ಚಂದ್ರವಳ್ಳಿ ನ್ಯೂಸ್, ಹೊಳಲ್ಕೆರೆ:
ಮನೆ ನಿರ್ಮಿಸಲು ಕಟ್ಟಡ ಪರವಾನಿಗೆ ನೀಡಲು 15 ಸಾವಿರ ರೂ.ಲಂಚಕ್ಕೆ ಬೇಡಿಕೆ ಇಟ್ಟು 10 ಸಾವಿರ ರೂ. ಲಂಚ ಸ್ವೀಕರಿಸುವ ಸಂದರ್ಭದಲ್ಲೇ ಲೋಕಾಯುಕ್ತ ಪೊಲೀಸರು ದಾಳಿ ಮಾಡಿ ಗ್ರಾಮ ಪಂಚಾಯಿತಿ ಪಿಡಿಒನನ್ನು ಬಂಧಿಸಿರುವ ಘಟನೆ ಹೊಳಲ್ಕೆರೆ ತಾಲೂಕಿನ ಅರೇಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಜರುಗಿದೆ.
ಹೊಳಲ್ಕೆರೆ ಪಟ್ಟದ ಹೊರ ವಲಯದ ಕುಕ್ಕವಾಡೇಶ್ವರಿ ದೇವಸ್ಥಾನದ ಹಿಂಭಾಗದ ಜೈಪುರ ಗ್ರಾಮದ ಶಿವಕುಮಾರಸ್ವಾಮಿ ಬಡಾವಣೆಯಲ್ಲಿ ಮನೆ ನಿರ್ಮಿಸಲು ಪರವಾನಗಿ ನೀಡುವಂತೆ ಅರೇಹಳ್ಳಿ ಗ್ರಾಮ ಪಂಚಾಯಿತಿಗೆ ದೂರುದಾರ ಎನ್.ಮನೋಜ್ ಅರ್ಜಿ ಸಲ್ಲಿಸಿದ್ದರು.
ಮನೆ ನಿರ್ಮಿಸಲು ಲೈಸನ್ಸ್ ಬೇಕಿದ್ದರೆ 15 ಸಾವಿರ ಲಂಚ ನೀಡುವಂತೆ ಪಿಡಿಒ ಕೃಷ್ಣಮೂರ್ತಿ ಬೇಡಿಕೆ ಇಟ್ಟು ಅದರಂತೆ 10 ಸಾವಿರ ರೂ.ಲಂಚಕ್ಕೆ ಒಪ್ಪಿಕೊಂಡು ಆ ಪೈಕಿ 5 ಸಾವಿರ ರೂ. ಲಂಚವನ್ನು ಗ್ರಾಮ ಪಂಚಾಯಿತಿಯಲ್ಲೇ ಪಿಡಿಒ ಜಿ.ಕೃಷ್ಣಮೂರ್ತಿ ಸ್ವೀಕರಿಸುವ ಸಂದರ್ಭದಲ್ಲಿ ಲೋಕಾಯುಕ್ತರು ದಾಳಿ ಮಾಡಿ ಆರೋಪಿ ಪಿಡಿಒನನ್ನು ಬುಧವಾರ ಬಂದಿಸಿದ್ದಾರೆ.
ಲೋಕಾಯುಕ್ತ ಎಸ್ಪಿ ವಾಸುದೇವರಾಮ ಇವರ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಎನ್.ಮೃತ್ಯುಂಜಯ ಇವರ ನೇತೃತ್ವದಲ್ಲಿ ಪೊಲೀಸ್ ನಿರೀಕ್ಷಕ ಮುಷ್ತಾಕ್ ಅಹಮದ್, ಬಸವರಾಜ್ ಲಮಾಣಿ ಇತರೆ ಸಿಬ್ಬಂದಿಗಳೊಂದಿಗೆ ಕಾರ್ಯಾಚರಣೆ ಮಾಡಿ ಆರೋಪಿಯನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.

