ಬಾನು ಮುಷ್ತಾಕ್ ದಸರಾ ಉದ್ಘಾಟನೆಗೆ ಬಿಜೆಪಿ ನಾಯಕರು ಕುಂಟು ನೆಪ

News Desk

 ಚಂದ್ರವಳ್ಳಿ ನ್ಯೂಸ್, ಮೈಸೂರು:
ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಅವರ ದಸರಾ ಉದ್ಘಾಟನೆಗೆ ಆಯ್ಕೆ ವಿಚಾರದಲ್ಲಿ ಬಿಜೆಪಿ ನಾಯಕರು ಕುಂಟು ನೆಪ ಹುಡುಕುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದರು.

ನಗರದ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಭಾನುವಾರ ಮಾತನಾಡಿದ ಅವರು, ದಸರಾ ಉದ್ಘಾಟಕರ ಆಯ್ಕೆ ಅಧಿಕಾರವನ್ನು ದಸರಾ ಉನ್ನತ ಸಮಿತಿ ಸಭೆಯಲ್ಲಿ ನನಗೆ ನೀಡಿತ್ತು. ಈ ಹಿನ್ನೆಲೆ ಅಂತಾರಾಷ್ಟ್ರೀಯ ಮಟ್ಟದ ಬೂಕರ್ ಪ್ರಶಸ್ತಿ ಪಡೆದ ಕನ್ನಡದ ಸಾಹಿತಿ ಬಾನು ಮುಷ್ತಾಕ್ ಅವರನ್ನು ಆಯ್ಕೆ ಮಾಡಿದ್ದೇನೆ. ನಾಡ ಹಬ್ಬ ದಸರಾ ಮಹೋತ್ಸವ ಎಲ್ಲಾ ಜಾತಿ-ಧರ್ಮಕ್ಕೆ ಸೇರಿದ ಧರ್ಮಾತೀತವಾದ ಹಬ್ಬವಾಗಿದೆ. ದಸರಾ ಉದ್ಘಾಟನೆಗೆ ಧರ್ಮದ ಲೇಪನ ಮಾಡುವುದು ಸರಿಯಲ್ಲ ಎಂದು ಸಿಎಂ ಹೇಳಿದರು.

- Advertisement - 

ಬಾನು ಮುಷ್ತಾಕ್ ಅವರು ಕನ್ನಡಾಂಬೆಯ ಬಗ್ಗೆ ನೀಡಿರುವ ಹಳೇ ಹೇಳಿಕೆಗೂ ಈಗ ದಸರಾ ಉದ್ಘಾಟನೆಗೆ ಆಹ್ವಾನಿಸಿರುವುದಕ್ಕೂ ಏನು ಸಂಬಂಧ, ಯಾವತ್ತೋ ಏನು ಹೇಳಿದ್ದಾರೆ ಎಂದು ಅದನ್ನು ದಸರಾಗೆ ಲಿಂಕ್ ಮಾಡುವುದು ಎಷ್ಟು ಸರಿ? ಎಂದು ಪ್ರಶ್ನಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಾನು ಮುಷ್ತಾಕ್ ಅವರು ದಸರಾ ಉದ್ಘಾಟಿಸುವುದನ್ನು ಧರ್ಮಾಂದರು ಮಾತ್ರ ವಿರೋಧಿಸುತ್ತಾರೆ. ಇತಿಹಾಸ ತಿಳಿಯದ ಬಿಜೆಪಿ ನಾಯಕರು ವಿರೋಧ ಮಾಡಬೇಕೆಂದು ವಿರೋಧ ಮಾಡುತ್ತಿದ್ದಾರೆ ಎಂದು ಹರಿಹಾಯ್ದರು.

ಈ ಹಿಂದೆ ಸಾಹಿತಿ ಕೆ.ಎಸ್. ನಿಸಾರ್ ಅಹಮ್ಮದ್ ಅವರು ದಸರಾ ಉದ್ಘಾಟನೆ ಮಾಡಿದ್ದಾರೆ. ಅಲ್ಲದೇ ಮಹಾರಾಜರ ಕಾಲದಲ್ಲಿ ಹೈದರಾಲಿ, ಟಿಪ್ಪು ಸುಲ್ತಾನ್​ ದಸರಾವನ್ನು ಆಚರಣೆ ಮಾಡುತ್ತಿದ್ದರು. ನಂತರ ಮಿರ್ಜಾ ಇಸ್ಮಾಯಿಲ್ ಅವರು ದಿವಾನರಾಗಿದ್ದಾಗ ದಸರಾವನ್ನು ವಿಜೃಂಭಣೆಯಿಂದ ನಡೆಸಿದ್ದಾರೆ.
ಈ ಹಿನ್ನೆಲೆಯಲ್ಲಿ ಈ ಬಾರಿ ಬೂಕರ್​ ಪ್ರಶಸ್ತಿ ವಿಜೇತರಾದ ಸಾಹಿತಿ ಬಾನು ಮುಷ್ತಾಕ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಸಿಎಂ ಸಮರ್ಥಿಸಿಕೊಂಡರು.

- Advertisement - 

ಕನ್ನಡ ಭಾಷೆ ಬಗ್ಗೆ ಅಭಿಮಾನ, ಪ್ರೀತಿ ಇಲ್ಲದೇ ಇದ್ದರೆ ಬಾನು ಮುಷ್ತಾಕ್ ಅವರು ಕನ್ನಡ ಭಾಷೆಯಲ್ಲಿ ಸಾಹಿತ್ಯ ರಚನೆ ಮಾಡುತ್ತಿದ್ದರೆ? ಎಂದು ಪ್ರಶ್ನಿಸಿದ ಸಿಎಂ, ಬಿಜೆಪಿಯವರು ಉದ್ಘಾಟಕರು ದನ ತಿನ್ನುವುದನ್ನು ನೋಡಿದ್ದಾರಾ ಎಂದು ತೀಕ್ಷ್ಣವಾಗಿ ಸಿದ್ದರಾಮಯ್ಯ ಪ್ರಶ್ನಿಸಿದರು.

ಡೋಂಗಿಗಳು:
ಬಿಜೆಪಿ ನಾಯಕರು ರಾಜಕೀಯ ದುರುದ್ದೇಶದಿಂದ ಧರ್ಮಸ್ಥಳ ಪ್ರಕರಣದ ವಿಚಾರವಾಗಿ ರ್‍ಯಾಲಿ ಮಾಡುತ್ತಿದ್ದಾರೆ. ಧರ್ಮಸ್ಥಳ ವಿಚಾರವಾಗಿ ಈಗಾಗಲೇ ಎಸ್ಐಟಿ ತನಿಖೆ ನಡೆಸುತ್ತಿದೆ. ಇದನ್ನು ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಸೇರಿದಂತೆ ಬಿಜೆಪಿ ನಾಯಕರು ಸ್ವಾಗತ ಮಾಡಿದ್ದಾರೆ. ಈ ಹಂತದಲ್ಲಿ ಬಿಜೆಪಿ ನಾಯಕರು ರ್‍ಯಾಲಿ ನಡೆಸುವುದರಲ್ಲಿ ಅರ್ಥವಿದೆಯೇ
? ಎಂದು ಸಿದ್ದರಾಮಯ್ಯ ಕಿಡಿಕಾರಿದರು.

ಬಿಜೆಪಿಯವರು ಡೋಂಗಿಗಳು ತಮಗೆ ಬೇಕಾದ ರೀತಿಯಲ್ಲಿ ಬೇಕಾದ ಕಡೆ ಮಾತನಾಡುತ್ತಾರೆ, ನಡೆದುಕೊಳ್ಳುತ್ತಾರೆ. ರ್‍ಯಾಲಿ ಸೇರಿದಂತೆ ಯಾರು ಏನು ಬೇಕಾದರೂ ಮಾಡಿಕೊಳ್ಳಲಿ, ನಮಗೂ ಅದಕ್ಕೂ ಸಂಬಂಧವಿಲ್ಲ. ಬಿಜೆಪಿಯವರಿಗೆ ಧರ್ಮವು ಗೊತ್ತಿಲ್ಲ, ಜಾತಿಯೂ ಗೊತ್ತಿಲ್ಲ ಎಂದು ಹರಿಹಾಯ್ದರು.

ಧರ್ಮಸ್ಥಳ ವಿಚಾರದಲ್ಲಿ ಎಸ್ಐಟಿ ತನಿಖೆ ನಡೆಯುತ್ತಿದ್ದು ಮಧ್ಯ ಪ್ರವೇಶ ಮಾಡುವುದಿಲ್ಲ. ಧರ್ಮಸ್ಥಳ ಬಗ್ಗೆ ಅನುಮಾನದ ಹುತ್ತ ಇದ್ದು, ಅದನ್ನು ನಿವಾರಿಸಲು ಎಸ್ಐಟಿ ತನಿಖೆ ಮಾಡಿಸಲಾಗುತ್ತಿದೆ. ಇದನ್ನು ಬಿಟ್ಟು ಯಾವುದೇ ಉನ್ನತ ಮಟ್ಟದ ತನಿಖೆಯ ಅಗತ್ಯವಿಲ್ಲ. ಯಾವುದೇ ರೀತಿ ಒತ್ತಡವನ್ನು ಹೇರುವುದಿಲ್ಲ. ತನಿಖೆಗೆ ಯಾವುದೇ ಸಮಯವನ್ನು ಸಹ ನಿಗದಿ ಮಾಡಿಲ್ಲ ಎಂದರು. 

ಸಮರ್ಥನೆ: ಆಸ್ತಿ ನೋಂದಣಿ ಶುಲ್ಕವನ್ನು ಶೇ.1 ರಿಂದ 2ಕ್ಕೆ ಹೆಚ್ಚಳ ಮಾಡಿರುವ ರಾಜ್ಯ ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮರ್ಥಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ ಬೇರೆ ರಾಜ್ಯಗಳಲ್ಲಿ ಈ ತೆರಿಗೆ ಈಗಾಗಲೇ ಇದೆ. ಅದರ ಅನುಸಾರ ಹೆಚ್ಚಳ ಮಾಡಿದ್ದೇವೆ ಎಂದು ಹೇಳಿದರು.

 

 

 

Share This Article
error: Content is protected !!
";