ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ನಡೆಯುತ್ತಿರುವ ಜಾತಿ ಸಮೀಕ್ಷೆಯಿಂದ ಯಾರು ವಂಚಿತರಾಗದೆ ಜಾತಿ ಕಾಲಂನಲ್ಲಿ ಅವರವರ ಪಂಗಡದ ಹೆಸರುಗಳನ್ನು ಕಡ್ಡಾಯವಾಗಿ ನಮೂದಿಸುವಂತೆ ಜವಳಿ ಅಭಿವೃದ್ದಿ ನಿಗಮದ ಮಾಜಿ ರಾಜ್ಯಾಧ್ಯಕ್ಷ ಗೋ.ತಿಪ್ಪೇಶ್ ಮನವಿ ಮಾಡಿದರು.
ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಮುಂಬರುವ ದಿನಗಳಲ್ಲಿ ಶೈಕ್ಷಣಿಕ, ಸಾಮಾಜಿಕ, ಆರ್ಥಿಕವಾಗಿ ಸೌಲತ್ತುಗಳನ್ನು ಪಡೆಯಬೇಕಾಗಿರುವುದರಿಂದ ತಪ್ಪದೆ ಸಮೀಕ್ಷೆಯಲ್ಲಿ ಪಾಲ್ಗೊಳ್ಳಿ. ಪ್ರಧಾನವಾಗಿ ದೇವಾಂಗ, ಪದ್ಮಸಾಲಿ, ಪಟ್ಟಸಾಲಿ, ತೊಗಟವೀರ, ಕುರುಹಿನಶೆಟ್ಟಿ, ಸ್ವಕುಳಸಾಲಿ
ಹಠಗಾರ ಹೀಗೆ ೨೭ ಉಪ ಪಂಗಡಗಳಾಗಿ ವಿಭಜನೆಯಾಗಿದೆ. ಜಾತಿ ಕಾಲಂನಲ್ಲಿ ಅವರವರ ಪಂಗಡಗಳನ್ನು ನಮೂಸಿ ಧರ್ಮದ ಕಾಲಂನಲ್ಲಿ ಹಿಂದೂ ಎಂದು ಬರೆಸಬೇಕು. ಇದರಿಂದ ಮೀಸಲಾತಿ ಪಡೆಯಲು ಅನಕೂಲವಾಗಲಿದೆ ಎಂದರು.
ಜಿಲ್ಲೆಯಲ್ಲಿ ಒಂದು ಲಕ್ಷಕ್ಕೂ ಅಧಿಕ ಜನಸಂಖ್ಯೆಯಿದ್ದು, ರಾಜ್ಯದಲ್ಲಿ ೬೦ ಲಕ್ಷದಷ್ಟಿದ್ದೇವೆ. ಬಾಗಲಕೋಟೆ, ಬೆಂಗಳೂರು, ಗದಗ, ಬೆಂಗಳೂರಿನಲ್ಲಿ ಹೆಚ್ಚಿನ ಜನಸಂಖ್ಯೆಯಿದೆ. ಕುಲಕಸುಬು ಕಾಲಂನಲ್ಲಿ ನೇಕಾರಿಕೆ ಎಂದು ಬರೆಸಬೇಕು. ಜನರ ಮಾನ ಕಾಪಾಡುವ ಪವಿತ್ರ ವೃತ್ತಿ ನೇಕಾರಿಕೆಯಲ್ಲಿ ತೊಡಗಿರುವವರು ಸಮೀಕ್ಷೆಯಿಂದ ತಪ್ಪಿಸಿಕೊಳ್ಳಬೇಡಿ ಎಂದು ಗೋ.ತಿಪ್ಪೇಶ್ ವಿನಂತಿಸಿದರು.
ಜಿಲ್ಲಾ ನೇಕಾರರ ಒಕ್ಕೂಟದ ಅಧ್ಯಕ್ಷ ಎಂ.ಗೋವಿಂದಪ್ಪ, ಕಾರ್ಯದರ್ಶಿ ಸುರೇಶ್, ಶಿವರುದ್ರಪ್ಪ, ಉಂಬಕ್ಕ ಇವರುಗಳು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

