ಚಂದ್ರವಳ್ಳಿ ನ್ಯೂಸ್, ಮೈಸೂರು:
2023ರಲ್ಲಿ ಕನ್ನಡಾಂಬೆಯ ಕುರಿತು ಬಾನು ಮುಷ್ತಾಕ್ ಅವರು ನೀಡಿದ ಹೇಳಿಕೆಗಳ ಬಗ್ಗೆ ಸ್ಪಷ್ಟನೆ ಕೊಟ್ಟು ವೇದಿಕೆಗೆ ಬರಬೇಕು. ಇಲ್ಲದಿದ್ದರೆ ಅವರು ದಸರಾ ಉದ್ಘಾಟಿಸುವುದಕ್ಕೆ ನಮ್ಮ ವಿರೋಧವಿದೆ ಎಂದು ಸಂಸದ ಹಾಗೂ ರಾಜವಂಶಸ್ಥ ಯಧುವೀರ್ ಒಡೆಯರ್ ಹೇಳಿದರು.
ಸುತ್ತೂರು ಮಠದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬಾನು ಮುಷ್ತಾಕ್ ಅವರು ದಸರಾ ಉದ್ಘಾಟಕರಾಗಿ ಆಯ್ಕೆಯಾಗಿದ್ದಾರೆ. 2023ರಲ್ಲಿ ಭುವನೇಶ್ವರಿ ವೇದಿಕೆಯಲ್ಲಿ ಬಾನು ಮುಷ್ತಾಕ್ ಆಡಿದ ಮಾತಿಗೆ ಸ್ಪಷ್ಟನೆ ಕೊಡಬೇಕು. ಇಲ್ಲಿಯವರೆಗೆ ಅವರು ಸ್ಪಷ್ಟನೆ ನೀಡಿಲ್ಲ. ಸ್ಪಷ್ಟನೆ ನೀಡಲು ನಾವು ಆಗ್ರಹಿಸಿದ್ದೇವೆ ಎಂದು ಸಂಸದರು ತಿಳಿಸಿದರು.
ಧಾರ್ಮಿಕತೆ ವಿಚಾರದ ಬಗ್ಗೆ ಸ್ಪಷ್ಟನೆ ನೀಡಿದರೆ ಉದ್ಘಾಟನೆಗೆ ನಮ್ಮ ಅಭ್ಯಂತರವಿಲ್ಲ. ಮುಖ್ಯವಾಗಿ, ನಮ್ಮ ಧಾರ್ಮಿಕ ಭಾವನೆಯ ಬಗ್ಗೆ ಮತ್ತು ಆಚರಣೆಗಳ ಬಗ್ಗೆ ಸ್ಪಷ್ಟನೆ ಕೊಟ್ಟು ಬರಬೇಕು ಎಂದು ಯಧುವೀರ್ ಒತ್ತಾಯಿಸಿದರು.
ಉದ್ಘಾಟನೆಗೆ ಬಾನು ಮುಷ್ತಾಕ್ ಅವರನ್ನು ಸರ್ಕಾರ ಆಯ್ಕೆ ಮಾಡಿದ ನಂತರ ನಾವು ಆಯ್ಕೆ ಮಾಡುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಹೇಳಿದ್ದೆವು. ಆದರೆ 2023ರಲ್ಲಿ ಭುವನೇಶ್ವರಿ ವೇದಿಕೆಯಲ್ಲಿ ಅವರು ಆಡಿರುವ ಮಾತು ಬಹಿರಂಗವಾದ್ದರಿಂದ ಸ್ಪಷ್ಟನೆ ಕೇಳಿದ್ದೇವೆ. ಅಲ್ಲದೇ, ಸಾಂಸ್ಕೃತಿಕ ಹಾಗೂ ಧಾರ್ಮಿಕ ಆಚರಣೆಯಲ್ಲಿ ಯಾವುದೇ ಹಿಂದೂಗಳ ಭಾವನೆಗೆ ಧಕ್ಕೆಯಾಗದಂತೆ ಅವರ ನಡೆ ಇರಲಿದೆಯೇ ಎಂದು ನಾವು ಪ್ರಶ್ನೆ ಮಾಡಿದ್ದೇವೆ ಎಂದು ಹೇಳಿದರು.
ಐತಿಹಾಸಿಕ ದಸರಾ ಒಂದು ಸಾಂಸ್ಕೃತಿಕ ಹಾಗೂ ಧಾರ್ಮಿಕ ವೇದಿಕೆ. ಈ ವೇದಿಕೆಗೆ ಅವರು ನಮ್ಮ ಧಾರ್ಮಿಕ ಭಾವನೆಗಳೊಂದಿಗೆ ಬರುತ್ತಾರಾ ಎಂಬುದು ನಮ್ಮ ಪ್ರಶ್ನೆಯಾಗಿದೆ ಎಂದರು.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಚಾಮುಂಡಿ ಬೆಟ್ಟದ ಬಗ್ಗೆ ನೀಡಿರುವ ಹೇಳಿಕೆ ಕುರಿತು ಮಾತನಾಡಿದ ಯಧುವೀರ್, ಡಿ.ಕೆ.ಶಿವಕುಮಾರ್ ಅವರ ಹೇಳಿಕೆ ಬೇಜವಾಬ್ದಾರಿಯುತವಾಗಿದೆ. ಚಾಮುಂಡಿ ಬೆಟ್ಟ ಹಿಂದೂಗಳ ಧಾರ್ಮಿಕ ಸ್ಥಳ. ಭಾರತದ ಶಕ್ತಿಪೀಠಗಳಲ್ಲಿ ತಾಯಿ ಚಾಮುಂಡೇಶ್ವರಿ ಕ್ಷೇತ್ರವೂ ಒಂದು. ಋಷಿ ಮಾರ್ಕಂಡೇಯ ಅವರು ಚಾಮುಂಡೇಶ್ವರಿ ವಿಗ್ರಹ ಕೆತ್ತಿದ ಇತಿಹಾಸವಿದೆ. ಆದ್ದರಿಂದ, ಚಾಮುಂಡಿ ಬೆಟ್ಟ ಹಿಂದೂಗಳ ಧಾರ್ಮಿಕ ಕ್ಷೇತ್ರವಾಗಿದೆ. ಇಂತಹ ಬೇಜವಾಬ್ದಾರಿಯುತ ಹೇಳಿಕೆಯನ್ನು ಏಕೆ ನೀಡಿದ್ದಾರೆ ಎಂದು ಅವರೇ ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದರು.

