ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಒಂದು ಕಾಲು ಬಿಜೆಪಿಯಲ್ಲಿ ಮತ್ತೊಂದು ಕಾಲು ಕಾಂಗ್ರೆಸ್ ಪಕ್ಷದಲ್ಲಿ ಇಟ್ಟಿದ್ದಾರೆ ಎಂದು ಭಾರತೀಯ ಜನತಾ ಪಕ್ಷದ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಈಗಾಗಲೇ ದೆಹಲಿಯಲ್ಲಿ ಡಿಕೆ ಶಿವಕುಮಾರ್ ಒಂದು ಸುತ್ತಿನ ಚರ್ಚೆ ನಡೆಸಿದ್ದಾರೆ. ಆದರೆ ಅವರಿಗೆ ಶಾಸಕರ ಬೆಂಬಲ ಕಡಿಮೆ ಇದೆ ಎಂಬ ಕಾರಣಕ್ಕೆ ಅದು ಮುಂದುವರಿಯಲಿಲ್ಲ ಎಂದು ಯತ್ನಾಳ್ ತಿಳಿಸಿದ್ದಾರೆ.
ಆದರೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಇದಕ್ಕೆ ತಿರುಗೇಟು ನೀಡಿದ್ದು, ಆ ಸಗಣಿ ಮೇಲೆ ಕಲ್ಲು ಹಾಕಲು ನನಗೆ ಇಷ್ಟವಿಲ್ಲ ಎಂದು ಹೇಳುವ ಮೂಲಕ ಸಗಣಿಗೆ ಹೊಲಿಕೆ ಮಾಡಿದ್ದಾರೆ.
ಈಗಾಗಲೇ ಡಿಕೆ ಶಿವಕುಮಾರ್ ಬಿಜೆಪಿಯಲ್ಲಿ ಒಂದು ಕಾಲು ಇಟ್ಟಾಗಿದೆ. ನಮ್ಮ ಮಹಾಮಹಿಮ ರಾಜ್ಯಾಧ್ಯಕ್ಷರ ಜೊತೆ ದೆಹಲಿಯಲ್ಲಿ ಒಂದು ಸುತ್ತಿನ ಚರ್ಚೆ ನಡೆದಿದೆ. ಸುಮಾರು 60 ರಿಂದ 70 ಕಾಂಗ್ರೆಸ್ ಶಾಸಕರನ್ನು ಕರೆದುಕೊಂಡು ಬಿಜೆಪಿಗೆ ಬಂದು ನಮಸ್ತೇ ಸದಾ ವತ್ಸಲೇ ಎಂದು ಹೇಳುವ ಯೋಜನೆಯನ್ನೂ ಅವರು ಹಾಕಿಕೊಂಡಿದ್ದರು ಎಂದು ಯತ್ನಾಳ್ ಹೇಳಿಕೆ ನೀಡಿದ್ದರು.
ಮುಂದುವರೆದು ಮಾತನಾಡಿದ ಯತ್ನಾಳ್, ಆದರೆ 12 ರಿಂದ 13 ಮಂದಿ ಶಾಸಕರ ಬೆಂಬಲವೂ ಅವರಿಗಿಲ್ಲ, ಎಲ್ಲರೂ ಸಿಎಂ ಸಿದ್ದರಾಮಯ್ಯ ಕಡೆ ಇದ್ದಾರೆ ಎಂಬುದು ಇಂಟಲಿಜೆನ್ಸ್ ಮಾಹಿತಿಯಿಂದ ತಿಳಿದು ಬಂದಿತ್ತು. ಈ ಬಗ್ಗೆ ನಮ್ಮ ಹೈಕಮಾಂಡ್ ನಾಯಕರೇ ಒಬ್ಬರು ನನ್ನ ಬಳಿ ಡಿಕೆ ಶಿವಕುಮಾರ್ ಬಳಿ ಎಷ್ಟು ಕಾಂಗ್ರೆಸ್ ಶಾಸಕರಿದ್ದಾರೆ ಎಂದು ಕೇಳಿದ್ದರು ಎಂದು ತಿಳಿಸಿದ್ದಾರೆ.
ಒಂದು ಹತ್ತು ಮಂದಿ ಇರಬಹುದು. ಬಿಜೆಪಿಗೆ ಬರುತ್ತಾರೆಂದು ಗೊತ್ತಾದರೆ ಅವರು ಕೂಡ ಇರಲಿಕ್ಕಿಲ್ಲ ಎಂದು ಹೇಳಿದ್ದೆ ಎಂದು ಯತ್ನಾಳ್ ಹೇಳಿದ್ದಾರೆ.
ಸಿದ್ದರಾಮಯ್ಯ ಮುಸ್ಲಿಂ ಓಲೈಕೆ ಮಾಡುತ್ತಾರೆ. ಆದರೂ ಒಂದೆರಡು ವರ್ಷ ಅವರೇ ಸರ್ಕಾರ ಮುನ್ನಡೆಸಲಿ. ಡಿಕೆ ಶಿವಕುಮಾರ್ ಮತ್ತು ವಿಜಯೇಂದ್ರ ಇಬ್ಬರು ಭ್ರಷ್ಟರು ಸೇರಿದರೆ ಕರ್ನಾಟಕವನ್ನೇ ಮಾರಾಟ ಮಾಡಿಬಿಟ್ಟಾರು ಎಂದು ಯತ್ನಾಳ್ ವ್ಯಂಗ್ಯವಾಡಿದ್ದಾರೆ.
ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಗೆ ತಿರುಗೇಟು ನೀಡಿರುವ ಡಿಕೆ ಶಿವಕುಮಾರ್, ಸಗಣಿ ಮೇಲೆ ಕಲ್ಲು ಹಾಕಲು ಇಷ್ಟ ಇಲ್ಲ ಎಂದು ಹೇಳಿದ್ದಾರೆ.
ಈ ಕುರಿತು ಬೆಂಗಳೂರಿನಲ್ಲಿ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನೋಡಿ ಆ ಕಸ, ಸಗಣಿ ಮೇಲೆ ಕಲ್ಲು ಹಾಕಲು ನನಗೆ ಇಷ್ಟವಿಲ್ಲ ಎಂದು ಯತ್ನಾಳ್ ಹೇಳಿಕೆಗೆ ಅವರು ಸಗಣಿಗೆ ಹೊಲಿಕೆ ಮಾಡಿದರು.

