ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಎ1 ಆರೋಪಿ ಪವಿತ್ರಾ ಗೌಡ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು 57ನೇ ಸೆಷನ್ಸ್ ನ್ಯಾಯಾಲಯ ವಜಾಗೊಳಿಸಿ ಆದೇಶಿಸಿದೆ.
ಮಹಿಳೆ ಹಾಗೂ ಸಿಂಗಲ್ ಪೇರೆಂಟ್ ಆಗಿರುವುದರಿಂದ ಮಗಳ ಆರೈಕೆ ಮಾಡಬೇಕಿದೆ ಎಂಬ ಕಾರಣ ನೀಡಿ ಪವಿತ್ರಾ ಗೌಡ ಸೆಷನ್ಸ್ ನ್ಯಾಯಾಲಯಕ್ಕೆ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು.
ಪ್ರಮುಖ ಆರೋಪಿ ಪವಿತ್ರಾ ಗೌಡ ಅವರ ಮನವಿಯನ್ನ ಪರಿಗಣಿಸದ ನ್ಯಾಯಾಲಯ ಜಾಮೀನು ಅರ್ಜಿ ವಜಾ ಮಾಡಿ ಆದೇಶಿಸಿದೆ.
ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಪವಿತ್ರಾ ಗೌಡ, ದರ್ಶನ್ ಸೇರಿದಂತೆ 7 ಆರೋಪಿಗಳ ಜಾಮೀನನ್ನ ಆಗಸ್ಟ್-14ರಂದು ಸುಪ್ರೀಂ ಕೋರ್ಟ್ ರದ್ದುಪಡಿಸಿತ್ತು. ಸದ್ಯ ಏಳು ಜನ ಆರೋಪಿಗಳು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ.
ಆದೇಶ ಕಾಯ್ದಿರಿಸಿದ್ದ ನ್ಯಾಯಾಲಯ:
ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಆರೋಪಿಗಳನ್ನು ರಾಜ್ಯದ ಇತರ ಜೈಲುಗಳಿಗೆ ಸ್ಥಳಾಂತರಿಸುವ ಸಂಬಂಧ ವಿಚಾರಣೆ ನಡೆಸಿದ ಸಿವಿಲ್ ಹಾಗೂ ಸೆಷನ್ ನ್ಯಾಯಾಲಯವು ಆದೇಶವನ್ನ ಸೆ.2ಕ್ಕೆ ಕಾಯ್ದಿರಿಸಿತ್ತು.
ಕೊಲೆ ಪ್ರಕರಣದ ಆರೋಪಿಗಳಿಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ನೀಡಿದ ಆರೋಪದಡಿ ಸಂಬಂಧಪಟ್ಟ ಜೈಲಿನ ಸಿಬ್ಬಂದಿಯನ್ನು ಅಮಾನತು ಮಾಡಲಾಗಿತ್ತು.
ಈ ಬೆಳವಣಿಗೆ ಬಳಿಕ ಆರೋಪಿಗಳನ್ನ ಬೇರೆ ಬೇರೆ ಜೈಲುಗಳಿಗೆ ಶಿಪ್ಟ್ ಮಾಡಲಾಗಿತ್ತು. ಇದೀಗ ಮತ್ತೆ ದರ್ಶನ್, ನಾಗರಾಜ್, ಪ್ರದುಷ್, ಜಗದೀಶ್ ಹಾಗೂ ಲಕ್ಷ್ಮಣ್ ಅವರನ್ನ ಬೇರೆ ಬೇರೆ ಕಾರಾಗೃಹಗಳಿಗೆ ವರ್ಗಾವಣೆ ಮಾಡಬೇಕೆಂದು ಸರ್ಕಾರದ ಪರ ವಕೀಲರು ವಾದ ಮಂಡಿಸಿದ್ದರು.
ಇದಕ್ಕೆ ದರ್ಶನ್ ಪರ ವಕೀಲರು ಮಂಗಳವಾರ ಆಕ್ಷೇಪಣೆ ಸಲ್ಲಿಸಿದ್ದರು. ಇದೀಗ ಪ್ರಕರಣದ ವಿಚಾರಣೆ ಶೀಘ್ರದಲ್ಲೇ ಪ್ರಾರಂಭವಾಗಲಿದೆ. ಪ್ರತಿ ಬಾರಿ ವಿಚಾರಣೆಗೆ ಹಾಜರುಪಡಿಸಲು ಕಷ್ಟವಾಗಲಿದೆ. ಅಲ್ಲದೇ ದರ್ಶನ್ ಅವರ ತಾಯಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಬಳ್ಳಾರಿಗೆ ಹೋಗಿ ಮಗನನ್ನು ನೋಡಲು ಕಷ್ಟ. ಜೊತೆಗೆ ವಕೀಲರು ಕೂಡ ಅಲ್ಲಿಗೆ ಹೋಗಲು ಕಷ್ಟವಾಗುತ್ತದೆ ಎಂದು ಪ್ರತಿವಾದ ಮಂಡಿಸಿದ್ದರು. ಇದರ ಜೊತೆಗೆ ಜೈಲಿನಲ್ಲಿರುವ ನಟ ದರ್ಶನ್ಗೆ ಬೆಡ್ ಶಿಟ್, ತಲೆದಿಂಬು ನೀಡಬೇಕೆಂದು ವಕೀಲರು ನ್ಯಾಯಪೀಠಕ್ಕೆ ಮನವಿ ಮಾಡಿ ಕೋರಿಕೊಂಡಿದ್ದರು.

