ದಲಿತರ ಪಾಲಿಗೆ ರಸ್ತೆಯೇ ಸ್ನಾನ ಗೃಹ, ಚರಂಡಿಯೇ ಶೌಚಾಲಯ!?

News Desk

ವಿಶೇಷ ವರದಿ-
ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ : 
ಸ್ವಾತಂತ್ರ್ಯ ಬಂದು 79 ವರ್ಷಗಳು ಕಳೆದರೂ ಅಸ್ಪೃಶ್ಯರಿಗೆ, ದಲಿತರಿಗೆ ಇನ್ನೂ ಸಾಮಾಜಿಕ ನ್ಯಾಯ ಸಿಕ್ಕಿಲ್ಲ. ಈ ಸಮಾಜದ ಸ್ಥಿತಿಗತಿಗಳು ಶೋಚನೀಯವಾಗಿವೆ. ಅಂತಹ ಕುಟುಂಬಗಳ ಪೈಕಿ ಮೂರು ಸಂಸಾರಗಳು ಹಲವು ದಶಕಗಳ ಹಿಂದೆ ಜೀತಕ್ಕೆ ಬಂದವರು.

ಏಳೆಂಟು ದಶಕಗಳ ಜೀತದಾಳುಗಳಾಗಿ ದುಡಿದರೂ ದುಡಿಮೆಗೆ ಸಿಕ್ಕ ಫಲ ಅಂಗೈ ಅಗಲ ಜಾಗವಷ್ಟೇ, ಹಂದಿ ಗೂಡಿನಂತಹ ಜಾಗದಲ್ಲಿ ಅಜ್ಜ-ಅಜ್ಜಿ, ಅಪ್ಪ-ಅಮ್ಮ, ಮೊಮ್ಮಕ್ಕಳ ಸಂಸಾರ, ಮನೆಯಲ್ಲಿ ಮಲಗಲು ಜಾಗವಿಲ್ಲದೆ ರಸ್ತೆಯಲ್ಲೇ ಸ್ನಾನ, ಚರಂಡಿಯೇ ಶೌಚಾಲಯವಾಗಿದೆ, ಅಲೆಮಾರಿಗಳಿಗಿಂತ ಹೀನ ಸ್ಥಿತಿಯಲ್ಲಿ ಬದುಕುತ್ತಿದ್ದಾರೆ ಈ ದಲಿತ ಕುಟುಂಬದವರು.

- Advertisement - 

ರಾಜಧಾನಿ ಬೆಂಗಳೂರಿಗೆ ಕೇವಲ 35 ಕಿ.ಮೀ ದೂರವಷ್ಟೇ, ಆದರೆ ಈ ದಲಿತರ  ನೋವಿನ ಕೂಗು ಮಾತ್ರ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಸೇರಿದಂತೆ ಯಾವುದೇ ಸಚಿವರು, ಶಾಸಕರು, ಅಧಿಕಾರಿಗಳ ಕಿವಿಗೆ ಬಿದ್ದಿಲ್ಲ. ಕಣ್ಣಿಗೆ ಕಂಡಿಲ್ಲ ಎನ್ನುವುದು ವಿಪರ್ಯಾಸವೇ ಸರಿ.

ದೊಡ್ಡಬಳ್ಳಾಪುರ ತಾಲೂಕಿನ ಬೈರಸಂದ್ರಪಾಳ್ಯದಲ್ಲಿನ ದಲಿತ ಕುಟುಂಬಗಳ ದುಸ್ಥಿತಿ ಇದು. ಸವರ್ಣಿಯವರ ಮನೆಗಳಲ್ಲಿ ಜೀತಕ್ಕೆಂದು ಮೂರು ದಲಿತ ಕುಟುಂಬಗಳು ಬೈರಸಂದ್ರ ಗ್ರಾಮಕ್ಕೆ ಬಂದವು. ಅವರ ವಾಸಕ್ಕೆ ಮೂರು ನಿವೇಶನಗಳನ್ನ ನೀಡಲಾಗಿತ್ತು. ಈ ಮೂರು ಕುಟುಂಬಗಳು ಬೆಳೆದು ದೊಡ್ಡಾಗಿದೆ. ಆದರೆ, ಅದೇ ಇಕ್ಕಾಟದ ಮನೆಯಲ್ಲಿ ಅಜ್ಜ-ಅಜ್ಜ, ಅಪ್ಪ-ಅಪ್ಪ, ಮಕ್ಕಳು ಮೊಮ್ಮಕ್ಕಳು ಸಂಸಾರ ನಡೆಯುತ್ತಿವೆ. 

- Advertisement - 

ಹಿಂದೆಯೇ ಜೀತ ಬಿಟ್ಟ ದಲಿತರು ಕೂಲಿ ಕೆಲಸಕ್ಕೆ ಹೋಗುತ್ತಾರೆ, ಬರುವ ಮೂರು ಕಾಸಿಗೆ ಸಂಸಾರ ನಡೆಸುವುದೇ ಕಷ್ಟವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ನಿವೇಶನ ಖರೀದಿಸಿ ಮನೆ ಕಟ್ಟುವುದು ಅಸಾಧ್ಯವಾದ ಮಾತು ಇವರ ಪಾಲಿಗೆ, ಅಶ್ರಯ ಯೋಜನೆಯಡಿ ನಿವೇಶನ ಕೊಡುವಂತೆ ಅರ್ಜಿ ಹಾಕುತ್ತಲೇ ಬಂದಿದ್ದಾರೆ. ಆದರೆ ಪಂಚಾಯಿತಿಯಿಂದ ಕೊಡುತ್ತಿರುವ ಉತ್ತರ ಸರ್ಕಾರ ಜಾಗ ಇಲ್ಲ ಎಂದು. 

ದಲಿತರ ಕುಟುಂಬಕ್ಕೆ ಸೊಸೆಯಾಗಿ ಬಂದಿರುವ ಗೀತಾ ಇಲ್ಲಿನ ಸ್ಥಿತಿ ಕಂಡು ಕಣ್ಣೀರು ಹಾಕುತ್ತಾರೆ. ಮನೆಯಲ್ಲಿ ಮಲಗಲು ಜಾಗ ಇಲ್ಲ, ಇಂತಹ ಇಕ್ಕಟಾದ ಮನೆಯಲ್ಲಿ ಬಾತ್ ರೂಮ್ ಇಲ್ಲ, ಟಾಯ್ಲೆಟ್ ಕಟ್ಟಲು ಸಾಧ್ಯವೇ ಇಲ್ಲ, ರಸ್ತೆಯಲ್ಲಿ ತಟಿಕೆಗೆ ಸೀರೆ ಕಟ್ಟಿ ಸ್ನಾನ ಮಾಡುತ್ತೇವೆ, ಬರ್ಹಿದೆಸೆಗಾಗಿ ಹೊಲಗಳಿಗೆ ಹೋಗ ಬೇಕು, ನಮ್ಮನ್ನು ಕಂಡರೆ ಹೊಲದವರು ಬೈಯ್ದು ಹೊಡಿಸುತ್ತಾರೆ. ದೂರದಲ್ಲಿರುವ ಕೆರೆಗೆ ಹೋಗಿ ನಮ್ಮ ನಿತ್ಯ ಕ್ರಮಗಳನ್ನ ಮುಗಿಸ ಬೇಕು, ರಾತ್ರಿ ಸಮಯದಲ್ಲಿ ಬರ್ಹಿದೆಸೆ ಮಾಡುವುದು ನಮ್ಮ ಪಾಲಿಗೆ ನರಕವಾಗಿದೆ ಎಂದು ತಮ್ಮ ನೋವು ತೋಡಿಕೊಂಡರು. 

ದಲಿತ ಮುಖಂಡರಾದ ನರೇಂದ್ರಮೂರ್ತಿ ಮಾಡೇಶ್ವರ ಮಾತನಾಡಿಬೈರಸಂದ್ರ ಗ್ರಾಮದಲ್ಲಿ 40ಕ್ಕೂ ಹೆಚ್ಚು ದಲಿತ ಮಹಿಳೆಯರಿದ್ದಾರೆ. ಅವರ ಪಾಲಿಗೆ ಸ್ನಾನ ಮಾಡುವುದು ಚಿತ್ರಹಿಂಸೆಯೇ ಸರಿ. ಯಾರಾದ್ರು ನೋಡುತ್ತರೋ ಏನೋ ಎನ್ನುವ ಅಂಜಿಕೆಯಲ್ಲಿ ಸ್ನಾನ ಮಾಡಬೇಕು. ಮಳೆ ಬಂದ್ರೆ ಸ್ನಾನ ಮಾಡಲು ಸಾಧ್ಯವೇ ಇಲ್ಲ, ಬರ್ಹಿದೆಸೆಗಾಗಿ ಮಕ್ಕಳನ್ನು ದೂರಕ್ಕೆ ಕರೆದುಕೊಂಡು ಹೋಗಲು ಸಾಧ್ಯವಾಗದೆ,

ಮನೆ ಮುಂದಿನ ಚರಂಡಿಗಳಲ್ಲಿ ಬರ್ಹಿದೆಸೆ ಮಾಡಿಸಿ ನೀರು ಹಾಕುತ್ತಾರೆ. ಇದೇ ದಾರಿಯಲ್ಲಿ ಬರುವ ಸರ್ವಣಿಯರು ಮೂಗು ಮುಚ್ಚಿಕೊಂಡು ಹೋಗುತ್ತಾರೆ. ಇಂತಹ ಹೀನ ಸ್ಥಿತಿಯಲ್ಲಿ ಬದುಕುತ್ತಿರುವ ದಲಿತ ಕುಟುಂಬಗಳು ಗೌರವಯುತ ಜೀವನ ಮಾಡಬೇಕಾದರೆ ಅವರಿಗೆ ಅಗತ್ಯ ಇರುವ ನಿವೇಶನ ನೀಡಿ ಆಶ್ರಯ ಯೋಜನೆಯಲ್ಲಿ ಮನೆ ನಿರ್ಮಿಸಿಕೊಡುವ ತುರ್ತು ಅಗತ್ಯವಿದೆ ಎಂದು ಮನವಿ ಮಾಡಿದರು. 

ದಲಿತ ಮುಖಂಡ ಮೈಲಾರಪ್ಪ ಮಾತನಾಡಿ, ಜನಪ್ರತಿನಿಧಿಗಲು ಇಲ್ಲಿನ ದಲಿತರನ್ನ ಓಟು ಹಾಕುವುದಕ್ಕೆ ಮಾತ್ರ ಸಿಮೀತ ಮಾಡಿದ್ದಾರೆ.

ಇಲ್ಲಿನ ಮುಖಂಡರು, ಓಟು ಕೇಳಲು ಬಂದಾಗ ನಿವೇಶನ ಕೇಳಿದ್ರೆ ಸರ್ಕಾರಿ ಜಾಗ ಇಲ್ಲವೆಂದು ಹೇಳ್ತಾರೆ, ನಿವೇಶನಕ್ಕಾಗಿ ಅರ್ಜಿ ಹಾಕಿದ್ದಾರೆ. ಆದರೆ ಇವರ ನೋವು ಕೇಳುವ ಯಾವೊಬ್ಬ ಜನಪ್ರತಿನಿಧಿ ಸಹ ಇಲ್ಲಿಲ್ಲ, ಇವರಿಗೆ ಅಗತ್ಯವಾಗಿ ಬೇಕಿರುವುದು ನಿವೇಶನ, ನಿವೇಶನ ಕೊಡಿಸಲು ದಲಿತ ಸಂಘಟನೆ ಹೋರಾಟ ಮಾಡುವುದ್ದಾಗಿ ಹೇಳಿದರು.

ಈ ವೇಳೆ ಮಾದಿಗ ಮೀಸಲಾತಿ ಹೋರಾಟ ಸಮಿತಿ ತಾಲೂಕು ಅಧ್ಯಕ್ಷ ನರೇಂದ್ರಮೂರ್ತಿ ಮಾಡೇಶ್ವರ, ಕಾರ್ಯದರ್ಶಿ ಮೈಲಾರಪ್ಪ ನಂದಿಗುಂದ, ದಲಿತ ಮುಖಂಡರಾದ ಮುಖಂಡರಾದ ನರಸಿಂಹಮೂರ್ತಿ ದೊಡ್ಡಕುಕ್ಕನಹಳ್ಳಿ, ಕೆ.ಪೂಜಪ್ಪ ನೇರಳೆಘಟ್ಟ , ಬಿ.ಹನುಮಯ್ಯ ಮಾಡೇಶ್ವರ, ನರಸಿಂಹಮೂರ್ತಿ ಮಾರಸಂದ್ರ ಪದಾಧಿಕಾರಿಗಳು ಮನವಿ ಮಾಡಿ ಅಗತ್ಯ ಮೂಲ ಸೌಲಭ್ಯ ಕಲ್ಪಿಸಲು ಮನವಿ ಮಾಡಿದ್ದಾರೆ.

 

 

Share This Article
error: Content is protected !!
";