ಚಂದ್ರವಳ್ಳಿ ನ್ಯೂಸ್, ದಾವಣಗೆರೆ:
ದಾವಣಗೆರೆಯ ಹಿಂದೂ ಮಹಾಗಣಪತಿ ಶೋಭಾಯಾತ್ರೆ ಶನಿವಾರ ಅದ್ದೂರಿಯಾಗಿ ಜರುಗಿತು. ಹಿಂದೂ ಮಹಾಗಣಪತಿ ಕಮಿಟಿ ದಾವಣಗೆರೆಯ ಹೈಸ್ಕೂಲ್ ಮೈದಾನದಲ್ಲಿ ಪ್ರತಿಷ್ಠಾಪಿಸಿದ್ದ 8ನೇ ವರ್ಷದ ಹಿಂದೂ ಮಹಾಗಣಪತಿ ಶೋಭಾಯಾತ್ರೆ ಮೂಲಕ ಅದ್ಧೂರಿಯಾಗಿ ವಿಸರ್ಜನೆ ಮಾಡಲಾಯಿತು. ಲಕ್ಷಾಂತರ ಭಕ್ತರು ಭಾಗಿಯಾದರು.
ಡಿಜೆ ಬದಲಿಗೆ ಆರ್ಕೆಸ್ಟ್ರಾ:
ದಾವಣಗೆರೆ ನಗರದ ಹೈಸ್ಕೂಲ್ ಮೈದಾನದಿಂದ ಹೊರಟ ಮಹಾಗಣಪತಿ ಶೋಭಾಯಾತ್ರೆಗೆ ಎಸ್ಪಿ ಉಮಾಪ್ರಶಾಂತ್ ಅವರು ಟ್ರ್ಯಾಕ್ಟರ್ ಚಲಾಯಿಸಿ ಚಾಲನೆ ನೀಡಿದರು.
ದಾವಣಗೆರೆ ಜಿಲ್ಲಾಡಳಿತದಿಂದ ಡಿಜೆಬಳಕೆಗೆ ನಿರ್ಬಂಧ ಹೇರಿದ ಬೆನ್ನಲ್ಲೇ ಪೊಲೀಸರು ಡಿಜೆ ಹಾಕದಂತೆ ಆಯೋಜಕರಿಗೆ ತಿಳಿಸಿದ್ದರು. ಆರ್ಕೆಸ್ಟ್ರಾ ಮ್ಯೂಸಿಕ್ಗೆ ಎಸ್ಪಿ ಅನುಮತಿ ನೀಡಿದ್ದರು.
ಇದರ ಸದ್ದಿಗೆ ಯುವ ಸಮೂಹ ಕುಣಿದು ಕುಪ್ಪಳಿಸಿತು. ಅಲ್ಲದೆ ಮತ್ತಷ್ಟು ಯುವಕರು ನಾಸಿಕ್ ಡೋಲಿಗೆ ಭರ್ಜರಿ ಹೆಜ್ಜೆ ಹಾಕಿದರು. ಡೋಲು, ಚಂಡೆ, ವೀರಗಾಸೆ, ನಾಸಿಕ್ ಡೋಲ್, ರೋಡ್ ಆರ್ಕೆಸ್ಟ್ರಾ ಹಾಗೂ ಹಲವು ಕಲಾ ತಂಡಗಳು ಶೋಭಾಯಾತ್ರೆಯ ಮೆರುಗು ಹೆಚ್ಚಿಸಿದವು.
ಕೃತಕ ಬಾವಿಯಲ್ಲಿ ಗಣೇಶ ವಿಸರ್ಜನೆ:
ದಾವಣಗೆರೆ ನಗರದ ಹೈಸ್ಕೂಲ್ ಮೈದಾನದಿಂದ ಶೋಭಾಯಾತ್ರೆ ಆರಂಭವಾಗಿ ಎವಿಕೆ ಕಾಲೇಜು ರಸ್ತೆ ಮುಖಾಂತರ ಅಂಬೇಡ್ಕರ್ ವೃತ್ತ, ಜಯದೇವ ವೃತ್ತ, ಲಾಯರ್ ರಸ್ತೆ, ಪಿ.ಬಿ.ರಸ್ತೆ ಮಾರ್ಗವಾಗಿ ಸಾಗಿ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಕೊನೆಗೊಂಡು ನಂತರ ಬಾತಿ ಕೆರೆ ಬಳಿ ಕೃತಕ ಬಾವಿಯಲ್ಲಿ ಮೂರ್ತಿಯನ್ನು ವಿಸರ್ಜನೆ ಮಾಡಲಾಯಿತು. ಮೆರವಣಿಗೆಯಲ್ಲಿ ಲಕ್ಷಾಂತರ ಮಂದಿ ಭಕ್ತರು ಭಾಗಿಯಾಗಿ ಭಕ್ತಿ ಸಮರ್ಪಿಸಿದರು.
ಖಾಕಿ ಕಣ್ಗಾವಲು:
ದಾವಣಗೆರೆ ಹಿಂದೂ ಮಹಾಗಣಪತಿ ಶೋಭಾಯಾತ್ರೆಯಲ್ಲಿ ಲಕ್ಷಾಂತರ ಜನ ಸೇರುವುದರಿಂದ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಕಟ್ಟೆಚ್ಚರ ವಹಿಸಿತ್ತು. ಜಿಲ್ಲಾಧಿಕಾರಿ ಡಾ.ಗಂಗಾಧರ್ ಸ್ವಾಮಿ, ಎಸ್ಪಿ ಉಮಾಪ್ರಶಾಂತ್ ಅವರು ಹೈ ಅಲರ್ಟ್ ಆಗಿದ್ದರು.
ಎಸ್ಪಿ ಉಮಾಪ್ರಶಾಂತ್ ನೇತೃತ್ವದಲ್ಲಿ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆ ಮುನ್ನೆಚ್ಚರಿಕೆ ವಹಿಸಿತ್ತು.
1 ಎಸ್ಪಿ, 1 ಎಎಸ್ಪಿ, 8 ಡಿವೈಎಸ್ಪಿ, 26 ಇನ್ಸ್ಪೆಕ್ಟರ್ಗಳು, 65 ಸಬ್ ಇನ್ಸ್ಪೆಕ್ಟರ್ಗಳು ಸೇರಿದಂತೆ 4 ಸಾವಿರಕ್ಕೂ ಅಧಿಕ ಸಿಬ್ಬಂದಿ ನಿಯೋಜನೆ ಮಾಡಲಾಗಿತ್ತು. ರ‍್ಯಾಪಿಡ್ ಆಕ್ಷನ್ ಫೋರ್ಸ್ ಕೂಡ ನಿಯೋಜನೆ ಮಾಡಲಾಗಿತ್ತು.
ಜಿಲ್ಲಾಧಿಕಾರಿ ಡಾ.ಗಂಗಾಧರ್ ಸ್ವಾಮಿ ಅವರು ಡಿಜೆಗೆ ನಿಷೇಧ ಹೇರಿ ಆದೇಶ ಹೊರಡಿಸಿದ್ದರು. ಅಲ್ಲದೆ, ಸಾಮಾಜಿಕ ಜಾಲತಾಣದ ಬಗ್ಗೆ ನಿಗಾ ವಹಿಸಲಾಗಿತ್ತು. ಕೋಮು ಗಲಭೆ ಸೃಷ್ಟಿಸುವ ಹಾಗೂ ಅನ್ಯಕೋಮಿನ ಬಗ್ಗೆ ಅವಹೇಳನ ಮಾಡುವವರ ಮೇಲೆ ನಿಗಾ ಇಡಲಾಗಿತ್ತು.
ಶೋಭಾಯಾತ್ರೆಯಲ್ಲಿ ಡ್ರೋನ್ಗಳ ಕಣ್ಗಾವಲು ಇದ್ದು, ಪೊಲೀಸರು ಎಲ್ಲಾ ಕಡೆ ಸಿಸಿ ಕ್ಯಾಮರಾಗಳ ಸರ್ವಿಲೆನ್ಸ್ ಮಾಡಿದ್ದರು. ಯಾತ್ರೆಯಲ್ಲಿ ಅಕ್ಷೇಪಾರ್ಹ ಪೋಸ್ಟ್ ಪ್ರದರ್ಶನ, ನಟರ ಬಾವುಟ ಹಿಡಿದು ಘರ್ಷಣೆಗೆ ಇಳಿದರೆ ಕಠಿಣ ಕ್ರಮ ವಹಿಸಲಾಗುವುದು ಎಂದು ಎಸ್ಪಿ ಉಮಾ ಪ್ರಶಾಂತ್ ಖಡಕ್ ಎಚ್ಚರಿಕೆ ನೀಡಿದ್ದರು.
ಶೋಭಾಯಾತ್ರೆಗೆ ಜನಸಾಗರ:
ಹಿಂದೂ ಮಹಾಗಣಪತಿ ಶೋಭಾಯಾತ್ರೆಯಲ್ಲಿ ಬೆಳಗ್ಗೆ ಕಡಿಮೆ ಇದ್ದ ಜನಸಂಖ್ಯೆ ಸಂಜೆಯಾಗುತ್ತಿದ್ದಂತೆ ಜನಸಾಗರ ಹರಿದು ಬಂದಿತ್ತು.ಲಕ್ಷಗಟ್ಟಲೆ ಜನ ಭಾಗಿಯಾದರು. ದಾರಿಯುದ್ದಕ್ಕೂ ಜೈ ಶ್ರೀ ರಾಮ್ ಸೇರಿದಂತೆ ಹಿಂದೂಪರ ಘೋಷಣೆಗಳು ಮುಗಿಲು ಮುಟ್ಟಿತ್ತು. ಶೋಭಾಯಾತ್ರೆಯೊಂದಿಗೆ ಎಸ್ಪಿ ಉಮಾ ಪ್ರಶಾಂತ್ ಅವರು ಹೆಜ್ಜೆ ಹಾಕುತ್ತಾ ಸಾಗಿದ್ದು ವಿಶೇಷವಾಗಿತ್ತು.

