ಚಂದ್ರವಳ್ಳಿ ನ್ಯೂಸ್, ಕೂಡ್ಲಿಗಿ:
ತಾಲೂಕಿನ ಕಾನ ಹೊಸಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವಿಜಯನಗರ ಜಿಲ್ಲಾ ಕ್ಷಯ ರೋಗ ನಿರ್ಮೂಲನಾ ಕೇಂದ್ರ ಹಾಗೂ ತಾಲೂಕ್ ಆರೋಗ್ಯ ಅಧಿಕಾರಿಗಳ ಕಚೇರಿ ಸಹಯೋಗದಲ್ಲಿ ಕ್ಷಯ ರೋಗ ನಿರ್ಮೂಲನೆ ಜಾಗೃತಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ವಿಶ್ವನಾಥ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕ್ಷಯ ರೋಗಿಗಳು ನಿರಂತರ 6 ತಿಂಗಳು ಸೂಕ್ತ ಚಿಕಿತ್ಸೆ ಪಡೆದರೆ ರೋಗದಿಂದ ಮುಕ್ತಿ ಹೊಂದಬಹುದು. ನಿಯಮಿತವಾಗಿ ಔಷಧ ತೆಗೆದುಕೊಳ್ಳದಿದ್ದರೆ ಅಡ್ಡ ಪರಿಣಾಮಗಳು ಉಂಟಾಗಬಹುದು.
ಎರಡು ವಾರಕ್ಕೂ ಹೆಚ್ಚು ಕೆಮ್ಮು, ಜ್ವರ, ಶೀತ ಕಂಡು ಬಂದಲ್ಲಿ ಹತ್ತಿರದ ಆಸ್ಪತ್ರೆ ಗಳಿಗೆ ಭೇಟಿ ನೀಡಿ ಕ್ಷಯ ರೋಗ ಪರೀಕ್ಷೆ ಮಾಡಿಸಬೇಕು. ರೋಗವು ಯಾರಿಗೆ ಬೇಕಾದರೂ ಬರಬಹುದು. ಅದರಲ್ಲೂ ಎಚ್‌ಐವಿ ಸೋಂಕಿತರು, ಮಧುಮೇಹ ಪೀಡಿತರು ಹಾಗೂ ಧೂಮಪಾನ ಮಾಡುವವರು ಬಹುಬೇಗ ಸೋಂಕಿಗೆ ಒಳಗಾಗುತ್ತಾರೆ ಎಂದು ವೈದ್ಯರು ಎಚ್ಚರಿಸಿದರು.
ಈ ವೇಳೆ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಕೆ ಜಗದೀಶ್ ಮಾತನಾಡಿ ಕ್ಷಯ ರೋಗಿ ಕೆಮ್ಮಿದಾಗ ಮತ್ತು ಸೀನಿದಾಗ ಹೊರ ಬರುವ ರೋಗಾಣುಗಳು ಆರೋಗ್ಯವಂತ ವ್ಯಕ್ತಿಯ ದೇಹ ಸೇರಿ ಸೋಂಕು ಉಂಟಾಗುತ್ತದೆ. ಸರಿಯಾದ ಸಮಯಕ್ಕೆ ಸೂಕ್ತ ಚಿಕಿತ್ಸೆ ಪಡೆಯುವುದರಿಂದ ರೋಗ ನಿಯಂತ್ರಿಸಬಹುದು ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ತಾಲೂಕ್ ಎಲ್.ಎಚ್.ವಿ.ಎಸ್ ಜಗದೀಶ್, ಜಿಲ್ಲಾ ಮಟ್ಟದ ಎಕ್ಸ್-ರೇ ಸಂಯೋಜಕ ಕೊಟ್ರೇಶ್, ರಾಘವ ರೆಡ್ಡಿ ಎಚ್.ಐ.ಓ, ಸೋಮಶೇಖರ್ ಲ್ಯಾಬ್ ಟೆಕ್, ಸುಧಾ, ಸವಿತಾ, ರೇಖಾ ಪಿ ಎಚ್ ಓ, ರಾಮಲಕ್ಷ್ಮಿ, ಸುರೇಶ್, ರವಿಕುಮಾರ್ ಸೇರಿದಂತೆ ಎನ್ಟಿಇಪಿ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತರು, ಪ್ರಾಥಮಿಕ ಆರೋಗ್ಯ ಕೇಂದ್ರದ ಎಲ್ಲಾ ಸಿಬ್ಬಂದಿಗಳು ಇತರರು ಇದ್ದರು ಎಂದು ಅರುಣ್ ಕುಮಾರ್ ಜುಮ್ಮೋಬನಹಳ್ಳಿ ಮಾಹಿತಿ ನೀಡಿದ್ದಾರೆ.

