ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಗಣಪತಿ ವಿಸರ್ಜನೆಯ ಮೆರವಣಿಗೆಯ ಮೇಲೆ ಕಲ್ಲು ತೂರಾಟ ಹಾಗೂ ಪ್ರತಿಭಟನಾ ನಿರತ ಹಿಂದೂಗಳ ಮೇಲೆ ಲಾಠಿಚಾರ್ಜ್ ನಡೆದ ಘಟನಾ ಸ್ಥಳಕ್ಕೆ ಪಕ್ಷದ ನಿಯೋಗದೊಂದಿಗೆ ಭೇಟಿ ನೀಡಿ ಗಲಭೆಗ್ರಸ್ತ ಪ್ರದೇಶಗಳ ಬಗ್ಗೆ ವಾಸ್ತವಾಂಶಗಳನ್ನು ಕಲೆ ಹಾಕಿ ಜಿಲ್ಲಾಡಳಿತದಿಂದ ಮಾಹಿತಿ ಪಡೆಯಲಾಯಿತು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ತಿಳಿಸಿದರು.
ಇಂದಿನ ಸಾಮೂಹಿಕ ಗಣೇಶ ವಿಸರ್ಜನಾ ಮಹೋತ್ಸವದಲ್ಲಿಯೂ ಭಾಗವಹಿಸಿ ಹಿಂದೂ ಕಾರ್ಯಕರ್ತರಿಗೆ ಧೈರ್ಯತುಂಬುವ ಜತೆಗೆ ಹಿಂದೂ ಉತ್ಸವಗಳು, ಗಣೇಶೋತ್ಸವ ಆಚರಣೆಗಳ ಮೇಲೆ ದಾಳಿ ನಡೆಸುವ ಕಿಡಿಗೇಡಿ ಮತಾಂಧರನ್ನು ಹತ್ತಿಕ್ಕುವಲ್ಲಿ ಸಂಪೂರ್ಣ ವಿಫಲವಾಗಿರುವ ಕರ್ನಾಟಕ ಕಾಂಗ್ರೆಸ್ ಸರ್ಕಾರಕ್ಕೆ ಇನ್ನಾದರೂ ಓಲೈಕೆ ರಾಜಕಾರಣ ಬದಿಗೆ ಸರಿಸಿ ಶಾಂತಿ ಸುವ್ಯವಸ್ಥೆ ನೆಲೆಸುವ ನಿಟ್ಟಿನಲ್ಲಿ ನಡೆದುಕೊಳ್ಳಲಿ ಎಂಬ ಎಚ್ಚರಿಕೆಯ ಸಂದೇಶ ರವಾನಿಸಲಾಯಿತು.
ಗಣೇಶೋತ್ಸವದ ಮೇಲೆ ನಡೆದ ಕಲ್ಲುತೂರಾಟದ ಘಟನೆಗಳು, ಗಾಯಗೊಂಡವರು, ಘಟನೆ ಹಿಂದಿನ ಶಕ್ತಿಗಳು ಹಾಗೂ ಘಟನೆಗೆ ಕಾರಣರಾದ ದುಷ್ಕರ್ಮಿಗಳ ಹಿನ್ನೆಲೆಯನ್ನು ಅರಿಯುವ ಕುರಿತು ಪಕ್ಷದ ಸತ್ಯಶೋಧನಾ ಸಮಿತಿ ರಚಿಸಲಾಗಿದ್ದು ಘಟನೆಯ ವಾಸ್ತವಾಂಶಗಳನ್ನು ಸಮಿತಿಯು ಸಂಗ್ರಹಿಸಲಿದೆ ಎಂದು ವಿಜಯೇಂದ್ರ ಹೇಳಿದರು.
ಈ ಸಂದರ್ಭದಲ್ಲಿ ವಿಧಾನಸಭಾ ವಿರೋಧ ಪಕ್ಷ ನಾಯಕರಾದ ಆರ್.ಅಶೋಕ್, ವಿಧಾನಪರಿಷತ್ ವಿಪಕ್ಷ ನಾಯಕರಾದ ಛಲವಾದಿ ನಾರಾಯಣಸ್ವಾಮಿ, ಮಾಜಿ ಉಪಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ, ಮಾಜಿ ಸಚಿವ ಸಿ.ಟಿ ರವಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂ ಗೌಡ, ಯುವ ಮೋರ್ಚಾ ರಾಜ್ಯಾಧ್ಯಕ್ಷ ಧೀರಜ್ ಮುನಿರಾಜು,
ಸಂಸದ ಯಧುವೀರ್ ಒಡೆಯರ್, ಮಾಜಿ ಸಚಿವ ಸಿ.ಎಸ್.ಪುಟ್ಟರಾಜು, ಶಾಸಕ ಎಂ ಕೃಷ್ಣಪ್ಪ, ರಾಜ್ಯ ಕಾರ್ಯದರ್ಶಿ ಲಕ್ಷ್ಮೀ ಅಶ್ವಿನ್ ಗೌಡ, ಶರಣು ತಳ್ಳೀಕೆರೆ, ರಾಜ್ಯ ಮಾಧ್ಯಮ ವಕ್ತಾರ ಅಶ್ವಥ್ ನಾರಾಯಣ ಗೌಡ, ಜಿಲ್ಲಾಧ್ಯಕ್ಷ ಡಾ.ಇಂದ್ರೇಶ್ ಕುಮಾರ್, ಮುಖಂಡರಾದ ಎಸ್.ಪಿ.ಸ್ವಾಮಿ, ಇಂಡವಾಳು ಸಚ್ಚಿದಾನಂದ್, ಅಶೋಕ್ ಜಯರಾಮ್ ಸೇರಿದಂತೆ ಪಕ್ಷದ ಪ್ರಮುಖರು, ಪದಾಧಿಕಾರಿಗಳು, ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

