ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ನಟಿ ಪ್ರಿಯಾಂಕಾ ಉಪೇಂದ್ರ ಅವರ ಮೊಬೈಲ್ ಹ್ಯಾಕ್ ಮಾಡಿ ರು. 1.65 ಲಕ್ಷ ರೂಪಾಯಿ ಹಣ ಕಳೆದುಕೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಿಡಿಗೇಡಿಗಳನ್ನು ಪೊಲೀಸರು ಪತ್ತೆ ಮಾಡಿದ್ದಾರೆ.
ಪ್ರಿಯಾಂಕಾ ಉಪೇಂದ್ರ ಅವರ ಮೊಬೈಲ್ ಹ್ಯಾಕ್ ಮಾಡಿ 1.65 ಲಕ್ಷ ರೂಪಾಯಿ ಹಣ ಕದ್ದಿದ್ದ ಬಿಹಾರ ಮೂಲದ ಹ್ಯಾಕರ್ಗಳು ಮೊದಲಿಗೆ ನಾಲ್ಕು ನಕಲಿ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಿದ್ದಾರೆ. ಆ ನಂತರ ಆ ಹಣವನ್ನು ನಳಂದಾದ ಬ್ಯಾಂಕ್ ಖಾತೆ ಒಂದಕ್ಕೆ ವರ್ಗಾವಣೆ ಮಾಡಿದ್ದಾರೆ. ಬೆಂಗಳೂರು ಪೊಲೀಸರು ಎಲ್ಲ ಬ್ಯಾಂಕ್ ಖಾತೆಗಳ ವಿವರಗಳ ಮಾಹಿತಿ ಪಡೆದುಕೊಂಡಿದ್ದಾರೆ.
ಬ್ಯಾಂಕ್ ಖಾತೆಗಳ ವಿವರಗಳನ್ನು ಸಂಪಾದಿಸಿರುವ ಪೊಲೀಸರು ಬಿಹಾರಕ್ಕೆ ತೆರಳಿ ಆರೋಪಿಗಳನ್ನು ಬಂಧಿಸಲು ಮುಂದಾಗಿದ್ದಾರೆ. ಡಿಸಿಪಿ ಅಕ್ಷಯ್ ಮಚೀಂದ್ರ ಅವರು ನೀಡಿರುವ ಮಾಹಿತಿಯನ್ನು ಬಿಹಾರಕ್ಕೆ ತೆರಳಲು ವಿಶೇಷ ಪೊಲೀಸ್ ತಂಡವನ್ನು ರೆಡಿ ಮಾಡಲಾಗಿದ್ದು, ಶೀಘ್ರವೇ ತಂಡ ಬಿಹಾರಕ್ಕೆ ತೆರಳಲಿದೆ.
ಡಿಸಿಪಿ ಅಕ್ಷಯ್ ಮಚೀಂದ್ರ ಅವರು ನೀಡಿರುವ ಮಾಹಿತಿಯಂತೆ *121*9279295167# ಸಂಖ್ಯೆ ಬಳಸಿ ಬ್ಯಾಂಕ್ ಖಾತೆಯನ್ನು ಆರೋಪಿಗಳು ಹ್ಯಾಕ್ ಮಾಡಿದ್ದಾರೆ. ಇದೇ ರೀತಿಯ ಪ್ಯಾಟರ್ನ್ ಸಂಖ್ಯೆ ಬಳಸಿ ಆಂಧ್ರ ಪ್ರದೇಶ, ತೆಲಂಗಾಣ ಇತರೆ ಕೆಲವೆಡೆಯೂ ಮೊಬೈಲ್ಗಳನ್ನು ಹ್ಯಾಕ್ ಮಾಡುವ ಪ್ರಯತ್ನವನ್ನು ಆರೋಪಿಗಳು ಮಾಡಿರುವುದು ಬೆಂಗಳೂರು ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ.
ಪಾರ್ಸಲ್ ಬಂದಿದೆ ಎಂದು ಪ್ರಿಯಾಂಕಾ ಉಪೇಂದ್ರ ಅವರನ್ನು ನಂಬಿಸಿ ಅವರಿಂದ ಕೆಲ ಸಂಖ್ಯೆಗಳನ್ನು ಡಯಲ್ ಮಾಡಿಸಿರುವ ಹ್ಯಾಕರ್ಗಳು ಬಳಿಕ ಪ್ರಿಯಾಂಕಾ ಅವರ ಮೊಬೈಲ್ನ ಕಂಟ್ರೋಲ್ ತೆಗೆದುಕೊಂಡು, ಪ್ರಿಯಾಂಕಾ ಅವರ ಮಗ ಮತ್ತು ಸಂಬಂಧಿಗೆ ಪ್ರಿಯಾಂಕಾ ಅವರ ಮೊಬೈಲ್ ನಂಬರ್ ಬಳಸಿ ಮೆಸೇಜ್ ಮಾಡಿದ್ದಾರೆ.
ಅವರಿಗೆ ಹಣ ಹಾಕುವಂತೆ ಹೇಳಿದ್ದಾರೆ. ಅದರಂತೆ ಪ್ರಿಯಾಂಕಾ ಅವರ ಮಗ ಹಾಗೂ ಅವರ ಸಂಬಂಧಿ 1.65 ಲಕ್ಷ ರೂಪಾಯಿ ಹಣವನ್ನು ಹ್ಯಾಕರ್ಗಳು ಹೇಳಿದ ಖಾತೆಗೆ ಹಾಕಿದ್ದಾರೆ. ಆದರೆ ಅಷ್ಟರಲ್ಲೆ ಎಚ್ಚೆತ್ತ ಪ್ರಿಯಾಂಕಾ ಉಪೇಂದ್ರ ಖಾತೆಯನ್ನು ಬ್ಲಾಕ್ ಮಾಡಿಸಿದ್ದಾರೆ.
ಕೇವಲ ಹತ್ತು ನಿಮಿಷ ತಡವಾಗಿದ್ದರೂ ಸಹ 10 ಲಕ್ಷ ರೂಪಾಯಿ ಹಣ ಕಳೆದುಕೊಳ್ಳಬೇಕಿತ್ತು. ಬಳಿಕ ಪ್ರಿಯಾಂಕಾ ಉಪೇಂದ್ರ ಮತ್ತು ಉಪೇಂದ್ರ ಅವರುಗಳು ಪೊಲೀಸರಿಗೆ ದೂರು ನೀಡಿದ್ದು, ಇದೀಗ ಹ್ಯಾಕರ್ಗಳ ಬಗ್ಗೆ ಸುಳಿವು ಪೊಲೀಸರಿಗೆ ದೊರೆತಿದೆ.

