ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
1991ರಲ್ಲಿ ನಾನು ಲೋಕಸಭೆಯಲ್ಲಿ ಚುನಾವಣೆಗೆ ನಿಂತು ಸೋತಿದ್ದೆ. ಮೋಸದಿಂದ ಸೋತಿದ್ದೆ. ಆಗ ಇವರ ಕೈಯಲ್ಲಿ ಕೇಸ್ ಹಾಕಿಸಿದ್ದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ವಕೀಲರ ಸಂಘದಿಂದ ಗುರುವಾರ ಏರ್ಪಡಿಸಲಾಗಿದ್ದ ಮಾಜಿ ಅಡ್ವೊಕೇಟ್ ಜನರಲ್ ಪ್ರೊ. ರವಿವರ್ಮ ಕುಮಾರ್ ಅಭಿನಂದನಾ ಸಮಾರಂಭದಲ್ಲಿ ಭಾಷಣ ಮಾಡುವ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು ಮಾತನಾಡಿ, ಫ್ರೀ ಆಗಿ ಕೇಸ್ ನಡೆಸಿಕೊಟ್ರು. ಆಗ ಅದರ ವಿರುದ್ಧ ನ್ಯಾಯಾಲಯದಲ್ಲಿ ಹೋರಾಡಲು ಹಿರಿಯ ವಕೀಲ ಪ್ರೊ. ರವಿವರ್ಮ ಕುಮಾರ್ ಅವರು ನೆರವು ನೀಡಿದ್ದರು ಎಂದು ಸ್ಮರಿಸಿದ್ದಾರೆ.
ಪ್ರೊ. ರವಿವರ್ಮ ಕುಮಾರ್ ಅವರು ನನಗೆ ನೆರವಾಗಿದ್ದರು. ಅದಕ್ಕೆ ಯಾವುದೇ ಶುಲ್ಕವನ್ನೂ ತೆಗೆದುಕೊಂಡಿರಲಿಲ್ಲ. ಹೀಗೆ ನನ್ನಂತೆಯೇ ಅನೇಕರಿಗೆ ಅವರು ಕಾನೂನು ನೆರವು ನೀಡಿದ್ದಾರೆ. ಅದರಲ್ಲೂ ಸಮಾಜದಲ್ಲಿ ಧ್ವನಿಯಿಲ್ಲದವರಿಗೆ ಶುಲ್ಕ ಪಡೆಯದೆಯೇ ನೆರವು ನೀಡುತ್ತಾರೆ ಎಂದು ತಿಳಿಸಿದ್ದಾರೆ.
ಅಶೋಕ್ ತಿರುಗೇಟು :
ಮುಖ್ಯಮಂತ್ರಿ ಸಿದ್ದರಾಮಯ್ಯನವರ ಈ ಹೇಳಿಕೆ ಇದೀಗ ದೊಡ್ಡ ಚರ್ಚೆಗೆ ಕಾರಣವಾಗಿದೆ. ಮತಗಳ್ಳತನದ ಆರೋಪದೊಂದಿಗೆ ಹೋರಾಟ ನಡೆಸುತ್ತಿರುವ ಕಾಂಗ್ರೆಸ್ ವಿರುದ್ಧ ಸಿದ್ದರಾಮಯ್ಯನವರ ಈ ಹೇಳಿಕೆ ಮೂಲಕ ತಿರುಗೇಟು ನೀಡುತ್ತಿದ್ದಾರೆ.
ಈ ಸಂಬಂಧ ಎಕ್ಸ್ ಪೋಸ್ಟ್ ಮಾಡಿರುವ ವಿಪಕ್ಷ ನಾಯಕ ಆರ್. ಅಶೋಕ್, ಕಾಂಗ್ರೆಸ್ ಪಕ್ಷದ ಮೋಸವನ್ನು ಬಯಲು ಮಾಡಿರುವ ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನದಿಂದ, ಕಾಂಗ್ರೆಸ್ ಪಕ್ಷದಿಂದ ವಜಾ ಮಾಡುವ ಧೈರ್ಯ ಇದೆಯಾ? ಎಂದು ಅಶೋಕ್ ತೀಕ್ಷ್ಣವಾಗಿ ಕಾಂಗ್ರೆಸ್ ಹೈಕಮಾಂಡ್ ವರಿಷ್ಠರನ್ನು ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ಮತಗಳ್ಳತನವನ್ನು ಬಯಲು ಮಾಡಿದ ಸಿದ್ದರಾಮಯ್ಯ 1991ರಲ್ಲಿ ಲೋಕಸಭೆಗೆ ಸ್ಪರ್ಧಿಸಿದ್ದು ಎಲ್ಲಿಂದ? ಕೊಪ್ಪಳ ಲೋಕಸಭಾ ಕ್ಷೇತ್ರದಿಂದ, ಯಾವ ಪಕ್ಷದಿಂದ? – ಜನತಾದಳ ಪಕ್ಷದಿಂದ, ಸಿದ್ದರಾಮಯ್ಯವರವನ್ನ ಮೋಸದಿಂದ ಸೋಲಿಸಿದ್ದು ಯಾರು? – ಕಾಂಗ್ರೆಸ್ ಪಕ್ಷ. ಮತಗಳ್ಳತನ ಎಂಬ ಕಪೋಲಕಲ್ಪಿತ ನಾಟಕದ ಬಗ್ಗೆ ಸತ್ಯ ನುಡಿದಿದ್ದ ಮಾಜಿ ಸಚಿವ ಕೆ. ಎನ್. ರಾಜಣ್ಣ ಅವರನ್ನು ಅತ್ಯಂತ ಅಗೌರವವಾಗಿ ಸಂಪುಟದಿಂದ ವಜಾ ಮಾಡಿದ್ದ ರಾಹುಲ್ ಗಾಂಧಿ ಅವರಿಗೆ, ಈಗ ಕಾಂಗ್ರೆಸ್ ಪಕ್ಷದ ಮೋಸವನ್ನು ಬಯಲು ಮಾಡಿರುವ ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನದಿಂದ, ಕಾಂಗ್ರೆಸ್ ಪಕ್ಷದಿಂದ ವಜಾ ಮಾಡುವ ಧೈರ್ಯ ಇದೆಯಾ? ಎಂದು ಅಶೋಕ್ ಖಾರವಾಗಿ ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ಪ್ರತಾಪ, ಶಿಸ್ತು ಕ್ರಮ ಏನಿದ್ದರೂ ದಲಿತ ನಾಯಕರ ಮೇಲೆ ಪ್ರಯೋಗ ಮಾಡಲು ಮಾತ್ರ ಸೀಮಿತನಾ?.
2018ರಲ್ಲಿ ಸಿದ್ದರಾಮಯ್ಯನವರು ಬಾದಾಮಿಯಲ್ಲಿ ಹೇಗೆ ಮತ ಖರೀದಿ ಮೂಲಕ ಗೆದ್ದರು ಎಂದು ಮಾಜಿ ಕೇಂದ್ರ ಸಚಿವ ಸಿ. ಎಂ. ಇಬ್ರಾಹಿಂ ಅವರು ಈಗಾಗಲೇ ಬಯಲು ಮಾಡಿದ್ದಾರೆ. ಪಂಚಾಯಿತಿಯಿಂದ ಪಾರ್ಲಿಮೆಂಟ್ವರೆಗೆ ಕಾಂಗ್ರೆಸ್ ಪಕ್ಷದ ಏಕಚಕ್ರಾಧಿಪತ್ಯ ಇದ್ದ ಕಾಲದಲ್ಲಿ ‘ಆಗೆಲ್ಲಾ ಇವಿಎಂ ಇರಲಿಲ್ಲ, ಒಬ್ರೋ ಇಬ್ರೋ ಕೂತ್ಕೊಂಡು ಒತ್ತು ಬುಡ್ರೋ ಅನ್ನೋರು‘ ಎಂದು ಕಾಂಗ್ರೆಸ್ ಪಕ್ಷ 60 ವರ್ಷ ಹೇಗೆ ಚುನಾವಣೆ ಗೆಲ್ಲುತ್ತಿತ್ತು ಎನ್ನುವುದನ್ನ ಗೃಹ ಸಚಿವ ಪರಮೇಶ್ವರ್ ಅವರು ಲೀಲಾಜಾಲವಾಗಿ ವಿವರಿಸಿದ್ದಾರೆ ಎಂದು ಅಶೋಕ್ ತಿರುಗೇಟು ನೀಡಿದ್ದಾರೆ.
ನಮ್ಮ ದೇಶದಲ್ಲಿ ಮತಗಳ್ಳತನ, ಚುನಾವಣಾ ಅಕ್ರಮದ ಪಿತಾಮಹ ಯಾರಾದರೂ ಇದ್ದರೆ ಅದು ಕಾಂಗ್ರೆಸ್ ಪಕ್ಷ ಮತ್ತು ನೆಹರೂ-ಗಾಂಧಿ ಕುಟುಂಬ. ಮತಗಳ್ಳತನದ ಬಗ್ಗೆ ರಾಹುಲ್ ಗಾಂಧಿ ಅವರು ಮಾತನಾಡಿದರೆ ಅದು ಭೂತದ ಬಾಯಲ್ಲಿ ಭಗವದ್ಗೀತೆ ನುಡಿದಂತೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ವಾಗ್ದಾಳಿ ಮಾಡಿದ್ದಾರೆ.

