ಜಾತಿ ಗಣತಿಯಲ್ಲಿ ಕಾಡುಗೊಲ್ಲ ಎಂದು ನಮೂದಿಸಿ :ಪಿಆರ್. ದಾಸ್

News Desk

ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ರಾಜ್ಯ ಸರ್ಕಾರ ನಡೆಸುತ್ತಿರುವ ಜಾತಿಗಣತಿ ಸರ್ವೇ ಕಾರ್ಯಯಲ್ಲಿ ಜಾತಿ ಕಾಲಂ ನಲ್ಲಿ ಕಾಡುಗೊಲ್ಲ  ನಮೂದಿಸಿ ಎಂದು ತಾಲೂಕು ಕಾಡುಗೊಲ್ಲ ಸಂಘದ ಅಧ್ಯಕ್ಷ ಪಿಆರ್. ದಾಸ್ ತಿಳಿಸಿದರು.
ನಗರದ ತಾಲೂಕು ಕಚೇರಿ ಸಮೀಪ ಕಾಡುಗೊಲ್ಲ ಸಂಘದ ಕಛೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.

ರಾಜ್ಯದಲ್ಲಿ ಜಾತಿಗಣತಿ ಸರ್ವೇ ಕಾರ್ಯ ಆರಂಭವಾಗಿದ್ದು, ಯಾವುದೇ ಕಾರಣಕ್ಕೂ, ಯಾರ ಒತ್ತಡಕ್ಕೆ ಮಣಿಯದೇ ಯಾದವ, ಗೊಲ್ಲ ಎಂದು ನಮೂದಿಸಬಾರದು ಕಾಲಂ ನಂಬರ್ 541ರ ಮುಂದೆ ಕಾಡುಗೊಲ್ಲ ಎಂದು ನಮೂದಿಸಿ ಸಮುದಾಯದ ಅಭಿವೃದ್ಧಿಗೆ ಶ್ರಮಿಸಬೇಕು. ಕಾಡುಗೊಲ್ಲ ಎಂದು ನಮೂದಿಸಿದಾಗ ಮಾತ್ರ ಅನೇಕ ಸರ್ಕಾರದ ಸೌಲಭ್ಯಗಳನ್ನು ಪಡೆಯಬಹುದು ಎಂದರು.

- Advertisement - 

 ಈಗಾಗಲೇ ತಾಲ್ಲೂಕಿನಲ್ಲಿ ಕಾಡುಗೊಲ್ಲ ಜಾತಿ ಪ್ರಮಾಣ ಪತ್ರ ಕೊಡುತ್ತಿದ್ದು,  ಕಾಡುಗೊಲ್ಲ ಅಭಿವೃದ್ಧಿ ನಿಗಮದಿಂದ ಸವಲತ್ತುಗಳನ್ನು ಪಡೆಯಲು ಫಲಾನುಭವಿಗಳು ಅರ್ಜಿ ಸಲ್ಲಿಸಿದ್ದಾರೆ. ನಿಗಮದಿಂದ ಆಯ್ಕೆಯಾದ ಫಲಾನುಭವಿಗಳಿಗೆ ಗಂಗಾ ಕಲ್ಯಾಣ ಯೋಜನೆ, ಮನೆ, ನೇರಸಾಲ, ಶಿಕ್ಷಣ ಸಾಲ, ಸ್ವಾವಲಂಬಿ ಯೋಜನೆ, ಸಾರಥಿ ಇನ್ನೀತರ ಯೋಜನೆಗಳು ದೊರೆಯಲಿವೆ.

ತಮ್ಮ ತಮ್ಮ ಮನೆಗಳಿಗೆ ಸರ್ವೇ ಬಂದಾಗ ಗೊಲ್ಲ, ಯಾದವ ಪದಗಳನ್ನು ಬಳಸದೆ ಕಾಡುಗೊಲ್ಲ ಎಂದೇ ಬರೆಸಬೇಕು ಈ ಬಗ್ಗೆ ವಿದ್ಯಾವಂತ ಕಾಡುಗೋಲ್ಲರು  ಎಚ್ಚರ ವಹಿಸಬೇಕು ಎಂದು ತಿಳಿಸಿದರು.

- Advertisement - 

 ನಗರಸಭೆ ಸದಸ್ಯ ಚಿತ್ರಜಿತ್ ಯಾದವ್ ಮಾತನಾಡಿ 2014ರಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಕಾಡುಗೊಲ್ಲರ ಬಗ್ಗೆ ಕುಲಶಾಸ್ತ್ರ ಅಧ್ಯಯನ ನಡೆಸಿತ್ತು. ಅದರಂತೆ ಚಿತ್ರದುರ್ಗ, ತುಮಕೂರು, ಹಾಸನ, ದಾವಣಗೆರೆ, ಕೂಡ್ಲಿಗಿ, ಸೊಂಡೂರು, ರಾಮನಗರ ಹಾಗೂ ಬೆಂಗಳೂರು ಗ್ರಾಮಾಂತರ ಸೇರಿದಂತೆ ರಾಜ್ಯದಲ್ಲಿರುವ ಕಾಡುಗೊಲ್ಲರನ್ನು ಗುರುತಿಸಿ ಪ್ರತ್ಯೇಕ ಕಾಡುಗೊಲ್ಲ ಜಾತಿ ಎಂದು ಗುರುತಿಸಿ ಜಾತಿ ಪಟ್ಟಿ ನೀಡಿದೆ.

ಜೊತೆಗೆ ಕಾಡುಗೊಲ್ಲರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಕಾಣದ ಕೆಲವು ಕಿಡಿಗೇಡಿಗಳು ಕಾಡುಗೊಲ್ಲರಲ್ಲಿ ದ್ವಂದ್ವ ಮೂಡಿಸುತ್ತಿದ್ದಾರೆ. ಇದಕ್ಕೆ ಯಾರೂ ಸಹ ಕಿವಿಗೊಡಬಾರದು. ಶಾಲಾ ದಾಖಲಾತಿಯಲ್ಲಿ ಕಾಡುಗೊಲ್ಲ ಎಂದು ನಮೂದಿಸಿ, ನಮ್ಮ ಹಕ್ಕು ಪಡೆಯೋಣವೆಂದರು.

ರಾಜ್ಯ ಸರ್ಕಾರ ಡಿ. ದೇವರಾಜ ಅರಸು ಸಂಶೋಧನಾ ಸಂಸ್ಥೆಯ ಪ್ರಾಯೋಜಕದಲ್ಲಿ ಮಹಾರಾಜ ಕಾಲೇಜಿನ ಸಮಾಜಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಪ್ರೊ. ರೇಖಾ ಕೆ. ಜಾಧವ್ ಅವರ ನೇತೃತ್ವದಲ್ಲಿ ಗೋಪಾಲ ಸಮಾಜದ ಕುಲಶಾಸ್ತ್ರ ಅಧ್ಯಯನ ಆರಂಭವಾಗಿದೆ.

ಇದರಲ್ಲಿ ಚಿತ್ರದುರ್ಗ ತುಮಕೂರು ಗೋಪಾಲಕರು ಇದ್ದಾರೆಂದು ತೋರಿಸಿದ್ದಾರೆ. ಆದರೆ ಇಲ್ಲಿ ಯಾರು ಕೂಡ ಗೋಪಾಲಕರು ಇರುವುದಿಲ್ಲ ಇಲ್ಲಿರುವುದು ಕಾಡುಗೊಲ್ಲರಷ್ಟೇ.  ನಾವು ಗೋಪಾಲ ಅಧ್ಯಯನ ಮಾಡಲು ಸರ್ವೇಗೆ ಬಂದಿದ್ದೇವೆ ಎಂದಾಗ ಕಾಡುಗೊಲ್ಲರು ತಿರಸ್ಕರಿಸಬೇಕು ಎಂದು ತಿಳಿಸಿದರು.

 ಸಂಘದ ಗೌರವಾಧ್ಯಕ್ಷ ಆಲಮರದಹಟ್ಟಿ ರಂಗಯ್ಯ ಮಾತನಾಡಿ ಬುಡಕಟ್ಟು ಕಾಡುಗೊಲ್ಲ ಸಮುದಾಯವರು ಕಾಡುಗೊಲ್ಲ ಎಂದಾಗ ಮಾತ್ರ ನಮಗೆ ಮೀಸಲಾತಿ ಪಡೆಯಲು ಸಹಾಯವಾಗುತ್ತದೆ. ನಮ್ಮ ಸಮುದಾಯದ ಜನಸಂಖ್ಯೆ ತೋರಿಸಲು ಕಾಡುಗೊಲ್ಲ ಎಂದು ಬರೆಸಬೇಕು ಎಂದರು.

ನಗರಸಭೆ ಸದಸ್ಯೆ ಶಿವರಂಜನಿ ಯಾದವ್ ಮಾತನಾಡಿ ಲೋಕಸಭಾ ಚುನಾವಣೆಯಲ್ಲಿ  ಕಾಡುಗೊಲ್ಲರಿಗೆ ಎಸ್ಟಿ ಸದಸ್ಯತ್ವ ನೀಡುತ್ತೇವೆ ಎಂದು ಮತ ಹಾಕಿಸಿಕೊಂಡ ಕೇಂದ್ರ ಸಮ್ಮಿಶ್ರ ಸರ್ಕಾರ ನುಡಿದಂತೆ ನಡೆದುಕೊಳ್ಳಬೇಕು.

ಕೂಡಲೇ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ, ಕೇಂದ್ರ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ, ವಿ. ಸೋಮಣ್ಣ, ಸಂಸದ ಗೋವಿಂದ ಕಾರಜೋಳ ಅವರು ಕಾಡುಗೊಲ್ಲರಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹ ಮಾಡಿದರು.

ಈ ಸಂದರ್ಭದಲ್ಲಿ ಸಂಘದ ಕಾರ್ಯದರ್ಶಿ ಮದ್ದನಕುಂಟೆ ಕೆ. ಜನಾರ್ದನ್, ಮುಖಂಡರಾದ ರಂಗಯ್ಯ, ಮುದ್ದನಕುಂಟೆ ಸಿದ್ದೇಶ್, ವಕೀಲ ನಾಗರಾಜ್, ನಾಗೇಂದ್ರ, ವೇದಮೂರ್ತಿ, ಪಾರ್ಥ, ಮಹೇಂದ್ರ, ಕೃಷ್ಣಮೂರ್ತಿ, ತಿಮ್ಮಣ್ಣ, ಗೋವಿಂದಪ್ಪ , ಪ್ರಕಾಶ್, ಮುರಳಿ ಸೇರಿದಂತೆ ಮತ್ತಿತರರು ಇದ್ದರು.

 

Share This Article
error: Content is protected !!
";