ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರ ಸೋಗಿನಲ್ಲಿ ಬಾಂಗ್ಲಾ ಪ್ರಜೆಗಳಿಂದ ಹಣ ವಸೂಲಿ ಮಾಡುತ್ತಿದ್ದ ಪೊಲೀಸ್ ಪೇದೆ ಸೇರಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಘಟನೆ ಬೆಂಗಳೂರು ನಗರದಲ್ಲಿ ನಡೆದಿದೆ.
ಬೆಂಗಳೂರು ಗ್ರಾಮಾಂತರ ಪೊಲೀಸ್ ವಿಭಾಗದ ಕಾನ್ಸ್‌ಟೇಬಲ್ ಪ್ರಶಾಂತ್ ನಾವಿ ಹಾಗೂ ಖಾಸಗಿ ವ್ಯಕ್ತಿ ನಾಸೀರ್ ಖಾನ್ ಎಂಬಾತನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ರಾಜ್ಯ ಜನ ಸದ್ಭಾವನಾ ಸಂಘಟನೆಯ ಸದಸ್ಯರು ನೀಡಿದ್ದ ದೂರಿನ ಅನ್ವಯ ಪೊಲೀಸರು ಕಾರ್ಯಾಚರಣೆ ಮಾಡಿ ಆರೋಪಿಗಳನ್ನ ಬಂಧಿಸಿದ್ದಾರೆ.
ರಾಜ್ಯ ಆಂತರಿಕ ಭದ್ರತಾ ವಿಭಾಗದಲ್ಲಿ ಈ ಹಿಂದೆ ಕೆಲಸ ಮಾಡುತ್ತಿದ್ದ ಪ್ರಶಾಂತ್ ನಾವಿಯನ್ನು ಕರ್ತವ್ಯಲೋಪ ಆರೋಪದ ಮೇಲೆ ಅಮಾನತು ಮಾಡಲಾಗಿತ್ತು. ಬಳಿಕ ಬೆಂಗಳೂರು ಗ್ರಾಮಾಂತರ ಪೊಲೀಸ್ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿತ್ತು. ಆದರೆ ನಾಸೀರ್ ಖಾನ್ ಜೊತೆ ಪ್ರಶಾಂತ್ ನಾವಿ ಕೈಜೋಡಿಸಿ ಕಸ ಸಂಗ್ರಹಣೆ ಮಾಡುವ ಬಾಂಗ್ಲಾ ಪ್ರಜೆಗಳನ್ನು ಟಾರ್ಗೆಟ್ ಮಾಡುತ್ತಿದ್ದ ಆರೋಪಿಗಳು ಅವರನ್ನು ಬಂಧಿಸುವ ಬೆದರಿಕೆ ಹಾಕಿ ಹಣ ವಸೂಲಿ ಮಾಡುತ್ತಿದ್ದರು.
ಕೆಲವರನ್ನ ಬಂಧನದ ನೆಪದಲ್ಲಿ ಕರೆದೊಯ್ದು ಹಣ ವಸೂಲಿ ಮಾಡಿರುವುದು ಸಹ ತನಿಖೆ ಸಂದರ್ಭದಲ್ಲಿ ಕಂಡು ಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

