ಅ.3 ರಂದು ಹಾರನಕಣಿವೆ ರಂಗನಾಥಸ್ವಾಮಿ ಅಂಬಿನೋತ್ಸವ

News Desk

ಎಂ.ಎಲ್.ಗಿರಿಧರ, ಮಲ್ಲಪ್ಪನಹಳ್ಳಿ.
ಚಂದ್ರವಳ್ಳಿ ನ್ಯೂಸ್, ಹಿರಿಯೂರು
ಹಿರಿಯೂರು ತಾಲೂಕಿನ ವಾಣಿ ವಿಲಾಸ ಸಾಗರದ ಹಿನ್ನೀರಿನ ದಡದಲ್ಲಿರುವ ಹಾರನಕಣಿವೆ ಶ್ರೀ ರಂಗನಾಥಸ್ವಾಮಿಯ ಅಂಬಿನೋತ್ಸವ ಅಕ್ಟೋಬರ್-3 ರಂದು ಶುಕ್ರವಾರ ಬೆಳಗ್ಗಿ 10 ಗಂಟೆಗೆ ನಡೆಯಲಿದೆ.
ಹಿರಿಯೂರು ಹಾಗೂ ಹೊಸದುರ್ಗ ತಾಲೂಕಿನ ಗಡಿಭಾಗದ ಅಂಚಿಬಾರಿಹಟ್ಟಿ ಗ್ರಾಮದ ಬುಡಕಟ್ಟು ಕಾಡುಗೊಲ್ಲರ ಆರಾಧ್ಯ ದೈವ ಹಾರನಕಣಿವೆ ರಂಗನಾಥ ಸ್ವಾಮಿ ಕ್ಷೇತ್ರದ ಅಪಾರ ಮಹಿಮೆ ಹಾಗೂ ಭಕ್ತರನ್ನು ಹೊಂದಿರುವ ಪುಣ್ಯ ಕ್ಷೇತ್ರವಾಗಿದೆ.

ಹೊಸದುರ್ಗ ತಾಲೂಕಿನ ಅಂಚಿಬಾರಿಹಟ್ಟಿ ಗ್ರಾಮದಲ್ಲಿರುವ ಶ್ರೀ ರಂಗನಾಥಸ್ವಾಮಿಯ ದಸರಾ ಪ್ರಯುಕ್ತ ವಿಶೇಷ ಜಾತ್ರೆ, ಅಂಬಿನೋತ್ಸವ ಹಾಗೂ ವಿಶೇಷ ಪೂಜೆಗಳು ನಡೆಯಲಿವೆ.

- Advertisement - 

ಅಂದು ಉತ್ಸವ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ವಾಣಿವಿಲಾಸ ಸಾಗರ ಜಲಾಶಯದಲ್ಲಿ ಸ್ವಾಮಿಗೆ ಗಂಗಾಪೂಜೆ ಹಾಗೂ ಕುದುರೆ ಪೂಜೆ ಕಾರ್ಯ ನೆರವೇರಲಿವೆ.

ಬಳಿಕ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಕೂರಿಸಿ ಮೆರವಣಿಗೆಯೊಂದಿಗೆ ಗುಡಿ ಗೌಡ, ಪೂಜಾರಿ, ಗ್ರಾಮದ ಅಣ್ಣ-ತಮ್ಮಂದಿರು ಹಾಗೂ ಭಕ್ತರ ನೇತೃತ್ವದಲ್ಲಿ ಅದ್ದೂರಿಯಾಗಿ ಹಾರನಕಣಿವೆ ಕ್ಷೇತ್ರಕ್ಕೆ ಕರೆತಂದು ಶಿವ ಹಾಗೂ ವಿಷ್ಣುವಿಗೆ ಮೊದಲ ಪೂಜೆ ಸಲ್ಲಿಸುವರು.

- Advertisement - 

ನಂತರ ವಿಶೇಷ ಪೂಜೆ ಸಲ್ಲಿಸಿ, ಪೂಜಾರಿಯು ಜಂಬೂ ಮರದ ಮುಂದೆ ನೆಟ್ಟಿದ್ದ ಬಾಳೆ ಗಿಡಕ್ಕೆ ಮೂರು ಬಾರಿ ಪ್ರದಕ್ಷಿಣೆ ಹಾಕಿ, ಬಿಲ್ಲು ಹಿಡಿದು ಬಾಣ ಹೊಡೆದು, ಬಾಳೆ ಗಿಡ ಕುಡಿಯುವ ಮೂಲಕ ಅಂಬಿನೋತ್ಸವ ಕಾರ್ಯಕ್ಕೆ ಚಾಲನೆ ನೀಡಲಿದ್ದಾರೆ.

ಹಾವು, ಚೇಳು, ಬಾಳೆ ಹಣ್ಣು ಪ್ರಿಯ ರಂಗನಾಥಸ್ವಾಮಿ-
ಅಂಬಿನೋತ್ಸವ ಮುಗಿದ ನಂತರ ರಂಗನಾಥ ಸ್ವಾಮಿ ದೇವರಿಗೆ ಭಕ್ತಾಧಿಗಳು ಬಾಳೆಹಣ್ಣುಗಳನ್ನು ತೂರಿ ತಮ್ಮ ಭಕ್ತಿಯನ್ನು ಸಮರ್ಪಿಸುವುದು ಮೊದಲಿನಿಂದಲೂ ನಡೆದುಕೊಂಡು ಬಂದಿದೆ.

ರೈತರು, ಭಕ್ತಾಧಿಗಳು ಮನೆ, ಹೊಲ ಗದ್ದೆಗಳಲ್ಲಿ, ರಾತ್ರಿ ವೇಳೆ ವಿಷ ಜಂತುಗಳು ತಮಗೆ ಕಾಣಿಸಿಕೊಳ್ಳದಿರಲಿ, ಉತ್ತಮ ಮಳೆ, ಬೆಳೆಯಾಗಲಿ ಎಂದು ರಂಗನಾಥ ಸನ್ನಿಧಿಗೆ ಬಂದು ಜಾತ್ರೆಯಲ್ಲಿ ಹಾವು, ಚೇಳು ಮತ್ತಿತರ ಹುಳಗಳನ್ನು ಅರ್ಪಿಸಿ ಹರಕೆ ತೀರಿಸಲಿದ್ದಾರೆ.

ಕಟ್ಟಿಕೊಂಡ ಹರಕೆ ತೀರಿಸಲು ತಂದಿದ್ದ ಜರಿ, ಹಾವು, ಚೇಳುಗಳನ್ನು ಭಕ್ತರು ಸರತಿ ಸಾಲಿನಲ್ಲಿ ನಿಂತು ಹುಂಡಿಯಲ್ಲಿ ಹಾಕಿ ಹರಕೆ ತೀರಿಸು ದೃಶ್ಯ ಗಮನ ಸೆಳೆಯಲಿದೆ.

ಬಾಳೆಹಣ್ಣು ಹಾಗೂ ಸಕ್ಕರೆ ಹಂಚಿವುದಾಗಿ ಕೆಲ ಭಕ್ತರು ಹರಿಕೆ ಮಾಡಿಕೊಂಡಿರುತ್ತಾರೆ. ಉತ್ಸವದ ನಂತರ ಬಾಳೆಹಣ್ಣು, ಸಕ್ಕರೆ ತಂದು ದೇವಾಲಯದ ಸಮೀಪ ಬಾಳೆ ಎಲೆ ಹಾಕಿ ಬಾಳೆ ಹಣ್ಣು, ಸಕ್ಕರೆ ಬೆರೆಸಿ ಪೂಜೆ ಸಲ್ಲಿಸಿದ ನಂತರ ದಾಸಯ್ಯರಿಂದ ಗೋವಿಂದ ಗೋವಿಂದ ಎನ್ನುವ ಘೋಷಣೆ ಕೂಗಿಸಿ ಸುತ್ತ ಮುತ್ತ ಇದ್ದ ಭಕ್ತರಿಗೆ ಪ್ರಸಾದ ವಿತರಣೆ ಮಾಡುವುದು ಈ ಜಾತ್ರೆಯ ಮತ್ತೊಂದು ವಿಶೇಷ.

ವಿಜಯದಶಮಿಯಂದೇ ಅಂಬು:
ಚಿತ್ರದುರ್ಗ ಜಿಲ್ಲೆಯ ಬಯಲು ಸೀಮೆಯ ಹಿರಿಯೂರಿನಿಂದ ಹೊಸದುರ್ಗಕ್ಕೆ ಹೋಗುವ ಮಾರ್ಗ ಮಧ್ಯೆ ಎಡಭಾಗದ ವಿವಿ ಸಾಗರ ಜಲಾಶಯದ ಪಕ್ಕದಲ್ಲಿ ನೆಲೆಸಿರುವ ಹಾರನಕಣಿವೆ ಶ್ರೀ ರಂಗಯ್ಯನೊಬ್ಬ ಪವಾಡ ಪುರುಷನೆಂದರೇ ತಪ್ಪಾಗಲಾರದು. ಈ ಜಾತ್ರೆಯು ಪ್ರತಿ ವರ್ಷ ಆಶ್ವಿಜ ಶುದ್ಧ ಏಕಾದಶಿಯ ವಿಜಯದಶಮಿಯಂದು ಅಂಬಿನೋತ್ಸವ ನೆರವೇರಲಿದೆ.
ರಾಜ್ಯದ ವಿವಿಧ ಭಾಗಗಳಿಂದ ಲಕ್ಷಾಂತರ ಮಂದಿ ಭಕ್ತರು ಜಾತ್ರೆಯಲ್ಲಿ ಭಾಗಿಯಾಗಿ ತಮ್ಮ ಇಷ್ಟಾರ್ಥಗಳನ್ನು ಈಡೇರಿಸಿ, ಸ್ವಾಮಿಯ ದರ್ಶನ ಪಡೆಯುತ್ತಾರೆ.

ಕಾಡುಗೊಲ್ಲರ ಧಾರ್ಮಿಕ ಕೇಂದ್ರ:
ಈ ಐತಿಹಾಸಿಕ ದೇವಾಲಯವು ಮಧ್ಯ ಕರ್ನಾಟಕದ ಬುಡುಕಟ್ಟು ಕಾಡುಗೊಲ್ಲರ ಧಾರ್ಮಿಕ ಕೇಂದ್ರವಾಗಿದ್ದು, ಜೊತೆಗೆ ಸ್ವಾಮಿ ರಂಗಪ್ಪನ ಮಹಿಮೆ ಅಪಾರವಾಗಿದೆ.

“ಕರಡಿ ಬುಳ್ಳಪ್ಪ ವಂಶಸ್ಥರಾದ ಕರಡಿಗೊಲ್ಲರು” ಶ್ರೀ ರಂಗನಾಥ ಸ್ವಾಮಿಯನ್ನು ಪೂಜಿಸಿಕೊಂಡು ಬರುತ್ತಿದ್ದಾರೆ. ನಂಬಿ ಬಂದವರನ್ನು ರಂಗಯ್ಯ ಯಾರನ್ನೂ ಕೈ ಬಿಟ್ಟಿಲ್ಲ ಎನ್ನುವುದು ಭಕ್ತರಲ್ಲಿ ಬಲವಾದ ನಂಬಿಕೆಯಾಗಿದೆ.

ದೇವಾಲಯಕ್ಕೆ ತನ್ನದೇ ಆದ ಐತಿಹಾಸಿಕ ಪ್ರಸಿದ್ಧಿ ಹಿನ್ನೆಲೆ ಇರುವುದುಂಟು. ವಿಷ ಜಂತುಗಳಿಂದ ಕಚ್ಚಿಸಿಕೊಂಡು ಆಸ್ಪತ್ರೆಗೆ ಹೋಗಿ ಗುಣಮುಖರಾಗದೇ, ಸಾವು ಬದುಕಿನ ನಡುವೆ ಹೋರಾಟ ನಡೆಸಿ, ರಂಗಪ್ಪನ ಸನ್ನಿಧಿಗೆ ಬಂದವರಿಗೆ ಸ್ವಾಮಿಯ ಪವಾಡದಿಂದ ಗುಣಮುಖ ವಾಗಿರುವುದು ಅದೇಷ್ಟೋ ಉದಾಹರಣೆಗಳಿವೆ. ಆದ್ದರಿಂದ ಶ್ರೀ ರಂಗನಾಥ ಸ್ವಾಮಿಯನ್ನು ವಿಷ ಜಂತುಗಳ ಪರಿಹಾರಕ ಅಂತಲೂ ಕರೆಯುವುದುಂಟು.

ಬುಡಕಟ್ಟು ದೈವ : ಕಾಡುಗೊಲ್ಲ ಬುಡಕಟ್ಟು ಸಮುದಾಯದ ಶ್ರೀರಂಗನಾಥ ಸ್ವಾಮಿಯನ್ನು ಧಾರ್ಮಿಕ ಕೇಂದ್ರವಾಗಿಸಿಕೊAಡು ಆರಾಧಿಸುವುದು ಕಾಡುಗೊಲ್ಲರ ವಿಶೇಷ. ಕೇವಲ ಕಾಡುಗೊಲ್ಲ ಸಮುದಾಯವಷ್ಟೇ ಅಲ್ಲ ಸರ್ವ ಜನಾಂಗದವರು ಅಂಬಿನೋತ್ಸವಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿ ಹರಿಕೆ ತೀರುವಳಿ ಮಾಡಲಿದ್ದಾರೆ. ಹೀಗೆ ಆರಾಧ್ಯ ದೈವ ಹಾರನಕಣಿವೆ ರಂಗನಾಥ ಸ್ವಾಮಿಯ ಮಹಿಮೆ ಅಪಾರವಾಗಿದೆ.

ಯಾರಿಂದ ಪೂಜೆ :ಕಾಡುಗೊಲ್ಲರಲ್ಲಿ ಹಲವು ಕುಲ ಗೋತ್ರಗಳಿವೆ. ಅದರಲ್ಲಿ ಕರಡಿ ಗೊಲ್ಲರು ಎನ್ನುವುದು ಒಂದು ಕುಲವಾಗಿದೆ. ಈ ಕುಲ ಪೂರ್ವಿಕರಾದ ಕರಡಿ ಬುಳ್ಳಪ್ಪ ವಂಶಸ್ಥರಾದ ಕರಡಿ ಗೊಲ್ಲರು ರಂಗನಾಥ ಸ್ವಾಮಿಯನ್ನು ಪೂಜಿಸಿಕೊಂಡು ಬರುತ್ತಾರೆ.

ಹಾರನಕಣಿವೆ ರಂಗನಾಥ ಸ್ವಾಮಿ ದೇವರಿಗೆ ತನ್ನದೇ ಆದ ಐತಿಹಾಸಿಕ ಹಿನ್ನೆಲೆ ಇದೆ. ಹಾವು, ಚೇಳು ಕಚ್ಚಿ ಆಸ್ಪತ್ರೆಗೆ ಹೋಗಿ ಗುಣಮುಖರಾಗದೇ ಸಾವು ಬದುಕಿನ ನಡುವೆ ಹೋರಾಟ ನಡೆಸಿ, ರಂಗಪ್ಪನ ಸನ್ನಿಧಿಗೆ ಬಂದು ಗುಣಮುಖ ವಾಗಿರುವುದು ಅದೇಷ್ಟೋ ಉದಾಹರಣೆಗಳಿರುವುದು ಸ್ವಾಮಿಯ ಪವಾಡ ಎನ್ನುವವರು ಇದ್ದಾರೆ. ಆದ್ದರಿಂದ ರಂಗನಾಥ ಸ್ವಾಮಿಯನ್ನು ವಿಷ ಜಂತುಗಳ ಪರಿಹಾರಕ ಎಂತಲೂ ಭಕ್ತರು ಕರೆಯುತ್ತಾರೆ.

ರಾಜ್ಯ ಹೊರ ರಾಜ್ಯಗಳ ಭಕ್ತರು ಆಗಮನ : ರಂಗನಾಥ ಸ್ವಾಮಿ ಅಂಬಿನೋತ್ಸವಕ್ಕೆ ಚಿತ್ರದುರ್ಗ, ತುಮಕೂರು, ಬಳ್ಳಾರಿ, ದಾವಣಗೆರೆ, ಹಾವೇರಿ, ಬೆಂಗಳೂರು, ಹಾಸನ ಸೇರಿದಂತೆ ನೆರೆ ರಾಜ್ಯಗಳಾದ ಆಂಧ್ರಪ್ರದೇಶ, ತಮಿಳುನಾಡಿನ ವಿವಿಧ ಜಿಲ್ಲೆಗಳಿಂದಲೂ ಸಾವಿರಾರು ಭಕ್ತರು ಆಗಮಿಸಿ ಭಕ್ತಿ ಸಮರ್ಪಣೆ ಮಾಡಲಿದ್ದಾರೆ.

ಅತಿ ಹೆಚ್ಚಿನ ಸಂಖ್ಯೆಯಲ್ಲಿ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಮತ್ತು ಹೊಸದುರ್ಗ ತಾಲೂಕುಗಳಲ್ಲಿನ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಲಿದ್ದಾರೆ.

ದ್ವಿಚಕ್ರ ವಾಹನ, ಕಾರು, ಟೆಂಪೋ, ಬಸ್ ಹಾಗೂ ನೂರಾರು ಎತ್ತಿನ ಗಾಡಿಗಳನ್ನು ಕಟ್ಟಿಕೊಂಡು ಆಗಮಿಸಿ, ಸ್ವಾಮಿ ಅಂಬಿನೋತ್ಸವ ಕಾರ್ಯವನ್ನು ಕಣ್ತುಂಬಿಕೊಂಡು ತಮ್ಮ ಇಷ್ಟಾರ್ಥಗಳನ್ನು ಬೇಡಿಕೊಳ್ಳುವರು.
ವಿಶೇಷ ಬಸ್ ಸೌಲಭ್ಯ ಹಿರಿಯೂರು ಹಾಗೂ ಹೊಸದುರ್ಗ ತಾಲೂಕಿನಿಂದ ಜಾತ್ರೆಗೆ ಸಾವಿರಾರು ಭಕ್ತರು ಆಗಮಿಸುವ ಹಿನ್ನೆಲೆ ವಿಶೇಷವಾಗಿ ಬಸ್ ಸೌಲಭ್ಯಗಳನ್ನು ಕಲ್ಪಿಸಲಾಗುತ್ತದೆ.

ಅಕ್ಟೋಬರ್ 3 ರಂದು ಹಾರನ ಕಣಿವೆ ರಂಗನಾಥ ಸ್ವಾಮಿಯ ಅಂಬಿನೋತ್ಸವ ತಾಲೂಕಿನ ವಾಣಿವಿಲಾಸ ಸಾಗರ ಜಲಾಶಯದ ಹಿಂಭಾಗದಲ್ಲಿ ನೆಲೆಸಿರುವ ಐತಿಹಾಸಿಕ ಪ್ರಸಿದ್ಧ ಶ್ರೀ ಹಾರನ ಕಣಿವೆ ರಂಗನಾಥ ಸ್ವಾಮಿಯ ಜಾತ್ರೆ ಹಾಗೂ ಅಂಬಿನೋತ್ಸವ ಬನ್ನಿ ಮುಡಿಯುವ ಕಾರ್ಯಕ್ರಮ ಅಕ್ಟೋಬರ್ 3ರ ಶುಕ್ರವಾರ ಭಕ್ತಿ ಭಾವದಿಂದ ನಡೆಯಲಿದೆ. ಇದರ ಅಂಗವಾಗಿ ಅಕ್ಟೋಬರ್ 2 ರ ಗುರುವಾರ ಗಂಗಾ ಪೂಜೆಯೊಂದಿಗೆ ಕಾರ್ಯಕ್ರಮಗಳು ಆರಂಭವಾಗಲಿವೆ. ಅಕ್ಟೋಬರ್ 4 ಶನಿವಾರ ವಿಶೇಷ ಪೂಜೆ ನಂತರ ಮಹಾಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗ ನಡೆಯಲಿದೆ. ಅಕ್ಟೋಬರ್ 5ರ ಭಾನುವಾರ ದಾಸೋಹ ಮತ್ತು ಹೂವಿನ ಪಲ್ಲಕ್ಕಿ ಉತ್ಸವ ಕಾರ್ಯಕ್ರಮ ನಡೆಯಲಿದೆ. ಭಕ್ತಾದಿಗಳು ಎಲ್ಲಾ ಪೂಜಾ ಕಾರ್ಯಕ್ರಮಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ದೇವಸ್ಥಾನದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Share This Article
error: Content is protected !!
";