ಗುರುಗ್ರಾಮ ಕನ್ನಡ ಸಂಘದ ವತಿಯಿಂದ ಸಾಮೂಹಿಕ ಶ್ರೀ ಗಣೇಶ ಉತ್ಸವ ಆಚರಣೆ

News Desk

ಚಂದ್ರವಳ್ಳಿ ನ್ಯೂಸ್, ರಾಜಸ್ತಾನ:
ರಾಜಸ್ತಾನದ ಗುರುಗಾಂವ್ ಕನ್ನಡ ಸಂಘವು ದಿನಾಂಕ 27/08/2025 ರಿಂದ 31/08/2025ರ ವರೆಗೆ ಶ್ರೀ ರಾಧಾ ಕೃಷ್ಣ ಮಂದಿರ ನ್ಯೂ ಕಾಲೋನಿ, ಗುರುಗ್ರಾಮದಲ್ಲಿ ಆಯೋಜಿಸಿದ್ದ 27ನೇ ವರ್ಷದ ಸಾಮೂಹಿಕ ಶ್ರೀ ಗಣೇಶನ ಉತ್ಸವವನ್ನು ಈ ಬಾರಿ ಐದು ದಿನಗಳು ಅನೇಕ ವಿಶೇಷತೆಗಳೊಂದಿಗೆ ವಿಜೃಂಭಣೆಯಿಂದ ಆಚರಿಸಲಾಯಿತು.

ಪ್ರತಿದಿನ ಗಣೇಶನ ಭಕ್ತಿಗೀತೆಗಳಿಂದ ಕೂಡಿದ ಭಜನೆ ಕಾರ್ಯಕ್ರಮಗಳು, ಸ್ಥಳೀಯ ಕನ್ನಡ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವುಜಗಮಗಿಸುವ ದೀಪದ ಅಲಂಕಾರದಲ್ಲಿ ಸಜ್ಜಾಗಿದ್ದ ಗಣೇಶನ ಮಂಟಪವು ತುಂಬಾ ಆಕರ್ಷಣೀಯವಾಗಿತ್ತು ಮತ್ತು ಪ್ರತಿ ದಿನ ಪೂಜೆಗೆ ಬರುವ ಭಕ್ತಾದಿಗಳಿಗೆ ಅನ್ನ ಸಂತರ್ಪಣೆಯನ್ನು ನಡೆಸಲಾಯಿತು. ಗುರುಗ್ರಾಮ, ದೆಹಲಿ NCR ನಿಂದ ನೂರಾರು ಸಂಖ್ಯೆಯಲ್ಲಿ ಬರುತ್ತಿದ್ದ ಕನ್ನಡಿಗರ ಕುಟುಂಬಗಳಿಂದ ಕರ್ನಾಟಕದಲ್ಲಿಯೇ ಇದ್ದೇವೆ ಎನ್ನುವ ಅನುಭವ ಮೂಡಿಸುವಂತಹ ವಾತಾವರಣ ಸೃಷ್ಟಿಯಾದಂತಿತ್ತು.

- Advertisement - 

ಭಕ್ತಿ ಭಾವದಿಂದ ಪ್ರತಿ ದಿನ ಕನ್ನಡ ಮಹಿಳೆಯರು ಶ್ರೀ ಗಣೇಶನಿಗೆ ಪ್ರಿಯವಾದ ಮೋದಕ, ಲಡ್ಡು, ಹೀಗೆ ಬಗೆ ಬಗೆಯ ಪ್ರಸಾದವನ್ನು ಮನೆಯಿಂದ ಮಾಡಿಕೊಂಡು ಬಂದು ಗಣೇಶನಿಗೆ ಅರ್ಪಿಸಿ ನಂತರ ಭಕ್ತಾದಿಗಳಿಗೆ ಆ ಪ್ರಸಾದವನ್ನು ವಿತರಣೆ ಮಾಡಲಾಗುತ್ತಿತ್ತು.

ಗುರುಗಾಂವ್ ಕನ್ನಡ ಸಂಘದ ಕಾರ್ಯಕರ್ತರು ಹಾಗು ಸ್ವಯಂ ಸೇವಕರು ಮುಂದೆ ಬಂದು ಶ್ರೀ ಗಣೇಶನ ಹಬ್ಬವು ಯಶಸ್ವಿಯಾಗಿ ನಡೆಯಲು ಶ್ರಮಿಸಿದ್ದಾರೆ. ಕನ್ನಡ ಭಕ್ತಾದಿಗಳು ತನು, ಮನ, ಧನದಿಂದ ಈ ಗಣೇಶನ ಉತ್ಸವದ ಯಶಸ್ವಿಗೆ ಕಾರಣಕರ್ತರಾಗಿದ್ದಾರೆ.

- Advertisement - 

ಎಲೆಮರೆ ಕಾಯಿಯಂತೆ ಮರೆಯಲ್ಲಿ ಕುಳಿತು ಪ್ರೋತ್ಸಾಹ ನೀಡುವ ಹಿರಿಯ ಮಾರ್ಗದರ್ಶಿಗಳು, ನಾಲ್ಕು ದಿನ ಅನ್ನಸಂತರ್ಪಣೆಯ ಪ್ರಾಯೋಜಕರು, ಗಣೇಶನ ವಿಸರ್ಜನೆಗೆ ವಾಹನ ನೀಡಿದ ಪ್ರಾಯೋಜಕರು, ಗಣೇಶನ ಮೂರ್ತಿಯ ಪ್ರಾಯೋಜಕರು,

ಕೊನೆಯ ಎರಡು ದಿನ ಅಡುಗೆ ಮಾಡಲು ಮುಂದೆ ಬಂದ ಸಂಘದ ಕಾರ್ಯಕರ್ತರು ಹಾಗು ಸ್ವಯಂ ಸೇವಕರು ಹಾಗು ಅನೇಕ ಭಕ್ತಾದಿಗಳು ಸ್ವಇಚ್ಛೆಯಿಂದ  ತನು, ಮನ ಧನದಿಂದ ಕಾಣಿಕೆ ನೀಡಿದ್ದರಿಂದ  27ನೇ ವರ್ಷದ ಸಾಮೂಹಿಕ ಶ್ರೀ ಗಣೇಶನ ಹಬ್ಬವು ಯಶಸ್ವಿಯಾಗಿ ನಡೆಯಲು ಕಾರಣವಾಯಿತು.
ಲೇಖನ-ತಿಮ್ಮಪ್ಪ ಜಿ.ಆರ್, ಕಾರ್ಯದರ್ಶಿ, ಗುರುಗಾಂವ್ ಕನ್ನಡ ಸಂಘ.

 

Share This Article
error: Content is protected !!
";