ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಸಮಾಜದಲ್ಲಿ ನಿಕೃಷ್ಟವಾಗಿ ಬದುಕುತ್ತಿರುವ ಅಲೆಮಾರಿ ಮತ್ತು ಅರೆಅಲೆಮಾರಿಗಳಿಗೆ ನಾಗಮೋಹನ್‌ದಾಸ್ ಆಯೋಗದ ವರದಿಯಂತೆ ರಾಜ್ಯ ಸರ್ಕಾರ ಶೇ.೧ ರಷ್ಟು ಪ್ರತ್ಯೇಕ ಮೀಸಲಾತಿಯನ್ನು ನೀಡಬೇಕೆಂದು ಭ್ರಷ್ಟಾಚಾರ ವಿರೋಧಿ ಆಂದೋಲನ ರಾಜ್ಯಾಧ್ಯಕ್ಷ ಹನುಮಂತಪ್ಪ ದುರ್ಗಾ ಒತ್ತಾಯಿಸಿದರು.
ಪ್ರವಾಸಿ ಮಂದಿರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ರಸ್ತೆ ಬದಿಯ ಟೆಂಟ್‌ಗಳಲ್ಲಿ ವಾಸಿಸುತ್ತಿರುವ ಅಲೆಮಾರಿ ಮತ್ತು ಅರೆಅಲೆಮಾರಿಗಳು ಶೇ.೧ ರಷ್ಟು ಮೀಸಲಾತಿಗಾಗಿ ನವದೆಹಲಿಯ ಜಂತರ್ ಮಂತರ್‌ನಲ್ಲಿ ಎರಡು ದಿನಗಳಿಂದ ಹೋರಾಟ ನಡೆಸುತ್ತಿದ್ದಾರೆ. ಧ್ವನಿಯಿಲ್ಲದ ಈ ಸಮುದಾಯವನ್ನು ರಾಜ್ಯ ಸರ್ಕಾರ ಕಡೆಗಣಿಸಬಾರದು. ರಾಜಕೀಯವಾಗಿ ಯಾರು ನಾಯಕರುಗಳಿಲ್ಲ. ಶಿಕ್ಷಣ, ಸಾಮಾಜಿಕ, ಆರ್ಥಿಕ, ರಾಜಕೀಯವಾಗಿ ಅತ್ಯಂತ ಹಿಂದುಳಿದಿರುವ ಈ ಸಮುದಾಯಕ್ಕೆ ಶೇ.೧ ಪ್ರತ್ಯೇಕ ಮೀಸಲಾತಿಯನ್ನು ನೀಡಬೇಕೆಂದರು.
ಕರ್ನಾಟಕ ಶಾಂತಿ ಮತ್ತು ಸೌಹಾರ್ಧ ವೇದಿಕೆ ಅಧ್ಯಕ್ಷ ನರೇನಹಳ್ಳಿ ಅರುಣ್‌ಕುಮಾರ್ ಮಾತನಾಡಿ ಅಲೆಮಾರಿ ಅರೆಅಲೆಮಾರಿ ಸಮುದಾಯಗಳು ಶೇ.೧ ರಷ್ಟು ಮೀಸಲಾತಿಯನ್ನು ನೀಡುವಂತೆ ಎರಡು ದಿನಗಳಿಂದಲೂ ದೆಹಲಿಯಲ್ಲಿ ಹೋರಾಟ ನಡೆಸುತ್ತಿದೆ. ಬುಡುಗ ಜಂಗಮ, ಸುಡುಗಾಡು ಸಿದ್ದರು,
ಚನ್ನದಾಸ, ಹಂದಿಜೋಗಿ, ಸಿಳ್ಳೆಕ್ಯಾತ, ಸಿಂದೋಳಿ, ಮಾಲಾದಾಸರು ಹೀಗೆ ಹಲವು ಹೆಸರುಗಳಿಂದ ಕರೆಸಿಕೊಳ್ಳುವ ಅಲೆಮಾರಿ ಮತ್ತು ಅರೆಅಲೆಮಾರಿಗಳು ಯಾವುದೇ ಸೌಲಭ್ಯಗಳಿಲ್ಲದೆ ಟೆಂಟ್‌ಗಳಲ್ಲಿ ವಾಸಿಸುತ್ತಿದ್ದಾರೆ. ರಾಜ್ಯ ಸರ್ಕಾರ ಇವರುಗಳನ್ನು ನಿರ್ಲಕ್ಷಿಸಬಾರದೆಂದು ಆಗ್ರಹಿಸಿದರು.
ನ್ಯಾಯವಾದಿ ಪ್ರತಾಪ್‌ಜೋಗಿ ಮಾತನಾಡುತ್ತ ಅಲೆಮಾರಿ ಮತ್ತು ಅರೆಅಲೆಮಾರಿಗಳು ರಾಹುಲ್‌ಗಾಂಧಿಗೆ ಹದಿನೈದು ಸಾವಿರ ಪತ್ರಗಳನ್ನು ಬರೆದು ಶೇ.೧ ರಷ್ಟು ಪ್ರತ್ಯೇಕ ಮೀಸಲಾತಿಗೆ ಮನವಿ ಮಾಡಿದ್ದಾರೆ. ಸರ್ಕಾರದ ಎಲ್ಲಾ ರೀತಿಯ ಸೌಲಭ್ಯಗಳಿಂದ ವಂಚಿತರಾಗಿರುವ ಈ ಜನಾಂಗಕ್ಕೆ ಶೇ.೧ ರಷ್ಟು ಪ್ರತ್ಯೇಕ ಮೀಸಲಾತಿಯನ್ನು ರಾಜ್ಯ ಸರ್ಕಾರ ಕೊಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದೆಂದು ಎಚ್ಚರಿಸಿದರು.
ಅಲೆಮಾರಿ ಮತ್ತು ಅರೆಅಲೆಮಾರಿ ಸಮಾಜದ ನಾಗರಾಜ್ ಮಾತನಾಡಿ ಟೆಂಟ್‌ಗಳಿಂದ ದೆಹಲಿವರೆಗೂ ಹೋಗಿರುವ ಈ ಜನಾಂಗ ಶೇ.೧ ಪ್ರತ್ಯೇಕ ಮೀಸಲಾತಿಗಾಗಿ ಹೋರಾಟ ನಡೆಸುತ್ತಿದ್ದಾರೆ.
ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ರಾಜಕೀಯವಾಗಿ ಹಿಂದುಳಿದಿರುವ ಈ ಸಮುದಾಯಕ್ಕೆ ಒಳ ಮೀಸಲಾತಿಯಿಂದ ಯಾವ ಪ್ರಯೋಜನವೂ ಆಗಿಲ್ಲ. ರಾಜ್ಯ ಸರ್ಕಾರ ಕೂಡಲೆ ಒಂದು ಪರ್ಸೆಂಟ್ ಮೀಸಲಾತಿ ಕೊಡಬೇಕೆಂದರು.
ಸುಧಾಕರ್, ಮಹೇಶ್ ಇವರುಗಳು ಪತ್ರಿಕಾಗೋಷ್ಠಿಯಲ್ಲಿದ್ದರು.

