ಚಂದ್ರವಳ್ಳಿ ನ್ಯೂಸ್, ರಾಮನಗರ:
ರಾಜ್ಯದಲ್ಲಿ ಭೂಸ್ವಾಧೀನ ವಿಷಯವು ಮತ್ತೆ ತೀವ್ರ ಚರ್ಚೆಗೆ ಗುರಿಯಾಗಿದೆ. ಉದ್ಯಮಕ್ಕಾಗಿ 9600 ಎಕರೆ ಭೂಮಿಯ ಸ್ವಾಧೀನ ಪ್ರಕ್ರಿಯೆಯಲ್ಲಿ ರೈತರಿಂದ ತೀವ್ರ ವಿರೋಧ ವ್ಯಕ್ತವಾಗಿದ್ದು, ಈ ವಿಚಾರವಾಗಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರೈತರ ಮೇಲೆ ಗರಂ ಆದ ಘಟನೆ ನಡೆದಿದೆ.
ಭೂ ಸ್ವಾಧೀನ ಪ್ರಕ್ರಿಯೆ ಕೈಬಿಡುವಂತೆ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ರೈತರು ಪ್ರತಿಭಟನೆ ನಡೆಸುತ್ತಿದ್ದ ಸ್ಥಳಕ್ಕೆ ಆಗಮಿಸಿ ರೈತರ ಸಮಸ್ಯೆ ಆಲಿಸಿದ ಡಿ.ಕೆ.ಶಿವಕುಮಾರ, ನಾನು ನಿಮ್ಮ ಜಿಲ್ಲೆಯವನೇ, ನಾನೇನು ಹೊರಗಡೆಯಿಂದ ಬಂದಿಲ್ಲ, ಈ ಹಿಂದೆ ಕೈಗಾರಿಕಾ ಪ್ರದೇಶಕ್ಕೆ ಭೂಮಿ ಸ್ವಾಧೀನವಾದಾಗ ಸಾವಿರಾರು ಎಕರೆ ಭೂಮಿ ಹೋಗಿದೆ. ಆಗಲೂ ನನ್ನ 12 ಎಕರೆ ಜಮೀನು ಸ್ವಾಧೀನವಾಗಿತ್ತು, ಆದರೆ ನಾನು ವಿರೋಧಿಸಲಿಲ್ಲ, ಭೂಮಿಯನ್ನು ಕೊಟ್ಟೆ ಎಂದು ತಮ್ಮ ಅನುಭವದ ಮಾತು ಹೇಳಿದರು.
ಪ್ರಸಕ್ತ 9600 ಎಕರೆ ಭೂಮಿಯ ಸ್ವಾಧೀನದಲ್ಲಿ 960 ಎಕರೆ ಭೂಮಿಯನ್ನು ರೈತರೇ ಸ್ವಯಂಪ್ರೇರಿತವಾಗಿ ಕೊಟ್ಟಿದ್ದಾರೆ. ಇದರಲ್ಲಿ ಯಾವುದೇ ಒತ್ತಡ ಇಲ್ಲ, ಇದು ಕಾನೂನು ಚೌಕಟ್ಟಿನಲ್ಲಿ ನಡೆಯುತ್ತಿದೆ. 70% ಜನ ಈ ಯೋಜನೆಗೆ ಒಪ್ಪಿದ್ದಾರೆ, ಕೇವಲ 30% ಜನ ಒಪ್ಪಿಗೆ ನೀಡಿಲ್ಲ ಎಂದರು.
ಈ ವೇಳೆ ರೈತರು ‘ಭೂಮಿ ನೀಡಲ್ಲ, ಶಾಸಕರು ರೈತರ ಪರವಾಗಿಲ್ಲ‘ ಎಂದ ರೈತರು ಈ ವೇಳೆ ರೈತರ ಮೇಲೆ ಡಿಸಿಎಂ ಡಿಕೆಶಿ ಗರಂ ಆಗಿ, ‘ನೀವು ಧಿಕ್ಕಾರ ಕೂಗೋದು ಬಿಟ್ಟು ಬೇರೇನೂ ಮಾಡೋಕೆ ಆಗೋಲ್ಲ. ರೈತರು ಹೋರಾಟ ಮಾಡಿ ಆದ್ರೆ ರಾಜಕೀಯ ಮಾಡಬೇಡಿ. ಹಿಂದೆ ಭೂಮಿ ಸ್ವಾಧೀನ ಮಾಡಿದ್ರಲ್ಲ ಅವರೇನು ನಿಮ್ಮ ಪರವಾಗಿ ಇದ್ರಾ..?
ಶಾಸಕರು ಒಳ್ಳೆಯ ಕೆಲಸ ಮಾಡ್ತಿದ್ದಾರೆ, ಅವರಿಗೆ ಅವಮಾನ ಮಾಡಬೇಡಿ. ರೈತರಿಗೆ ಅನ್ಯಾಯ ಆಗಬಾರದು ಅಂತ ಎಷ್ಟು ಸಭೆ ಮಾಡಿದ್ದೇವೆ ಗೊತ್ತಾ..? ಯಾವುದೇ ರೈತರಿಗೆ ಅನ್ಯಾಯ ಆಗಲು ಬಿಡಲ್ಲ. 70% ಜನ ಈ ಯೋಜನೆಗೆ ಒಪ್ಪಿದ್ದಾರೆ,
30% ಜನ ಒಪ್ಪಿಗೆ ನೀಡಿಲ್ಲ. ಇದನ್ನ ಡಿನೋಟಿಫೈ ಮಾಡಿ ಬಿಎಸ್ ವೈ ತರ ನಾನು ಜೈಲಿಗೆ ಹೋಗಲ್ಲ. ನಿಮಗೆ ಏನು ಸಹಾಯ ಮಾಡಬೇಕೋ ಮಾಡ್ತೇನೆ. ಕಾನೂನು ಚೌಕಟ್ಟಿನಲ್ಲಿ ಏನು ಆಗಬೇಕೋ ಆಗುತ್ತೆ ಎಂದು ಡಿ.ಕೆ. ಶಿವಕುಮಾರ ಅವರು ತಮ್ಮ ನಿಲುವು ಸ್ಪಷ್ಟಪಡಿಸಿದರು. ರೈತರಿಂದ ತೀವ್ರ ವಿರೋಧದ ನಡುವೆಯೂ ಡಿಸಿಎಂ ಡಿ.ಕೆ. ಶಿವಕುಮಾರ್ ತಮ್ಮ ನಿರ್ಧಾರ ಬದಲಿಸಲಿಲ್ಲ. ಈ ವಿವಾದವು ಮುಂದೆ ಯಾವ ರೀತಿಯ ತಿರುವು ಪಡೆದುಕೊಳ್ಳಲಿದೆ ಎಂಬುದು ಕಾದು ನೋಡಬೇಕಾಗಿದೆ.

