ಚಂದ್ರವಳ್ಳಿ ನ್ಯೂಸ್, ಚಿಕ್ಕಮಗಳೂರು:
ಪ್ರವಾಸಿ ತಾಣಗಳಿಗೆ ಭೇಟಿ ನೀಡಲು ಚಿಕ್ಕಮಗಳೂರು ಜಿಲ್ಲಾಡಳಿತ ನೂತನ ವ್ಯವಸ್ಥೆ ಜಾರಿಗೆ ತಂದಿದೆ.
ಮುಳ್ಳಯ್ಯನಗಿರಿಗೆ ಬರುವ ಪ್ರವಾಸಿಗರು ಮೊದಲೇ ಆನ್ಲೈನ್ನಲ್ಲಿ ಬುಕ್ಕಿಂಗ್ ಮಾಡಿಕೊಂಡು ಬರಬೇಕು. ಈ ವ್ಯವಸ್ಥೆ ಇದೇ ಸೆಪ್ಟೆಂಬರ್ 1ರಿಂದ ಜಾರಿಗೆ ಬರಲಿದೆ.
ಈ ಮೂಲಕ ಪ್ರವಾಸಿತಾಣ ಮುಳ್ಳಯ್ಯನಗಿರಿಯಲ್ಲಿ ಗಂಟೆಗಟ್ಟಲೇ ಟ್ರಾಫಿಕ್ ಜಾಮ್ನಿಂದ ಉಂಟಾಗುವ ಪ್ರವಾಸಿಗರ ಪರದಾಟ ಹಾಗೂ ಟ್ರಾಫಿಕ್ ನಿಯಂತ್ರಿಸಲು ಪೊಲೀಸರ ಹರಸಾಹಸಕ್ಕೆ ಜಿಲ್ಲಾಡಳಿತ ಬ್ರೇಕ್ ಹಾಕಿ ಪ್ರವಾಸಿ ಸ್ನೇಹಿ ಆದೇಶ ಮಾಡಿದೆ.
ಚಿಕ್ಕಮಗಳೂರಿನ ಪ್ರಸಿದ್ಧ ಪ್ರವಾಸಿ ತಾಣ ಮುಳ್ಳಯ್ಯನಗಿರಿಗೆ ವರ್ಷದ ಎಲ್ಲಾ ದಿನಗಳಲ್ಲೂ ಸಾವಿರಾರು ಪ್ರವಾಸಿಗರು ಆಗಮಿಸುತ್ತಾರೆ. ಇಲ್ಲಿಗೆ ಬರುವ ಭಾರೀ ಸಂಖ್ಯೆಯ ವಾಹನಗಳಿಂದಾಗಿ ಪ್ರತಿನಿತ್ಯ ಟ್ರಾಫಿಕ್ ಜಾಮ್ ಸಮಸ್ಯೆ, ಪ್ರವಾಸಿಗರ ಪರದಾಟ ನಿತ್ಯ ಆಗುತ್ತಿತ್ತು.
ಆ ಟ್ರಾಫಿಕ್ ನಿಯಂತ್ರಿಸಲು ಪೊಲೀಸರಿಗೆ ದಿನನಿತ್ಯ ಹೆಚ್ಚಿನ ಕೆಲಸದ ಒತ್ತಡ ಇರುತ್ತಿತ್ತು. ಈಗ ಎಲ್ಲಾ ಸಮಸ್ಯೆಗಳನ್ನು ನಿಯಂತ್ರಿಸಲು ಚಿಕ್ಕಮಗಳೂರು ಜಿಲ್ಲಾಡಳಿತ ಆನ್ಲೈನ್ ವ್ಯವಸ್ಥೆ ಜಾರಿಗೆ ತರುತ್ತಿದೆ.
ನಿತ್ಯ 600 ವಾಹನಗಳಿಗೆ ಅನುಮತಿ:
ಚಿಕ್ಕಮಗಳೂರು ಜಿಲ್ಲೆಯ ಪ್ರವಾಸಿ ತಾಣಗಳಾದ ಪಶ್ಚಿಮ ಘಟ್ಟಗಳ ತಪ್ಪಲು ದತ್ತಪೀಠ, ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ಮಾಣಿಕ್ಯಧಾರ ಗಾಳಿಕೆರೆ ಸೇರಿದಂತೆ ಗಿರಿ ಭಾಗದ ವಿವಿಧ ಪ್ರವಾಸಿ ತಾಣಗಳಿಗೆ ನಿತ್ಯ 600 ವಾಹನಗಳಿಗಷ್ಟೇ ಜಿಲ್ಲಾಡಳಿತ ಅವಕಾಶ ಕಲ್ಪಿಸಿ ಆದೇಶಿಸಿದೆ.
ಈ ಮೂಲಕ ಗಿರಿಧಾಮಗಳ ಭಾಗದಲ್ಲಿ ಇಷ್ಟು ದಿನ ನಡೆಯುತ್ತಿದ್ದ ಅನಾಹುತಗಳಿಗೆ ಕಡಿವಾಣ ಹಾಕಲು ಜಿಲ್ಲಾಡಳಿತ ಮುಂದಾಗಿದೆ. ಮುಳ್ಳಯ್ಯನಗಿರಿ, ದತ್ತಪೀಠಕ್ಕೆ ಬರುವ ಪ್ರವಾಸಿಗರು ಮೊದಲೇ ಆನ್ಲೈನ್ನಲ್ಲಿ ಬುಕ್ಕಿಂಗ್ ಮಾಡಿಕೊಂಡು ಬರಬೇಕು. ಇಲ್ಲವಾದರೆ ಗಂಟೆಗಟ್ಟಲೇ ಕಾಯಬೇಕು ಅಥವಾ ವಾಪಸ್ ಹೋಗಬೇಕು. ಇದೇ ಸೆಪ್ಟೆಂಬರ್- 1ರಿಂದ ಈ ವ್ಯವಸ್ಥೆ ಜಾರಿಗೆ ಬರಲಿದೆ.
ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿರುವ ಮುಳ್ಳಯ್ಯನಗಿರಿ, ದತ್ತಪೀಠ, ಸೀತಾಳಯ್ಯನಗಿರಿ, ಮಾಣಿಕ್ಯಾಧಾರ ಜಲಪಾತ ವೀಕ್ಷಣೆಗೆ ಬರುವ ಪ್ರವಾಸಿಗರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಇದರಿಂದ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರು ಹಾಗೂ ವಾಹನ ದಟ್ಟಣೆ ಉಂಟಾಗುತ್ತಿದ್ದು, ವಾಹನ ಹಾಗೂ ಪ್ರವಾಸಿಗರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಡುವಂತಾಗಿದೆ.
ವೆಬ್ಸೈಟ್: ಹಾಗಾಗಿ, ಜಿಲ್ಲಾಡಳಿತ (https://chikkamagaluru.nic.in/en/tourism) ವೆಬ್ಸೈಟ್ ಬಿಟ್ಟಿದ್ದು, ಇನ್ಮುಂದೆ ಪಶ್ಚಿಮಘಟ್ಟಗಳ ತಪ್ಪಲಿನ ಪ್ರವಾಸಿ ತಾಣಗಳಿಗೆ ಬರುವ ಪ್ರವಾಸಿಗರು ಆನ್ಲೈನ್ನಲ್ಲಿ ಟಿಕೆಟ್ ಬುಕ್ ಮಾಡಿಕೊಂಡು ಬರಬೇಕು.
ಬೈಕ್, ಆಟೋಗೆ 50 ರೂ., ಕಾರುಗಳಿಗೆ 100 ರೂ., ಟೂಫಾನ್ ವಾಹನಕ್ಕೆ 150 ರೂ. ಹಾಗೂ ಟೆಂಪೋ ಟ್ರಾವೆಲರ್ಗೆ 200 ರೂ. ಹಣ ಪಾವತಿಸಿ ದಿನಾಂಕ ಮತ್ತು ಸಮಯವನ್ನು ಮೊದಲೇ ಬುಕ್ಕಿಂಗ್ ಮಾಡಿಕೊಳ್ಳಬೇಕು.
ಟಿಕೆಟ್ ಬುಕ್ ಮಾಡದಿದ್ದರೆ ಗಿರಿ ಭಾಗಕ್ಕೆ ಹೋಗಲು ಆಗಲ್ಲ, ಜೊತೆಗೆ ಸಮಯಕ್ಕೆ ಸರಿಯಾಗಿ ಬರದಿದ್ದರೂ ಹೋಗಲು ಅವಕಾಶವಿಲ್ಲ ಎಂದು ಜಿಲ್ಲಾಡಳಿತ ತಿಳಿಸಿದೆ.
ಸಮಯ ನಿಗದಿ:
ಪ್ರತಿದಿನ ಬೆಳಗ್ಗೆ 6ರಿಂದ ಮಧ್ಯಾಹ್ನ 12 ಗಂಟೆವರೆಗೆ ಮೊದಲ ಅವಧಿ ಮತ್ತು ಮಧ್ಯಾಹ್ನ 1ರಿಂದ ಸಂಜೆ 6 ಗಂಟೆವರೆಗೆ 2ನೇ ಅವಧಿ ಎಂದು ಎರಡು ಭಾಗಗಳನ್ನಾಗಿ ಜಿಲ್ಲಾಡಳಿತ ವಿಂಗಡಿಸಿಕೊಂಡು ಪ್ರವಾಸಿಗರ ಭೇಟಿಗೆ ಸಮಯ ನಿಗದಿ ಮಾಡಿದೆ.
ಒಂದು ಅವಧಿಗೆ 600 ವಾಹನಗಳಿಗೆ ಅವಕಾಶ. ಅವುಗಳಲ್ಲಿ ದ್ವಿಚಕ್ರ ವಾಹನ, ಆಟೋ 100, ಸ್ಥಳೀಯ ಟ್ಯಾಕ್ಸಿ 100, ಟೆಂಪೋ ಟ್ರಾವೆಲರ್ 50, ತೂಫಾನ್ 50, ಪ್ರವಾಸಿಗರ ಕಾರು-ಜೀಪು ಸೇರಿ 300ಕ್ಕೆ ಮಾತ್ರ ಅವಕಾಶ ಇರಲಿದೆ. ಮೊದಲು ಬುಕ್ಕಿಂಗ್ ಮಾಡಿಕೊಂಡವರಿಗೆ ಮಾತ್ರ ಅವಕಾಶ ದೊರೆಯಲಿದೆ. ಮುಂದೆ ಚಿಕ್ಕಮಗಳೂರಿಗೆ ಪ್ರವಾಸ ತೆರಳುವವರು ಕಡ್ಡಾಯವಾಗಿ ಆನ್ಲೈನ್ ಬುಕ್ಕಿಂಗ್ ಮಾಡಿಕೊಂಡೇ ಹೋಗಬೇಕಾಗಿದೆ.

