ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಅಂತಾರಾಷ್ಟ್ರೀಯ ಮಟ್ಟದ ಯೋಗಪಟುವನ್ನಾಗಿ ಮಾಡುವುದಾಗಿ ಯೋಗ ಕಲಿಯಲು ಬರುತ್ತಿದ್ದ ಅಪ್ರಾಪ್ತೆಗೆ ಪುಸಲಾಯಿಸಿ ಆಮಿಷವೊಡ್ಡಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪದಡಿ ಯೋಗಗುರುವೊಬ್ಬರನ್ನು ಆರ್.ಆರ್.ನಗರ ಪೊಲೀಸರು ಬಂಧಿಸಿದ್ದಾರೆ.
ಬಾಲಕಿಯ ಕುಟುಂಬಸ್ಥರು ನೀಡಿದ ದೂರು ಆಧರಿಸಿ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿ ಆರೋಪಿ ಯೋಗ ಗುರು ನಿರಂಜನಾಮೂರ್ತಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರ್. ಆರ್. ನಗರದ ಸನ್ ಶೈನ್ ಇನ್ಸ್ಟಿಟ್ಯೂಟ್ ಹೆಸರಲ್ಲಿ 2019 ರಿಂದ ಆರೋಪಿ ಯೋಗ ತರಗತಿ ನಡೆಸುತ್ತಿದ್ದರು. ಬಾಲಕಿಯು 2021ರಿಂದ ಯೋಗ ತರಗತಿಗೆ ಸೇರಿದ್ದಳು. ತಮ್ಮ ಯೋಗಗುರುಗಳೊಂದಿಗೆ ಥಾಯ್ಲೆಂಡ್ನಲ್ಲಿ ನಡೆದಿದ್ದ ಯೋಗ ಸ್ಪರ್ಧೆಯಲ್ಲಿ ಭಾಗಿಯಾಗಿದ್ದರು.
ಈ ವೇಳೆ ಆರೋಪಿ ಲೈಂಗಿಕ ದೌರ್ಜನ್ಯವೆಸಗಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
2024ರಲ್ಲಿ ಮತ್ತೆ ಯೋಗ ಸ್ಪರ್ಧೆಯಲ್ಲಿ ಭಾಗವಹಿಸಲು ಬಾಲಕಿಯು ಆರೋಪಿ ಒಡೆತನದ ಯೋಗ ಕೇಂದ್ರಕ್ಕೆ ಮತ್ತೆ ಸೇರಿಕೊಂಡಿದ್ದಳು. ರಾಷ್ಟ್ರಮಟ್ಟದ ಯೋಗ ಸ್ಪರ್ಧೆಯಲ್ಲಿ ಮೆಡಲ್ ಕೊಡಿಸುತ್ತೇನೆ.
ಇದರಿಂದ ಉತ್ತಮ ಕೆಲಸ ಕೊಡಿಸುವುದಾಗಿ ಆಮಿಷವೊಡ್ಡಿ ಇನ್ ಸ್ಟಿಟ್ಯೂಟ್ನಲ್ಲಿ ಕಳೆದ ಆಗಸ್ಟ್ನಲ್ಲಿ ಬಾಲಕಿಯೊಂದಿಗೆ ದೈಹಿಕ ಸಂಪರ್ಕ ಮಾಡಿರುವುದಾಗಿ ದೂರಿನಲ್ಲಿ ಆರೋಪಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಆರೋಪಿ ಯೋಗ ಗುರು ಬಂಧಿಸಿ ಹೆಚ್ಚಿನ ವಿಚಾರಣೆಗೊಳಪಡಿಸಿದ್ದಾರೆ.

