ಚಂದ್ರವಳ್ಳಿ ನ್ಯೂಸ್, ಹೊಸಕೋಟೆ (ಬೆಂ.ಗ್ರಾ):
ಕಳ್ಳ ಮಾರ್ಗದಲ್ಲಿ ರಕ್ತಚಂದನ ತುಂಡುಗಳನ್ನು ಕೊರಿಯರ್ ಸರ್ವೀಸ್ ಮೂಲಕ ಕಳುತ್ತಿದ್ದ ಕಳ್ಳರ ತಂಡವನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ರಕ್ತಚಂದನ ತುಂಡುಗಳಿಗೆ ವಿವಿಧ ಕಂಪನಿಗಳ ಪ್ಲಾಸ್ಟಿಕ್ ರ‍್ಯಾಪರ್ ಸುತ್ತಿ ಹರಿಯಾಣ ರಾಜ್ಯಕ್ಕೆ ಕೊರಿಯರ್ ಮೂಲಕ ಕಳ್ಳ ಸಾಗಣೆ ಮಾಡಲು ಯತ್ನಿಸಿದ ಆರೋಪಿಗಳನ್ನು ಬಂಧಿಸುವಲ್ಲಿ ಹೊಸಕೋಟೆ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತದ ಆರೋಪಿಗಳಿಂದ 25 ಲಕ್ಷ ರೂ. ಮೌಲ್ಯದ 1,093 ಕೆ.ಜಿ ರಕ್ತ ಚಂದನದ ತುಂಡುಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದರು.
ಹೊಸಕೋಟೆಯ ಕೊಳತ್ತೂರು ಗ್ರಾಮದ ಡೆಲಿವರಿ ಟ್ರಾನ್ಸ್ಪೋರ್ಟ್ ಕಂಪನಿ ಮೂಲಕ ಸಾಗಾಟ ಮಾಡುವ ಪ್ರಯತ್ನ ನಡೆದಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಡಿವೈಎಸ್ಪಿ ಮಲ್ಲೇಶ್ ಹಾಗೂ ಇನ್ಸ್ಪೆಕ್ಟರ್ ಗೋವಿಂದ್ ನೇತೃತ್ವದ ಪೊಲೀಸ್ ತಂಡ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದೆ.
ರಕ್ತಚಂದನ ಪ್ರಕರಣದ ಆರೋಪಿಗಳಾದ ಏಜಾಜ್ ಷರೀಪ್ (47) ಪಯಾಜ್ ಷರೀಪ್( 47) ಮತ್ತು ಸಾಧಿಕ್ ಖಾನ್(34) ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.
ಹೊಸಕೋಟೆ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ. ಬಾಬಾ ಅವು ಪ್ರಕರಣದ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, ಡೆಲಿವರಿ ಟ್ರಾನ್ಸ್ ಪೋರ್ಟ್ ಕೊರಿಯರ್ ಕಂಪನಿಯಲ್ಲಿ ಅನುಮಾನಾಸ್ಪದ ವಸ್ತುಗಳನ್ನು ಸಾಗಾಟ ಮಾಡಲಾಗುತ್ತಿದೆ ಎಂದು ಪೊಲೀಸರಿಗೆ ಖಚಿತ ಮಾಹಿತಿ ಬಂದಿತ್ತು. ಅದರ ಮೇರೆಗೆ ಪೊಲೀಸರು ದಾಳಿ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಆರೋಪಿಗಳು ಯಾರಿಗೂ ಅನುಮಾನ ಬಾರದಂತೆ ರಕ್ತ ಚಂದನದ ತುಂಡುಗಳಿಗೆ ವಿವಿಧ ಕಂಪನಿಗಳ ಪ್ಲಾಸ್ಟಿಕ್ ರ‍್ಯಾಪರ್ ಸುತ್ತಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಸುಮಾರು 25 ಲಕ್ಷ ರೂ. ಮೌಲ್ಯದ 1,093 ಕೆ.ಜಿ ತೂಕದ 102 ರಕ್ತ
ಚಂದನದ ತುಂಡುಗಳನ್ನು ಜಪ್ತಿ ಮಾಡಲಾಗಿದೆ ಎಂದು ತಿಳಿಸಿದರು. 80ಕ್ಕೂ ಹೆಚ್ಚು ಪ್ರಕರಣ :
ಕರ್ನಾಟಕ, ತಮಿಳುನಾಡು, ಆಂಧ್ರ ಪ್ರದೇಶದಿಂದ ರಕ್ತ ಚಂದನವನ್ನು ಹರಿಯಾಣದ ವಿಷ್ಣುಕುಮಾರ್ ಎಂಬವರಿಗೆ ಪಾರ್ಸಲ್ ಮಾಡಲು ಮುಂದಾಗಿದ್ದ
ಆರೋಪಿಗಳು ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ಬಂಧಿತ ಆರೋಪಿಗಳ ವಿರುದ್ದ ಈಗಾಗಲೇ ಆಂಧ್ರ ಪ್ರದೇಶದಲ್ಲಿ 80ಕ್ಕೂ ಹೆಚ್ಚು ಪ್ರಕರಣಗಳಿವೆ ಎಂದು ಎಸ್ಪಿ ಮಾಹಿತಿ ನೀಡಿದರು.
ಹೊಸ ತಂತ್ರವಾಗಿ ಪಾರ್ಸಲ್ ಮೂಲಕ ಕಳ್ಳ ಸಾಗಾಟಕ್ಕೆ ಯತ್ನಿಸಿ ಸಿಕ್ಕಿಬಿದ್ದಿದ್ದಾರೆ. ಪ್ರಕರಣದಲ್ಲಿ ಮತ್ತಷ್ಟು ಆರೋಪಿಗಳು ಭಾಗಿಯಾಗಿರುವ ಸಾಧ್ಯತೆ ಇದೆ. ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಎಸ್ಪಿ ಸಿ.ಕೆ. ಬಾಬಾ ಮಾಹಿತಿ ನೀಡಿದರು.

