ಅಣಬೆ ಬೇಸಾಯ ಹಾಗೂ ಮೌಲ್ಯವರ್ಧನೆ

News Desk

ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಕಡಿಮೆ ಖರ್ಚು ಮತ್ತು ಕಡಿಮೆ ಜಾಗದಲ್ಲಿ ಹೆಚ್ಚಿನ ಆದಾಯ ಗಳಿಸಲು ಪರಿಸರ ಸ್ನೇಹಿ ಅಣಬೆ ಕೃಷಿಯನ್ನು ಕೈಗೊಳ್ಳಬಹುದು. ಇದನ್ನು ರೈತಬಾಂಧವರು ಸಮಗ್ರ ಕೃಷಿ ಪದ್ದತಿಯ ಒಂದು ಅಂಗವಾಗಿಸಿಕೊಳ್ಳಬಹುದು ಎಂದು ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕ ಆರ್.ರಜನೀಕಾಂತ ಹೇಳಿದರು.

ಹಿರಿಯೂರು ತಾಲ್ಲೂಕಿನ ಬಬ್ಬೂರುಫಾರಂನ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಶುಕ್ರವಾರ ರಾಜ್ಯ ವಲಯ ಕೃಷಿ ಆಯುಕ್ತಾಲಯ ಯೋಜನೆಯಡಿ ಜಿಲ್ಲೆಯ ರೈತರಿಗೆ ಅಣಬೆ ಬೇಸಾಯ ಹಾಗೂ ಮೌಲ್ಯವರ್ಧನೆಕುರಿತು ಒಂದು ದಿನದ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

- Advertisement - 

ವಿವಿಧ ತಿನ್ನುವ ಅಣಬೆಯ ಪ್ರಬೇದಗಳಲ್ಲಿ ಚಿಪ್ಪು ಅಣಬೆ ಅಥವಾ ಆಯ್‍ಸ್ಟಾರ್ ಅಣಬೆಯನ್ನು ಅತೀ ಸುಲಭವಾಗಿ ಬೆಳೆಯಬಹುದು. ತಿನ್ನುವ ಅಣಬೆಯು ಒಂದು ಉತ್ತಮ ಪೌಷ್ಟಿಕ ಆಹಾರವಾಗಿದ್ದು, ಹಲವು ವಿಟಮಿನ್‍ಗಳು ಮತ್ತು ಖನಿಜಾಂಶಗಳಿಂದ ಕೂಡಿದ್ದು ಕಬ್ಬಿಣ ಮತ್ತು ಸಕ್ಕರೆ ಅಂಶ ಕಡಿಮೆ ಇರುವುದರಿಂದ ಇದು ಮಧುಮೇಹಿ ಮತ್ತು ಹೃದಯ ರೋಗಗಳನ್ನು ತಡೆಗಟ್ಟುವಲ್ಲಿ ಸಹಕಾರಿಯಾಗಿದೆಂದರು. ಆದ ಪ್ರಯುಕ್ತ ಇದನ್ನು ಕೊಠಡಿಯೊಳಗೆ ಕಡಿಮೆ ಜಾಗದಲ್ಲಿ, ಕಡಿಮೆ ಅವಧಿಯಲ್ಲಿ ಮತ್ತು ಕಡಿಮೆ ಖರ್ಚಿನಲ್ಲಿ ಹವ್ಯಾಸವಾಗಿ ಅಥವಾ ವಾಣಿಜ್ಯ ಬೆಳೆಯಾಗಿ ಬೆಳೆಯಲು ರೈತರು ಈ ತರಬೇತಿಯಲ್ಲಿ ನಿಡಲಾಗುವ ಮಾಹಿತಿಯ ಸದುಪಯೋಗ ಪಡೆದುಕೊಳ್ಳಲು ಕೋರಿದರು.

ರೈತರು ಪ್ರಸ್ತುತ ಹವಾಮಾನ ವೈಪರಿತ್ಯದಿಂದ ಕೃಷಿಯನ್ನು ಒಂದೇ ನಂಬಿ ಆರ್ಥಿಕವಾಗಿ ಮುನ್ನೆಡೆಯಲು ಸಾಧ್ಯವಾಗದ ಹಿನ್ನಲೆಯಲ್ಲಿ ಕೃಷಿ ಉಪಕಸುಬುಗಳಾದ ಜೇನು ಸಾಕಾಣಿಕೆ, ಹೈನುಗಾರಿಕೆ, ಕೋಳಿ ಸಾಕಾಣಿಕೆ ಹಾಗೂ ಕುರಿ ಮತ್ತು ಮೇಕೆ ಸಾಕಾಣಿಕೆಯನ್ನು ಕೈಗೊಳ್ಳುವುದರಿಂದ ಒಂದರಲ್ಲಿ ನಷ್ಟವಾದರೆ ಇನ್ನೊಂದು ಕೃಷಿ ಪೂರಕ ಚಟುವಟಿಕೆಯಿಂದ ಲಾಭವನ್ನು ನಿರೀಕ್ಷಿಸಬಹುದು.

- Advertisement - 

ಹಿರಿಯೂರು ತೋಟಗಾರಿಕೆ ಮಹಾವಿದ್ಯಾಲಯದ ಕೃಷಿ ಸೂಕ್ಷ್ಮ ಜೀವಶಾಸ್ತ್ರ ವಿಭಾಗ ಸಹಾಯಕ ಪ್ರಾಧ್ಯಾಪಕ ಗೊರಪ್ಪನವರ ಭರಮಪ್ಪ ಅವರು ತಿನ್ನುವ ಅಣಬೆಯ ವಿವಿಧ ತಳಿಗಳ ಆಯ್ಕೆ, ಬೇಸಾಯ ಕ್ರಮ, ನಿರ್ವಹಣೆ, ಮುನ್ನೇಚ್ಚರಿಕೆ ಕ್ರಮಗಳ ಕುರಿತು ರೈತರಿಗೆ ವಿಷಯ ಮಂಡನೆ ಮಾಡಿದರು.

ಭೀಮಸಮುದ್ರದ ತಿಪ್ಪೇಸ್ವಾಮಿ ಅವರು ಅಣಬೆ ಕೃಷಿಯಲ್ಲಿ ಅನುಸರಿಸಿದ ಬೇಸಾಯ ಕ್ರಮಗಳು ಮತ್ತು ಮಾರುಕಟ್ಟೆಯ ವಿಧಾನದ ಕುರಿತು ರೈತರಿಗೆ ಮಾಹಿತಿ ನೀಡಿದರು.

ಹಿರಿಯೂರಿನ ಕೃಷಿ ವಿಜ್ಷಾನ ಕೇಂದ್ರ ಡಾ.ಸರಸ್ವತಿ (ಗೃಹ ವಿಜ್ಞಾನ) ಇವರು ಅಣಬೆ ಬೆಳೆಯ ವಿವಿಧ ಮೌಲ್ಯವರ್ಧಿತ ಉತ್ಪನ್ನಗಳ ಕುರಿತು ಮಾಹಿತಿ ನೀಡಿದರು. ನಂತರ ಚಿಪ್ಪು ಅಣಬೆಯನ್ನು ಬೆಳೆಯು ಬಗೆಯನ್ನು ಹಾಜರಿದ್ದ ರೈತರಿಂದಲೇ ಪ್ರಾತ್ಯಕ್ಷಿಕೆ ಮಾಡಿಸುವ ಮೂಲಕ ರೈತರಿಗೆ ಅಣಬೆ ಬೆಳೆಯುವ ರೀತಿಯನ್ನು ಮನದಟ್ಟು ಮಾಡಿಕೊಡಲಾಯಿತು.

ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕಿ ಪೂರ್ಣಶ್ರೀ ಎಂ ಬಡೀಗೇರ ನಿರೂಪಿಸಿದರು. ಕೃಷಿ ಅಧಿಕಾರಿ ಪವಿತ್ರ ಎಂ ಜೆ ಹಾಗೂ ಅಧೀಕ್ಷಕ ಶಿವಪ್ರಕಾಶ್ ಕೆಪಿ ಇವರು ರೈತರನ್ನು ನೋಂದಾವಣಿ ಮಾಡಿಕೊಂಡರು.
ಈ ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಭಾಗದಿಂದ ಆಗಮಿಸಿದ 77 ಜನ ಆಸಕ್ತ ರೈತ ಭಾಂದವರು ಸಕ್ರಿಯವಾಗಿ ಭಾಗವಹಿಸಿದ್ದರು.

Share This Article
error: Content is protected !!
";