ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಯಾರಾದರೂ ಮರಣ ಹೊಂದಿದಾಗ ಕಣ್ಣುಗಳನ್ನ ದಾನ ಮಾಡಿದರೆ ಅಂದರ ಬಾಳಿಗೆ ಬೆಳಕಾಗಬಹುದೆಂದು ಬಸವೇಶ್ವರ ಮೆಡಿಕಲ್ ಕಾಲೇಜಿನ ಡಾ.ಅಶ್ವಿನಿ ತಿಳಿಸಿದರು.
ಎಸ್.ಜೆ.ಎಂ.ಕಾನೂನು ಮಹಾವಿದ್ಯಾಲಯದಲ್ಲಿ ನಡೆದ ನಲವತ್ತನೆ ರಾಷ್ಟ್ರೀಯ ನೇತ್ರದಾನ ಪಾಕ್ಷಿಕ ಸಪ್ತಾಹ ಉದ್ಘಾಟಿಸಿ ಮಾತನಾಡಿದರು.
ಮೃತ ವ್ಯಕ್ತಿಯನ್ನು ಹೂಳುವ ಇಲ್ಲವೇ ಸುಡುವ ಮುನ್ನ ಕಣ್ಣುಗಳನ್ನು ದಾನ ಮಾಡಿದರೆ ಅಂಧರ ಬಾಳಿಗೆ ದೃಷ್ಠಿ ನೀಡಿದಂತಾಗುತ್ತದೆ. ಇದರ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸುವುದು ರಾಷ್ಟ್ರೀಯ ನೇತ್ರದಾನ ಪಾಕ್ಷಿಕದ ಉದ್ದೇಶ ಎಂದರು.
ಬಸವೇಶ್ವರ ಪುನರ್ ಜ್ಯೋತಿ ಐ. ಬ್ಯಾಂಕ್ ಅಧ್ಯಕ್ಷರಾದ ಎಸ್.ವೀರೇಶ್ ಮಾತನಾಡಿ ಕಣ್ಣು ಕಸಿ ಮಾಡುವ ಶಸ್ತ್ರ ಚಿಕಿತ್ಸೆ ಈಗ ಆರಂಭವಾಗಿದೆ. ಇದರ ಪ್ರಯೋಜನ ಪಡೆದುಕೊಂಡು ದೃಷ್ಠಿಹೀನರಿಗೆ ಬೆಳಕು ನೀಡುವಂತೆ ಮನವಿ ಮಾಡಿದರು.
ರೊಟೇರಿಯನ್ ಕನಕರಾಜ್ ಮಾತನಾಡುತ್ತ ರೋಟರಿ ಕ್ಲಬ್ ಚಿತ್ರದುರ್ಗದಲ್ಲಿ ಡಯಾಲಿಸಿಸ್ ಕೇಂದ್ರ ಆರಂಭಿಸಿದ್ದು, ಕಡಿಮೆ ದರದಲ್ಲಿ ಹಾಗೂ ಬಡವರಿಗೆ ಉಚಿತವಾಗಿ ಕಲ್ಪಿಸಲಾಗುವುದು ಎಂದರು.
ರೋಟರಿ ಕ್ಲಬ್ ಸದಸ್ಯ ಎಸ್.ವಿ.ಗುರುಮೂರ್ತಿ ಮಾತನಾಡಿ ರೋಟರಿ ಕ್ಲಬ್ ಅನೇಕ ಉಪಯುಕ್ತ ಕಾರ್ಯಕ್ರಮಗಳನ್ನು ಮೊದಲಿನಿಂದಲೂ ಜನಸಾಮಾನ್ಯರಿಗೆ ನೀಡುತ್ತ ಬರುತ್ತಿದೆ. ಮೃತ ವ್ಯಕ್ತಿಯ ಕಣ್ಣನ್ನು ಅಂಧರಿಗೆ ದಾನ ಮಾಡಿದರೆ ಅದಕ್ಕಿಂತಲೂ ಪುಣ್ಯದ ಕೆಲಸ ಬೇರೊಂದಿಲ್ಲ ಎಂದು ನುಡಿದರು.
ಎಸ್.ಜೆ.ಎಂ. ಕಾನೂನು ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ದಿನೇಶ್ ಮಾತನಾಡುತ್ತ ಕಣ್ಣು ಅತ್ಯಂತ ಪ್ರಮುಖವಾದುದು. ಕಣ್ಣಿನ ತೊಂದರೆಗಳನ್ನು ಆರಂಭದಲ್ಲಿಯೇ ಪತ್ತೆ ಹಚ್ಚಿದರೆ ರಕ್ಷಣೆ ಮಾಡಿಕೊಳ್ಳಬಹುದು. ರಾತ್ರಿ ವೇಳೆ ಸಂಚರಿಸುವಾಗ ವಾಹನಗಳ ಲೈಟ್ ಬೆಳಕು ಕಾಮನಬಿಲ್ಲಿನ ರೀತಿಯಲ್ಲಿ ಗೋಚರಿಸಿದರೆ ಗ್ಲುಕೋಮಾಕ್ಕೆ ಒಳಗಾಗಬಹುದಾದ ಸಂದರ್ಭ ಎಂದು ಎಚ್ಚೆತ್ತುಕೊಂಡು ಕಣ್ಣಿನ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ ಎಂದರು.
ರೋಟರಿ ಕ್ಲಬ್‌ನ ಟಿ.ವೀರಭದ್ರಸ್ವಾಮಿ, ಎಸ್.ಜೆ.ಎಂ.ಕಾನೂನು ಕಾಲೇಜಿನ ಹಿರಿಯ ಪ್ರಾಧ್ಯಾಪಕರಾದ ಸುಮನ ಎಸ್.ಅಂಗಡಿ, ಡಾ.ಮಧುಸೂಧನರೆಡ್ಡಿ, ಗಾಯತ್ರಿ ಶಿವರಾಂ ಇವರುಗಳು ವೇದಿಕೆಯಲ್ಲಿದ್ದರು.
ಉಮಾದೇವಿ ಪ್ರಾರ್ಥಿಸಿದರು. ಹರೀಶ್ ಸ್ವಾಗತಿಸಿದರು. ರೊ.ದಿಲ್‌ಶಾದ್ ಉನ್ನೀಸ ವಂದಿಸಿದರು. ಮಾಳಗಿ ಪ್ರಮೋದ್ ನಿರೂಪಿಸಿದರು.

