ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ಹಿಂದುಳಿದ ಜಿಲ್ಲೆಯಾಗಿದ್ದು, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಜನರು ಹೆಚ್ಚಿದ್ದಾರೆ. ಶಿಕ್ಷಣ ಜಿಲ್ಲೆಯ ಭವಿಷ್ಯ ಬದಲಿಸುವ ಸಾಧನವಾಗಿದ್ದು, ಬ್ಯಾಂಕುಗಳು ಉನ್ನತ ಶಿಕ್ಷಣ ಪಡೆಯಲು ಹೆಚ್ಚು ವಿದ್ಯಾರ್ಥಿಗಳಿಗೆ ಸಾಲ ನೀಡುವ ಮೂಲಕ ಶೈಕ್ಷಣಿಕ ಸಾಲ ಹಂಚಿಕೆಯ ಗುರಿ ಪೂರ್ಣಗೊಳಿಸಬೇಕು ಎಂದು ಸಂಸದ ಗೋವಿಂದ ಎಂ ಕಾರಜೋಳ ಬ್ಯಾಂಕ್ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಜಿ.ಪಂ. ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ನೇತೃತ್ವದಲ್ಲಿ ಆಯೋಜಿಸಲಾದ 2025-26ನೇ ಸಾಲಿನ ಡಿ.ಎಲ್.ಆರ್.ಸಿ (ಜಿಲ್ಲಾ ಹಂತದ ಪುನರ್ ಪರಿಶೀಲನಾ ಸಮಿತಿ) ಹಾಗೂ ಡಿಸಿಸಿ (ಜಿಲ್ಲಾ ಸಲಹಾ ಸಮಿತಿ) ಎರಡನೇ ತ್ರೈಮಾಸಿಕ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಜಿಲ್ಲೆಯಲ್ಲಿ 2025-26ನೇ ಸಾಲಿಗೆ ರೂ. 33.71 ಕೋಟಿ ಶೈಕ್ಷಣಿಕ ಸಾಲ ನೀಡುವ ಗುರಿಯನ್ನು ಬ್ಯಾಂಕ್‍ಗಳಿಗೆ ನೀಡಲಾಗಿದೆ. ಆದರೆ ಬ್ಯಾಂಕುಗಳು ಕೇವಲ ರೂ.3.21 ಕೋಟಿ ಸಾಲ ವಿತರಣೆ ಮಾಡಿವೆ. ಇದೇ ಮಾದರಿಯಲ್ಲಿ ಗೃಹಸಾಲಕ್ಕೆ ನಿಗದಿ ಪಡಿಸಿದ ರೂ.163.32 ಕೋಟಿ ಪೈಕಿ ಕೇವಲ ರೂ.19.98 ಕೋಟಿ ಸಾಲ ವಿತರಿಸಲಾಗಿದೆ. ಬ್ಯಾಂಕುಗಳು ಶಿಕ್ಷಣ ಹಾಗೂ ಗೃಹ ನಿರ್ಮಾಣಕ್ಕೆ ಉತ್ತೇಜನ ನೀಡುವ ಮೂಲಕ ಜಿಲ್ಲೆಯ ಪ್ರಗತಿಗೆ ಸಹಕಾರಿಯಾಗಬೇಕು. ಮುಂದಿನ ತ್ರೈಮಾಸಿಕ ಸಭೆಯ ವೇಳೆ ಗುರಿಯನ್ನು ಪೂರ್ಣಗೊಳಿಸಿ ಸಾಲ ಮಂಜೂರಾತಿ ಕುರಿತ ಸಂಪೂರ್ಣ ವಿವರ ನೀಡುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿದರು.
ಜೀವನೋಪಾಯಕ್ಕಾಗಿ ಸರ್ಕಾರ ವಿವಿಧ ನಿಗಮ ಮಂಡಳಿಗಳ ಮೂಲಕ ಸಾಲ ಸೌಲಭ್ಯಗಳನ್ನು ನೀಡುತ್ತಿದೆ. ಬ್ಯಾಂಕ್‍ಗಳು ವಿನಾಕರಣ ಸಾಲ ಮಂಜೂರಾತಿ ನೀಡದೆ ವಿಳಂಬ ನೀತಿ ಅನುಸರಿಸುತ್ತವೆ. ಪಿ.ಎಂ.ಎಫ್.ಎಂ.ಇ (ಪ್ರಧಾನ ಮಂತ್ರಿ ಸೂಕ್ಷ್ಮ ಆಹಾರ ಸಂಸ್ಕರಣ ಉದ್ದಿಮೆಗಳ ಔಪಚಾರಿಕರಣ) ಅಡಿ 34, ವಿವಿಧ ನಿಗಮಗಳ ಸಾಲ ಸೌಲಭ್ಯದ ಅಡಿ ಒಟ್ಟು 117 ಅರ್ಜಿಗಳು ಬ್ಯಾಂಕ್‍ಗಳಲ್ಲಿ ಬಾಕಿಯಿವೆ. ಬ್ಯಾಂಕ್ ವ್ಯವಸ್ಥಾಪಕರು ವಾರದ ಒಳಗಾಗಿ ಈ ಅರ್ಜಿಗಳ ವಿಲೇವಾರಿಗೆ ಕ್ರಮ ಕೈಗೊಳ್ಳಬೇಕು. ಕೃಷಿ, ಸಣ್ಣ ಕೈಗಾರಿಕೆಗಳು ಸೇರಿದಂತೆ ಇತರೆ ಆದ್ಯತಾ ವಲಯಗಳಿಗೆ ಸಾಲ ಸೌಲಭ್ಯ ಒದಗಿಸುವಂತೆ ಸಂಸದ ಗೋವಿಂದ ಎಂ ಕಾರಜೋಳ ನಿರ್ದೇಶನ ನೀಡಿದರು.
ಸಭೆಯ ಅಧ್ಯಕ್ಷತೆ ವಹಿಸಿ ಮಾತಾಡಿದ ಜಿ.ಪಂ. ಸಿಇಓ ಡಾ. ಆಕಾಶ್ ಬ್ಯಾಂಕುಗಳು ಜಿಲ್ಲೆಯ ನಾಗರಿಕರಿಂದ ಸಂಗ್ರಹಿಸಿದ ಠೇವಣಿಗೆ ಸಂವಾದಿಯಾಗಿ ಶೇ.60 ರಷ್ಟು ಸಾಲವನ್ನು ಸ್ಥಳೀಯರಿಗೆ ನೀಡಬೇಕು. ಕೆಲ ಬ್ಯಾಂಕುಗಳು ಸಾಲ ಮಂಜೂರಾತಿ ಅನುಪಾತವನ್ನು ಪಾಲಿಸುತ್ತಿಲ್ಲ. ಇದರೊಂದಿಗೆ ಸಹಾಯ ಧನದೊಂದಿಗೆ ಸಾಲ ಮಂಜೂರು ಸರ್ಕಾರಿ ಯೋಜನೆಗಳ ಅನುಷ್ಠಾನಕ್ಕೂ ಸಿಬಿಲ್ ಸ್ಕೋರ್ ಮಾನದಂಡ ಪಾಲಿಸುತ್ತಿವೆ.
ಬ್ಯಾಂಕುಗಳ ಈ ಪ್ರವೃತ್ತಿ ಬದಲಾಗಬೇಕು. ಈಗಾಗಲೇ ಸರ್ಕಾರಿ ಯೋಜನೆಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಲು ಹಾಗೂ ಬ್ಯಾಂಕ್‍ಗಳೊಂದಿಗೆ ಸಮನ್ವಯ ಸಾಧಿಸಲು ಬ್ಯಾಂಕ್ ಸಖಿಯರನ್ನು ನೇಮಕ ಮಾಡಿಕೊಳ್ಳಲಾಗಿದೆ. ಎನ್.ಆರ್.ಎಲ್.ಎಂ (ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಯೋಜನೆ) ಅಡಿ ಸ್ವ-ಸಹಾಯ ಗುಂಪುಗಳಿಗೆ (ಎಸ್‍ಹೆಚ್‍ಜಿ) ಸಾಲ ಸೌಲಭ್ಯ ನೀಡಲು ಕ್ರಮ ಕೈಗೊಳ್ಳಬೇಕು. ವಾರದಲ್ಲಿ ಬಾಕಿ ಉಳಿದ ಎಲ್ಲಾ ಅರ್ಜಿಗಳನ್ನು ಸಾಲ ಮಂಜೂರಾತಿ ಮಾಡುವಂತೆ ನಿರ್ದೇಶಿಸಿದರು.
2025-26ನೇ ಸಾಲಿಗೆ 6,766 ಎಸ್.ಹೆಚ್.ಜಿ ಗಳಿಗೆ ಸಾಲ ಸೌಲಭ್ಯದ ಗುರಿ ನಿಗದಿ ಪಡಿಸಲಾಗಿದೆ. 1294 ಅರ್ಜಿಗಳು ಸ್ವೀಕೃತವಾಗಿವೆ. ಈ ಪೈಕಿ 1115 ಎಸ್.ಹೆಚ್.ಜಿ ಗಳಿಗೆ ಈಗಾಗಲೇ ಸಾಲ ಸೌಲಭ್ಯ ನೀಡಲಾಗಿದೆ. 150 ಅರ್ಜಿಗಳು ಬಾಕಿದ್ದು, 29 ಅರ್ಜಿಗಳನ್ನು ತಿರಸ್ಕರಿಸಲಾಗಿದೆ ಎಂದು ಜಿ.ಪಂ. ಮುಖ್ಯ ಯೋಜನಾಧಿಕಾರಿ ಗಾಯಿತ್ರಿ ಸಭೆಗೆ ಮಾಹಿತಿ ನೀಡಿದರು.
ಜಂಟಿ ಕೃಷಿ ನಿರ್ದೇಶಕ ಮಂಜುನಾಥ ಮಾತನಾಡಿ, ಪಿ.ಎಂ.ಎಫ್.ಎಂ.ಇ (ಪ್ರಧಾನ ಮಂತ್ರಿ ಸೂಕ್ಷ್ಮ ಆಹಾರ ಸಂಸ್ಕರಣ ಉದ್ದಿಮೆಗಳ ಔಪಚಾರಿಕರಣ) ಅಡಿ ಜಿಲ್ಲೆಯಲ್ಲಿ 100 ಘಟಕಗಳಿಗೆ ಸಾಲ ಸೌಲಭ್ಯ ನೀಡಲು ಗುರಿ ನಿಗದಿ ಮಾಡಲಾಗಿದೆ. 40 ಅರ್ಜಿಗಳು ಸ್ವೀಕೃತವಾಗಿವೆ. 5 ಅರ್ಜಿಗಳಿಗೆ ಮಂಜೂರಾತಿ ನೀಡಲಾಗಿದ್ದು, 34 ಅರ್ಜಿಗಳು ಬಾಕಿಯಿವೆ. 1 ಅರ್ಜಿಯನ್ನು ತಿರಸ್ಕರಿಸಲಾಗಿದೆ. ಪಿ.ಎಂ.ಎಫ್.ಎಂ.ಇ ಯೋಜನೆಗೆ ರಾಜ್ಯ ಸರ್ಕಾರದಿಂದ ಸಹಾಯಧನ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಸಿರಿಧಾನ್ಯಗಳ ಉದ್ಯಮಕ್ಕೆ ಹೆಚ್ಚಿನ ಅವಕಾಶಗಳು ಇವೆ. ರೈತರು ಕೂಡ ಯೋಜನೆ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ. ಬ್ಯಾಂಕ್‍ಗಳು ಯೋಜನೆ ಅನುಷ್ಠಾನಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದು ಕೋರಿದರು.
ಪಿ.ಎಂ. ಸ್ವ-ನಿಧಿ ಯೋಜನೆಯನ್ನು ಪಿ.ಎಂ. ಬೀದಿ ಬದಿ ವ್ಯಾಪಾರಿಗಳ ಆತ್ಮ ನಿರ್ಭರ್ ನಿಧಿ ಯೋಜನೆ-2.0 ಎಂದು ಪುನರ್ ರಚನೆ ಮಾಡಲಾಗಿದ್ದು, ಯೋಜನೆಯನ್ನು 2033 ವರೆಗೆ ವಿಸ್ತರಿಸಲಾಗಿದೆ. ಈ ಹಿಂದೆ ಮೊದಲ ಹಂತದಲ್ಲಿ ನೀಡಲಾಗುತ್ತಿದ್ದ ರೂ.10,000 ಸಾಲ ಮೊತ್ತವನ್ನು ರೂ.15,000ಕ್ಕೆ ಹಾಗೂ ಎರಡನೇ ಹಂತದಲ್ಲಿ ನೀಡಲಾಗುತ್ತಿದ್ದ ರೂ.20,000 ಮೊತ್ತವನ್ನು ರೂ.25,000 ಸಾವಿರಕ್ಕೆ ಹೆಚ್ಚಿಸಲಾಗಿದೆ. ಸೆಪ್ಟೆಂಬರ್ 8 ರಿಂದ ಹೊಸ ಅರ್ಜಿ ಸಲ್ಲಿಸಲು ಪೊರ್ಟಲ್‍ನಲ್ಲಿ ಅವಕಾಶ ಕಲ್ಪಿಸಲಾಗಿದ್ದು ಈವರೆಗೂ 435 ಅರ್ಜಿಗಳೂ ಸ್ವೀಕೃತವಾಗಿವೆ. ಪಿ.ಎಂ. ಸ್ವ-ನಿಧಿ ಯೋಜನೆಯನ್ನು ಗ್ರಾಮೀಣ ಭಾಗದ ಬೀದಿ ಬದಿ ವ್ಯಾಪಾರಿಗಳಿಗೆ ವಿಸ್ತರಿಸಲಾಗಿದೆ. ಕಳೆದ ವರ್ಷದಲ್ಲಿ ಸ್ವೀಕೃತವಾದ 8,654 ಅರ್ಜಿಗಳು ಪೈಕಿ 7,705 ಫಲಾನುಭವಿಗಳಿಗೆ ಸಾಲ ಸೌಲಭ್ಯ ನೀಡಲಾಗಿದೆ ಎಂದು ಕೌಶಲ್ಯಾಭಿವೃದ್ದಿ ಇಲಾಖೆ ಅತೀಕ್ ಸಭೆಯಲ್ಲಿ ಮಾಹಿತಿ ಮಾಡಿದರು.
ಬ್ಯಾಂಕುಗಳು ಕೃಷಿ, ಶಿಕ್ಷಣ, ವಸತಿ, ಸಣ್ಣ ಹಾಗೂ ಅತಿಸಣ್ಣ ಉದ್ದಿಮೆ ಹಾಗೂ ಇತರೆ ಸರ್ಕಾರದ ಯೋಜನೆಗಳಡಿ ಸಬ್ಸಿಡಿಯೊಂದಿಗೆ ಸಾಲ ಸೌಲಭ್ಯ ನೀಡಲು ವಿಳಂಬ ಮಾಡಬಾರದು. ಈ ಅರ್ಜಿಗಳನ್ನು ಸಿಬಿಲ್ ಸ್ಕೋರ್ ಕಾರಣ ಹೇಳಿ ತಿರಸ್ಕರಿಸಬಾರದು ಎಂದು ಲೀಡ್ ಬ್ಯಾಂಕ್ ವ್ಯವಸ್ಥಾಪಕ ರಾಘವೇಂದ್ರ.ಎಂ ಹೇಳಿದರು.
ಆರ್.ಬಿ.ಐ. ಪ್ರಬಂಧಕ ಅರುಣ್ ಕುಮಾರ್, ಕೆನರಾ ಬ್ಯಾಂಕ್ ವಲಯ ಪ್ರಬಂಧಕಿ ಅನಿತಾ, ನಬಾರ್ಡ್ ಜಿಲ್ಲಾ ವ್ಯವಸ್ಥಾಪಕ ವಿನಂತ್.ಕೆ, ಕರ್ನಾಟಕ ಗ್ರಾಮೀಣ ವಿಕಾಸ ಬ್ಯಾಂಕ್ ಪ್ರಬಂಧಕ ಜನಾರ್ಧನ್, ಸೇರಿದಂತೆ ವಿವಿಧ ಬ್ಯಾಂಕ್‍ಗಳ ಅಧಿಕಾರಿಗಳು ಉಪಸ್ಥಿತರಿದ್ದರು.

