ಖೋ ಖೋ ವಿಶ್ವಕಪ್ ಗೆದ್ದ ಹೆಮ್ಮೆಯ ಕನ್ನಡತಿ ಚೈತ್ರಾ ನೆನಪಾಗಲಿಲ್ಲವೇ ಸಿದ್ದರಾಮಯ್ಯ ಅವರೇ?
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯ ದಸರಾ ಸಿಎಂ ಕಪ್ ಕ್ರೀಡಾಕೂಟ ಉದ್ಘಾಟನೆ ಕಾರ್ಯಕ್ರಮಕ್ಕೆ ಖೋ ಖೋ ವಿಶ್ವಕಪ್ ಗೆದ್ದ ನಮ್ಮ ರಾಜ್ಯದ ಹೆಮ್ಮೆಯ ಕ್ರೀಡಾಪಟು ಚೈತ್ರಾ ನೆನಪಾಗಲಿಲ್ಲವೇ ಸಿದ್ದರಾಮಯ್ಯ ಅವರೇ ? ಎಂದು ಜೆಡಿಎಸ್ ತೀಕ್ಷ್ಣವಾಗಿ ಪ್ರಶ್ನಿಸಿದೆ.
ದಸರಾ ಕ್ರೀಡಾಕೂಟ ಉದ್ಘಾಟನೆಯನ್ನು ಹರಿಯಾಣ ರಾಜ್ಯದ ಕಾಂಗ್ರೆಸ್ ಶಾಸಕಿ ವಿನೇಶ್ ಪೋಗಟ್ ಅವರೊಂದಿಗೆ ನೆರವೇರಿಸಿದ್ದೀರಿ. ಸಂತೋಷ… ಆಕೆ ನಮ್ಮ ದೇಶದ ಹೆಮ್ಮೆಯ ಕುಸ್ತಿಪಟು, ಅವರ ಬಗ್ಗೆ ಅಪಾರವಾದ ಗೌರವವಿದೆ.
ದಕ್ಷಿಣ ಭಾರತದಿಂದ ಆಯ್ಕೆಯಾದ ಏಕೈಕ ಕ್ರೀಡಾಪಟುವಾಗಿದ್ದು ಚೈತ್ರಾ ಮೈಸೂರಿನ ಟಿ. ನರಸೀಪುರ ತಾಲೂಕಿನ ಕುರುಬೂರಿನ ಗ್ರಾಮೀಣ ಪ್ರತಿಭೆ. ಖೋ ಖೋ ವಿಶ್ವಕಪ್ ನಲ್ಲಿ “ಬೆಸ್ಟ್ ಪ್ಲಯರ್” ಪ್ರಶಸ್ತಿ ಪಡೆದವರು.
ಮೈಸೂರು ಉಸ್ತುವಾರಿ ಸಚಿವ ಹಾಗೂ ಟಿ. ನರಸೀಪುರ ಕ್ಷೇತ್ರದ ಶಾಸಕರಾದ ಹೆಚ್.ಸಿ.ಮಹದೇವಪ್ಪ ಅವರೇ, ರಾಜ್ಯದ ಸ್ಥಳೀಯ ಕ್ರೀಡಾಪಟುಗಳನ್ನು ಗುರುತಿಸದೆ, ಹೊರ ರಾಜ್ಯದ ಕ್ರೀಡಾಪಟು, ಕಾಂಗ್ರೆಸ್ ಶಾಸಕಿಯನ್ನು ಕರೆದು ಸನ್ಮಾನಿಸುವ ಅವಶ್ಯಕತೆ ಏನಿತ್ತು? ನಿಮ್ಮ ಕ್ಷೇತ್ರದ ಹೆಮ್ಮೆಯ ಸಾಧಕಿ ಕಣ್ಣಿಗೆ ಕಾಣಿಸದಿರುವುದು ದುರಂತ ಎಂದು ಜೆಡಿಎಸ್ ವಾಗ್ದಾಳಿ ಮಾಡಿದೆ.
ಸಿದ್ದರಾಮಯ್ಯನವರೇ ತೋರಿಕೆಗಷ್ಟೇ ಕನ್ನಡ, ಕನ್ನಡಿಗರು ಎನ್ನುವದಲ್ಲ. ನಾಡ ಹಬ್ಬದ ಸಂದರ್ಭದಲ್ಲಿ ಇಂತಹ ಕೀಳುಮಟ್ಟದ ರಾಜಕಾರಣ ಮಾಡುವುದು ನಿಮ್ಮ ಢೋಂಗಿ ತನಕ್ಕೆ ಸಾಕ್ಷಿ ಎಂದು ಜೆಡಿಎಸ್ ತರಾಟೆ ತೆಗೆದುಕೊಂಡಿದೆ.

