ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮನುಷ್ಯನ ಉಗಮವಾಗಿದ್ದೇ ಕಾಡಿನಲ್ಲಿ. ಅಂದು ಕಾಡಾಗಿದ್ದು ಇಂದು ನಾಡಾಗಿದೆ. ನಮ್ಮ ಸುತ್ತಲಿನ ಪರಿಸರವನ್ನು ಕಾಪಾಡಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ. ಪ್ರಕೃತಿ ದೊಡ್ಡವರಿಗೆ ಸೇರಿದ್ದಲ್ಲ, ಮಕ್ಕಳಿಗೆ ಅಂದರೆ ಮುಂದಿನ ಪೀಳಿಗೆಗೆ ಸೇರಿದ ಆಸ್ತಿ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಹೇಳಿದರು.
ವಿಧಾನಸೌಧದ ಮುಂಭಾಗ ವನ್ಯಜೀವಿ ಸಪ್ತಾಹ ಹಾಗೂ ಕಾಲ್ನಡಿಗೆ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನನ್ನ ಹುಟ್ಟುಹಬ್ಬದಂದು ಕಬಿನಿ ಹಿನ್ನೀರಿನ ಪ್ರದೇಶ ವೀಕ್ಷಣೆಗೆ ಹೋಗಿದ್ದೆ. ನಾನು ಅಲ್ಲಿ ಕಂಡ ಪ್ರಾಕೃತಿಕ ಸಂಪತ್ತು ಎಲ್ಲಿಯೂ ಇಲ್ಲ. ಕೇವಲ ಒಂದು ಗಂಟೆ ಅಂತರದಲ್ಲಿ ಇನ್ನೂರಕ್ಕೂ ಹೆಚ್ಚು ಆನೆಗಳನ್ನು ನೋಡಿದೆ. ಹುಲಿ, ಜಿಂಕೆಗಳು ನಮ್ಮ ಪ್ರಾಕೃತಿಕ ಆಸ್ತಿಗಳು ಎಂದರು.
ರಂಗನತಿಟ್ಟು ವಿಶೇಷವಾದ ಪಕ್ಷಿಗಳ ದ್ವೀಪ ಎನ್ನಬಹುದು. ದೇಶ, ವಿದೇಶಗಳ ಹಕ್ಕಿಗಳು ಇಲ್ಲಿ ಕಂಡುಬರುವುದೇ ಅತ್ಯಂತ ವಿಶೇಷ ಸಂಗತಿ. ನಾವೆಲ್ಲರೂ ಈ ಸಂಪತ್ತನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಆಲೋಚನೆ ಮಾಡಬೇಕು. ಆದ ಕಾರಣಕ್ಕೆ ಮಕ್ಕಳಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ಮಾಡಲಾಗುತ್ತಿದೆ ಎಂದರು.
ಅನಿಲ್ ಕುಂಬ್ಳೆಯವರು ಅಂತರಾಷ್ಟ್ರೀಯ ಕ್ರಿಕೆಟಿಗರಾಗಿ ದೊಡ್ಡ ಹೆಸರು ಮಾಡಿದವರು. ನಿವೃತ್ತಿಯ ನಂತರ ವನ್ಯಜೀವಿಗಳ ಉಳಿವುಗಾಗಿ ಕೆಲಸ ಮಾಡುತ್ತಿದ್ದಾರೆ. ಕರ್ನಾಟಕದ ರಾಯಭಾರಿಯಾಗಿ ಕೆಲಸ ಮಾಡುತ್ತಿದ್ದಾರೆ ಎಂದರು.
ಅನಿಲ್ ಕುಂಬ್ಳೆಯವರಂತೆ ಎಲ್ಲರೂ ಪ್ರಾಕೃತಿಕ ಸಂಪತ್ತನ್ನು ಉಳಿಸುತ್ತೇನೆ ಎಂದು ಸಂಕಲ್ಪ ಮಾಡಬೇಕು. ಒಬ್ಬರು ಹದಿನಾರು ಜನರಲ್ಲಿ ಜಾಗೃತಿ ಮೂಡಿಸುವೆ ಎಂದು ಸಂಕಲ್ಪ ತೊಡಬೇಕು. ನಮ್ಮ ಸಂಪತ್ತು ನಾವೇ ಉಳಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಕರ್ನಾಟಕ ಅರಣ್ಯ ಹಾಗೂ ಪ್ರಕೃತಿ ಸಂಪತ್ತನ್ನು ಹೇರಳವಾಗಿ ಹೊಂದಿರುವ ನಾಡು. ಹಿರಿಯರು ನಮ್ಮ ಪ್ರಕೃತಿಯನ್ನು ದೇವರು ಎಂದು ಪೂಜಿಸುತ್ತಿದ್ದರು. ಈ ಮೊದಲು ಪ್ರತಿಯೊಂದು ಮನೆಯ ಬಳಿಯೂ ಸಣ್ಣ ತೋಟವನ್ನು ನಾವುಗಳು ಹೊಂದಿರುತ್ತಿದ್ದೆವು. ಈಗ ಅಪಾರ್ಟ್ಮೆಂಟ್ ಸಂಸ್ಕೃತಿಯಿಂದ ಕೈತೋಟದ ಕಲ್ಪನ ಕಣ್ಮರೆಯಾಗುತ್ತಿದೆ ಎಂದು ಬೇಸರಿಸಿದರು.
ಜಿಬಿಎ ಪಾಲಿಕೆ ವ್ಯಾಪ್ತಿಯ ಶಾಲೆಗಳು ಒಂದೊಂದು ವಲಯಗಳನ್ನು ಆಯ್ಕೆ ಮಾಡಿ ಮಕ್ಕಳಿಂದ ಗಿಡಗಳನ್ನು ಬೆಳೆಸಬೇಕು. ಕಳೆದ ಎರಡು ವರ್ಷಗಳಲ್ಲಿ 1 ಲಕ್ಷ ಸಸಿಗಳನ್ನು ನೆಟ್ಟು ಕಾಪಾಡಿದ ಇತಿಹಾಸ ನಮ್ಮದಾಗಿದೆ. ಈ ಕಾರ್ಯಕ್ರಮ ಇಡೀ ರಾಜ್ಯಕ್ಕೆ ವಿಸ್ತರಿಸಬೇಕು. ಪರಿಸರ ಸಚಿವರಾದ ಈಶ್ವರ ಖಂಡ್ರೆ ಅವರು ಅತ್ಯುತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ನಮ್ಮ ಸಹಕಾರ ಸದಾ ಇರುತ್ತದೆ ಎಂದರು.
ವನ್ಯಜೀವಿಗಳೊಂದಿಗೆ ಸಹಬಾಳ್ವೆ ಇಂದಿನ ಅಗತ್ಯ: ಸಚಿವ ಈಶ್ವರ ಖಂಡ್ರೆ
ವಿಧಾನಸೌಧದ ಮೆಟ್ಟಿಲುಗಳ ಮೇಲೆ 71ನೇ ವನ್ಯಜೀವಿ ಸಪ್ತಾಹದಲ್ಲಿ ಮಾತನಾಡಿದ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಅವರು, ಮಲೆ ಮಹದೇಶ್ವರ ಬೆಟ್ಟದಲ್ಲಿ 5 ಹುಲಿ, ಮಧುಗಿರಿಯ ಮಿಡಿಗೇಶಿಯಲ್ಲಿ 20 ನವಿಲು, ಬಂಡೀಪುರದಲ್ಲಿ 19 ಕೋತಿಗಳ ಸಾವು ಅತೀವ ನೋವು ತಂದಿದ್ದು, ವನ್ಯಜೀವಿ ಸಂರಕ್ಷಣೆಯ ಜವಾಬ್ದಾರಿ ಹೆಚ್ಚಿಸಿದೆ ಎಂದು ಹೇಳಿದ್ದಾರೆ.
ಕರ್ನಾಟಕ ರಾಜ್ಯ ವನ್ಯಜೀವಿ ಸಂರಕ್ಷಣಾ ಕಾಯಿದೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದಿದೆ. ಆದರೂ ಇಂತಹ ಘಟನೆಗಳು ನಡೆಯುತ್ತಿರುವುದು ದುರ್ದೈವ. ಭೂಮಿಯಲ್ಲಿ ಹುಟ್ಟಿದ ಪ್ರತಿಯೊಂದು ಜೀವಿಗೂ ಬದುಕುವ ಹಕ್ಕಿದ್ದು, ವನ ಪ್ರದೇಶ ಕ್ಷೀಣಿಸುತ್ತಿರುವ ಪ್ರಸಕ್ತ ಸನ್ನಿವೇಶದಲ್ಲಿ ವನ್ಯಜೀವಿಗಳೊಂದಿಗೆ ಸಹಬಾಳ್ವೆ ಅನಿವಾರ್ಯವಾಗಿದೆ. ವನ್ಯಜೀವಿಗಳು ಪ್ರಕೃತಿ ಸಮತೋಲನ ಕಾಪಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದು, ಈ ಬಗ್ಗೆ ಜಾಗೃತಿ ಮೂಡಿಸುವುದೇ ಈ ಸಪ್ತಾಹದ ಉದ್ದೇಶವಾಗಿದೆ ಎಂದರು.
ರಾಜ್ಯ ವನ್ಯಜೀವಿ ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಿರುವುದರಿಂದಲೇ ನಮ್ಮ ರಾಜ್ಯ ಆನೆಗಳ ಸಂಖ್ಯೆಯಲ್ಲಿ ನಂ.1 ಸ್ಥಾನದಲ್ಲಿದೆ. ರಾಜ್ಯದಲ್ಲಿ 5395 ಆನೆಗಳಿದ್ದರೆ, 563 ಹುಲಿಗಳಿವೆ. ದೇಶದಲ್ಲೇ ಅತಿ ಹೆಚ್ಚು ಹುಲಿಗಳಿರುವ ರಾಜ್ಯಗಳ ಪೈಕಿ ಕರ್ನಾಟಕ 2ನೇ ಸ್ಥಾನದಲ್ಲಿದೆ. ಆದರೆ ಮಲೆ ಮಹದೇಶ್ವರ ಬೆಟ್ಟದಲ್ಲಿ ವಿಷ ಪ್ರಾಶನದಿಂದ ಒಂದೇ ದಿನ ಶೇ.1ರಷ್ಟು ಹುಲಿಗಳು ಸಾವಿಗೀಡಾದವು ಇದು ಹೃದಯ ವಿದ್ರಾವಕ ಘಟನೆ ಎಂದು ನೋವು ವ್ಯಕ್ತಪಡಿಸಿದರು.
ಇಂತಹ ಆಘಾತಕಾರಿ ಘಟನೆಗಳು ಮರುಕಳಿಸಬಾರದು. ವನ್ಯಜೀವಿಗಳ ಸಂರಕ್ಷಣೆ ಕೇವಲ ಅರಣ್ಯ ಸಿಬ್ಬಂದಿಯ ಜವಾಬ್ದಾರಿ ಮಾತ್ರ ಅಲ್ಲ. ನಾಗರಿಕರ ಕರ್ತವ್ಯವೂ ಆಗಿದೆ, ಇಂದು ಹಲವು ವನ್ಯ ಜೀವಿಗಳು ಅಳಿವಿನ ಅಂಚಿನಲ್ಲಿವೆ. ಕೆಲವು ಅವಸಾನ ಕಂಡಿವೆ. ಹೀಗಾಗಿ ಜನರಲ್ಲಿ ಅರಣ್ಯದ ಬಗ್ಗೆ ವನ್ಯ ಜೀವಿಗಳ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯ ಹಿಂದೆಂದಿಗಿಂತ ಇಂದು ಹೆಚ್ಚಾಗಿದೆ ಎಂದರು.
ಗಾಂಧೀ ಸ್ಮರಣೆ:
ಇಂದು ರಾಷ್ಟ್ರಪಿತ ಮಹಾತ್ಮಾ ಗಾಂಧೀ ಜಯಂತಿ. ಸತ್ಯ, ಶಾಂತಿ ಮತ್ತು ಅಹಿಂಸೆ ಎಂಬ ಶಸ್ತ್ರ ಹಿಡಿದು ಸತ್ಯಾಗ್ರಹದ ಶಕ್ತಿಯನ್ನು ಜಗತ್ತಿಗೆ ತೋರಿದ ಮತ್ತು ಭಾರತವನ್ನು ಪರಕೀಯರ ದಾಸ್ಯದಿಂದ ಮುಕ್ತಗೊಳಿಸಿದ ಮಹಾತ್ಮಾ ಗಾಂಧೀ ಅವರು ಪ್ರಕೃತಿ, ಪರಿಸರದ ಬಗ್ಗೆ ಅಪಾರ ಕಾಳಜಿ ಹೊಂದಿದ್ದರು. ಮಹಾತ್ಮಾ ಗಾಂಧೀ ಅವರು, “ಪ್ರಕೃತಿ, ಪರಿಸರ ಇರುವುದು ಮನುಷ್ಯನ ಅವಶ್ಯಕತೆ ಪೂರೈಸುವುದಕ್ಕೇ ಹೊರತು, ದುರಾಸೆ ಪೂರೈಸುವುದಕ್ಕಲ್ಲ’’ ಎಂದು ಪ್ರತಿಪಾದಿಸುತ್ತಿದ್ದರು. ಈ ಜಗತ್ತು ನಮ್ಮ ಪಿತ್ರಾರ್ಜಿತ ಆಸ್ತಿಯಲ್ಲ, ಬದಲಾಗಿ ನಮ್ಮ ಮುಂದಿನ ಪೀಳಿಗೆಯಿಂದ ನಾವು ಪಡಿದಿರುವ ಸಾಲ ಎಂದೂ ಮಹಾತ್ಮಾ ಗಾಂಧೀ ಹೇಳುತ್ತಿದ್ದರು ಎಂದು ಸ್ಮರಿಸಿದರು.
ಬೆಂಗಳೂರು ನಗರವೊಂದರಲ್ಲೇ ಸುಮಾರು 10 ಸಾವಿರ ಕೋಟಿ ರೂ. ಬೆಲೆ ಬಾಳುವ 250 ಎಕರೆಗೂ ಹೆಚ್ಚು ಅರಣ್ಯ ಭೂಮಿ ಒತ್ತುವರಿ ತೆರವು ಮಾಡಿಸಲಾಗಿದ್ದು, ಅಲ್ಲಿ ಸಸಿಗಳನ್ನು ನೆಡಲಾಗಿದೆ. ಬೆಂಗಳೂರು ನಗರದ ಹಸಿರು ಪ್ರದೇಶ ಹೆಚ್ಚಳ ಮಾಡಲಾಗುತ್ತಿದೆ. ಇದರ ಜೊತೆಗೆ ಮಾದಪ್ಪನಹಳ್ಳಿಯಲ್ಲಿ 153 ಎಕರೆ ಪ್ರದೇಶದಲ್ಲಿ ಲಾಲ್ ಬಾಗ್ ಮಾದರಿಯಲ್ಲಿ ಬೃಹತ್ ಸಸ್ಯೋದ್ಯಾನ ನಿರ್ಮಾಣ ಮಾಡಲಾಗುತ್ತಿದೆ. ಹೆಸರುಘಟ್ಟ ಪ್ರದೇಶದಲ್ಲಿ 5678 ಎಕರೆ ಪ್ರದೇಶವನ್ನು ಸಂರಕ್ಷಿತ ಹುಲ್ಲುಗಾವಲು ಎಂದು ಘೋಷಿಸಲಾಗಿದೆ ಎಂದು ಸಚಿವ ಈಶ್ವರ ಖಂಡ್ರೆ ತಿಳಿಸಿದರು.
ಕಂಟೋನ್ಮೆಂಟ್ ರೈಲು ನಿಲ್ದಾಣದ ಬಳಿ 371 ಮರಗಳಿರುವ ಪ್ರದೇಶವನ್ನು ಪಾರಂಪರಿಕ ಜೀವವೈವಿಧ್ಯತೆಯ ತಾಣ ಎಂದು ಘೋಷಿಸಲಾಗಿದೆ. ನಾವು ಸರ್ಕಾರದ ವತಿಯಿಂದ ಇಲಾಖೆಯ ವತಿಯಿಂದ ಪರಿಸರ, ಅರಣ್ಯ, ವನ್ಯಜೀವಿ ರಕ್ಷಣೆಗೆ ಕ್ರಮ ಕೈಗೊಂಡಿದ್ದೇವೆ. ನಾಗರಿಕರು ನಿಮ್ಮ ಕೈಲಾದ ಕೊಡುಗೆ ನೀಡಬೇಕು. ಪ್ರಕೃತಿ ಪರಿಸರ ಉಳಿಸಬೇಕು ಎಂದು ಮನವಿ ಮಾಡಿದರು.
ಪಟಾಕಿ ತ್ಯಜಿಸಲು, ಇಲ್ಲವೆ ಹಸಿರು ಪಟಾಕಿ ಸಿಡಿಸಲು ಮನವಿ:
ಮುಂದಿನ ತಿಂಗಳು ದೀಪಾವಳಿ ಹಬ್ಬದಲ್ಲಿ ಜನರು ಪಟಾಕಿ ಸಿಡಿಸಿ ಸಂಭ್ರಮಿಸುತ್ತಾರೆ. ಆದರೆ ಪಟಾಕಿಯಲ್ಲಿ ಭಾರ ಲೋಹಗಳಿದ್ದು, ಅದರಿಂದ ಆಸ್ತಮಾ, ಅಲರ್ಜಿ ಮೊದಲಾದ ಹಲವು ಸಮಸ್ಯೆ ಎದುರಾಗುತ್ತದೆ. ಪರಿಸರ ಮಾಲಿನ್ಯ ಉಂಟಾಗುತ್ತದೆ. ದೀಪಾವಳಿ ಸಮಯದಲ್ಲಿ ಹಿಮ ಸುರಿಯುತ್ತಿರುತ್ತದೆ. ಆ ಹಿಮ ಅಥವಾ ಮಂಜಿನ ಜೊತೆ ಈ ಪಟಾಕಿಯ ಹೊಗೆ ಸೇರಿ ದಟ್ಟವಾಗಿ ಹೊಂಜು – ಸ್ಲೋಕ್ ಪ್ಲಸ್ ಫಾಗ್ ಸ್ಮಾಗ್ ಆಗುತ್ತದೆ.
ಇದರಿಂದ ಪುಟ್ಟ ಮಕ್ಕಳು, ಹಿರಿಯ ನಾಗರಿಕರು ಉಸಿರಾಡಲೂ ಕಷ್ಟಪಡಿಸುವ ಸ್ಥಿತಿ ನಿರ್ಮಾಣವಾಗುತ್ತದೆ. ಹೀಗಾಗಿ ಪಟಾಕಿ ಹಚ್ಚುವುದಿಲ್ಲ ಎಂದು ನಿರ್ಧಾರ ಮಾಡಿ, ಇಲ್ಲ ನಾವು ಹಬ್ಬ ಪಟಾಕಿ ಸಿಡಿಸಲೇಬೇಕು ಎಂದರೆ ಹಸಿರು ಪಟಾಕಿ ಮಾತ್ರ ಹಚ್ಚಿ ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ವನ, ವನ್ಯಜೀವಿ ರಾಯಭಾರಿ ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ, ಅರಣ್ಯ ಪಡೆ ಮುಖ್ಯಸ್ಥರಾದ ಮೀನಾಕ್ಷಿ ನೇಗಿ, ಮುಖ್ಯ ವನ್ಯಜೀವಿ ಪರಿಪಾಲಕ ಪಿ.ಸಿ.ರೇ ಮತ್ತಿತರರು ಉಪಸ್ಥಿತರಿದ್ದರು.

