ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ನೇಯ್ಗೆ ಉಧ್ಯಮ ನಗರದ ಮಧ್ಯಮ ವರ್ಗದವರ ಜೀವನಾಡಿ ರೇಷ್ಮೆ ಹಾಗೂ ಕೃತಕ ರೇಷ್ಮೆಗೆ ಬಣ್ಣ ಹಚ್ಚುವ ಘಟಕಗಳ ಮೇಲೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ನಡೆಸುತ್ತಿರುವ ದೌರ್ಜನ್ಯವನ್ನು ಖಂಡಿಸಿ ಸೆಪ್ಟೆಂಬರ್ 17 ರಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ನೇಕಾರರ ಹೋರಾಟ ಸಮಿತಿ ಅಧ್ಯಕ್ಷ ಬಿ.ಜಿ. ಹೇಮಂತರಾಜು ತಿಳಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಅವರು, ಕಳೆದ ನಾಲ್ಕು ವರ್ಷಗಳಿಂದ ಬಣ್ಣದ ಘಟಕದ ಮಾಲೀಕರಿಗೆ ನಿರಂತರವಾಗಿ ನೋಟಿಸ್‌ಗಳನ್ನು ನೀಡುವ ಜೊತೆಗೆ, ಘಟಕಗಳನ್ನು ಮುಚ್ಚುವಂತೆ ಒತ್ತಡ ಹೇರುತ್ತಿರುವುದಾಗಿ ಆರೋಪಿಸಿದರು. ಇತ್ತೀಚೆಗಷ್ಟೇ ನಗರದ ಹೊರವಲಯದಲ್ಲಿ ಲಿಂಗರಾಜು ಎಂಬುವರ ಘಟಕದಲ್ಲಿ ಎಲ್ಲಾ ನಿಯಮಗಳನ್ನು ಪಾಲಿಸುತ್ತಿದ್ದರೂ ಜಾಗದ ಮಾಲೀಕರಿಗೆ ಭಯ ಹುಟ್ಟಿಸಿ ಬಣ್ಣ ಮಾಡುವ ಉಪಕರಣ ಹಾಗೂ ಒಲೆಗಳನ್ನು ಜೆ.ಸಿ.ಬಿ. ಮೂಲಕ ಧ್ವಂಸ ಮಾಡಿರುವ ಘಟನೆ ನಡೆದಿದೆ ಎಂದು ಹೇಳಿದ್ದಾರೆ.
ಸಣ್ಣ ಮಟ್ಟದ ಬಣ್ಣದ ಘಟಕಗಳ ಮಾಲೀಕರು ಕಾನೂನುಬದ್ದವಾಗಿ ನಡೆದುಕೊಂಡರೂ ಅಧಿಕಾರಿಗಳು ಕೆಲವರ ಒತ್ತಡಕ್ಕೆ ಮಣಿದು ಅನಾವಶ್ಯಕ ತೊಂದರೆ ನೀಡುತ್ತಿದ್ದಾರೆ. ಕೈಗಾರಿಕಾ ಪ್ರದೇಶದಲ್ಲಿರುವ ನೂರಾರು ದೊಡ್ಡ ಕಾರ್ಖಾನೆಗಳು ಮಾಲಿನ್ಯ ಮಾಡುತ್ತಿದ್ದರೂ, ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದ ಮಂಡಳಿ ಅಲ್ಪಸಂಖ್ಯೆಯ ನೇಕಾರರ ಜೀವನಕ್ಕೆ ಆಸರೆಯಾಗಿರುವ ಘಟಕಗಳ ಮೇಲಷ್ಟೇ ಕ್ರಮಕ್ಕೆ ಮುಂದಾಗುತ್ತಿರುವುದು ಅನ್ಯಾಯ ಎಂದು ಹೇಮಂತರಾಜು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಾಳೆ ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದ ಬಳಿ ಇರುವ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಕಚೇರಿ ಮುಂದೆ ನೇಕಾರರ ಹೋರಾಟ ಸಮಿತಿಯ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

