“ಗುರು ಭಕ್ತಿ ಕಾಣೆಯ ನಡುವೆ ಗುರುದಿನ “

News Desk

ಚಂದ್ರವಳ್ಳಿ ನ್ಯೂಸ್ ಹಿರಿಯೂರು:
  ಶಿಕ್ಷಕರನ್ನು ಹೊಗಳಲು ಎಲ್ಲರೂ ಅಣಿಯಾಗಿದ್ದಾರೆ. ಶಿಕ್ಷಕರಿಗೆ ಹೊಗಳಿಕೆ ಅಷ್ಟೇ ಸಾಕೆ ಎಂದು ನಮ್ಮೊಳಗೆ ಪ್ರಶ್ನಿಸಿಕೊಳ್ಳುವ  ಕಾಲಘಟ್ಟದಲ್ಲಿ   ತನ್ನ ಸ್ಥಾನಮಾನಗಳ ಆಸ್ತಿತ್ವಕ್ಕಾಗಿ ಹೊಡೆದಾಡುವ ಈ ಹೊತ್ತಿನಲ್ಲಿ, ಶಿಕ್ಷಕರ ದಿನದಂದು ಅವರ ಮುಖದಲ್ಲಿ ಒಂದು ನಗು ತರುವ ಪ್ರಯತ್ನವಾದರೂ ಆಗಿದೆಯೇ.

ಅದರಿಂದ ಶಿಕ್ಷಕರ ದಿನಕ್ಕೊಂದು ಅರ್ಥವಾದರೂ ಬಂದಿದೆಯೇ. ಮಕ್ಕಳು ನಲಿಯಬೇಕು ಕಲಿಯಬೇಕು. ಅದರಂತೆ ಕಲಿಸುವವರು ಕೂಡ ಅಷ್ಟೇ ಖುಷಿಯಿಂದ ಇರಬೇಕು . ಆಗ  ಬೋಧನೆಯ ಕ್ರಮ ಪರಿಣಾಮಕಾರಿಯಾಗಿರುತ್ತದೆ, ಈಗ ಯೋಚಿಸಬೇಕಾಗಿರುವುದು  ಶಿಕ್ಷಕರ ಮೊಗದಲ್ಲಿ ಖುಷಿ ಇದೆಯೇ .

- Advertisement - 

ಶೈಕ್ಷಣಿಕ ವ್ಯವಸ್ಥೆಯಲ್ಲಿ ಪೋಷಕರ ಪಾತ್ರಗಳೇ ದುರ್ಬಲ ವಾಗುತ್ತಿರುವ ಹೊತ್ತಿನಲ್ಲಿ, ಶಿಕ್ಷಕರಾದವರು ಮಾತ್ರ ಅದೇ ಮೊದಲಿನ ಗುರುವಿನಂತೆ  ಇರಬೇಕೆಂದು ಬಯಸುವವರು ಇದ್ದಾರೆ. ಅದರಾಚೆಗೂ ಪಾಠ ಹೇಳುವುದು ಹಲವರಿಗೆ ಒಂದು ಜೀವನೋಪಾಯದ ವೃತ್ತಿಯಾಗಿದೆ ವಿನಾಃ ಅದು ಸೇವೆಯ ಗಡಿ ದಾಟಿ ತುಂಬಾ ದಿನಗಳು ಆಗಿವೆ.

ಸಾಮಾಜಿಕ ವ್ಯವಸ್ಥೆ ಮಾತ್ರ ಬಹಳ ದೂರಬಂದು ಶಿಕ್ಷಕ ಮಾತ್ರ  ಈ ಮೊದಲಿದ್ದಂತೆ ಉಳಿದ ಹಾಗೆಯೇ ಇರಬೇಕೆಂದು ಬಯಸುವುದು ಸರಿಯಲ್ಲ. ಶಿಕ್ಷಕರು  ಸಮಾಜದ ಮಧ್ಯದಿಂದಲೇ ಬಂದವರು ವಿನಾ ಎಲ್ಲಿಂದಲೋ ಬಂದು ಅವತರಿಸಿದವರಲ್ಲ.  ಈಗೀಗಾ ಬರೀ ಕಲಿಸುವುದಷ್ಟೇ ಶಿಕ್ಷಕರ ಕೆಲಸವಲ್ಲ. ಅವರಷ್ಟು…ಏಕಪಾತ್ರಾಭಿನಯ ಮಾಡುವವರು ಯಾರೂ ಇಲ್ಲ. ಪಠ್ಯಪುಸ್ತಕ, ಯೂನಿಫಾರಂ ಹೊರಬೇಕು, ಜನ, ದನ, ಕೋಳಿ        ಕುರಿ  ಎಣಿಸಬೇಕು, ಚುನಾವಣೆ ಕಾರ್ಯಕ್ಕೆ ಹೋಗಬೇಕುಅಡುಗೆ ಲೆಕ್ಕ, ತರಕಾರಿ, ಮೊಟ್ಟೆ, ಚಿಕ್ಕಿ, ಬಾಳೆಹಣ್ಣು ಖರೀದಿ, ಶೌಚಾಲಯ ಜಾಗೃತಿ, ಆನ್‌ಲೈನ್‌ನಲ್ಲಿ ಮಕ್ಕಳ ಕಲಿಕಾ ಮಾಹಿತಿ ಸತತವಾಗಿ ತುಂಬುವುದು, ನಿರಂತರ ಮೌಲ್ಯ ಮಾಪನಕಂಪ್ಯೂಟರ್ ಮುಂದೆ ಕುಳಿತು, ಪಾಲಕರ ಪರವಾಗಿ ಸ್ಕಾಲ‌ರಶಿಪ್ ಗೆ ಅರ್ಜಿ ಹಾಕುವುದರಿಂದ ಹಿಡಿದು ಶಾಲೆ ಸೋರುತ್ತಿದ್ದರೆ ಹತ್ತಿ ಹೆಂಚು ಹೊದಿಸುವವರೆಗೂ ಅವನ ಕೈಯಲ್ಲಿ ಕೆಲಸಗಳಿವೆ, ಪಾತ್ರಗಳಿವೆ.ಇವುಗಳ ಮಧ್ಯೆ ಪಠ್ಯಕ್ರಮ ಪೂರ್ಣಗೊಳಿಬೇಕು. ಕಿರು ಪರೀಕ್ಷೆಗಳನ್ನು ನಡೆಸಬೇಕು.ಮೌಲ್ಯ ಮಾಪನ‌ಮಾಡಿ ಪಟ್ಟಿಮಾಡಿ ಸಿದ್ದಪಡಿಸಿ ಮಕ್ಕಳ ಪೋಷಕರಿಗೆ  ಇಲಾಖೆಯ ಅಧಿಕಾರಿಗಳಿಗೆ ತಲುಪಿಸಬೇಕು.ಶಿಕ್ಷಕರ ಕೆಲಸ ಶಾಲೆಯಲ್ಲಿ ಮಾತ್ರವಲ್ಲದೆ ಮನೆಯಲ್ಲೂ ನಿರಂತರ…ಒಟ್ಟಾರೆ 24×7.

- Advertisement - 

ಇತ್ತೀಚಿನ ವರದಿಯೊಂದು ಕಾರ್ಯ ಒತ್ತಡದ  ಪರಿಣಾಮವಾಗಿ ಶೇ. 42ರಷ್ಟು ಶಿಕ್ಷಕಿಯರು ಮಧುಮೇಹ ಮತ್ತು ರಕ್ತದೊತ್ತಡದಿಂದ ಬಳಲುತ್ತಿದ್ದಾರೆ ಎನ್ನುತ್ತದೆ. ಆದರೆ ಈ ಸಮಾಜ ಒಂದೆರಡು ಉದಾಹರಣೆಗಳನ್ನು ತೆಗೆದುಕೊಂಡು, ಈಗೀಗ ಮೇಷ್ಟ್ರುಗಳು ಸರಿಯಿಲ್ಲ ಅನ್ನುವ ತೀರ್ಮಾನಕ್ಕೆ ಬರುತ್ತದೆ. ರಸ್ತೆಯಲ್ಲಿ ನಡೆದುಹೋಗುವ ಯಾವುದೋ ಹುಡುಗನ ಉದ್ಧಟತನವನ್ನು ಕಂಡ ಸಮಾಜ ಯಾರು ನಿಂಗೆ ಪಾಠ ಹೇಳಿದ್ದು?’ ಅಂತ ನೇರವಾಗಿ ಶಿಕ್ಷಕನ ಬುಡಕ್ಕೆ ಬರುತ್ತದೆ. ಆದರೆ ಅದೇ ಸಾಧನೆ ಮಾಡಿದರೆ ಮಾತ್ರ ಯಾರ ಮಗಎಂದು ಕೇಳುತ್ತದೆ.

ಈಗೀಗ ಮಗುವಿನ ಮೇಲೆ ಶಿಕ್ಷಕರಿಗಿಂತ, ಶಾಲೆಗಿಂತ ಹೆಚ್ಚು ಪ್ರಭಾವ ಬೀರಲು ಅವನದೇ ಮನೆಯ ಪರಿಸರ, ಹಾಗೂ ಸಾಮಾಜಿಕ ಮಾಧ್ಯಮಗಳಿವೆ. ಮಕ್ಕಳನ್ನು ಅಡ್ಡದಾರಿಗೆ ಎಳೆಯುವ ವ್ಯಾಟ್ಸಫ್ ಫೇಸ್ ಬುಕ್ ಇನ್ಸ್ಟಾಗ್ರಾಮ್ ಗೂಗಲ್ ಎಂಬ ಹೆದ್ದಾರಿಗಳು ಕೈಯಲ್ಲಿ ಮತ್ತು ಮನೆ ಮುಂದೆ ಬಂದು ನಿಂತಿವೆ, ಕಲಿಸುವ ಶಿಕ್ಷಕ ಗೌಣವಾಗುತ್ತಿರುವುದು ಇದೇ ಕಾರಣಕ್ಕೆ, ‘ಯ ರ ಲ ವ ಕಲಿಸಿದ ಶಿಕ್ಷಕನನ್ನ ಯಾರು ಅವನು ಅಂತ ಹೇಳುವ ಪೀಳಿಗೆ ಕಾಣಬಹುದಾಗಿದೆ ಇವುಗಳ ನಡುವೆ  ಒಳ್ಳೆಯ ಶಿಕ್ಷಕರು ಕಳೆದು ಹೋಗುತ್ತಿದ್ದಾರೆ  ಈ ವೃತ್ತಿ ಈ ಮೊದಲಿನಂತೆ ಇಲ್ಲವಾಗುತ್ತಿದೆ. ಈ ಮಧ್ಯದಲ್ಲೂ ಆದ್ಯತೆಯ ಆಯ್ಕೆಯಾಗಿ ಶಿಕ್ಷಕ ವೃತ್ತಿಯನ್ನು ಆಯ್ದುಕೊಂಡು ಮಕ್ಕಳಿಗಾಗಿ ಕೆಲಸ ಮಾಡುವ ಶಿಕ್ಷಕರ ಕೊರತೆ ಇಲ್ಲ.

ಜೀವನದ ಮಾರ್ಗದಲ್ಲಿ ಸಮಯಾನುಸಾರ ಜ್ಞಾನ ದಾನ ಮಾಡಿದ ಎಲ್ಲರೂ ಶಿಕ್ಷಕರೇ ಆಗಿರುತ್ತಾರೆ ತಂದೆ-ತಾಯಿ,ಗುರು ಹಿರಿಯರು,ಸ್ನೇಹಿತರು,ಬಂಧು ವರ್ಗದವರು ಮಾತ್ರವಲ್ಲ ಈ ಅದ್ಭುತ ಸೃಷ್ಟಿ ಪರಿಸರ ಕೂಡ ನಮ್ಮ ಕಲಿಕೆಗೆ ದಾರಿ ತೋರಿದೆ.  ನಮ್ಮ ಜೀವನದ ಸರ್ವತೋಮುಖ ಪ್ರಗತಿಗೆ ಕಾರಣರಾದ ಎಲ್ಲರಿಗೂ ನಮಿಸುವುದು, ಸ್ಮರಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ.

ಶಿಕ್ಷಕರ ದಿನವನ್ನು ಆಚರಿಸಲು ಕಾರಣ ಕರ್ತರಾದ ಡಾ‌. ಸರ್ವಪಲ್ಲಿ ರಾಧಾಕೃಷ್ಣನ್ ಅವರನ್ನೊಳಗೊಂಡಂತೆ ಎಲ್ಲರಿಗೂ  ನಮಿಸುತ್ತಾ ಶಿಕ್ಷಕರು ಯಾವತ್ತೂ ನಮಗೆ ಮಾರ್ಗದರ್ಶನ ನೀಡುವವರು. ನಮಗೆ ಸ್ಫೂರ್ತಿ ತುಂಬಿ ನಮ್ಮನ್ನು ಸಮಾಜದ ಉತ್ತಮ ನಾಗರಿಕರನ್ನಾಗಿ ರೂಪಿಸುವವರು. ಶಿಕ್ಷಕರು ನಮ್ಮ ಜೀವನದ ಭದ್ರ ಬುನಾದಿ ಹಾಕಿಕೊಡುವವರು. ಮನೆಯೇ ಮೊದಲ ಪಾಠಶಾಲೆ, ಜನನಿ ತಾನೆ ಮೊದಲ ಗುರುವು ಎಂಬ ಮಾತೊಂದಿದೆ. ಆ ಬಳಿಕದ ಸ್ಥಾನ ಶಾಲೆಯಲ್ಲಿ ಪಾಠ ಕಲಿಸುವ ಗುರುವಿಗೆ ಸಲ್ಲುತ್ತದೆ. ಶಿಕ್ಷಕರ ದಿನಾಚರಣೆಯನ್ನು ಪ್ರತಿ ವರ್ಷ ಸಪ್ಟೆಂಬರ್ 5 ರಂದು ಆಚರಿಸಲಾಗುತ್ತದೆ. ಇದು ಶಿಕ್ಷಕರಿಗೆ ಗೌರವ, ಅಭಿನಂದನೆ, ಶುಭಹಾರೈಕೆ ಹೇಳುವ ದಿನ.
 ಶಿಕ್ಷಕ, ವಿದ್ವಾಂಸ ಮತ್ತು ತತ್ವಜ್ಞಾನಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನ. ರಾಧಾಕೃಷ್ಣನ್ ಅವರು ದೇಶದ ಮೊದಲ ಉಪ ರಾಷ್ಟ್ರಪತಿ ಹಾಗೂ ಎರಡನೇ ರಾಷ್ಟ್ರಪತಿಯೂ ಆಗಿದ್ದರು.

 ಉಪರಾಷ್ಟ್ರಪತಿಯಾದ ಸಂದರ್ಭದಲ್ಲಿ ಡಾ.ರಾಧಾಕೃಷ್ಣನ್ ಅವರು ಮೈಸೂರು ವಿಶ್ವವಿದ್ಯಾಲಯದ ಮಹಾರಾಜ ಕಾಲೇಜಿನಲ್ಲಿ ತತ್ತ್ವಶಾಸ್ತ್ರ ವಿಭಾಗದಲ್ಲಿ ಅಧ್ಯಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ತಮ್ಮ ಗುರು ಉಪರಾಷ್ಟ್ರಪತಿಯಾಗಿ ದೆಹಲಿಗೆ ಹೊರಡುವ ಸಂದರ್ಭದಲ್ಲಿ ಮಹಾರಾಜ ಕಾಲೇಜಿನ ವಿದ್ಯಾರ್ಥಿಗಳು, ಅವರನ್ನು ಕಳುಹಿಸಿ ಕೊಡಲು ಸಾರೋಟನ್ನು ತಂದು ಅಲಂಕರಿಸಿ, ಕುದುರೆಯ ಬದಲು ತಾವೇ ಕುದುರೆಗಳಂತೆ, ರಾಧಾಕೃಷ್ಣನ್ ಅವರು ಕುಳಿತ ಸಾರೋಟನ್ನು ಪ್ರೀತಿಪೂರ್ವಕವಾಗಿ ರೈಲ್ವೆ ನಿಲ್ದಾಣದವರೆಗೂ ಎಳೆದು ಕೊಂಡು ಹೋಗಿ, ಭಾವಪೂರ್ಣ ವಿದಾಯ ಹೇಳಿದ್ದರು. ಈ ಸನ್ನಿವೇಶವನ್ನು ಕಂಡು ರಾಧಾಕೃಷ್ಣನ್ ಅವರು ಭಾವುಕರಾಗಿದ್ದರಂತೆ. ಅವರು ಆಗಾಗ ಈ ಸಂದರ್ಭವನ್ನು ನೆನೆಸಿಕೊಳ್ಳುತ್ತಿದ್ದರು.

ಇದೇ ಸಂದರ್ಭದಲ್ಲಿ ರಾಧಾಕೃಷ್ಣನ್ ಕುರಿತು ಅಮೆರಿಕಾದಲ್ಲಿ ಫಿಲಾಸಫಿ ಆಫ್ ಡಾ.ಸರ್ವಪಲ್ಲಿ ರಾಧಾಕೃಷ್ಣನ್ಪುಸ್ತಕ ಬಿಡುಗಡೆಗೊಂಡಿತು. ಡಾ. ರಾಜೇಂದ್ರ ಪ್ರಸಾದ್ನಂತರ, ೧೯೬೨ ರಲ್ಲಿ ಭಾರತದ ಎರಡನೇ ರಾಷ್ಟ್ರಪತಿಯಾಗಿ ಆಯ್ಕೆಯಾದ ರಾಧಾಕೃಷ್ಣನ್, ತಮ್ಮ ಅಧಿಕಾರಾವಧಿಯಲ್ಲಿ ದೇಶದ ಸರ್ವತೋಮುಖ ಏಳಿಗೆಗೆ ಅವಿರತ ಶ್ರಮಿಸಿದರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಸಂಬಂಧಗಳನ್ನು ಉನ್ನತೀಕರಣಗೊಳಿಸುತ್ತಾ, ದೇಶದೊಳಗಿನ ಆಂತರಿಕ ಕಲಹಗಳಿಗೆ ತಿಲಾಂಜಲಿ ನೀಡುತ್ತಾ, ದೇಶವನ್ನು ಸುಭಿಕ್ಷವಾಗಿಸಿದ ಕೀರ್ತಿ ಡಾ.ರಾಧಾ ಕೃಷ್ಣನ್ಅವರಿಗೆ ಸಲ್ಲುತ್ತದೆ. 1962 ರಲ್ಲಿ ಸರ್ವಪಲ್ಲಿ ರಾಧಾಕೃಷ್ಣನ್ ಭಾರತದ ರಾಷ್ಟ್ರಪತಿಯಾಗಿ ಅಧಿಕಾರ ವಹಿಸಿದರು.

ಅವರ ಕೆಲ ವಿದ್ಯಾರ್ಥಿಗಳು ಹಾಗೂ ಗೆಳೆಯರು ಅವರನ್ನು ಭೇಟಿಯಾಗಿ ಅವರ ಹುಟ್ಟುಹಬ್ಬವನ್ನು ಆಚರಿಸಲು ಅನುಮತಿ ಕೇಳಿದರಂತೆ. ಆದರೆ, ಅವರು ಸಪ್ಟೆಂಬರ್ 5 ನ್ನು ಹುಟ್ಟುಹಬ್ಬ ಎಂದು ಆಚರಿಸುವ ಬದಲು ಶಿಕ್ಷಕರ ದಿನ ಎಂದು ಆಚರಿಸಿದರೆ ಹೆಚ್ಚು ಸಂತೋಷ ಎಂದು ಪ್ರತಿಕ್ರಿಯಿಸಿದರಂತೆ. ಆ ಬಳಿಕ, ಸಪ್ಟೆಂಬರ್ 5ನ್ನು ಶಿಕ್ಷಕರ ದಿನ ಎಂದು ಆಚರಣೆ ಮಾಡಲಾಗುತ್ತಿದೆ. ಸರ್ವಪಲ್ಲಿ ರಾಧಾಕೃಷ್ಣನ್ ಸಪ್ಟೆಂಬರ್ 5, 1888 ರಂದು ತಮಿಳುನಾಡಿನ ತಿರುಮಾಣಿ ಹಳ್ಳಿಯ ಬ್ರಾಹ್ಮಣ ಕುಟುಂಬ ಒಂದರಲ್ಲಿ ಜನಿಸಿದರು. ಅವರು ಬಾಲ್ಯದಲ್ಲೇ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಂಡಿದ್ದರು. ಹಾಗೂ ಸ್ವಾಮಿ ವಿವೇಕಾನಂದರಿಂದ ಸ್ಫೂರ್ತಿ ಪಡೆದಿದ್ದರು. ರಾಧಾಕೃಷ್ಣನ್ 1975 ಏಪ್ರಿಲ್ 17 ರಂದು ಚೆನ್ನೈನಲ್ಲಿ ನಿಧನ ಹೊಂದಿದರು.

ಶಿಕ್ಷಕರ ದಿನಕ್ಕೆ ಇಂದಿಗೂ ವಿಶೇಷ ಗೌರವ ಇದೆ. ಈ ದಿನದಂದು ಎಲ್ಲಾ ಶಿಕ್ಷಣ ವಿಭಾಗದ, ಎಲ್ಲಾ ಶೈಕ್ಷಣಿಕ ಹಂತದ ವಿದ್ಯಾರ್ಥಿಗಳು ತಮ್ಮ ಗುರುಗಳಿಗೆ ಗೌರವ ಸಲ್ಲಿಸುತ್ತಾರೆ. ಸಮಾಜದ ಬೆಳವಣಿಗೆಯಲ್ಲಿ ಶ್ರಮಿಸುವ ಶಿಕ್ಷಕ ವರ್ಗಕ್ಕೆ ಶುಭ ಹಾರೈಸಲಾಗುತ್ತದೆ.

ಶಿಕ್ಷಕರ ದಿನದಂದು ವಿದ್ಯಾರ್ಥಿಗಳು ಶಿಕ್ಷಕರಿಗೆ ಪೆನ್, ಗುಲಾಬಿ, ಹೂಗುಚ್ಛ ಇತ್ಯಾದಿಗಳನ್ನು ನೀಡಿ ಶುಭಹಾರೈಸುತ್ತಾರೆ. ಶಿಕ್ಷಕರ ದಿನಾಚರಣೆ ಎಂಬ ಪರಿಕಲ್ಪನೆ ಭಾರತ ಮಾತ್ರವಲ್ಲ ವಿದೇಶಗಳಲ್ಲಿಯೂ ಇದೆ. ಉದಾಹರಣೆಗೆ, ಚೀನಾದಲ್ಲಿ ಸಪ್ಟೆಂಬರ್ 10 ರಂದು ಶಿಕ್ಷಕರ ದಿನ ಆಚರಿಸಲಾಗುತ್ತದೆ. ಅಮೇರಿಕಾದಲ್ಲಿ ಮೇ 6, ಅಕ್ಟೋಬರ್​ನ ಕೊನೆಯ ಶುಕ್ರವಾರದಂದು ಆಸ್ಟ್ರೇಲಿಯಾದಲ್ಲಿ, ಅಕ್ಟೋಬರ್ 15 ರಂದು ಬ್ರೆಜಿಲ್​ನಲ್ಲಿ, ಅಕ್ಟೋಬರ್ 5 ರಂದು ಪಾಕಿಸ್ತಾನದಲ್ಲಿ ಶಿಕ್ಷಕರ ದಿನ ಆಚರಿಸಲಾಗುತ್ತದೆ.

ಅಕ್ಟೋಬರ್ 5 ರಂದು ವಿಶ್ವ ಶಿಕ್ಷಕರ ದಿನ ಎಂದು ಆಚರಿಸಲಾಗುತ್ತದೆ.ಇತ್ತೀಚೆಗೆ ದೇಶದ ಪ್ರಥಮ ಶಿಕ್ಷಕಿ ಸಾವಿತ್ರಿ ಬಾಯಿ ಫುಲೆ ಅವರ ಹೆಸರಿನಲ್ಲಿ ಜನವರಿ 3 ರಂದು ಶಿಕ್ಷಕಿಯರ ದಿನ ಆಚರಣೆ ಕೂಡಾ ಆರಂಭವಾಗಿದೆ. ಈ ಎಲ್ಲಾ ಸಂದರ್ಭಗಳಲ್ಲಿ  ಶೈಕ್ಷಣಿಕ ಕ್ಷೇತ್ರದಲ್ಲಿ ವಿಶೇಷ ಸೇವೆ ಸಲ್ಲಿಸಿದ ಶಿಕ್ಷಕರನ್ನು ಗುರುತಿಸಿ ತಾಲೂಕು, ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.

ಈ  ರಾಜ್ಯ ರಾಷ್ಟ್ರ ಮತ್ತು ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಯ ಗೌರವವನ್ನು ಪಡೆದಿರುವ ಎಲ್ಲ ಶಿಕ್ಷಕರಿಗೆ ಅಭಿನಂದನೆಗಳು.
ಲೇಖನ
: ಚಮನ್ ಷರೀಫ್, ಆದಿವಾಲ.

 

 

 

Share This Article
error: Content is protected !!
";