ಅಡಿಕೆ ಬೆಳೆಯಲ್ಲಿ ಎಲೆ ಚುಕ್ಕೆ ಮತ್ತು ಸುಳಿ ತಿಗಣೆ ನಿಯಂತ್ರಣ ಕುರಿತು ತರಬೇತಿ ಶಿಬಿರ

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ತಾಲೂಕಿನ ತೂಬಗೆರೆ ಹೋಬಳಿ
  ಹಾಡೋನಹಳ್ಳಿ ಕೃಷಿ ವಿಜ್ಞಾನ ಕೇಂದ್ರದಿಂದ ತಾಲೂಕಿನ  ಗೊಲ್ಲಹಳ್ಳಿ ಗ್ರಾಮದಲ್ಲಿ ಅಡಿಕೆಯಲ್ಲಿ ಎಲೆ ಚುಕ್ಕೆ ಮತ್ತು ಸುಳಿ ತಿಗಣೆ ನಿರ್ವಹಣೆ ಕುರಿತು ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

 ತರಬೇತಿ ಕಾರ್ಯಕ್ರಮದಲ್ಲಿ ಕೃಷಿ ವಿಜ್ಞಾನ ಕೇಂದ್ರದ ಜೇನು ಕೃಷಿ ವಿಜ್ಞಾನಿ ಡಾ. ಈಶ್ವರಪ್ಪ, ಕೇಂದ್ರದ ಕಾಠ್ಯ ಚಟುವಟಿಕೆಗಳ ಬಗ್ಗೆ ವಿವರಿಸುತ್ತಾ, ಕೃಷಿ ವಿಜ್ಞಾನ ಕೇಂದ್ರದಲ್ಲಿ ದೊರೆಯುವ ತಾಂತ್ರಿಕ ಮಾಹಿತಿಗಳನ್ನು ಬಳಸಿ, ರೈತರು ವೈಜ್ಞಾನಿಕವಾಗಿ ಕೃಷಿ ಮಾಡಬಹುದಾಗಿದೆ. ಇತ್ತೀಚಿನ ದಿನಗಳಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವ್ಯಾಪ್ತಿಯಲ್ಲಿ ಹೊಸದಾಗಿ ನಾಟಿ ಮಾಡಿರುವ ಅಡಿಕೆ ತೋಟಗಳಲ್ಲಿ ಸುಳಿ ತಿಗಣೆ ಬಾಧೆಯು ತೀವ್ರವಾಗಿ ಕಾಣಿಸಿಕೊಳ್ಳುತ್ತಿದ್ದು ಈ ಕೀಟವು ಬೆಳೆಯುತ್ತಿರುವ ಅಡಿಕೆ ಸುಳಿಯ ಸಂದುಗಳಲ್ಲಿದ್ದುಕೊಂಡು ರಸವನ್ನು ಹೀರುವುದರಿಂದ ಎಳೆಯ ಗರಿಗಳ ಮೇಲೆ ಗಾಢ ಕಂದು ಬಣ್ಣದ ಗೆರೆಗಳು ಕಂಡು ಬರುತ್ತವೆ.

- Advertisement - 

ಇದರಿಂದ ಅಡಿಕೆ ಗಿಡಗಳ ಬೆಳವಣಿಗೆ ಕುಂಠಿತವಾಗಿರುವುದು ಕಂಡು ಬಂದಿರುತ್ತದೆ. ಇದರ ನಿರ್ವಹಣೆಗಾಗಿ ಥಯಾಮೇಥಾಕ್ಸಮ್ 25 ಡಬ್ಲ್ಯುಜಿ ಯನ್ನು 25 ಗ್ರಾಂ ಹರಳುಗಳನ್ನು 100 ಲೀ. ನೀರಿನೊಂದಿಗೆ (0.25 ಗ್ರಾಂ/ ಲೀ. ನೀರಿಗೆ) ಬೆರೆಸಿಸುಳಿಯಸಂದುಗಳಿಗೆ ತಾಕುವಂತೆ ಸಿಂಪರಣೆ ಮಾಡುವುದು ಹಾಗೂ 20 ದಿನಗಳ ನಂತರ ಅಝಾಡಿರಾಕ್ಸಿನ್ (ಬೇವಿನ ಎಣ್ಣೆ) 10000 ಪಿಪಿಎಂ ಯನ್ನು ಮಿಲಿ/ಲೀ. ನೀರಿನೊಂದಿಗೆ ಮಿಶ್ರಣಮಾಡಿ ಸಿಂಪರಣೆ ಮಾಡುವುದರಿಂದ ಈ ಕೀಟದ ಹಾವಳಿಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬಹುದಾಗಿದೆ ಎಂದರು.

ಸಸ್ಯ ಸಂರಕ್ಷಣಾ ವಿಜ್ಞಾನಿ ಡಾ. ಎಸ್. ಸುಪ್ರಿಯಾ ಮಾತನಾಡಿ, ಅಡಿಕೆ ಬೆಳೆಯಲ್ಲಿ ಎಲೆ ಚುಕ್ಕೆ ರೋಗದ ಬಾಧೆಯು ಕಂಡು ಬಂದಿದ್ದು ಈ ರೋಗವು ಪ್ರಾರಂಭಿಕ ಹಂತದಲ್ಲಿ ಗರಿಗಳು ಹಾಗೂ ಕಾಯಿಗಳ ಮೇಲೆ ಚಿಕ್ಕದಾದ ಕಂದು ಬಣ್ಣದ ಚುಕ್ಕೆಗಳು ಕಾಣಿಸಿಕೊಂಡು ಕ್ರಮೇಣ ಈ ಚುಕ್ಕೆಗಳ ಗಾತ್ರ ಜಾಸ್ತಿಯಾಗಿ ಬಾಧೆಗೊಳಗಾದ ಗರಿಗಳು ಹಳದಿ ಬಣ್ಣಕ್ಕೆ ತಿರುಗುವುದರಿಂದ ಅಡಿಕೆ ಗಿಡಗಳ ಬೆಳವಣಿಗೆ ಹಾಗೂ ಕಾಯಿಗಳ ಇಳುವರಿಯು ಕುಂಠಿತವಾಗಿರುವುದು ಕಂಡು ಬಂದಿದೆ.

- Advertisement - 

ಈ ರೋಗದ ನಿರ್ವಹಣೆಗಾಗಿ ಪ್ರೊಪಿಕೊನಜೋಲ್ ಶೇ.25. ಇಸಿಯನ್ನು 1 ಮೀಲಿ ಲೀಟರ್    ನೀರಿನೊಂದಿಗೆ ಬೆರೆಸಿ ಸಿಂಪರಣೆ ಮಾಡ ಬೇಕೆಂದು ರೈತರಿಗೆ ಸಲಹೆ ನೀಡಿದರು. ಇದೇ ವೇಳೆ ಪ್ರಾತ್ಯಕ್ಷಿಕೆಯ ರೈತರಿಗೆ ಎಲೆಚುಕ್ಕೆ ಮತ್ತು ಸುಳಿ ತಿಗಣೆ ನಿರ್ವಹಣೆಗಾಗಿ ಅಗತ್ಯ ಪರಿಕರಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಗೊಲ್ಲಹಳ್ಳಿಯ ರೈತ ಮುನಿಯಪ್ಪ  ಹಾಗು ರೈತ ತಂಡ ಭಾಗಿಯಾಗಿದ್ದರು.

 

Share This Article
error: Content is protected !!
";