ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಎರಡು ಮುಖ್ಯವಾದ ಜಾಗತಿಕ ವಿದ್ಯಮಾನಗಳು……
ಇಸ್ರೇಲ್ ಎಂಬ ದೇಶದ ಅದ್ಭುತ ಸಾಮರ್ಥ್ಯ ಮತ್ತು ಅಮಾನವೀಯ ಕ್ರೌರ್ಯ, ಹಾಗೆಯೇ ಅಮೆರಿಕ ಮತ್ತು ಯುರೋಪಿಯನ್ ಒಕ್ಕೂಟ ಹಾಗೂ ಚೀನಾ ಮತ್ತು ರಷ್ಯಾ ಇವುಗಳ ನಡುವೆ ಯಾರು ಹಿತವರು ಭಾರತಕ್ಕೆ ಎಂಬ ಎರಡು ಬಹುಮುಖ್ಯ ಅಂತಾರಾಷ್ಟ್ರೀಯ ಸುದ್ದಿಗಳ ಸುತ್ತಾ ಒಂದು ಸುತ್ತು…..
ಇಡೀ ವಿಶ್ವದಲ್ಲಿ ಇಸ್ರೇಲ್ ಎಂಬ ಯಹೂದಿ ಸಮುದಾಯದ ದೇಶ ತನ್ನ ಬುದ್ಧಿಶಕ್ತಿ, ದೂರ ದೃಷ್ಟಿ, ಅದ್ಭುತ ಪ್ರಗತಿ, ಬಲಾಢ್ಯ ಸೈನಿಕ ಶಕ್ತಿ, ಆಧುನಿಕ ತಂತ್ರಜ್ಞಾನ ಮುಂತಾದ ವಿಷಯಗಳಲ್ಲಿ ಜಗತ್ತಿಗೆ ಒಂದು ಮಾದರಿಯಾಗಿ ನಿಲ್ಲುತ್ತದೆ. ದೇಶವೆಂದರೆ ಹೀಗಿರಬೇಕು ಎನಿಸುವಷ್ಟು ಇಸ್ರೇಲಿನ ಬಗ್ಗೆ ವಿವಿಧ ಕ್ಷೇತ್ರದಲ್ಲಿ ಸಾಕಷ್ಟು ಒಳ್ಳೆಯ ಮಾಹಿತಿಗಳು ಸಿಗುತ್ತವೆ. ಹಾಗೆಯೇ ಬಹುಶಃ ಜಗತ್ತಿನ ಕೆಲವೇ ಕೆಲವು ಐತಿಹಾಸಿಕ ಹಿಂಸಾತ್ಮಕ ಘಟನೆಗಳನ್ನು ಹೊರತುಪಡಿಸಿದರೆ, ಜರ್ಮನಿಯ ಹಿಟ್ಲರ್ ನಿಂದ ತಮ್ಮ ಸಮುದಾಯಕ್ಕೆ ಆದ ಅಮಾನುಷ ದೌರ್ಜನ್ಯದ ಪ್ರತಿಫಲವೋ ಏನೋ ಇಸ್ರೇಲಿನ ಇತ್ತೀಚಿನ ಕ್ರೌರ್ಯಗಳು ಕೂಡ ಅದೇ ಮಟ್ಟದಲ್ಲಿಯೇ ಇದೆ.
ಸಾಕಷ್ಟು ವರ್ಷಗಳಿಂದ ನಿರಂತರವಾಗಿ ಸಂಘರ್ಷದಲ್ಲಿರುವ ಇಸ್ರೇಲ್ ಪ್ಯಾಲಿಸ್ಟೈನ್ ನಡುವಿನ ಸಂಘರ್ಷ, ಗಾಜಾ ಪಟ್ಟಿಯ ಹಮಾಸ್ ಸೈನಿಕರ ಅತ್ಯಂತ ಭೀಕರ ಇಸ್ರೇಲ್ ಮೇಲಿನ ಭಯೋತ್ಪಾದಕ ದಾಳಿ, ಸಾವಿರದ ಇನ್ನೂರಕ್ಕೂ ಹೆಚ್ಚು ಜನರ ಹತ್ಯೆ, ಗಾಯ ಹಾಗೂ ಒಂದಷ್ಟು ಸೈನಿಕರ ಅಪಹರಣದ ಕಾರಣದಿಂದ ವ್ಯಗ್ರವಾದ ಇಸ್ರೇಲ್ ಯಾವುದೇ ರಕ್ಷಣೆ ಇಲ್ಲದ, ಯಾವುದೇ ಪ್ರತಿರೋಧ ಸಾಮರ್ಥ್ಯವಿಲ್ಲದ ಗಾಜಾಪಟ್ಟಿಯ ಸುಮಾರು 65,000ಕ್ಕೂ ಹೆಚ್ಚು ಜನರನ್ನು ಕೊಂದು ಹಾಕಿದೆ. ಲಕ್ಷಾಂತರ ಜನ ಗಾಯಾಳುವಾಗಿದ್ದಾರೆ ಅಥವಾ ದೇಶ ತೊರೆದಿದ್ದಾರೆ. ಭಯೋತ್ಪಾದಕರು ಅಡಗಿರಬಹುದು ಎಂಬ ಕಾರಣದಿಂದ ಶಾಲೆ, ಆಸ್ಪತ್ರೆ, ನಿರಾಶ್ರಿತರ ಶಿಬಿರಗಳನ್ನು ಉಡಾಯಿಸುತ್ತಲೇ ಇದೆ.
ಎಲ್ಲಕ್ಕೂ ಒಂದು ಮಿತಿ ಇರಬೇಕಾಗುತ್ತದೆ. ಆದರೆ ಎರಡೂ ಕಡೆಯವರು ಮನುಷ್ಯತ್ವಕ್ಕೆ, ನಾಗರಿಕತೆಗೆ ದ್ರೋಹ ಬಗೆದಿದ್ದಾರೆ. ಒಂದು ಕಡೆ ಇಸ್ರೇಲ್ ಕ್ರೌರ್ಯವನ್ನು ಖಂಡಿಸೋಣವೆಂದರೆ, ಅದೇ ಸಂದರ್ಭದಲ್ಲಿ ಇನ್ನೂ ಕೂಡ ಇಸ್ರೇಲ್ ನ 20 ಕ್ಕೂ ಹೆಚ್ಚು ಒತ್ತೆಯಾಳುಗಳನ್ನು ಹಮಾಸ್ ನವರು ಇಟ್ಟುಕೊಂಡಿದ್ದಾರೆ. ಯಾರಿಗೆ ಯಾವ ರೀತಿ ಹೇಳುವುದು, ಟೀಕಿಸುವುದು, ಸಮರ್ಥಿಸುವುದು ಅರ್ಥವಾಗುವುದಿಲ್ಲ.
ಮನುಷ್ಯರ ಜೀವಗಳ ಜೊತೆ ಎರಡೂ ದೇಶಗಳ ಮುಖಂಡರು ಚೆಲ್ಲಾಟವಾಡುತ್ತಿದ್ದಾರೆ. ಇದೇನು ಬಗೆಹರಿಯದ ಅತ್ಯಂತ ಸಂಕೀರ್ಣ ಸಮಸ್ಯೆ ಏನು ಅಲ್ಲ. ಪ್ರಕೃತಿಯ ಮೂಲದಿಂದ ಯೋಚಿಸಿ ಒಂದಷ್ಟು ಕೊಡುಕೊಳ್ಳುವಿಕೆಯ ಮುಖಾಂತರ, ಈಗಿನ ಜಾಗತಿಕ ಪರಿಸ್ಥಿತಿಗೆ ಅನುಗುಣವಾಗಿ ಒಂದು ಸಹಕಾರ ತತ್ವವನ್ನು ರೂಪಿಸಿಕೊಳ್ಳಬಹುದು. ಇಬ್ಬರ ಹಠವೂ ಒಳ್ಳೆಯದಲ್ಲ. ಬದುಕಿಗಾಗಿ ಒಂದಷ್ಟು ಸೋಲುವುದು ಅಥವಾ ಹೊಂದಾಣಿಕೆ ಮಾಡಿಕೊಳ್ಳುವುದು ಅನಿವಾರ್ಯ. ಇಲ್ಲದಿದ್ದರೆ ಇಂದಲ್ಲ ನಾಳೆ ಇಬ್ಬರೂ ಸರ್ವನಾಶವಾಗುವುದು ಖಚಿತ.
ಇಸ್ರೇಲ್ ನ 1200 ಕ್ಕೂ ಹೆಚ್ಚು ಜನರ ಸಾವಾಗಲಿ, 65,000 ಕ್ಕೂ ಹೆಚ್ಚು ಗಾಜಾ ಪಟ್ಟಿಯ ಜನರಾಗಲಿ ಎಲ್ಲರೂ ಮನುಷ್ಯರೇ ಎಂಬ ಪ್ರಜ್ಞೆ ಇಬ್ಬರಿಗೂ ಇಲ್ಲ. ಇಸ್ರೇಲ್ ಒಂದು ರೀತಿಯಲ್ಲಿ ತನ್ನ ರಕ್ಷಣೆಯ ನೆಪದಲ್ಲಿ ಕ್ರೌರ್ಯದ ಪರಾಕಾಷ್ಠೆ ತಲುಪಿದೆ. ಗಾಜಾಪಟ್ಟಿಗೆ ವಿಶ್ವಸಂಸ್ಥೆ ಅಥವಾ ರೆಡ್ ಕ್ರಾಸ್ ಸಂಸ್ಥೆಯ ಅಥವಾ ಇತರ ಯಾವುದೇ ದೇಶಗಳ ಮಾನವೀಯ ನೆರವಿನ ಹಿನ್ನೆಲೆಯಲ್ಲಿ ಕಳುಹಿಸುತ್ತಿರುವ ಅತ್ಯಂತ ಮೂಲಭೂತ ಜೀವನಾವಶ್ಯಕ ವಸ್ತುಗಳನ್ನು ಸಹ ಅದು ಒಳ ಪ್ರವೇಶಿಸಲು ಬಿಡುತ್ತಿಲ್ಲ. ಜನ ನೊಣಗಳಂತೆ ಸಾಯುತ್ತಿದ್ದಾರೆ. ಆದರೂ ವಿಶ್ವ ಕಣ್ಮುಚ್ಚಿ ಕುಳಿತಿದೆ. ಕನಿಷ್ಠ ಹಮಾಸ್ ನವರಾದರೂ
ಸದ್ಯದ ಮಟ್ಟಿಗೆ ಶರಣಾಗತಿ ಘೋಷಿಸಿದರೆ ಉತ್ತಮವೇನೋ. ಆದರೆ ಅಷ್ಟು ಉದಾರತೆ ಇಬ್ಬರಲ್ಲೂ ಕಂಡು ಬರುತ್ತಿಲ್ಲ. ನೋಡೋಣ ಮಾನವ ಜನಾಂಗದ ಇತಿಹಾಸ ಯಾವ ರೀತಿ ರೂಪುಗೊಳ್ಳುತ್ತದೆ ಎಂದು ಮುಂದಿನ ದಿನಗಳು ನಿರ್ಧರಿಸುತ್ತದೆ. ನಾವುಗಳು ನಮ್ಮ ಅಭಿಪ್ರಾಯ ವ್ಯಕ್ತಪಡಿಸಬಹುದಷ್ಟೇ. ಈಗ ಗಾಜಾ ಪಟ್ಟಿ ಇಸ್ರೇಲ್ ನಿಯಂತ್ರಣದಲ್ಲಿ. ಮುಂದೆ……
ಇನ್ನೊಂದು ಜಾಗತಿಕವಾಗಿ ವಿಶೇಷ ಬೆಳವಣಿಗೆ ಎಂದರೆ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ತೆರಿಗೆ ದಾಳಿ. ಭಾರತದ ಮೇಲೆ ಮುನಿಸಿಕೊಂಡಿರುವ ಡೊನಾಲ್ಡ್ ಟ್ರಂಪ್ ಶೇಕಡ 50 ರಷ್ಟು ತೆರಿಗೆ ಭಾರ ಹೇರಿದ್ದಾರೆ. ಜೊತೆಗೆ ಭಾರತದ ಮೇಲೆ ಉಕ್ರೇನ್ ವಿರುದ್ಧ ರಷ್ಯಾಗೆ ಅಲ್ಲಿನ ತೈಲವನ್ನು ಕಡಿಮೆ ಬೆಲೆಗೆ ಆಮದು ಮಾಡಿಕೊಳ್ಳುವ ಮುಖಾಂತರ ಆ ಯುದ್ಧಕ್ಕೆ ಆರ್ಥಿಕ ಸಹಾಯವನ್ನು ಮಾಡುತ್ತಿದೆ ಎಂಬ ಬಹುದೊಡ್ಡ ಆರೋಪವನ್ನು ಮಾಡುತ್ತಿದ್ದಾರೆ.
ಭಾರತ ಮತ್ತು ಅಮೆರಿಕ ನಡುವೆ ಎಂದೂ ಇಲ್ಲದಷ್ಟು ಸಂಘರ್ಷಮಯ ವಾತಾವರಣ ನಿರ್ಮಾಣವಾಗಿದೆ. ಜೊತೆಗೆ ಭಾರತದ ನೆರೆಯ ರಾಷ್ಟ್ರ ಪಾಕಿಸ್ತಾನದ ಜೊತೆ ಅಮೆರಿಕ ಬಾಂಧವ್ಯವನ್ನು ವೃದ್ಧಿಸಿಕೊಂಡಿದ್ದು ಅಲ್ಲಿನ ಗಣಿ ಉದ್ಯಮವನ್ನು ನಿಯಂತ್ರಣಕ್ಕೆ ಪಡೆದು ಆರ್ಥಿಕವಾಗಿ ಪ್ರಬಲಗೊಳಿಸುವ ನಿಟ್ಟಿನಲ್ಲಿ ಕಾರ್ಯಯೋಜನೆಯನ್ನು ರೂಪಿಸುತ್ತಿದೆ.
ಇದೇ ಸಂದರ್ಭದಲ್ಲಿ ಭಾರತ ಇನ್ನೊಂದು ನೆರೆಯ ರಾಷ್ಟ್ರ ಚೀನಾ ಮತ್ತು ಭಾರತದ ಪಾರಂಪರಿಕ ಜೊತೆಗಾರ ರಷ್ಯಾದ ಜೊತೆ ತನ್ನ ಸ್ನೇಹ ವಲಯವನ್ನು ವಿಸ್ತರಿಸುತ್ತಿದೆ. ಒಂದು ರೀತಿ ಅಮೆರಿಕಾ ಮತ್ತು ಯುರೋಪಿಯನ್ ಒಕ್ಕೂಟದ ದೇಶಗಳಿಗೆ ಸೆಡ್ಡು ಹೊಡೆದು ರಷ್ಯಾ ಮತ್ತು ಚೀನಾ ಜೊತೆ ಸಂಬಂಧ ಸುಧಾರಿಸುವ ರೀತಿಯಲ್ಲಿ ಅದರ ವಿದೇಶಾಂಗ ನೀತಿ ಕಾಣುತ್ತಿದೆ.
ಇದು ಸರಿಯಾದ ನಿಲುವೇ ಎಂದರೆ ವಾಸ್ತವ ನೆಲೆಯಲ್ಲಿ ಅಷ್ಟೇನೂ ಉತ್ತಮ ನಡೆಯಲ್ಲ. ಭಾರತ ನಿಜಕ್ಕೂ ಸಹಜವಾಗಿ, ಶೈಕ್ಷಣಿಕವಾಗಿ, ಸಾಂಸ್ಕೃತಿಕವಾಗಿ, ತಾಂತ್ರಿಕವಾಗಿ ಹೆಚ್ಚು ದೃಷ್ಟಿ ಹರಿಸಬೇಕಿರುವುದು ಅಮೆರಿಕ ಮತ್ತು ಯುರೋಪ್ ಒಕ್ಕೂಟಗಳ ಜೊತೆ. ಏಕೆಂದರೆ ಯುರೋಪ್ ಮತ್ತು ಅಮೆರಿಕ ಇದ್ದುದರಲ್ಲಿ ವಿಶ್ವದ ಸ್ವಾತಂತ್ರ್ಯ, ಸಮಾನತೆ, ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ ಒಂದಷ್ಟು ಕೆಲಸ ಮಾಡುತ್ತದೆ. ಹೌದು, ಅಮೆರಿಕ ಕೆಲವೊಮ್ಮೆ ದೊಡ್ಡಣ್ಣನ ರೀತಿ ವರ್ತಿಸುವುದಲ್ಲದೆ ಒಬ್ಬರ ವಿರುದ್ಧ ಇನ್ನೊಬ್ಬರನ್ನು ಎತ್ತಿಕಟ್ಟಿ ಯುದ್ಧ ಮಾಡಿಸುವ, ಶಸ್ತ್ರಾಸ್ತ್ರ ಮಾರಾಟ ಮಾಡುವ ದಗಲಬಾಜಿತನವನ್ನು ಮಾಡುತ್ತದೆ. ಆ ಎಲ್ಲದರ ನಡುವೆಯೂ ಮೂಲತಃ ಅಮೆರಿಕ ವಲಸಿಗರ ರಾಷ್ಟ್ರವಾಗಿರುವುದರಿಂದ ಅತಿಯಾದ ಮೂಲಭೂತವಾದದಿಂದ ಹೊರಗಿದೆ. ಟ್ರಂಪ್ ಎಂಬ ತಿಕ್ಕಲನ ವಿಷಯದಲ್ಲಿ ಅಲ್ಲಿನ ಜನ ಎಡವಿದ್ದರೂ ಈಗಲೂ ಅಮೆರಿಕ ಪ್ರಜಾಪ್ರಭುತ್ವ ದೇಶಗಳ ಒಂದು ಮಾದರಿ ರಾಷ್ಟ್ರವಾಗಿದೆ.
ಇತ್ತ ಕಡೆ ಚೀನಾ ಮತ್ತು ರಷ್ಯಾ ಕೆಲವು ದೃಷ್ಟಿಕೋನದಲ್ಲಿ ಭಾರತದ ನೆಲದ ವಾಸ್ತವ ಚಿಂತನೆಗಳಿಗೆ ಸ್ವಲ್ಪ ವ್ಯತಿರಿಕ್ತವಾಗಿ ನಡೆದುಕೊಳ್ಳುತ್ತವೆ. ಅಲ್ಲಿಯ ಅಭಿವ್ಯಕ್ತಿ ಸ್ವಾತಂತ್ರ್ಯ, ರಾಜಕೀಯ ವಾತಾವರಣ ಉತ್ತಮವಾಗಿಲ್ಲ. ಇಡೀ ವಿಶ್ವ ಅಥವಾ ಮಾನವ ಜನಾಂಗ ತನ್ನ ಬೌದ್ಧಿಕ ಸ್ವಾತಂತ್ರ್ಯವನ್ನು ಉಳಿಸಿಕೊಂಡು ಬದುಕಬೇಕೆ ಹೊರತು ಅದೊಂದು ಹೊಟ್ಟೆಪಾಡಿನ ಜೀವನವಾಗಬಾರದು. ನಮ್ಮ ಮೆದುಳಿನ ಗ್ರಹಿಕೆಯ ಸ್ವಾತಂತ್ರ್ಯಕ್ಕೆ ಬೆಲೆ ಇರಬೇಕಾಗುತ್ತದೆ. ಅದಿಲ್ಲದೆ ನಮ್ಮ ಜೀವನದ 70/80 ವರ್ಷಗಳ ಆಯಸ್ಸು ವ್ಯರ್ಥವಾಗುತ್ತದೆ.
ಆದ್ದರಿಂದ ಭಾರತ ಮೂಲಭೂತವಾಗಿ ಸ್ವಾತಂತ್ರ್ಯದ ಪ್ರಾರಂಭ ಕಾಲದಲ್ಲಿ ಅಳವಡಿಸಿಕೊಂಡ ಅಲಿಪ್ತ ನೀತಿ ಎಲ್ಲಾ ಕಾಲಕ್ಕೂ ಭಾರತದ ಸರ್ವಾಂಗೀಣ ಹಿತದೃಷ್ಟಿಯಿಂದ ಅತ್ಯುತ್ತಮವಾದದ್ದು. ಸುಮ್ಮನೆ ವ್ಯಾವಹಾರಿಕವಾಗಿ ನಮಗೆ ತಾತ್ಕಾಲಿಕ ಅನುಕೂಲವಾಗುವಂತಿದೆ ಎಂಬ ಕಾರಣದಿಂದ ಯಾರದೋ ಮೇಲಿನ ದ್ವೇಷದಿಂದ, ಅಸೂಯೆಯಿಂದ ಎಂದಿಗೂ ನಮ್ಮ ವಿದೇಶಾಂಗ ನೀತಿಯಲ್ಲಿ ಬದಲಾವಣೆ ಮಾಡಿಕೊಳ್ಳಬಾರದು.
ರಾಜಕಾರಣಿಗಳಂತೆ ಅಯಾರಾಂ ಗಯಾರಾಂ ಅಂದರೆ ಆ ಕಡೆಯಿಂದ ಈ ಕಡೆಗೆ, ಈ ಕಡೆಯಿಂದ ಆ ಕಡೆಗೆ ಪಕ್ಷಾಂತರ ಮಾಡುತ್ತಿದ್ದರೆ ಖಂಡಿತವಾಗಲೂ ಭವಿಷ್ಯದಲ್ಲಿ ಭಾರತಕ್ಕೆ ಅಪಾಯಕಾರಿ ಮತ್ತು ಆಘಾತಕಾರಿ ಪರಿಣಾಮ ಆಗಬಹುದು. ನಮ್ಮ ಮೂಲ ಗುಣವೇ ಪ್ರಜಾಪ್ರಭುತ್ವ, ಸ್ವಾತಂತ್ರ್ಯ ಮತ್ತು ಸಮಾನತೆ. ಆ ಮಣ್ಣಿನ ಗುಣವನ್ನು ಎಲ್ಲಾ ಕಾಲಕ್ಕೂ ಎತ್ತಿ ಹಿಡಿಯಬೇಕಾದದ್ದು ಭಾರತದ ನಾಯಕತ್ವದ ಮೊದಲ ಗುರಿಯಾಗಿರಬೇಕು.
ವ್ಯವಹಾರಗಳು ಇದ್ದೇ ಇರುತ್ತವೆ. ಇಂದು ಒಂದು ರೀತಿಯ ವ್ಯವಹಾರ ಮುನ್ನಲೆಗೆ ಬಂದರೆ ಮತ್ತೊಮ್ಮೆ ಇನ್ನೊಂದು ರೀತಿಯ ವ್ಯವಹಾರ ಮುನ್ನಲೆಗೆ ಬರುತ್ತದೆ. ಆ ಸಂದರ್ಭದಲ್ಲಿ ನಮ್ಮ ನಿಯತ್ತನ್ನು ಬಿಡಬಾರದು. ನಮ್ಮ ಕೆಲವು ಮಾಧ್ಯಮಗಳು ಹೇಳುವಂತೆ ಅಮೆರಿಕಾಗೆ ಸೆಡ್ಡು ಹೊಡೆಯಬೇಕು ಎಂಬುದು ಉತ್ತಮ ವಿಮರ್ಶೆಯಲ್ಲ. ಕೇವಲ ಭಾವನಾತ್ಮಕ ಮತ್ತು ದೂರದೃಷ್ಟಿ ಇಲ್ಲದ ಬೇಜವಾಬ್ದಾರಿ ಹೇಳಿಕೆಗಳು. ಏಕೆಂದರೆ ಇದರಿಂದಾಗಿ ಭಾರತಕ್ಕೆ ಖಂಡಿತವಾಗಲೂ ಬಹುದೊಡ್ಡ ಹೊಡೆತ ಬೀಳುತ್ತದೆ. ಇದು ಅನಾವಶ್ಯಕ ರಿಸ್ಕ್. ಹಿಂದಿನ ಹಸಿರು ಕ್ರಾಂತಿಯ ಯಶಸ್ಸು ಸದಾ ಸಿಗುವುದಿಲ್ಲ.
ಇವತ್ತು ಟ್ರಂಪ್ ಮಾನಸಿಕ ನಿಯಂತ್ರಣ ಕಳೆದುಕೊಂಡಂತೆ ವರ್ತಿಸುತ್ತಿರಬಹುದು. ಆದರೆ ಅದು ತಾತ್ಕಾಲಿಕ. ದೀರ್ಘಕಾಲದಲ್ಲಿ ನಮಗೆ ಟ್ರಂಪ್ ಎಂಬ ವ್ಯಕ್ತಿಗಿಂತ ಅಮೆರಿಕ ಮತ್ತು ಅಲ್ಲಿನ ಪ್ರಜೆಗಳ ಒಡನಾಟ ಮುಖ್ಯವಾಗಬೇಕು. ಅದನ್ನು ವಿದೇಶಾಂಗ ವ್ಯವಹಾರಗಳ ಇಲಾಖೆ ಸೂಕ್ಷ್ಮವಾಗಿ ಗಮನಿಸಿ ಅಮೇರಿಕಾದೊಂದಿಗೆ ಉದ್ದೇಶಪೂರ್ವಕ ದ್ವಿಪಕ್ಷೀಯ ಮಾತುಕತೆ ಮಾಡುವುದು ಹೆಚ್ಚು ಅರ್ಥಪೂರ್ಣವೆನಿಸುತ್ತದೆ. ಅದಕ್ಕೆ ಪರ್ಯಾಯವಾಗಿ ಚೀನಾ ಮತ್ತು ರಷ್ಯಾದೊಂದಿಗಿನ ದ್ವೇಷದ ರೀತಿಯ ಒಕ್ಕೂಟ ತಪ್ಪು ನಡೆ ಆಗಬಹುದು. ಅದರೊಂದಿಗೆ ಮತ್ತು ಎಲ್ಲರೊಂದಿಗೆ ಎಂದಿನ ಅಲಿಪ್ತ ವಿದೇಶಾಂಗ ನೀತಿಯೇ ಉತ್ತಮ…….
ಲೇಖನ: ವಿವೇಕಾನಂದ. ಎಚ್. ಕೆ. 9663750451

