ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕುರುಬರಿಗೂ ನಾಯಕರಿಗೂ ಎತ್ತಿಕಟ್ಟುವ ಮೂಲಕ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೇಲೆ ಗೂಬೆ ಕೂರಿಸುವ ಕೆಲಸವಾಗುತ್ತಿರುವುದರಿಂದ ಕುರುಬ ಸಮಾಜ ಅವರಿಗೆ ಬೆಂಬಲವಾಗಿ ನಿಲ್ಲಬೇಕೆಂದು ಹೊಸದುರ್ಗ ಕೆಲ್ಲೋಡು ಶಾಖಾ ಮಠದ ಈಶ್ವರಾನಂದಪುರಿ ಸ್ವಾಮೀಜಿ ತಿಳಿಸಿದರು.
ರಂಗಯ್ಯನಬಾಗಿಲು ಸಮೀಪವಿರುವ ಕುರುಬರ ಹಾಸ್ಟೆಲ್ನಲ್ಲಿ ಶುಕ್ರವಾರ ಕರೆಯಲಾಗಿದ್ದ ತುರ್ತು ಸಭೆಯ ಸಾನಿಧ್ಯ ವಹಿಸಿ ಮಾತನಾಡಿದ ಈಶ್ವರಾನಂದಪುರಿ ಸ್ವಾಮೀಜಿ ಕುರುಬರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂದು ನಾನು ಪಾದಯಾತ್ರೆ ನಡೆಸಿದಾಗ ಅಂದಿನ ಸಚಿವ ಆರ್.ಅಶೋಕ್ ಮನವಿ ಪಡೆದು ನಂತರ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದಾಗ ಕೆಲವು ಅಂಕಿ ಅಂಶಗಳು ಬೇಕೆಂದು ಹಿಂದಕ್ಕೆ ಕಳಿಸಲಾಗಿತ್ತು.
ಗುಲ್ಬರ್ಗ, ಯಾದಗಿರಿ, ಬೀದರ್ ಜಿಲ್ಲೆಗಳಲ್ಲಿ ಕುರುಬರ ಸಮಸ್ಯೆಗಳನ್ನು ಚರ್ಚಿಸುವುದಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಅಧಿಕಾರಿಗಳ ಸಭೆ ಕರೆದು ಚರ್ಚಿಸಿದ್ದನ್ನೆ ದೊಡ್ಡ ಪ್ರಮಾದವನ್ನಾಗಿ ಮಾಡಿ ಕುರುಬರನ್ನು ಎಸ್ಟಿ.ಗೆ ಸೇರಿಸಲು ಹುನ್ನಾರ ನಡೆಸುತ್ತಿದ್ದಾರೆಂಬ ಕೂಗು ಕೇಳಿ ಬಂದಿತು. ಕುರುಬ ಹಾಲು ಮತಸ್ಥರೆಂದು ಸುಳ್ಳು ಜಾತಿ ಸರ್ಟಿಫಿಕೇಟ್ಗಳನ್ನು ತೆಗೆದುಕೊಳ್ಳುತ್ತಿದ್ದಾರೆಂಬ ಆಪಾದನೆ ನಮ್ಮ ಜನಾಂಗದ ಮೇಲಿದೆ ಎಂದರು.
ಕಾಂತರಾಜ್ ಆಯೋಗದ ವರದಿಯನ್ನು ೬೦ ಪ್ರಬಲ ಶಾಸಕರುಗಳು ವಿರೋಧಿಸಿದರು. ಲಿಂಗಾಯಿತ ಸಮುದಾಯಗಳಲ್ಲಿ ಅನೇಕ ಪಂಗಡಗಳಿವೆ. ಅವರ ಸಮಸ್ಯೆಗಳನ್ನು ಸರ್ಕಾರದ ಮೇಲೆ ಹಾಕಿ ಮುಖ್ಯಮಂತ್ರಿಗಳ ತೇಜೋವಧೆ ಮಾಡಲಾಗುತ್ತಿದೆ. ಸೆ.೨೨ ರಿಂದ ಹಿಂದುಳಿದ ವರ್ಗಗಳ ಆಯೋಗ ನಡೆಸುತ್ತಿರುವ ಗಣತಿಯಲ್ಲಿ ಕಡ್ಡಾಯವಾಗಿ ಕುರುಬ ಎಂದು ನಮೂದಿಸಬೇಕು. ಪರ್ಯಾಯ ಜಾತಿಗಳ ಪದನಾಮಗಳನ್ನು ಬರೆಸಬಾರದು. ಈ ಕುರಿತು ಕರಪತ್ರಗಳನ್ನು ಮುದ್ರಿಸಿ ಪ್ರತಿ ಹಳ್ಳಿಗಳಲ್ಲಿ ಹಂಚುವ ಮೂಲಕ ಕುರುಬ ಜನಾಂಗದವರಲ್ಲಿ ಜಾಗೃತಿ ಮೂಡಿಸುವಂತೆ ಹೇಳಿದರು.
ನಮ್ಮ ಮಠದಿಂದ ಕಾಗಿನೆಲೆ ಗ್ರಾಮೀಣಾಭಿವೃದ್ದಿ ಕೋ-ಆಪರೇಟಿವ್ ಸೊಸೈಟಿ ಆರಂಭಿಸುತ್ತಿದ್ದೇವೆ. ಪ್ರತಿ ತಾಲ್ಲೂಕಿನಲ್ಲಿ ೧೫೦ ಷೇರು ಸಂಗ್ರಹಿಸುವ ಗುರಿಯಿದೆ. ಮಹಿಳೆಯರಿಗೆ ಒಂದು ಕೋಟಿ ರೂ.ಗಳವರೆಗೆ ಸಾಲ ನೀಡಿ ಆರ್ಥಿಕವಾಗಿ ಸ್ವಾವಲಂಭಿಯನ್ನಾಗಿಸುವ ಉದ್ದೇಶವಿದೆ. ಇದಕ್ಕೆ ಕುರುಬ ಸಮಾಜದ ಪ್ರತಿಯೊಬ್ಬರು ಕೈಜೋಡಿಸಬೇಕು. ಜನಾಂಗದ ಮಕ್ಕಳ ಶಿಕ್ಷಣಕ್ಕೆ ಸಾಲ ನೀಡಲಾಗುವುದು. ಪ್ರತಿ ಜಿಲ್ಲೆಯಲ್ಲಿಯೂ ಹತ್ತು ಸಾವಿರ ಮಹಿಳೆಯರನ್ನು ಸಂಘಟಿಸಿ ರಾಜ್ಯದಲ್ಲಿ ಅತಿ ಎತ್ತರಕ್ಕೆ ತೆಗೆದುಕೊಂಡು ಹೋಗಬೇಕಿದೆ. ೨೦೧೯ ರ ಕೋವಿಡ್ ಸಂದರ್ಭದಲ್ಲಿ ಎರಡು ಸಾವಿರ ಮಹಿಳೆಯರ ಗುಂಪುಗಳನ್ನು ರಚಿಸಿ ಮೂರರಿಂದ ನಾಲ್ಕು ಕೋಟಿ ರೂ.ಗಳ ಸಾಲ ಕೊಟ್ಟಿದ್ದೇವೆಂದರು.
ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಶ್ರೀರಾಮ್ ಮಾತನಾಡಿ ಸಂಘಕ್ಕೆ ಏಳೆಂಟು ಲಕ್ಷ ರೂ.ಗಳನ್ನು ಖರ್ಚು ಮಾಡಿ ವ್ಯವಸ್ಥಿತವಾಗಿಟ್ಟಿದ್ದೇವೆ. ಸಂಘಕ್ಕೆ ಬರುವ ೨೪ ಸಾವಿರ ರೂ. ಬಾಡಿಗೆ ಹಣ ಎಲ್ಲಿಯೂ ಪೋಲಾಗಿಲ್ಲ. ಮಾಳಪ್ಪನಹಟ್ಟಿ ಸಮೀಪ ಒಂದು ಎಕರೆ ಜಾಗವಿದೆ. ಐವತ್ತರಿಂದ ಅರವತ್ತು ಕೋಟಿ ರೂ.ಗಳ ಆಸ್ತಿಯಿದೆ. ಹೈಟೆಕ್ ಸಮುದಾಯ ಭವನ, ಪಿ.ಜಿ. ಮಾಡಬೇಕೆಂದಿದ್ದೇವೆ. ನಾಲ್ಕೈದು ಕೋಟಿ ರೂ.ಗಳನ್ನು ಸಂಗ್ರಹಿಸಿ ಕಟ್ಟಡ ಕಟ್ಟಬೇಕಾಗಿರುವುದರಿಂದ ಮುಖ್ಯಮಂತ್ರಿಗಳನ್ನು ಸಂಪರ್ಕಿಸಿ ಅನುದಾನ ಕೊಡಿಸುವಂತೆ ಸ್ವಾಮೀಜಿಯವರಲ್ಲಿ ಮನವಿ ಮಾಡಿದರು.
ಜಿಲ್ಲಾ ಕುರುಬರ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಟಿ.ಜಗದೀಶ್ ಮಾತನಾಡಿ ಹಿಂದುಳಿದ ವರ್ಗಗಳ ಆಯೋಗ ನಡೆಸುತ್ತಿರುವ ಜಾತಿ ಗಣತಿ ಸಮೀಕ್ಷೆಯಲ್ಲಿ ಕಡ್ಡಾಯವಾಗಿ ಕುರುಬ ಎಂದು ಬರೆಸಬೇಕು. ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ರಾಜಕೀಯವಾಗಿ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಪಡೆಯಬೇಕಾಗಿರುವುದರಿಂದ ಯಾರು ಗಣತಿಯಿಂದ ವಂಚಿತರಾಗಬಾರದು.
ಮನೆ ಮನೆಗೆ ಸಮೀಕ್ಷೆಗೆ ಬಂದಾಗ ನಿಖರವಾದ ಮಾಹಿತಿ ನೀಡುವಂತೆ ಸಮಾಜದ ಮುಖಂಡರುಗಳು ಪ್ರತಿ ಮನೆ ಮನೆಗೆ ಭೇಟಿ ನೀಡಿ ಜಾಗೃತಿಗೊಳಿಸುವಂತೆ ವಿನಂತಿಸಿದರು.
ಕುರುಬ ಸಮಾಜದ ಮುಖಂಡರುಗಳಾದ ಹೆಚ್.ಮಂಜಪ್ಪ, ಡಿ.ಉಮೇಶ್, ಲೋಕೇಶ್, ಸಜ್ಜನಕೆರೆ ರಾಜಣ್ಣ ಇವರುಗಳು ವೇದಿಕೆಯಲ್ಲಿದ್ದರು. ಕುರುಬ ಸಮಾಜದ ಅನೇಕ ಪ್ರಮುಖರು ಸಭೆಯಲ್ಲಿ ಪಾಲ್ಗೊಂಡಿದ್ದರು.

