ಚಂದ್ರವಳ್ಳಿ ನ್ಯೂಸ್, ಇಸ್ಲಾಮಾಬಾದ್:
ಕಾಶ್ಮೀರ ಕ್ರಿಯಾ ಸಮಿತಿ ಆಯೋಜಿಸಿದ್ದ ಪ್ರತಿಭಟನೆಯ ಸಂದರ್ಭದಲ್ಲಿ ರಾಷ್ಟ್ರೀಯ ಪ್ರೆಸ್ ಕ್ಲಬ್ ಮೇಲೆ ಪೊಲೀಸ್ ದಾಳಿ ನಡೆಸಿ, ವಕೀಲರು ಹಾಗೂ ಪತ್ರಕರ್ತರ ಮೇಲೆ ಪೊಲೀಸರು ಲಾಠಿಚಾರ್ಜ್ ಮಾಡಿರುವ ಘಟನೆ ಇಸ್ಲಾಮಾಬಾದ್ನಲ್ಲಿ ನಡೆದಿದೆ.
ಆಕ್ರಮಿತ ಕಾಶ್ಮೀರದಲ್ಲಿ ನಡೆಯುತ್ತಿರುವ ದೌರ್ಜನ್ಯಗಳು ಮತ್ತು ಇಂಟರ್ನೆಟ್ ಕಡಿತದ ವಿರುದ್ಧ ಕಾಶ್ಮೀರ ಕ್ರಿಯಾ ಸಮಿತಿ ಆಯೋಜಿಸಿದ್ದ ಪ್ರತಿಭಟನೆ ಸಂದರ್ಭದಲ್ಲಿ ಈ ಘಟನೆ ನಡೆದಿದೆ.
ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಜನ ತಾರತಮ್ಯ ಖಂಡಿಸಿ ಪಾಕಿಸ್ತಾನ ಸರ್ಕಾರದ ವಿರುದ್ಧ ದಂಗೆ ಎದ್ದಿದ್ದು, ಅನಿರ್ದಿಷ್ಟಾವಧಿ ಪ್ರತಿಭಟನೆ 4ನೇ ದಿನ ಪೂರೈಸಿದೆ.
ಇದನ್ನು ಹತ್ತಿಕ್ಕಲು ಪಾಕಿಸ್ತಾನ ಸರ್ಕಾರ ಲಾಠಿಚಾರ್ಜ್, ಗೋಲಿಬಾರ್ನಂತಹ ಧಮನಕಾರಿ ನೀತಿ ಪ್ರದರ್ಶಿಸುತ್ತಿದೆ. ಇಸ್ಲಾಮಾಬಾದ್ ಪೊಲೀಸರು ಬಲವಂತವಾಗಿ ಪ್ರೆಸ್ಕ್ಲಬ್ ಆವರಣಕ್ಕೆ ಪ್ರವೇಶಿಸಿ ಪತ್ರಕರ್ತರು ಮತ್ತು ಪ್ರತಿಭಟನಾಕಾರರ ಮೇಲೆ ದಾಳಿ ನಡೆಸಿದ್ದಾರೆ.
ವಕೀಲ ಸಮುದಾಯದ ಸದಸ್ಯರು ಎನ್‌ಪಿಸಿ ಹೊರಗೆ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದರು. ಪೊಲೀಸರು ಅವರ ಮೇಲೆ ದಾಳಿ ನಡೆಸಿದ್ದಾರೆ.

