ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕ ವಿಧಾನ ಪರಿಷತ್ತಿಗೆ ನೂತನವಾಗಿ ನೇಮಕವಾಗಿರುವ ಸದಸ್ಯರುಗಳಾದ ಡಾ. ಆರತಿ ಕೃಷ್ಣ, ಎಫ್. ಹೆಚ್. ಜಕ್ಕಪ್ಪನವರ್, ಶಿವಕುಮಾರ್. ಕೆ ಮತ್ತು ರಮೇಶ್ ಬಾಬು ಅವರು ಗುರುವಾರ ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾದ ಸರಳ ಸಮಾರಂಭದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
ಎಲ್ಲಾ ನೂತನ ಸದಸ್ಯರುಗಳಿಗೆ ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಅವರು ಗೌಪ್ಯತಾ ಪ್ರಮಾಣ ವಚನ ಬೋಧಿಸಿದರು.
ಪರಿಷತ್ ಸದಸ್ಯರಾಗಿ ನೇಮಕವಾಗಿರುವ ಡಾ. ಆರತಿ ಕೃಷ್ಣ, ಶಿವಕುಮಾರ್. ಕೆ ಮತ್ತು ರಮೇಶ್ ಬಾಬು ಅವರು ಭಗವಂತನ ಹೆಸರಿನಲ್ಲಿ ಹಾಗೂ ಎಫ್. ಹೆಚ್. ಜಕ್ಕಪ್ಪನವರ್ ಅವರು ಭಗವಾನ್ ಬುದ್ದ ಮತ್ತು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಗೃಹ ಮಂತ್ರಿ ಡಾ. ಜಿ. ಪರಮೇಶ್ವರ, ಕರ್ನಾಟಕ ವಿಧಾನ ಪರಿಷತ್ತಿನ ಸಭಾನಾಯಕರು ಹಾಗೂ ಸಣ್ಣ ನೀರಾವರಿ ಇಲಾಖೆ ಸಚಿವ ಎನ್. ಎಸ್ ಭೋಸರಾಜು, ವಕ್ಪ್ ಮತ್ತು ವಸತಿ ಸಚಿವ ಬಿ ಜಡ್ ಜಮೀರ್ ಅಹಮ್ಮದ್ ಖಾನ್, ಪಶುಸಂಗೋಪನೆ ಇಲಾಖೆ ಸಚಿವ ಕೆ. ವೆಂಕಟೇಶ್, ವಿಧಾನ ಪರಿಷತ್ತಿನ ಕಾರ್ಯದರ್ಶಿ ಕೆ.ಆರ್. ಮಹಾಲಕ್ಷ್ಮಿ ಸೇರಿದಂತೆ, ಸಚಿವರು, ಶಾಸಕರು, ಮಾಜಿ ಶಾಸಕರು, ವಿಧಾನ ಪರಿಷತ್ ಸದಸ್ಯರು, ಗಣ್ಯರು ಹಾಗೂ ನೂತನವಾಗಿ ಪ್ರಮಾಣ ವಚನ ಸ್ವೀಕರಿಸಿದ ಸದಸ್ಯರ ಕುಟುಂಬ ವರ್ಗದವರು ಉಪಸ್ಥಿತರಿದ್ದರು.

