ದರು.

