5.25 ಕೋಟಿ ವಿಮೆ ಹಣಕ್ಕಾಗಿ ಕೊಲೆ ಮಾಡಿ ಸಿಕ್ಕಿಬಿದ್ದ 6 ಮಂದಿ ಹಂತಕರು

News Desk

ಚಂದ್ರವಳ್ಳಿ ನ್ಯೂಸ್, ವಿಜಯನಗರ:
ಜೀವವಿಮೆ(ಇನ್ಶೂರೆನ್ಸ್​​​) ಹಣಕ್ಕಾಗಿ ಕೊಲೆ ಮಾಡಿ ಆ ಕೊಲೆಯನ್ನು ಅಪಘಾತ ಎಂದು ಬಿಂಬಿಸಲು ಪ್ರಯತ್ನಪಟ್ಟ ಹಂತಕರನ್ನು ಪೊಲೀಸರು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಹೊಸಪೇಟೆ ಹೊರವಲಯದಲ್ಲಿ ವ್ಯಕ್ತಿಯೊಬ್ಬನನ್ನು ಅಪಘಾತದಲ್ಲಿ ಮೃತಪಟ್ಟಂತೆ ತೋರಿಸಿ, 5.25 ಕೋಟಿ ರೂ. ಜೀವ ವಿಮೆಯ ಹಣವನ್ನು ಲಪಟಾಯಿಸುವ ಯತ್ನ ಮಾಡಿದ 6 ಮಂದಿ ಆರೋಪಿಗಳನ್ನು ಹೊಸಪೇಟೆ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.

- Advertisement - 

ಮೃತ ವ್ಯಕ್ತಿಯನ್ನು ಹೊಸಪೇಟೆಯ ಕೌಲ್ ಪೇಟೆಯ ನಿವಾಸಿ ಗಂಗಾಧರ ಹಾಗೂ ಬಂಧಿತರನ್ನು ಕೊಪ್ಪಳ ಜಿಲ್ಲೆಯ ಕೃಷ್ಣಪ್ಪ, ರವಿ ಗೋಸಂಗಿ, ವಿಜಯನಗರ ಜಿಲ್ಲೆಯ ಅಜೇಯ, ರಿಯಾಜ್, ಯೋಗರಾಜ್ ಸಿಂಗ್, ನಕಲಿ ಹೆಂಡತಿ ಹುಲಿಗೆಮ್ಮ ಎಂದು ಗುರುತಿಸಲಾಗಿದೆ.

ಎಸ್​​​​ಪಿ ಪ್ರತಿಕ್ರಿಯೆ:
ಮೃತ ಗಂಗಾಧರ್ ಹೆಸರಲ್ಲಿ
5.25 ಕೋಟಿ ರೂ. ಜೀವ ವಿಮೆ ಮಾಡಿಸಿದ್ದರು. ಈ ಹಣವನ್ನು ಪಡೆಯುವ ಆಸೆಯಿಂದಾಗಿ ಕೊಲೆಗೆ ಸಂಚು ಹೂಡಿದ್ದರು ಎಂದು ಎಸ್ಪಿ ಅವರು ತಿಳಿಸಿದರು.

- Advertisement - 

ಕೊಲೆ ಮಾಡಿದ ಬಳಿಕ ಹೊಸಪೇಟೆ ಹೊರವಲಯದ ಜಂಬುನಾಥ ಹಳ್ಳಿಗೆ ಹೋಗುವ ರಸ್ತೆಗೆ ಮೃತ ದೇಹ ಕರೆತಂದಿದ್ದರು. ಸೆಕೆಂಡ್ ಹ್ಯಾಂಡ್ ಎಕ್ಸೆಲ್ ಬೈಕ್​​ ಬಾಡಿಗೆಗೆ ತಂದು ಅದರ ಮೇಲೆ ಕೂರಿಸಿ ಕಾರಿನಿಂದ ಗುದ್ದಿಸಿ ಅಪಘಾತ ಎಂದು ಬಿಂಬಿಸುವಂತೆ ಮಾಡಿ, ಪರಾರಿಯಾಗಿದ್ದರು.

ಮೃತನ ಪತ್ನಿ ಹೊಸಪೇಟೆ ಠಾಣೆಯಲ್ಲಿ ದೂರು ದಾಖಲಿಸಿದ್ದರು ಎಂದು ವಿಜಯನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್. ಜಾಹ್ನವಿ ತಿಳಿಸಿದ್ದಾರೆ. ಅಪಘಾತವಾದರೆ ಬೈಕ್ ಬೀಗ ಗಾಡಿಯಲ್ಲಿರಬೇಕು ಇಲ್ಲವೇ ಕೆಳಗೆ ಬಿದ್ದಿರಬೇಕು. ಆದರೆ ಬೀಗ ಸೈಡ್ ಬ್ಯಾಗ್‌ನಲ್ಲಿರುವುದನ್ನು ಕಂಡು ಪೊಲೀಸರು ಅನುಮಾನಗೊಂಡು ತನಿಖೆ ನಡೆಸಿ ಘಟನೆ ನಡೆದ 24 ಗಂಟೆಯಲ್ಲೇ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಜೊತೆಗೆ ಕೃತ್ಯಕ್ಕೆ ಬಳಸಿದ್ದ ಕಾರು, ಬೈಕ್‌ನ್ನು ವಶಕ್ಕೆ ಪಡೆಯಲಾಗಿದೆ ಎಂದು ಎಸ್ಪಿ ಅವರು ಹೇಳಿದರು.

ಮೃತ ಗಂಗಾಧರ ಅವರಿಗೆ ತೀವ್ರ ಅನಾರೋಗ್ಯ, ಆರ್ಥಿಕ ಸಂಕಷ್ಟ ಕಾಡುತಿತ್ತು. ಅವರ ಪರಿಸ್ಥಿತಿಯ ಲಾಭ ಪಡೆಯಲು ಬಂಧಿತ ಆರು ಮಂದಿ ಸಂಚು ರೂಪಿಸಿ ಅವರಿಗೆ ಮದುವೆಯಾಗಿದ್ದರೂ ಬೇರೊಬ್ಬ ಮಹಿಳೆಯನ್ನು ಪತ್ನಿ ಎಂದು ನಮೂದಿಸಿ ಉಪನೋಂದಣಿ ಕಚೇರಿಯಲ್ಲಿ ವಿವಾಹ ನೋಂದಣಿ ಮಾಡಿಸಿದ್ದರು.

ಗಂಗಾಧರನ ಹೆಸರಲ್ಲಿ ಬ್ಯಾಂಕ್ ಖಾತೆ ತೆರೆದು, ನಕಲಿ ನಾಮಿನಿ ಸೃಷ್ಟಿಸಿದ್ದರು. ವಿವಿಧ ವಿಮಾ ಕಂಪನಿಗಳಲ್ಲಿ 5.25 ಕೋಟಿ ಮೊತ್ತದ ಅಪಘಾತ ವಿಮೆ, ಇತರೆ ವಿಮೆಯ ಆರು ಪಾಲಿಸಿಗಳನ್ನು ಮಾಡಿಸಿ ಆರೋಪಿಗಳೇ ಪ್ರೀಮಿಯಂ ಹಣ ತುಂಬಿದ್ದರು.

ಅಪಘಾತ ವಿಮೆ ಹಣ ಪಡೆಯಲು ವ್ಯಕ್ತಿಯನ್ನು ಕೊಲೆ ಮಾಡಿ, ಅಪಘಾತ ಎಂದು ಬಿಂಬಿಸಿದ್ದರು. ಮರಣೋತ್ತರ ಪರೀಕ್ಷೆ ಬಳಿಕ ಸಾವಿನ ಕುರಿತು ಇನ್ನೂ ಹೆಚ್ಚಿನ ಮಾಹಿತಿ ತಿಳಿಯಲಿದೆ. ಆರೋಪಿಗಳ ಜಾಲದ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಈ ಕುರಿತು ಹೆಚ್ಚಿನ ವಿವರ ನೀಡುವುದಾಗಿ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿಗಳು ಹೇಳಿದ್ದಾರೆ.

6 ಜನ ಆರೋಪಿತರನ್ನು ವಶಕ್ಕೆ ಪಡೆದಿದ್ದು ಆ ಪೈಕಿ ಓರ್ವ ಆಕ್ಸಿಸ್​​ ಬ್ಯಾಂಕ್​ನಲ್ಲಿ ಕೆಲಸ ಮಾಡುತ್ತಿದ್ದಾನೆ. ಈತ ಯಾರು ನಿರ್ಗತಿಕರು, ಅನಾಥರಂತೆ ಓಡಾಡುತ್ತಿರುತ್ತಾರೆ, ಅನಾರೋಗ್ಯದಿಂದ ಬಳಲುತ್ತಿರುತ್ತಾರೆ ಅಂಥವರನ್ನು ಹುಡುಕಿ ಅವರ ಹೆಸರಲ್ಲಿ ಬ್ಯಾಂಕ್​ ಖಾತೆ ತೆರೆಯುತ್ತಾನೆ. ಬಳಿಕ ಆ ಖಾತೆಗೆ ಬೇಕಾದ ಇತರ ಮಾಹಿತಿಗಳನ್ನು ಆರೋಪಿತನೇ ತುಂಬುತ್ತಾನೆ.

ಆ ಖಾತೆಯ ಮೇರೆಗೆ ವ್ಯಕ್ತಿಗೆ ಲೈಫ್​​ ಇನ್ಶೂರೆನ್ಸ್​ ಮಾಡಿಸುತ್ತಾನೆ. ಬಳಿಕ ಆತನ ಕುಟುಂಬದವರು ಯಾರು ನಾಮಿನಿ ಇರುತ್ತಾರೆ ಅವರನ್ನು ಸಂಪರ್ಕಿಸಿ ಎಲ್ಲಾ ಡ್ಯಾಕುಮೆಂಟ್ಸ್​ ಇವರ ಹೆಸರಲ್ಲೇ ಬರುವಂತೆ ಮಾಡಿಸಿಕೊಳ್ಳುತ್ತಾರೆ ಎಂದು ಎಸ್​ಪಿ ಎಸ್. ಜಾಹ್ನವಿ ಅವರು ಮಾಹಿತಿ ನೀಡಿದರು.

 

Share This Article
error: Content is protected !!
";