ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಜಿಲ್ಲೆಯ ಆರು ತಾಲ್ಲೂಕುಗಳನ್ನು ಬರಪೀಡಿತ ಪಟ್ಟಿಗೆ ಸೇರಿಸುವಂತೆ ಅಖಿಲ ಭಾರತ ಕಿಸಾನ್ ಸಂಘದಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿ ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಸಲ್ಲಿಸಲಾಯಿತು.
ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಜಿಲ್ಲೆಯ ಆರು ತಾಲ್ಲೂಕಿನ ರೈತರಿಗೆ ಬರ ಪರಿಹಾರ ಮೊತ್ತ ಕೂಡಲೆ ಹಂಚಿಕೆಯಾಗಬೇಕು. ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯ ಮಾನದಂಡಗಳನ್ನು ಬದಲಾಯಿಸಿ ಹಣವನ್ನು ಪಾವತಿಸಿಕೊಂಡು ಎಲ್ಲಾ ರೈತರ ಖಾತೆಗಳಿಗೆ ಹಣ ಜಮಾ ಮಾಡಬೇಕು. ಜಿಲ್ಲೆಯ ರೈತರು ಅಕ್ರಮ ಸಕ್ರಮ ಕೋರಿ ಅರ್ಜಿ ಸಲ್ಲಿಸಿ ಸಾಗುವಳಿ ಮಾಡುತ್ತಿರುವ ಫಾರಂ ನಂ ೫೭ ಅರ್ಜಿಗಳಿಗೆ ತಡ ಮಾಡದೆ ಸಾಗುವಳಿ ಪತ್ರ ವಿತರಿಸಬೇಕು.
ಮೊಳಕಾಲ್ಮುರು ತಾಲ್ಲೂಕಿನ ರಾಂಪುರ ಸರ್ವೆ ನಂಬರ್ ೪೭, ಬಸಾಪುರ ಸರ್ವೆ ನಂ. ೧೪, ದಡಗೂರು ಸರ್ವೆ ನಂ. ೨೩, ವಡೆರಹಳ್ಳಿ ಸರ್ವೆ ನಂ. ೩೨ ರೈತರ ಮೂಲ ಸಮಸ್ಯೆಯಾದ ಗಡಿ ಗುರುತು ಜಂಟಿ ಸರ್ವೆ ತುರ್ತಾಗಿ ಆಗಬೇಕು. ಅಕ್ರಮ-ಸಕ್ರಮ ಕೋರಿ ಪ್ರಸ್ತುತ ಹಂಚಿಕೆ ಹಂತದಲ್ಲಿರುವ ೪೯೩ ಅರ್ಜಿಗಳ ರೈತರಿಗೆ ಸಾಗುವಳಿ ಪತ್ರಗಳನ್ನು ವಿತರಿಸಬೇಕು. ಅರಣ್ಯ ಹಕ್ಕು ಸಾಗುವಳಿ ಮತ್ತು ಬಗರ್ ಹುಕುಂ ರೈತರನ್ನು ಒಕ್ಕಲೆಬ್ಬಿಸುವ ಯಾವ ಕ್ರಮಕ್ಕೂ ಮುಂದಾಗಬಾರದೆಂದು ಪ್ರತಿಭಟನಾನಿರತರು ಒತ್ತಾಯಿಸಿದರು.
ಅಖಿಲ ಭಾರತ ಕಿಸಾನ್ ಸಂಘದ ಜಿಲ್ಲಾ ಕಾರ್ಯದರ್ಶಿ ಕಾಂ.ಜಿ.ಸಿ.ಸುರೇಶ್ಬಾಬು ಮಾತನಾಡಿ ಅತಿಯಾಗಿ ಮಳೆ ಸುರಿದ ಪರಿಣಾಮ ಜಿಲ್ಲೆಯಲ್ಲಿ ಎಲ್ಲಾ ಬೆಳೆಗಳು ನಾಶವಾಗಿವೆ. ಶೇಂಗಾ, ಈರುಳ್ಳಿ, ಮೆಕ್ಕೆಜೋಳ ಬೆಳೆಗಳನ್ನೇ ನಂಬಿಕೊಂಡಿರುವ ರೈತರು ಎಕರೆಗೆ ನಲವತ್ತರಿಂದ ಐವತ್ತು ಸಾವಿರ ರೂ.ಗಳ ಬಂಡವಾಳ ಹಾಕಿ ಕೈಸುಟ್ಟುಕೊಂಡಿದ್ದಾರೆ. ಜಿಲ್ಲಾಧಿಕಾರಿಗಳು ಆರು ತಾಲ್ಲೂಕಿನ ತಹಶೀಲ್ದಾರ್ ಹಾಗೂ ಕೃಷಿ ಅಧಿಕಾರಿಗಳ ಜೊತೆ ಸಭೆ ನಡೆಸಿ ಜಿಲ್ಲೆಯನ್ನು ಬರಪೀಡಿತ ಪಟ್ಟಿಗೆ ಸೇರಿಸುವಂತೆ ರಾಜ್ಯ ಸರ್ಕಾರಕ್ಕೆ ವರದಿ ಕಳಿಸಬೇಕೆಂದು ಮನವಿ ಮಾಡಿದರು.
ಜಾಫರ್ಷರೀಫ್, ಟಿ.ಆರ್.ಉಮಾಪತಿ, ಸತ್ಯಕೀರ್ತಿ, ಇರ್ಫಾನ್, ಮಾರಣ್ಣ ಇನ್ನು ಅನೇಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

