ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಹಿರಿಯೂರು ತಾಲ್ಲೂಕಿನ ಬಬ್ಬೂರುಫಾರಂನ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಶಿವಮೊಗ್ಗ ನವುಲೆಯ ಅಡಿಕೆ ಸಂಶೋಧನಾ ಕೇಂದ್ರ ಸಹಯೋಗದಲ್ಲಿ ಇದೇ ಸೆ.19 ರಿಂದ 21 ರವರೆಗೆ ಚಿತ್ರದುರ್ಗ ಜಿಲ್ಲೆಯ ರೈತರಿಗೆ “ಅಡಿಕೆ ಬೆಳೆಯ ಸುಧಾರಿತ ಬೇಸಾಯ ತಾಂತ್ರಿಕತೆ, ಅಡಿಕೆಯಲ್ಲಿ ಅಂತರ ಬೆಳೆಗಳ ಮಹತ್ವ ಮತ್ತು ಅಡಿಕೆ ಸಿಪ್ಪೆಯಿಂದ ಕಾಂಪೋಸ್ಟ್ ತಯಾರಿಕೆ” ಕುರಿತು ಮೂರು ದಿನದ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಕಾರ್ಯಗಾರದ ಮೊದಲನೇ ದಿನ ಸೆ.19ರಂದು ಬೆಳಗ್ಗೆ 10 ಗಂಟೆಗೆ ಡಾ. ನಾಗರಾಜಪ್ಪ ಅಡಿವಪ್ಪರ್, ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರು, ಅಡಿಕೆ ಸಂಶೋಧನಾ ಕೇಂದ್ರ, ಶಿವಮೊಗ್ಗ, ಡಾ. ಸುದೀಪ್, ತೋಟಗಾರಿಕೆ ತಜ್ಞರು, ಡಾ. ಸ್ವಾತಿ, ಕೀಟಶಾಸ್ತ್ರ ತಜ್ಞರು ಮತ್ತು ಡಾ. ಕಿರಣ್, ರೋಗಶಾಸ್ತ್ರಜ್ಞರು ಅವರು ಅಡಿಕೆ ಬೆಳೆಯಲ್ಲಿ ತಳಿಗಳ ಆಯ್ಕೆ, ಬೇಸಾಯ ಕ್ರಮ, ಪೋಷಕಾಂಶಗಳ ನಿರ್ವಹಣೆ, ರೋಗ ಕೀಟಗಳ ನಿರ್ವಹಣೆ ಕುರಿತು ವಿಷಯ ಮಂಡನೆ ಮತ್ತು ಹಾಗೂ ಅಡಿಕೆ ಸಿಪ್ಪೆಯಿಂದ ಕಾಂಪೋಸ್ಟ್ ತಯಾರಿಕೆಯ ಕುರಿತು ಪ್ರಾತ್ಯಕ್ಷಿಕೆ ಮಾಡಲಿದ್ದಾರೆ.
ಎರಡನೇ ದಿನ ಸೆ.20ರಂದು ಬೆಳಗ್ಗೆ 6 ಗಂಟೆಗೆ ತುಮಕೂರಿನ ಬೆಳ್ಳಾವಿ ಕ್ರಾಸ್ ಹತ್ತಿರದ ಕುರಿಕೆಂಪನಹಳ್ಳಿ ಗ್ರಾಮದ ಅಡಿಕೆಯಲ್ಲಿ ವಿವಿಧ ಅಂತರ ಮತ್ತು ಮಿಶ್ರ ಬೆಳೆ ಬೆಳೆದ ಪ್ರಗತಿಪರ ರೈತರಾದ ಹಫೀಜ್‍ಉಲ್ಲಾಖಾನ್ ಮತ್ತು ಮಷಣಾಪುರದ 100 ಕ್ಕೂ ಅಧಿಕ ಅಂತರ ಮತ್ತು ಮಿಶ್ರಬೆಳೆ ಸಂಯೋಜನೆ ಮಾಡಿದ ಪ್ರಗತಿಪರ ರೈತ ಮೃತ್ಯುಂಜಯಪ್ಪರವರ ತೋಟಕ್ಕೆ ಹಾಗೂ ತುಮಕೂರಿನ ವಿವಿಧ ಜೈವಿಕಗೊಬ್ಬರ ಮತ್ತು ಜೈವಿಕ ಪೀಡೆನಾಶಕ ಉತ್ಪಾದನೆ ಮಾಡುವ ಮಲ್ಟಿಪ್ಲೆಕ್ಸ ಬಯೋಟೆಕ್ ಪ್ರೈ ಲಿ ಸಂಸ್ಥೆಗೆ ಭೇಟಿ ನೀಡಲಾಗುವುದು.
ಮೂರನೇ ದಿನ ಸೆ.21ರಂದು ಬೆಳಗ್ಗೆ 10 ಗಂಟೆಗೆ ಅಡಿಕೆಯಲ್ಲಿ ಸಂಯೋಜನೆ ಮಾಡಬಹುದಾದ ಪ್ರಮುಖಅಂತರ ಹಾಗೂ ಮಿಶ್ರ ಬೆಳೆಗಳ ಮಹತ್ವ ಮತ್ತು ಅವುಗಳ ಬೇಸಾಯ ಕ್ರಮಗಳ ಕುರಿತು ಮಾಹಿತಿ ನೀಡಲಾಗುವುದು. ತರಬೇತಿಯ ಆದ ಪ್ರಯುಕ್ತ ಆಸಕ್ತ 50 ಜನ ರೈತ ಭಾಂದವರು ಈ ತರಬೇತಿಯಲ್ಲಿ ಭಾಗವಹಿಸಲು ಮೊಬೈಲ್ ಸಂಖ್ಯೆ 8277931058 ಗೆ ಕರೆಮಾಡಿ ತರಬೇತಿಯ ಸದುಪಯೋಗ ಪಡೆದುಕೊಳ್ಳಬೇಕು ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕ ಆರ್.ರಜನೀಕಾಂತ ತಿಳಿಸಿದ್ದಾರೆ.
ಮೊದಲು ನೋಂದಾವಣಿ ಮಾಡಿಕೊಂಡ 50 ಜನ ರೈತ ಭಾಂದವರಿಗೆ ಆದ್ಯತೆ ಮೇರೆಗೆ ತರಬೇತಿಗೆ ಪರಿಗಣಿಸಲಾಗುವುದು ಹಾಗೂ ತರಬೇತಿಗೆ ಹಾಜರಾಗುವ ರೈತರು ಕಡ್ಡಾಯವಾಗಿ ತಮ್ಮ ಎಫ್‍ಐಡಿ ಕಾರ್ಡ್ ಅಥವಾ ಚುನಾವಣೆ ಗುರುತಿನಚೀಟಿಯನ್ನು ತರಲು ಕೋರಲಾಗಿದೆ.

