ಸೆಪ್ಟೆಂಬರ್ 27 ರಂದು ಪದವಿ ಕಾಲೇಜ್ ತರಗತಿಗಳು ಬಹಿಷ್ಕಾರ
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಪದವಿ ವಿದ್ಯಾರ್ಥಿಗಳ ಶೈಕ್ಷಣಿಕ ಗೊಂದಲ ಬಗೆಹರಿಸಲು ಆಗ್ರಹಿಸಿ ಸೆಪ್ಟೆಂಬರ್ 27ರಂದು ಪದವಿ ಕಾಲೇಜುಗಳ ಸ್ವಯಂ ಪ್ರೇರಿತ ತರಗತಿ ಬಹಿಷ್ಕಾರ ಕುರಿತು ಬುಧವಾರ ಚಿತ್ರದುರ್ಗದ ಸರ್ಕಾರಿ ವಿಜ್ಞಾನ ಪದವಿ ಕಾಲೇಜು, ಕಲಾ ಕಾಲೇಜು ಹಾಗೂ ಮಹಿಳಾ ಕಾಲೇಜುಗಳ ಪ್ರಾಂಶುಪಾಲರಿಗೆ ಮನವಿ ಸಲ್ಲಿಸಲಾಯಿತು. ಮತ್ತು ವಿದ್ಯಾರ್ಥಿಗಳ ನಡುವೆ ಪ್ರಚಾರ ನಡೆಸಲಾಯಿತು ಎಂದು ಎಐಡಿಎಸ್ಓ ಸಂಘಟನೆ ತಿಳಿಸಿದೆ.
ಎಐಡಿಎಸ್ಓ ರಾಜ್ಯ ಕಾರ್ಯದರ್ಶಿ ಮಹಾಂತೇಶ್ ಬಿಳೂರ್ ಮಾತನಾಡಿ ಈ ಶೈಕ್ಷಣಿಕ ವರ್ಷದಲ್ಲಿ ಅತಿಥಿ ಉಪನ್ಯಾಸಕರ ನೇಮಕಾತಿಯಲ್ಲಿ ಆಗಿರುವ ಗೊಂದಲದಿಂದ ವಿದ್ಯಾರ್ಥಿಗಳು ಸಮಸ್ಯೆ ಎದುರಿಸುತ್ತಿದ್ದಾರೆ. ಯುಜಿಸಿ ನಿಯಮಗಳು ಒಂದೆಡೆಯಾದರೆ, ಕೋರ್ಟಿನಲ್ಲಿ ನಡೆಯುತ್ತಿರುವ ಮೊಕದ್ದಮೆ ಇನ್ನೊಂದೆಡೆ. ಇದರ ನಡುವೆ ವಿದ್ಯಾರ್ಥಿಗಳು ಶೈಕ್ಷಣಿಕ ನಷ್ಟ ಅನುಭವಿಸುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದಿನಗಳು ಉರುಳುತ್ತಾ ಇದ್ದರೂ ಈ ಸಮಸ್ಯೆ ಪರಿಹಾರವಾಗುವ ಯಾವುದೇ ಲಕ್ಷಣ ಗೋಚರಿಸುತ್ತಿಲ್ಲ. ಆದ್ದರಿಂದ, ಕೂಡಲೇ ರಾಜ್ಯದ ಸರ್ಕಾರಿ ಪದವಿ ಕಾಲೇಜುಗಳು ಎದುರಿಸುತ್ತಿರುವ ಶೈಕ್ಷಣಿಕ ಬಿಕ್ಕಟ್ಟನ್ನು ಪರಿಹರಿಸಲು ರಾಜ್ಯದ ವಿದ್ಯಾರ್ಥಿಗಳು ರಾಜ್ಯ ಸರ್ಕಾರವನ್ನು ಆಗ್ರಹಿಸುತ್ತಿದ್ದೇವೆ. ಈಗಾಗಲೇ ರಾಜ್ಯವ್ಯಾಪಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಉನ್ನತ ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಲಾಗಿದೆ. ಈಗ ಮುಂದುವರೆದು, ಸೆಪ್ಟೆಂಬರ್ 27ರಂದು ರಾಜ್ಯಾದ್ಯಂತ ಪದವಿ ಕಾಲೇಜುಗಳ ತರಗತಿ ಬಹಿಷ್ಕಾರ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ವಿದ್ಯಾರ್ಥಿಗಳಿಗೆ ರಾಜ್ಯವಾಪಿ ನಡೆಯುತ್ತಿರುವ ಪದವಿ ಕಾಲೇಜುಗಳ ತರಗತಿ ಬಹಿಷ್ಕಾರದಲ್ಲಿ ಭಾಗವಹಿಸಿ ಐಕ್ಯತೆಯನ್ನು ಪ್ರದರ್ಶಿಸಲು ಕರೆ ನೀಡಲಾಯಿತು ಎಂದು ಎಐಡಿಎಸ್ಓ ಚಿತ್ರದುರ್ಗ ಜಿಲ್ಲಾ ಸಂಚಾಲಕ ಕೆ.ಈರಣ್ಣ ತಿಳಿಸಿದ್ದಾರೆ.

